Tour Guide: ಮಲೆ ಮಾದಪ್ಪನ ಬೆಟ್ಟಕ್ಕೆ ಬಂದಾಗ ಈ ಅದ್ಭುತ ತಾಣಗಳಿಗೆ ಭೇಟಿ ನೀಡುವುದನ್ನು ಮರೆಯದಿರಿ
Tour Guide: ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳಗಳಲ್ಲಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕೂಡ ಒಂದಾಗಿದೆ. ಇಲ್ಲಿದೆ ವಾರಾಂತ್ಯ, ಸೋಮವಾರ ಹಾಗೂ ಅಮಾವಾಸ್ಯೆ ದಿನಗಳಂದು ಅಪಾದ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದುಬರುತ್ತದೆ. ಒಂದು ವೇಳೆ ನೀವು ಇಲ್ಲಿಗೆ ಪ್ರವಾಸದ ಯೋಜನೆ ಕೈಗೊಂಡಿದ್ದರೆ, ಮಾದಪ್ಪನ ದರ್ಶನದ ಜೊತೆಗೆ ಈ ಹಲವು ಪ್ರಸಿದ್ಧ ತಾಣಗಳನ್ನು ಕೂಡ ನೋಡಬಹುದಾಗಿದೆ.
ಮಲೆ ಮಹದೇಶ್ವರ ಕೇಳಿದ್ದನ್ನು ಶೀಘ್ರವಾಗಿ ದಯಪಾಲಿಸುವ ಕರುಣಾಮಯಿ ಅಂಥಲೇ ನಂಬಿಕೆ ಇದ್ದು, ಅದೇ ರೀತಿ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದ ಬಳಿಕ ಕೆಲವೊಂದು ಸ್ಥಳಗಳಿಗೂ ನೀವು ಹೋಗಿ ನಿಮ್ಮ ಪ್ರವಾಸವನ್ನು ಮತ್ತಷ್ಟು ಮೆಮೊರಬಲ್ ಮಾಡಬಹುದಾಗಿದೆ.

ನಾಗಮಲೆ ಟ್ರೆಕ್ಕಿಂಗ್: ಮಲೆ ಮಹದೇಶ್ವರ ಬೆಟ್ಟದ ಸಮೀಪವೇ ನಾಗಮಲೆ ಎಂಬ ಮಹದೇಶ್ವರನ ಸಾನ್ನಿಧ್ಯವಿದ್ದು, ಇಲ್ಲಿಗೆ ಕಾಲ್ನಡಿಗೆಯಲ್ಲಿ ತೆರಳಬೇಕಾಗುತ್ತದೆ. ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡರೇ ಚಾರಣದ ಮೂಲಕ ನಾಗಮಲೆಗೆ ತೆರಳಬಹುದು. ಆಧ್ಯಾತ್ಮಿಕತೆ ಹಾಗೂ ದಟ್ಟ ಕಾಡಿನ ಪರಿಸರವನ್ನು ಅನುಭವಿಸಬಹುದಾಗಿದೆ.
ಗೋಪಿನಾಥಂ ಮಿಸ್ಟ್ರೀ ಕ್ಯಾಂಪ್: ಕಾಡುಗಳ್ಳ ವೀರಪ್ಪನ್ ನೆನಪಿನಿಂದ ದೂರ ಸರಿದಿರುವ ಗೋಪಿನಾಥಂ ಕೂಡ ಮಲೆ ಮಹದೇಶ್ವರ ಬೆಟ್ಟಕ್ಕೆ ಹತ್ತಿರವಿದ್ದು, ಗೋಪಿನಾಥಂನಲ್ಲಿ ಮಿಸ್ಟ್ರಿಂ ಕ್ಯಾಂಪ್ ಹೆಸರಿನ ವಸತಿ ಗೃಹವಿದೆ. ಇಲ್ಲಿ ತಂಗಬಹುದಾಗಿದ್ದು, ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಜೊತೆಗೆ, ಪಕ್ಷಿ ವೀಕ್ಷಣೆ, ಅರಣ್ಯ ವೀಕ್ಷಣೆ, ಗಡಿನಾಡಿನ ಪರಿಚಯ ನಿಮಗಾಗಲಿದೆ.
ಹೊಗೆನಕಲ್ ಜಲಪಾತ: ಭಾರತದ ನಯಾಗರ ಅಂಥಲೇ ಕರೆಯುವ ಹೊಗೆನಕಲ್ ಜಲಪಾತವು ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಕಲ್ಲುಗಳ ನಡುವೆ ರಭಸದಿಂದ ಧುಮ್ಮಿಕ್ಕುವ, ಮರಳಿನ ನಡುಗಡ್ಡೆಯಲ್ಲಿ ಕುಳಿತು ಕಾವೇರಿ ವಿಶಾಲ ಹರಿವನ್ನು ಕಾಣುವುದೇ ರುದ್ರ ರಮಣೀತವಾಗಿದೆ. ಇಲ್ಲಿ ತೆಪ್ಪ ಸವಾರಿ ಮೂಲಕ ತಮಿಳುನಾಡಿನ ಭಾಗದ ಜಲಪಾತಕ್ಕೂ ಹೋಗಬಹುದಾಗಿದ್ದು, ಚೆಂದನೆಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಮೀನಿನ ಊಟ, ಮಸಾಜ್, ಆಟೋಟಗಳು ಕೂಡ ಇಲ್ಲಿ ಜನಪ್ರಿಯ.
ಪಿ.ಜಿ.ಪಾಳ್ಯ ಸಫಾರಿ: ಮೊದಲೆಲ್ಲಾ ಸಫಾರಿ ನಡೆಸಬೇಕಾದರೇ ಬಂಡೀಪುರ, ಕೆ.ಗುಡಿಗೆ ತೆರಳಬೇಕಿತ್ತು. ಈಗ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದಿಂದಲೇ ವನ್ಯಜೀವಿ ಸಫಾರಿ ಆರಂಭಗೊಂಡಿದ್ದು, ಮಾದಪ್ಪನ ಭಕ್ತರು ಈಗ ಸಫಾರಿ ಆನಂದವಯ ಅನುಭವಿಸಬಹುದಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟವಂತೂ ಹಸಿರಿನ ಜೊತೆ ಮಂಜಿನ ಹೊದಿಕೆ ಹೊದ್ದಿರುತ್ತದೆ. ಬೆಳಗ್ಗೆ 9 ಗಂಟೆ ಆದರೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇಲ್ಲಿನ ಈ ಅದ್ಭುತ ವಾತಾವರಣ ಮನಸಿಗೆ ಇಂಪು ನೀಡುತ್ತಲೇ ಇರುತ್ತದೆ. ಇದು ಬೆಂಗಳೂರಿನಿಂದ ಸುಮಾರು 220 ಕಿ.ಮೀ. ಆದರೆ ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ.
ಗೋಪಾಲಸ್ವಾಮಿ ಬೆಟ್ಟದ ವಿಶೇಷತೆ ಏನು?: ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತೀ ಎತ್ತರದ ಶಿಖರವಾಗಿದೆ. ಗುಂಡ್ಲುಪೇಟೆ ಬಳಿಯಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ.












Click it and Unblock the Notifications