ಉತ್ತರ ಪ್ರದೇಶದಲ್ಲಿ ಕುರ್ಚಿಗಾಗಿ ಮಾಫಿಯಾಗಳಿಗೆ ರಕ್ಷಣೆ: ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ, ಡಿಸೆಂಬರ್ 10: ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರವು ಮಾಫಿಯಾಗಳಿಗೆ ಆಶ್ರಯ ನೀಡುವುದಿಲ್ಲ, ಯಾವುದೇ ದೊಡ್ಡ ಹೆಸರಿದ್ದರೂ ಮಾಫಿಯಾವನ್ನು ಬಿಡಲಾಗುವುದಿಲ್ಲ ಅವುಗಳ ವಿರುದ್ಧ ಕಾರ್ಯ ನಿರ್ವಹಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
"ಉತ್ತರ ಪ್ರದೇಶ ಸರ್ಕಾರವು ಮುಖ್ತಾರ್ ಅನ್ಸಾರಿ ಮತ್ತು ಅತೀಕ್ ಅಹ್ಮದ್ ಅಂತಹ 40ಕ್ಕೂ ಹೆಚ್ಚು ದೊಡ್ಡ ಮಾಫಿಯಾಗಳನ್ನು ಹುಟ್ಟಡಗಿಸಿದೆ. ಅವುಗಳ 1,800 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ನೆಲಸಮಗೊಳಿಸಿ ಮತ್ತು ವಶಪಡಿಸಿಕೊಂಡು ಅವರನ್ನು ಜೈಲಿಗೆ ಅಟ್ಟಿದೆ," ಎಂದು ಯೋಗಿ ಆದಿತ್ಯನಾಥ್ ಹೇಳಿದರು.
"ನಾವು ಭ್ರಷ್ಟರು, ಅಪರಾಧಿಗಳು ಮತ್ತು ದರೋಡೆಕೋರರ ವಿರುದ್ಧ ಬುಲ್ಡೋಜರ್‌ಗಳನ್ನು ಬಳಸಿದ್ದೇವೆ. ಅಖಿಲೇಶ್ ಯಾದವ್ ಅವರಿಗೆ ಬುಲ್ಡೋಜರ್ ಸಮಸ್ಯೆ ಇದ್ದರೆ, ಇದು ವರ್ಷಗಳಿಂದ ಬಡವರಿಗೆ ಕಿರುಕುಳ ನೀಡುತ್ತಿರುವ ಕ್ರಿಮಿನಲ್‌ಗಳು ಮತ್ತು ದರೋಡೆಕೋರರ ಬಗ್ಗೆ ಸಹಾನುಭೂತಿಯ ಆಸಕ್ತಿಯನ್ನು ಸೂಚಿಸುತ್ತದೆ. ರಾಜ್ಯದ ಬಹುಪಾಲು ಜನರು ಮಾಫಿಯಾ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಬೆಂಬಲಿಸುತ್ತಾರೆ ಎಂದು ಸಿಎಂ ಹೇಳಿದ್ದಾರೆ.

ಮಾಫಿಯಾಗಳ ವಿರುದ್ಧ ಕಠಿಣ ನಿಯಮ ಜಾರಿ:
ಉತ್ತರ ಪ್ರದೇಶದಲ್ಲಿ ಮಾಫಿಯಾಗಳ ವಿರುದ್ಧ ನಮ್ಮ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಕಾನೂನು ಸುವ್ಯವಸ್ಥೆಯನ್ನು ಸುಭದ್ರವಾಗಿರಿಸಲು 360 ಡಿಗ್ರಿ ವ್ಯಾಪ್ತಿಯಲ್ಲಿ ಶೂನ್ಯ ಸಹಿಷ್ಟುತೆ ನೀತಿಯನ್ನು ಅನುಸರಿಸಿ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮಾಜವಾದಿ ಪಕ್ಷವು ಮೊದಲಿನಿಂದಲೂ ಮಾಫಿಯಾಗಳ ವಿರುದ್ಧ ಯಾವುದೇ ರೀತಿ ಕ್ರಮಗಳನ್ನು ತೆಗೆದುಕೊಂಡಿಲ್ಲ, ಅವರು ಮಾಫಿಯಾಗಳನ್ನು ರಕ್ಷಿಸುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಬಹುಪಾಲು ಜನರು ಮಾಫಿಯಾಗಳ ವಿರುದ್ಧವಾಗಿದ್ದು, ನಮಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕುರ್ಚಿ ಉಳಿಸಿಕೊಳ್ಳುವುದಕ್ಕೆ ಮಾಫಿಯಾಗಳಿಗೆ ಬೆಂಬಲ:
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿಭಿನ್ನ ಆದ್ಯತೆ ಹಾಗೂ ನಿಲುವುಗಳನ್ನು ಹೊಂದಿದ್ದಾರೆ. ಅವರು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಯಾವಾಗಲೂ ಮಾಫಿಯಾಗಳಿಗೆ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದರು. ಇದರಿಂದ ಬಡವರು, ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳಿಗೆ ತೀವ್ರ ಕಿರುಕು ಆಗುತ್ತಿದೆ. ಹೀಗಾಗಿ ಹೊಸ ಹೂಡಿಕೆಗಳು ಬರುತ್ತಿಲ್ಲ, ತಲಾ ಆದಾಯವೂ ಕಡಿಮೆಯಾಗಿದ್ದು, ಬೆಳವಣಿಗೆ ದರ ಕಳಪೆಯಾಗಿದೆ. ಇದರ ಜೊತೆಗೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ಈಗ ಸ್ಥಿರವಾದ ಕಾನೂನು ಮತ್ತು ಸುವ್ಯವಸ್ಥೆಯು ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರ ವಿಶ್ವಾಸ ಪಡೆಯಲು ಸಹಾಯವಾಗಿದೆ. ಈ ಹಿಂದೆ ಕೈಗಾರಿಕೋದ್ಯಮಿಗಳಿಗೆ ಕಿರುಕುಳ ನೀಡಿದ ಅಪರಾಧ ಸಿಂಡಿಕೇಟ್‌ಗಳನ್ನು ಪರಿಶೀಲಿಸಲು ನಮ್ಮ ಸರ್ಕಾರವು ಕಠಿಣ ಕಾನೂನನ್ನು ಹೊಂದಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಉದ್ಯಮಗಳು ಅಭಿವೃದ್ಧಿ ಹೊಂದಲು ಇದು ಸಕಾರಾತ್ಮಕ ವಾತಾವರಣವನ್ನು ಖಚಿತಪಡಿಸಿದೆ. ಸ್ಯಾಮ್‌ಸಂಗ್, ರಿಲಯನ್ಸ್ ಮತ್ತು ಮೈಕ್ರೋಸಾಫ್ಟ್‌ನಂತಹ ಜಾಗತಿಕ ಬ್ರಾಂಡ್‌ಗಳು ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕಾರಣವಾಗಿದೆ. "ಉತ್ತರ ಪ್ರದೇಶದ ಕ್ಷೇತ್ರಗಳಾದ್ಯಂತ ಸುಮಾರು 11 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಹೂಡಿಕೆಯನ್ನು ಆಕರ್ಷಿಸಿದೆ. ಅದರಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿಗಳು ಭಾರೀ ಕೈಗಾರಿಕೆಗಳಲ್ಲಿ ಮತ್ತು 5 ಲಕ್ಷ ಕೋಟಿ ರೂಪಾಯಿಗಳು ಎಂಎಸ್‌ಎಂಇ ವಲಯದಲ್ಲಿವೆ. ಹೀಗಾಗಿ 3 ಮಿಲಿಯನ್‌ಗಿಂತಲೂ ಹೆಚ್ಚು ಯುವಕರಿಗೆ ಉದ್ಯೋಗ ಸಿಗುತ್ತಿದೆ," ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಾಫಿಯಾ ವಿರುದ್ಧ ಯೋಗಿ ಆದಿತ್ಯನಾಥ್ ಮಾತು:
ತಮ್ಮ ಸರ್ಕಾರವು ಕ್ರಮ ಕೈಗೊಂಡಿರುವ 40 ಮಂದಿಯ ಪೈಕಿ ಮುಖ್ತಾರ್ ಅನ್ಸಾರಿ, ಅತೀಕ್ ಅಹ್ಮದ್, ವಿಜಯ್ ಮಿಶ್ರಾ ಮತ್ತು ಸುಂದರ್ ಭಾಟಿಯಂತಹ ಮಾಫಿಯಾ ಡಾನ್ ಹೆಸರನ್ನು ಸಿಎಂ ಯೋಗಿ ಆದಿತ್ಯನಾಥ್ ಉಲ್ಲೇಖಿಸಿದ್ದಾರೆ. "ನಮ್ಮ ಸರ್ಕಾರವು ಮಾಫಿಯಾಗಳ ವಶಪಡಿಸಿಕೊಂಡ ಭೂಮಿಯಲ್ಲಿ ಬಡವರು ಮತ್ತು ದಲಿತರಿಗೆ ಮನೆಗಳನ್ನು ನಿರ್ಮಿಸುತ್ತದೆ. 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಹೊಸ ಉತ್ತರ ಪ್ರದೇಶದಲ್ಲಿ ಮಾಫಿಯಾ, ಕ್ರಿಮಿನಲ್‌ಗಳು ಮತ್ತು ಇತರ ರಾಕ್ಷಸರಿಗೆ ಆಶ್ರಯ ನೀಡುವವರಿಗೆ ಸ್ಥಾನವಿಲ್ಲ. ನಾವು ಹಳ್ಳಿಗಳು, ರೈತರು, ಯುವಕರು ಮತ್ತು ಅಭಿವೃದ್ಧಿಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವಾಗ, ಯುಪಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಮಾಫಿಯಾ ಸಂಸ್ಕೃತಿಯನ್ನು ನಾಶಪಡಿಸುವುದು ಸಹ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕೆಂಪು ಟೋಪಿ ಅಪಾಯದ ಸೂಚನೆ ಎಂದಿದ್ದ ಪ್ರಧಾನಿ:
ಉತ್ತರ ಪ್ರದೇಶದಲ್ಲಿ ಕೆಂಪು ಟೋಪಿಯು ಭವಿಷ್ಯದಲ್ಲಿ ರಾಜ್ಯದ ಪಾಲಿಗೆ ಅಪಾಯದ ಸಂಕೇತ(ರೆಡ್ ಅಲರ್ಟ್)ವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಖಿಲೇಶ್ ಯಾದವ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. "ಲಾಲ್ ಟೋಪಿ ವಾಲೋನ್" (ಕೆಂಪು ಟೋಪಿಗಳು) ಕೆಂಪು ದೀಪಗಳ ಮೇಲೆ ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ. ಇದು ಸರ್ಕಾರಿ ವಾಹನಗಳ ಮೇಲಿನ ಕೆಂಪು ಬೀಕನ್‌ಗಳು, ಅಧಿಕಾರ ಮತ್ತು ವಿಐಪಿ ಸ್ಥಾನಮಾನದ ಸಂಕೇತವಾಗಿದೆ," ಎಂದು ಮೋದಿ ಹೇಳಿದ್ದರು.
ಈ ಜನರಿಗೆ ಹಗರಣಗಳನ್ನು ಮಾಡುವುದಕ್ಕೆ, ಅತಿಕ್ರಮಣ ಮತ್ತು ಮಾಫಿಯಾಗಳಿಗೆ ಮುಕ್ತ ಚಾಲನೆ ನೀಡುವುದಕ್ಕಾಗಿ ಮಾತ್ರ ಅಧಿಕಾರವನ್ನು ಬಯಸುತ್ತಿದ್ದಾರೆ. ಕೆಂಪು ಟೋಪಿ ಮಂದಿಗೆ ಉಗ್ರರನ್ನು ಜೈಲಿನಿಂದ ಬಿಡುಗಡೆಗೊಳಿಸುವುದಕ್ಕಾಗಿ ಅಧಿಕಾರ ಬೇಕಾಗಿದೆ. ಕೆಂಪು ಟೋಪಿಯು ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಅನ್ನು ಸೂಚಿಸುತ್ತದೆ, ಇದು ಅಪಾಯದ ಸಂಕೇತವಾಗಿದೆ," ಎಂದರು.
ಉತ್ತರ ಪ್ರದೇಶದಲ್ಲಿ ಈ ಹಿಂದೆ ಮತದಾರರ ತೀರ್ಪು:
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಕ್ಷವು 311 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಇನ್ನೊಂದು ಕಡೆ 277 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಆರ್‌ಎಲ್‌ಡಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲವು ಸಾಧಿಸಿತ್ತು. ರಾಜ್ಯದ ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ 312 ರಲ್ಲಿ ಗೆಲುವು ದಾಖಲಿಸಿತ್ತು. ಈ ಪಕ್ಷ ಶೇ. 39.67ರಷ್ಟು ಮತವನ್ನು ಪಡೆದುಕೊಂಡಿತ್ತು. ಅಂದು ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷ (BSP) 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications