ಕಾಬೂಲ್‌ನಲ್ಲಿ ಪಾಕ್ ವಿರುದ್ದ ಪ್ರತಿಭಟನೆಗೆ ಮಹಿಳೆಯರು ಭಾಗಿ: ತಾಲಿಬಾನ್‌ನಿಂದ ಗಾಳಿಯಲ್ಲಿ ಗುಂಡು
ಕಾಬೂಲ್, ಸೆಪ್ಟೆಂಬರ್ 07: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪಾಕಿಸ್ತಾನ ವಿರೋಧ ರ್‍ಯಾಲಿಯನ್ನು ನಡೆಸುತ್ತಿದ್ದ ಜನರನ್ನು ಚದುರಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
1996 ರಿಂದ 2001 ರವರೆಗಿನ ತಾಲಿಬಾನ್‌ನ ಆಡಳಿತವನ್ನು ಕಂಡಿರುವ ಜನರು ಈಗ ಮತ್ತೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡುವ ಹಿನ್ನೆಲೆ ಆತಂಕಕ್ಕೆ ಒಳಗಾಗಿದ್ದಾರೆ. ತಾಲಿಬಾನಿಗರು ಇನ್ನಷ್ಟೇ ಸರ್ಕಾರ ರಚನೆ ಮಾಡಬೇಕಿದೆ. ಈ ನಡುವೆ ಪಾಕಿಸ್ತಾನದ ವಿರುದ್ದ ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಪ್ರತಿಭಟನೆಗಳು ನಡೆದಿದೆ. ಇನ್ನು ಈ ಪ್ರತಿಭಟನೆಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರೇ ಸೇರಿ ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸಿದ್ದಾರೆ.
ಪಾಕಿಸ್ತಾನದ ರಾಯಭಾರಿ ಕಚೇರಿಯ ಮುಂದೆ ಮಂಗಳವಾರ ಸುಮಾರು 70 ರಷ್ಟು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಈ ಪ್ರತಿಭಟನೆಯಲ್ಲಿ ಅಧಿಕ ಮಂದಿ ಮಹಿಳೆಯರೇ ಆಗಿದ್ದರು ಎಂದು ಕೂಡಾ ಹೇಳಲಾಗಿದೆ. ಈ ರ್‍ಯಾಲಿಯಲ್ಲಿ ಬ್ಯಾನರ್‌ಗಳನ್ನು ಹಿಡಿಯಲಾಗಿತ್ತು. ಹಾಗೆಯೇ ತಾಲಿಬಾನ್‌ನ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಪಾಕಿಸ್ತಾನದ ವಿರುದ್ದವಾಗಿ ಘೋಷಣೆಗಳನ್ನು ಕೂಗಲಾಗಿತ್ತು ಎಂದು ವರದಿಯು ಹೇಳಿದೆ.

ತಾಲಿಬಾನ್ ಪಾಕಿಸ್ತಾನ ಗುಪ್ತಚರ ಮುಖ್ಯಸ್ಥ ಭೇಟಿಯಾಗಿರುವ ಸಾಧ್ಯತೆ
ಪಾಕಿಸ್ತಾನದ ಗುಪ್ತಚರ ಮುಖ್ಯಸ್ಥ ಫೈಝ್ ಹಮೀದ್ ವಾರಾಂತ್ಯದಲ್ಲಿ ಕಾಬೂಲ್‌ನಲ್ಲಿದ್ದರು. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಅಫ್ಘಾನ್‌ನಲ್ಲಿನ ಪಾಕಿಸ್ತಾನದ ರಾಯಭಾರಿಯ ಬಳಿ ಮಾಹಿತಿ ಪಡೆದರು ಎಂದು ವರದಿಯಾಗಿದೆ. ಆದರೆ ಈ ನಡುವೆಯೇ ಪಾಕಿಸ್ತಾನದ ಗುಪ್ತಚರ ಮುಖ್ಯಸ್ಥ ಫೈಝ್ ಹಮೀದ್ ತಾಲಿಬಾನ್ ಅಧಿಕಾರಿಗಳನ್ನು ಕೂಡಾ ಭೇಟಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನ್
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪಾಕಿಸ್ತಾನದ ವಿರುದ್ದ ಜನರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಮಹಿಳೆಯರು ಕೂಡಾ ಭಾಗಿಯಾಗಿದ್ದರು. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ರಾಯಭಾರಿ ಕಚೇರಿಯ ಮುಂದೆ ಜನರು ಪ್ರತಿಭಟನೆಯನ್ನು ನಡೆಸಿದ್ದು, ಜನರನ್ನು ಚದುರಿಸಲು ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿದೆ. ಇದಕ್ಕೂ ಮುಂಚಿನ ದಿನ ಅಫ್ಘಾನಿಸ್ತಾನದ ಮಜರ್-ಐ-ಶರೀಪ್ ನಗರದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಸರ್ಕಾರದಲ್ಲಿ ಮಹಿಳೆಯರು ಕೂಡಾ ಇರಬೇಕು ಎಂದು ಕೂಡಾ ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ತಾಲಿಬಾನ್ ಪಂಜ್‌ಶೀರ್‌ನಲ್ಲಿ ಗೆಲವು ಸಾಧಿಸಿ ಸಂಪೂರ್ಣ ಪಂಜ್‌ಶೀರ್ ಕಣಿವೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿಕೊಂಡ ನಂತರ ಪ್ರತಿಭಟನೆಗಳು ತೀವ್ರವಾಗಿದೆ.

