ಐವತ್ತು ವರ್ಷಗಳ ಹಿಂದೆ ಅಜ್ಜ ಕಂಡಿದ್ದ ಕನಸನ್ನು ಈಗ ನನಸು ಮಾಡಿದ ಶಾಸಕ!
ಬೆಂಗಳೂರು, ಆ. 18: ರಾಜಕೀಯವೇ ಹಾಗೆ. ಅಲ್ಲಿ ಬೆಳೆದಂತೆಲ್ಲ ಇತಿಹಾಸವನ್ನು ಮರೆಯುವವರೇ ಹೆಚ್ಚು ಎಂಬ ಆರೋಪಗಳಿಗೆ ಕಮ್ಮಿ ಏನಿಲ್ಲ. ಆದರೆ ಅದಕ್ಕೆ ಅಪವಾದ ಎಂಬಂತಹ ರಾಜಕಾರಣಿಗಳೂ ಇದ್ದಾರೆ. ಅವರು ಮಾಡುವ ಕೆಲಸಗಳ ಬಗ್ಗೆ ಜನಪ್ರೀಯತೆ ಪಡೆಯಲು ಮುಂದಾಗುವುದಿಲ್ಲ. ಹೀಗಾಗಿ ಅವರ ಮಹತ್ಸಾಧನೆಗಳು ಎಲೆ ಮರೆ ಕಾಯಿಯಂತೆಯೇ ಉಳಿದು ಬಿಡುವುದೂ ಇದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರ ಸಾಧನೆಯನ್ನು ಮನಬಿಚ್ಚಿ ಹೊಗಳಿದ್ದಾರೆ. ಅದು ಅವರ ಪಕ್ಷದ ಶಾಸಕರು ಎಂಬ ಕಾರಣಕ್ಕಂತೂ ಅಲ್ಲವೇ ಅಲ್ಲ!
ಕಳೆದ ಐವತ್ತು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ತನ್ನ ಅಜ್ಜ ಮಾಡಿದ್ದ ಘೊಷಣೆಯನ್ನು ಮೊಮ್ಮಗ ಈಗ ಆಚರಣೆಗೆ ತಂದು ಪೂರ್ಣಗೊಳಿಸಿದ್ದಾರೆ. ರಾಜಕಾರಣಿಗಳ ಮಕ್ಕಳು ಹಣದ, ಅಧಿಕಾರದ ಹಿಂದೆ ಬೀಳುತ್ತಾರೆ ಎಂಬ ಆರೋಪಕ್ಕೆ ಪ್ರತ್ಯುತ್ತರ ಕೊಡುವಂತೆ ಈ ಶಾಸಕರು ಮಾಡಿದ್ದಾರೆ. ವಿಧಾನ ಮಂಡಲದ ಪ್ರತಿ ಅಧಿವೇಶನದಲ್ಲಿಯೂ ಆ ಮಹಾನ್ ವ್ಯಕ್ತಿಯ ಬಗ್ಗೆ ಒಬ್ಬರಾದರೂ ಪ್ರಸ್ತಾಪ ಮಾಡುತ್ತಾರೆ. ಪಕ್ಷ ಭೇದವಿಲ್ಲದೆ 'ಕೆಲವರು' ನೆನಪಿಸಿಕೊಳ್ಳುತ್ತಾರೆ. ಆದರೆ ಅವರು ಹೇಳಿದ್ದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಅವರ ಮೊಮ್ಮಗನೇ ಬರಬೇಕಾಯ್ತು ಎಂಬುದು ವಿಪರ್ಯಾಸ ಕೂಡ. ಅಷ್ಟಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದ್ದು ಯಾರನ್ನು? ಯಾಕೆ? ಮುಂದಿದೆ ಮಾಹಿತಿ!

ಅಜ್ಜನ ಕನಸು ನನಸು ಮಾಡಿದ ಮೊಮ್ಮಗ!
ದಿ. ಮಾಜಿ ಸಚಿವ ಬಿ. ಬಸವಲಿಂಗಪ್ಪನವರು 50 ವರ್ಷಗಳ ಹಿಂದೆಯೇ ಮಲ ಹೊರುವ ಪದ್ಧತಿಯನ್ನು ಅಂತ್ಯಗೊಳಿಸುವ ಕುರಿತು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದರು. ಬರೀ ಘೋಷಣೆಗೆ ಸುಮ್ಮನಾಗದೇ ಬಲವಾದ ಕಾನೂನು ಜಾರಿಗೆ ತಂದಿದ್ದರು. ಆ ಮೂಲಕ ತಲೆ ಮೇಲೆ ಮಲ ಹೊರುವ ಅನಿಷ್ಠ ಪದ್ದತಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿತ್ತು. ಆದರೆ ಅದು ಕಾನೂನಿನಲ್ಲಿ ಮಾತ್ರ ಇದೆ ಎಂಬುದಕ್ಕೆ ಈಗಲೂ ಮಲ ಹೊರುವ ಪದ್ದತಿ ಆಗಾಗ ವರದಿ ಆಗುತ್ತಲೇ ಇದೆ. ಅದೇನೆ ದಿದ್ದರೂ ಬಿ. ಬಸವಲಿಂಗಪ್ಪನವರು ಜಾರಿಗೆ ತಂದಿದ್ದ ಕಾನೂನನ್ನು ನಂತರ ಇಡೀ ದೇಶದಲ್ಲಿ ಅನುಕರಣೆ ಮಾಡಿತ್ತು.

ಅಮಾನವೀಯ ಪದ್ಧತಿಗೆ ತಿಲಾಂಜಲಿ
ಆದರೆ ಕಾನೂನು ಕಾನೂನಾಗಿ ಉಳಿಯಿತೇ ಹೊರತು ಆ ಅನಿಷ್ಠ ಪದ್ಧತಿ ಮಾತ್ರ ಕೊನೆಯಾಗಿರಲಿಲ್ಲ. ಇದೀಗ ಅವರ ಮೊಮ್ಮಗ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಅವರು ತನ್ನ ಅಜ್ಜನ ಗುರಿಯನ್ನು ಮುಟ್ಟಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದಾರೆ.
ತಾವು ಶಾಸಕರಾದ ನಂತರ ಮೊದಲ ಆದ್ಯತೆಯಾಗಿ ಮೈಸೂರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರದ ಕೆ.ಆರ್. ಪುರದಲ್ಲಿ ಅಮಾನವೀಯ ಪದ್ಧತಿಗೆ ತಿಲಾಂಜಲಿ ನೀಡಿರುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ, ಕೆ.ಆರ್. ಪುರದ ಸಮಸ್ಯೆಗಳನ್ನು ನಿವಾರಿಸಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಗ್ರಾಮದ ಜನರು ಈಗ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಗ್ರಾಮದ ಜನರಲ್ಲಿ ಸಂತಸ ಮೂಡಿದೆ ಎಂದು ಶಾಸಕ ಹರ್ಷವರ್ಧನ್ ವಿವರಿಸಿದ್ದಾರೆ.

ಕೈಯಿಂದಲೇ ಹೊಲಸು ತೆಗೆಯುವ ಪದ್ಧತಿ!
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂಜನಗೂಡು ಶಾಸಕ ಹರ್ಷವರ್ಧನ್, ತಮ್ಮ ಕ್ಷೇತ್ರದ ಕೆಆರ್ ಪುರದಲ್ಲಿ ಜನರು ಕೈಯಿಂದಲೇ ಚರಂಡಿಗಳಲ್ಲಿನ ಹೊಲಸನ್ನು ಹೊತ್ತು ಹಾಕುವ ಅಮಾನವೀಯ ಪದ್ಧತಿ ಇತ್ತು. ಅದನ್ನು ಶಾಸಕರಾಗಿ ಆಯ್ಕೆಯಾದ ತಕ್ಷಣವೇ ಗಮನಿಸಿ, ಕ್ರಮಕ್ಕೆ ಮುಂದಾಗಿದ್ದಾರೆ. ಇದೀಗ ಎಲ್ಲ ರೀತಿಯ ಕ್ರಮಗಳನ್ನು ಹಾಗೂ ಕಾಮಗಾರಿಯ ಬಳಿಕ ಅಮಾನವೀಯ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಹೀಗಾಗಿ ಅಮಾನವೀಯ ಪದ್ದತಿ ಕೊನೆಯಾಗಿರುವ ಕುರಿತು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿ, ಆ ಬಗ್ಗೆ ಮಾಹಿತಿ ಫಲಕವನ್ನು ನೀಡಿದರು.
ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಮಾನವೀಯ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

ನಿಮ್ಮ ಕಾರ್ಯ ಶ್ಲಾಘನೀಯ!
ಶಾಸಕ ಹರ್ಷವರ್ಧನ ಕೊಟ್ಟ ಸಂಪೂರ್ಣ ಮಾಹಿತಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. "ನಿಮ್ಮ ಕಾರ್ಯ ಶ್ಲಾಘನೀಯ. ಇಡೀ ಕ್ಷೇತ್ರದಲ್ಲಿ ಇಂತಹ ಮಾದರಿ ಕೆಲಸಗಳನ್ನು ಮಾಡಿ. ನಿಮ್ಮ ಕೆಲಸಗಳಿಗೆ ಬೆನ್ನೆಲುಬಾಗಿ ರಾಜ್ಯ ಸರ್ಕಾರ ಯಾವಾಗಲೂ ಇರುತ್ತದೆ" ಎಂದು ಸಲಹೆ ನೀಡಿ ಪ್ರೋತ್ಸಾಹಿಸಿದರು.
ಅಂದಹಾಗೆ ಶಾಸಕ ಹರ್ಷವರ್ಧನ್ ಅವರು ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಅಳಿಯ ಕೂಡ. ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ, ಮಾಡಿರುವ ಕೆಲಸಗಳಿಂದ ಶಾಸಕ ಹರ್ಷವರ್ಧನ್ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇಡೀ ನಾಡಿನ ಶಾಸಕರು ಅವರನ್ನು ಅನುಕರಣೆ ಮಾಡಲಿ ಎಂಬುದು ಜನರ ಒತ್ತಾಸೆ!












Click it and Unblock the Notifications