ಬಿಜೆಪಿ ಕಾರ್ಯಕರ್ತರಿಗೂ ಅರ್ಥವಾಗುವಂತಿದೆ 'ಕೈ' ಕಾರ್ಯಕರ್ತರಿಗೆ ಸಿದ್ದರಾಮಯ್ಯ ಬರೆದ ಪತ್ರ!
ಬೆಂಗಳೂರು, ಆ. 16: ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನಮಿಡಿಯುವ ಪತ್ರ ಬರೆದಿದ್ದಾರೆ. ಹಾಗಂತ ಆ ಪತ್ರದಲ್ಲಿ ಯಾವುದೇ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿಲ್ಲ. ಬದಲಿಗೆ ಜನ ಜೀವನ, ಕೊರೊನಾ ವೈರಸ್ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ಸವಿಸ್ತಾರ ತಿಳಿವಳಿಕೆ ಕೊಟ್ಟಿದ್ದಾರೆ.
ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದವರು. ವಿತ್ತೀಯ ವಿಚಾರದಲ್ಲಿ ಅತ್ಯಂತ ಆಳವಾದ ಜ್ಞಾನ ಹೊಂದಿರುವ ರಾಜ್ಯದ ಕೆಲವೇ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು. ಹೀಗಾಗಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಬರೆದಿರುವ ಪತ್ರದಲ್ಲಿ ವೃಥಾ ಆರೋಪಗಳಿಲ್ಲ. ಸಾಮಾನ್ಯ ಕಾರ್ಯಕರ್ತನಿಗೂ ಸರಳವಾಗಿ ಅರ್ಥವಾಗುವಂತೆ ಸದ್ಯದ ಆರ್ಥಿಕ ಸ್ಥಿತಿಯನ್ನು ಅದಕ್ಕೆ ಕಾರಣರಾಗಿರುವವರನ್ನು ಹಾಗೂ ಕಾರಣಗಳನ್ನು ಮನ ಮುಟ್ಟುವಂತೆ ವಿವರಿಸಿದ್ದಾರೆ.
ಮುಂದಿನ ನಾಯಕ, ಮುಂದಿನ ಮುಖ್ಯಮಂತ್ರಿ ಎಂಬ ಗುಂಗಿನಲ್ಲಿಯೇ ಇದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಪತ್ರ ಹೊಸ ಆಲೋಚನೆಯನ್ನು ಕೊಟ್ಟಂತಾಗಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪತ್ರ ಬರೆದಂತೆ ಅನಿಸುತ್ತಿದೆಯಾದರೂ, ಸದ್ಯದ ಪರಿಸ್ಥಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರೂ ಪತ್ರದಲ್ಲಿನ ಅಂಶಗಳನ್ನು ಒಪ್ಪಿಕೊಳ್ಳುವಂತಿವೆ. ಕೂಲಿ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬ ವರ್ಷಕ್ಕೆ 24 ಸಾವಿರ ರೂಪಾಯಿಗಳನ್ನು ಪೆಟ್ರೋಲಿಗಾಗಿಯೇ ತೆರಿಗೆ ಕಟ್ಟುತ್ತಾನೆ ಎಂದರೆ ನಿಜವಾಗಿಯೂ ಆರ್ಥಿಕ ಸಂಕಷ್ಟ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಇದರೊಂದಿಗೆ ಇನ್ನೂ ಹಲವು ವಿಚಾರಗಳನ್ನು ಸಿದ್ದರಾಮಯ್ಯ ತಮ್ಮ ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ.
ವಿಪಕ್ಷ ನಾಯಕ ತಮ್ಮ ಪಕ್ಷದ ಕಾರ್ಯಕರ್ತರಿಗೆ ಬರೆದಿರುವ ಪತ್ರದ ಸಂಪೂರ್ಣ ಮಾಹಿತಿ ಮುಂದಿದೆ.