ತಾಲಿಬಾನ್ ಕೈ ಸೇರದ ಪಂಜ್‌ಶೀರ್
ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೈನ್ಯವನ್ನು ವಾಪಾಸ್ ಪಡೆಯುತ್ತಿದ್ದಂತೆ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಜಿಲ್ಲೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಪಂಜ್‌ಶೀರ್ ಕಣಿವೆಯನ್ನು ಮಾತ್ರ ತಾಲಿಬಾನ್ ತನ್ನ ವಶಕ್ಕೆ ಪಡೆಯುವಲ್ಲಿ ವಿಫಲವಾಗಿದೆ. ವಿರೋಧಿ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ (ಎನ್‌ಆರ್‌ಎಫ್) ಹಾಗೂ ತಾಲಿಬಾನ್ ನಡುವೆ ಪಂಜ್‌ಶೀರ್‌ನಲ್ಲಿ ಯುದ್ದ ನಡೆಯುತ್ತಲೇ ಇದೆ. ಪಂಜ್‌ಶೀರ್ ಅನ್ನು ತನ್ನ ವಶಕ್ಕೆ ಪಡೆದುಕೊಂಡು ಆಗಿದೆ ಎಂದು ತಾಲಿಬಾನ್ ಸೋಮವಾರ ಬೆಳಿಗ್ಗೆ ಹೇಳಿಕೊಂಡಿದ್ದರೂ, ಆ ಬೆನ್ನಲ್ಲೇ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ತಾಲಿಬಾನ್‌ನ ಈ ವಾದ ಸುಳ್ಳು ಎಂದು ಹೇಳಿದೆ. ಇನ್ನು ಇದಕ್ಕೂ ಮುನ್ನ ಎನ್ ಆರ್ ಎಫ್ 600 ಕ್ಕೂ ಅಧಿಕ ತಾಲಿಬಾನ್ ಉಗ್ರರನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು.

''ಬಂಡಾಯದ ಯತ್ನ ಮಾಡಿದರೆ ಸಹಿಸಲಾಗದು ಎಚ್ಚರ''
ಈ ನಡುವೆ ತಾಲಿಬಾನ್ ವಕ್ತಾರ ಜವೀದುಲ್ಲಾ ಮುಜಾಹಿದ್ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. "ಬಂಡಾಯವನ್ನು ಹುಟ್ಟು ಹಾಕಲು ಯಾರದರೂ ಪ್ರಯತ್ನ ಮಾಡಿದರೆ ಅವರು ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಬಂಡಾಯ ಮಾಡುವ ಯತ್ನವು ಸಹಿಸಲಾಗದು. ನಾವು ಬೇರೆ ಯಾರಿಗೂ ಅವಕಾಶ ನೀಡಲಾರೆವು," ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸರ್ಕಾರ ರಚನೆಯಾದ ಬೆನ್ನಲ್ಲೇ ಕೆಲವು ಬದಲಾವಣೆಯಾಗಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, "ಮೊದಲು ಸರ್ಕಾರ ರಚನೆಯಾಗಲಿ, ಆ ಬಳಿಕ ಬದಲಾವಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲಿಬಾನ್ 1996 ರಿಂದ 2001 ರವರೆಗೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತವನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಮಹಿಳಾ ಸ್ವಾತಂತ್ಯ್ರವನ್ನು ಸಂಪೂರ್ಣವಾಗಿ ಮೊಟಕುಗೊಳಿಸಲಾಗಿತ್ತು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications