ಸಾಹಿತ್ಯಪ್ರೇಮಿಗಳನ್ನು ಕೈಬೀಸಿ ಕರೆಯುತಿದೆ ಮಲ್ಪೆ ಕಡಲತೀರ
ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ 13ನೇ ಶತಮಾನದಲ್ಲಿ ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಕೈಯಲ್ಲಿ ಕಡಗೋಲನ್ನು ಹಿಡಿದ ಬಾಲಕೃಷ್ಣನ ದರುಶನ ಮಾಡಿ ಇಲ್ಲಿ ನಡೆಯುತ್ತಿರುವ 74ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದರೆ ಮಸ್ತಕದ ತುಂಬ ಸಾಹಿತ್ಯದ ಹೊನಲು. ಹೆಗಲಿಗೇರಿದ ಕೈಚೀಲದ ತುಂಬ ಪುಸ್ತಕಗಳನ್ನು ತುಂಬಿಕೊಂಡು ಗೋಷ್ಠಿಗಳಲ್ಲಿ ಒಂದು ಸಣ್ಣ ತೂಕಡಿಕೆ ಮುಗಿಸಿ ಬಂದರೆ ಉಡುಪಿಯ ವಿಶೇಷ ಮೃಷ್ಟಾನ್ನ ಭೋಜನ ಕಾದಿರುತ್ತದೆ. ಮನಸೋತೃಪ್ತಿ ಕೊಬ್ಬರಿಎಣ್ಣೆ ಘಮಲಿನ ಸ್ವಾದಿಷ್ಟ ಭೋಜನ ಮುಗಿಸಿದರೆ ಕಣ್ಣು ಎಳೆಯಲು ಪ್ರಾರಂಭಿಸುತ್ತದೆ.
ರೂಮಿಗೆ ಹೋಗಿ ಒಂದು ಜೋಂಪು ನಿದ್ದೆ ಹೊಡೆದು ಬರೋಣವೆಂದರೆ ಹತ್ತಿರದಲ್ಲೇ ಇರುವ ಮಲ್ಪೆ ಬೀಚಿನಿಂದ ಬೀಸಿದ ತಂಗಾಳಿ ಹಾಗೆಯೇ ನಿಮ್ಮನ್ನು ತೇಲಿಸಿಕೊಂಡು ಕಡಲತೀರಕ್ಕೆಳೆದುಕೊಂಡು ಹೋಗಿಬಿಡುತ್ತದೆ. ಉಡುಪಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಮಲ್ಪೆ ಕಡಲತೀರದ ಆಕರ್ಷಣೆಯೇ ಅಂತಹುದು. ಗೌಜುಗದ್ದಲದಿಂದ ದೂರ, ಪ್ರಶಾಂತತೆಯೇ ಇದರ ಜೀವಾಳ. ಹೊಂಬಣ್ಣದ ಮರಳು, ತೀರದಗುಂಟ ಇರುವ ಪಾಮ್ ಗಿಡಗಳು, ಅಬ್ಬರವಿಲ್ಲದೇ ಮೆತ್ತನೆ ನಲಿದಾಡುತ್ತ ಬಂದು ಕಾಲುಗಳನ್ನು ಚುಂಬಿಸುವ ಅರಬ್ಬಿ ಸಮುದ್ರದ ಅಲೆಗಳು. ರಜಾದಿನಗಳನ್ನು ಜಾಲಿಯಾಗಿ ಕಳೆಯಲು ಪ್ರಶಸ್ತವಾದ ಸ್ಥಳ.
ಉಡುಪಿ ಕೃಷ್ಣನ ಕೊಳಲ ಕರೆಗೆ, ಮಲ್ಪೆ ಬೀಚಿನ ಮೇಲಿನ ಕಡಲ ನೊರೆಗೆ ಮರುಳಾಗದಿರುವವರು ಯಾರು ಹೇಳಿ?
ನೈಸರ್ಗಿಕ ಬಂದರನ್ನು ಹೊಂದಿರುವ ಮಲ್ಪೆ ಬೀಚಿನಲ್ಲಿರುವ ಇನ್ನೊಂದು ಮಹತ್ವದ ಆಕರ್ಷಣೆಯೆಂದರೆ ಕಣ್ಣಳತೆ ದೂರದಲ್ಲಿ ಕಾಣುವ ಸೇಂಟ್ ಮೇರೀಸ್ ದ್ವೀಪ. ನಾಲ್ಕೈದು ಕಿ.ಮೀ.ದೂರದಲ್ಲಿರುವ ದ್ವೀಪದಲ್ಲಿ ನೋಡುವಂಥದ್ದೇನೂ ಇಲ್ಲದಿದ್ದರೂ ಬೋಟಿನಲ್ಲಿ ಕುಳಿತು ಒಂದು ಸುತ್ತು ಹಾಕಿ ಬಂದರೆ ಅದರ ಮಜಾನೇ ಬೇರೆ. ಯುವ ಜನಾಂಗಕ್ಕೆ ದ್ವೀಪ ಹೇಳಿ ಮಾಡಿಸಿದಂಥ ಜಾಗ. ಒಂದು ಟೆಂಟನ್ನೂ ಹೆಗಲಿಗೇರಿಸಿಕೊಂಡು ಹೋದರೆ ಒಂದು ರಾತ್ರಿಯನ್ನೂ ಅಲ್ಲಿಯೇ ಕಳೆದುಬರಬಹುದು.
ಹೋಗುವುದು ಹೇಗೆ? : ಮಲ್ಪೆ ಬೀಚು ಮಂಗಳೂರಿನಿಂದ 66 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೊಸ ರೈಲು ಕೂಡ ಪ್ರಾರಂಭವಾಗಿರುವುದರಿಂದ ರೈಲಿನ ಮುಖಾಂತರ ಮಂಗಳೂರನ್ನು ತಲುಪಿ ನಂತರ ಮಲ್ಪೆಗೆ ಬರಬಹುದು. ಉಡುಪಿಗೇ ನೇರ ಬಸ್ ಸೌಕರ್ಯವಿದ್ದರೆ ಉಡುಪಿಗೆ ಬಂದು ಮಲ್ಪೆಯನ್ನು ತಲುಪಬಹುದು. 25 ರು. ಖರ್ಚು ಮಾಡಿದರೆ ಆಟೋದಲ್ಲಿಯೇ ಮಲ್ಪೆಯನ್ನು ಸೇರಬಹುದು.
ತಂಗಲು ಉಡುಪಿಯಲ್ಲಿ ಸಾಕಷ್ಟು ಅನುಕೂಲಗಳಿವೆ. ಅಥವ ಮಂಗಳೂರಿನಲ್ಲಿಯೇ ತಂಗಿ ಸೂಪರ್ ಫಾಸ್ಟಾಗಿ ಸಂಚರಿಸುವ ಬಸ್ ಮುಖಾಂತರ ಒಂದು ಗಂಟೆಯಲ್ಲಿ ಮಲ್ಪೆಯನ್ನು ತಲುಪಬಹುದು.
ಮಲ್ಪೆಯಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಅಷ್ಟಾಗಿ ಇಲ್ಲದ್ದರಿಂದ ಬೇರೆ ಬೀಚುಗಳಿಗಿಂದ ದೂರದಲ್ಲಿಯೇ ಉಳಿದಿದೆ. ಅದಕ್ಕಾಗಿಯೇ ಸ್ವಚ್ಛವಾಗಿಯೂ ಇದೆ. ಮಲ್ಪೆ ದಡದಲ್ಲಿಯೇ ಇರುವ ಪ್ಯಾರಡೈಸ್ ಬೀಚ್ ರೆಸಾರ್ಟ್ ಐಷಾರಾಮಿ ಹಾಲಿಡೇಗಾಗಿ ಹೇಳಿ ಮಾಡಿಸಿದ ತಾಣ.












Click it and Unblock the Notifications