ಬೆಚ್ಚಿ ಬೀಳಿಸುತ್ತಿದೆ ಕೂಲಿ ಮಾಡುವ ವ್ಯಕ್ತಿ ಕಟ್ಟುವ ಪಟ್ರೋಲ್ ತೆರಿಗೆ!
"ಎರಡು ವರ್ಷದ ಹಿಂದೆ ಸಾಧಾರಣ ಕುಟುಂಬವೊಂದು ಜೀವನ ನಡೆಸಲು ಸರಾಸರಿ 5, 000 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೆ ಇಂದು 11000 ರೂಪಾಯಿಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. 25 ಕಿ.ಮೀ ದೂರದ ಹಳ್ಳಿಯಿಂದ ಪೇಟೆ ಅಥವಾ ಪಟ್ಟಣಕ್ಕೆ ಬಂದು ಕೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಬೈಕಿಗೆ ದಿನಕ್ಕೊಂದು ಲೀಟರ್ ಪೆಟ್ರೋಲ್ ಹಾಕಿಸಿದರೆ 37-40 ಸಾವಿರ ರೂಪಾಯಿಗಳಷ್ಟು ಹಣ ಒಂದು ವರ್ಷಕ್ಕೆ ಖರ್ಚಾಗುತ್ತದೆ. ಇದರಲ್ಲಿ ಕನಿಷ್ಠ 24 ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಗಳಿಗೆ ಕಟ್ಟುತ್ತಾನೆ. ಮನಮೋಹನಸಿಂಗ್ ಅವರ ಕಾಲದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ 9.21 ರೂಗಳಷ್ಟು ತೆರಿಗೆ ಇದ್ದರೆ ಈಗ 33 ರೂಪಾಯಿಗಳನ್ನು ಕೇಂದ್ರ ಸರ್ಕಾರವೊಂದೆ ವಸೂಲಿ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಜನರ ದುಡಿಮೆ ಇಲ್ಲ. ಜನ ಅತ್ಯಂತ ವೇಗವಾಗಿ ಬಡವರಾಗುತ್ತಿದ್ದಾರೆ" ಎಂದು ಪತ್ರದಲ್ಲಿ ಮೊದಲ ಅಂಶ ವಿವರಿಸಿದ್ದಾರೆ.

ನೀವೆ ಲೆಕ್ಕಹಾಕಿ ಬಿಜೆಪಿ ಸರ್ಕಾರ ಯಾರ ಪರ?
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದ ಕಡೆಯ ವರ್ಷದಲ್ಲಿ ತೆರಿಗೆ ಸಂಗ್ರಹವು ಹೀಗಿತ್ತು; ದೇಶವು ನೂರು ರೂಪಾಯಿ ತೆರಿಗೆ ಸಂಗ್ರಹಿಸಿದರೆ ಅದರಲ್ಲಿ ಜನರಿಂದ 72 ರೂಪಾಯಿಗಳನ್ನು, ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ 28 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದರು. ಮುಂದೆ ಯುಪಿಎ ಸರ್ಕಾರ ಬಂದಾಗ ಮನಮೋಹನಸಿಂಗ್ ಅವರು ಅಧಿಕಾರಕ್ಕೆ ಬಂದ ಮೇಲೆ ಈ ತೆರಿಗೆಯನ್ನು ಅತ್ಯಂತ ಮೌನವಾಗಿಯೆ ಬದಲಾಯಿಸಿದ್ದರು. 2010 ರ ವೇಳೆಗೆ ಜನರು ಕಟ್ಟುವ ತೆರಿಗೆ 72 ರೂಪಾಯಿನಿಂದ 58 ರೂಗಳಿಗೆ ಇಳಿದಿತ್ತು. ಕಾರ್ಪೊರೇಟ್ ಬಂಡವಾಳಿಗರು ಕಟ್ಟುವ ತೆರಿಗೆ 28 ರೂಗಳಿಂದ 40 ರೂಪಾಯಿಗೆ ಏರಿಕೆಯಾಗಿತ್ತು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಈಗ ಜನರಿಂದ ಮತ್ತೆ 75 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ 25 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇದನ್ನು ನೋಡಿದರೆ ಸಾಕು ಬಿಜೆಪಿಯವರು ಯಾರ ಪರ ಎಂಬುದು ಅರ್ಥವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮಿಂದ ಕೇಂದ್ರ ಸರ್ಕಾರ ಸಂಗ್ರಹಿಸುತ್ತಿರುವ ತೆರಿಗೆ ಎಷ್ಟು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಆರ್ಥಿಕತೆ, ಒಕ್ಕೂಟ ತತ್ವ, ರಾಜ್ಯದ ಭಾಷೆ, ಸಂಸ್ಕೃತಿ, ರಾಜ್ಯದ ಅಧಿಕಾರ, ಸಂಪತ್ತುಗಳ ಮೇಲೆ ತೀವ್ರ ದಬ್ಬಾಳಿಕೆ ನಡೆಸುತ್ತಿದೆ. ನಮ್ಮ ರಾಜ್ಯದಿಂದ ಐಟಿಬಿಟಿ ಕ್ಷೇತ್ರಗಳನ್ನು ಹೊರತು ಪಡಿಸಿಯೇ ಸುಮಾರು 2.5 ಲಕ್ಷ ಕೋಟಿ ಸಂಪತ್ತನ್ನು ವಿವಿಧ ತೆರಿಗೆ ಮತ್ತು ಸೆಸ್‍ಗಳ ಮೂಲದಿಂದ ಸಂಗ್ರಹಿಸುತ್ತಿದೆ.
ಆದರೆ ನಮಗೆ 2020 ರಲ್ಲಿ ವಾಪಸ್ಸು ಬಂದಿದ್ದು ಕೇವಲ 38 ಸಾವಿರ ಕೋಟಿ ರೂಗಳು ಮಾತ್ರ. ನಿಯಮ ಪ್ರಕಾರ ಶೇ.42 ರಷ್ಟು ಸಂಪತ್ತನ್ನು ನಮಗೆ ಹಂಚಿಕೆ ಮಾಡಿದರೆ ಕನಿಷ್ಟ ಎಂದರೂ 1.10 ಲಕ್ಷ ಕೋಟಿಗಳಷ್ಟು ರಾಜ್ಯಕ್ಕೆ ಬರಬೇಕು. ಐಟಿ ಬಿಟಿಯ ಲೆಕ್ಕ ಹಾಕಿದರೆ ಇನ್ನಷ್ಟು ಹೆಚ್ಚು ಬರಬೇಕಾಗುತ್ತದೆ. ಕರ್ನಾಟಕವು ದಿನದಿಂದ ದಿನಕ್ಕೆ ಸಾಲಗಾರ ರಾಜ್ಯವಾಗುತ್ತಿದೆ. ನಾನು ಅಧಿಕಾರದಿಂದ ಇಳಿದಾಗ ರಾಜ್ಯದ ಸಾಲ [ಕಳೆದ 70 ವರ್ಷಗಳಿಂದ ಮಾಡಿದ್ದು] 2.42 ಲಕ್ಷ ಕೋಟಿಗಳಷ್ಟಿತ್ತು. ಈ ವರ್ಷದ ಅಂತ್ಯಕ್ಕೆ ಸರ್ಕಾರ ದಾಖಲೆಗಳ ಪ್ರಕಾರವೆ ಸುಮಾರು 4.57 ಲಕ್ಷ ಕೋಟಿಗಳಷ್ಟು ಸಾಲವಾಗುತ್ತದೆ.

ನಮ್ಮಿಂದ ಸಂಗ್ರಹವಾಗುವ ತೆರಿಗೆ ಈ ರಾಜ್ಯಗಳಿಗೆ ಹೋಗುತ್ತದೆ ಗೊತ್ತಾ?
ಕೇಂದ್ರ ಸರ್ಕಾರ ರಾಜ್ಯಗಳ ತೆರಿಗೆ ಅಧಿಕಾರಗಳನ್ನು ಕಿತ್ತುಕೊಂಡು ಗುಜರಾತು ಮುಂತಾದ ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ನಮ್ಮ ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರುಗಳಲ್ಲಿ ಒಬ್ಬರೂ ಸಹ ಪ್ರಶ್ನಿಸುತ್ತಿಲ್ಲ, ರಾಜ್ಯದ ಮೇಲಿನ ಕೇಂದ್ರದ ದಮನವನ್ನು ಪ್ರತಿಭಟಿಸುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರವೂ ಪ್ರಶ್ನಿಸುತ್ತಿಲ್ಲ. ಹಾಗಾಗಿ ಮೋದಿಯವರ ಸರ್ಕಾರವು ದೇಶದಲ್ಲಿಯೆ ಅನೇಕ ವಿಚಾರಗಳಲ್ಲಿ ಮುಂದುವರೆದಿದ್ದ ಕರ್ನಾಟಕ ರಾಜ್ಯವನ್ನು ತುಳಿದು ನರಕಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ನಮ್ಮಿಂದ ಸಂಗ್ರಹವಾಗುವ ತೆರಿಗೆ ಯಾವ ರಾಜ್ಯಗಳ ಅಭಿವೃದ್ಧಿಗೆ ಬಿಜೆಪಿ ಹಂಚುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಯಾಕೆ ಕಡಿಮೆಯಿತ್ತು?

ಇದರಲ್ಲಿಯೂ ಕರ್ನಾಟಕಕ್ಕೆ ಮೋಸ!
ಮನಮೋಹನಸಿಂಗ್ ಅವರ ಕಾಲದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರೆಲ್ ಒಂದಕ್ಕೆ 125-140 ಡಾಲರ್ ಗಳಿಗೆ ಏರಿಕೆಯಾಗಿತ್ತು. ಅಲ್ಲಿ ಬೆಲೆ ಕಡಿಮೆ ಆಗುವವರೆಗೂ ಜನರ ಮೇಲೆ ತೆರಿಗೆ ಹೊರೆ ಹೊರಿಸಬಾರದೆಂಬ ಕಾರಣದಿಂದ ತೈಲ ಬಾಂಡುಗಳನ್ನು ಮನಮೋಹನಸಿಂಗರ ಸರ್ಕಾರವೂ ಖರೀದಿಸಿತ್ತು. ಈ ಬಾಂಡುಗಳ ಒಟ್ಟಾರೆ ಬೆಲೆ 1.31 ಲಕ್ಷ ಕೋಟಿ ಮಾತ್ರ. ಈ ಬಾಂಡುಗಳ ಬಾಕಿಯನ್ನು ಮೋದಿಯವರ ಸರ್ಕಾರ 2015 ರಲ್ಲಿ ಕೇವಲ 3500 ಕೋಟಿ ರೂಪಾಯಿಗಳನ್ನು ಮಾತ್ರ ತೀರಿಸಿದೆ. ಬಡ್ಡಿ ಮೊತ್ತವನ್ನು ವರ್ಷಕ್ಕೆ 9.5 ಸಾವಿರ ಕೋಟಿಗಳನ್ನು ತೀರಿಸಿದೆ. ಒಟ್ಟಾರೆ 2024 ರವರೆಗೆ ಮೋದಿಯವರ ಸರ್ಕಾರವು ತೀರಿಸಬೇಕಾಗಿರುವುದು ಸುಮಾರು 90 ಸಾವಿರ ಕೋಟಿರೂಗಳನ್ನು ಮಾತ್ರ. ಹೀಗಾಗಿ 2024 ರಲ್ಲಿ ಆಯ್ಕೆಯಾಗುವ ಸರ್ಕಾರವು ಸುಮಾರು 90 ಸಾವಿರ ಕೋಟಿ ರೂ. ಗಳನ್ನು ಪಾವತಿಸಬೇಕಿದೆ.
ಆದರೆ ಮೋದಿಯವರ ನೇತೃತ್ವದ ಸರ್ಕಾರ ಜನರಿಂದ ಎಕ್ಸೈಜ್ ಡ್ಯೂಟಿಯ ನೆಪದಲ್ಲಿ ಸಂಗ್ರಹಿಸಿರುವ ಮೊತ್ತ ಅಂದಾಜು 20 ಲಕ್ಷ ಕೋಟಿಗಳಷ್ಟಾಗುತ್ತದೆ. 2020 ರಲ್ಲೆ 3.35 ಲಕ್ಷ ಕೋಟಿಗಳನ್ನು ಸಂಗ್ರಹಿಸಿದೆ. ಕಳೆದ 6 ವರ್ಷಗಳಲ್ಲಿ ಕರ್ನಾಟಕವೊಂದರಿಂದಲೆ ಸುಮಾರು 1.20 ಲಕ್ಷ ಕೋಟಿ ರೂಪಾಯಿಗಳನ್ನು ಪೆಟ್ರೋಲ್, ಡೀಸೆಲ್‍ಗಳ ಬಾಬತ್ತಿನಿಂದ ಸಂಗ್ರಹಿಸಿದೆ. ಈ ಎಲ್ಲ ವಿಚಾರಗಳನ್ನು ಬಚ್ಚಿಟ್ಟು ಕಾಂಗ್ರೆಸ್ ಪಕ್ಷದ ಮೇಲೆ, ನೆಹರೂ, ಮನಮೋಹನ್ ಸಿಂಗ್ ಅವರ ಕುರಿತು ಸುಳ್ಳುಗಳನ್ನು ಉತ್ಪಾದಿಸಿ ಹಂಚುವುದೇ ಬಿಜೆಪಿ ಕೆಲಸವಾಗಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ಮನಮೋಹನ್ ಸಿಂಗ್ ಕೂಡ ಸಾಲ ಮಾಡಿದ್ದರು, ಆದರೆ!
ಮನಮೋಹನಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ (2014 ರ ಮಾರ್ಚ್ 31 ಕ್ಕೆ) ದೇಶದ ಸಾಲ 53.11 ಲಕ್ಷ ಕೋಟಿ ಇತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಈ ವರ್ಷದ ಕಡೆಗೆ 135.87 ಲಕ್ಷ ಕೋಟಿಗಳಾಗುತ್ತದೆಂದು ಮೋದಿಯವರ ಸರ್ಕಾರವೆ ಮಂಡಿಸಿದ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಅಂದರೆ ಮೋದಿಯವರು 6 ವರ್ಷಗಳಲ್ಲಿ ಮಾಡಿದ ಸಾಲ ಬರೋಬ್ಬರಿ 82.76 ಲಕ್ಷ ಕೋಟಿಗಳು. ದೇಶವು 100 ರೂ ತೆರಿಗೆ ಸಂಗ್ರಹಿಸಿದರೆ 45 ರೂಪಾಯಿಗಳನ್ನು ಸಾಲ ತೀರಿಸಲು ಖರ್ಚು ಮಾಡುತ್ತಿದೆ.
ಈ ರೀತಿಯ ಅನೇಕ ಸತ್ಯಗಳನ್ನು ಅಧ್ಯಯನ ಮಾಡಿ ತಾವುಗಳು ಜನರಿಗೆ ತಿಳಿ ಹೇಳಿ ಅರಿವನ್ನು ಉಂಟು ಮಾಡಬೇಕು. ಸುಳ್ಳಿನ ಕಾರ್ಖಾನೆಯಾದ ಬಿಜೆಪಿಯ ಎದುರು ಸತ್ಯದ ದೀಪವನ್ನು ಹಚ್ಚಿ , ದೇಶವನ್ನು ರಾಹು ಕೇತುಗಳಂತೆ ಆವರಿಸಿಕೊಂಡಿರುವ ಬಿಜೆಪಿಯನ್ನು ಸಂಪೂರ್ಣ ತೊಲಗಿಸಬೇಕೆಂದು ಕೋರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications