ಪೀಣ್ಯ ಕೆಎಸ್‌ಆರ್‌ಟಿಸಿ ನಿಲ್ದಾಣದ ವಿರುದ್ಧ ಓದುಗರ ಆಕ್ರೋಶ
ಬೆಂಗಳೂರು, ಸೆ. 10 : ಪೀಣ್ಯದಲ್ಲಿ ಕೆಎಸ್‌ಆರ್‌ಟಿಸಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಚರಿಸುತ್ತಿದ್ದ ಬಸ್ಸುಗಳನ್ನು ಸ್ಥಳಾಂತರ ಮಾಡಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೀಣ್ಯಕ್ಕೆ ಹೋಗುವ ಹೆಚ್ಚಿನ ಸಮಯ ಬೇಕಾಗುವುದರಿಂದ ನಮಗೆ ಖಾಸಗಿ ಬಸ್ ಸಾಕು ಎಂದು ಹೇಳುತ್ತಿದ್ದಾರೆ.
ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಸಾಗುತ್ತಿದ್ದ 146 ವೇಗದೂತ ಬಸ್‌ಗಳು ಬುಧವಾರದಿಂದ ಪೀಣ್ಯ ನಿಲ್ದಾಣದಿಂದ ಸಂಚಾರ ಆರಂಭಿಸಿವೆ. ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆ ಮಾಡಿರುವುದಕ್ಕೂ ಆಕ್ರೋಶ ವ್ಯಕ್ತವಾಗುತ್ತಿದೆ. [ಬಸ್ಸು ಹತ್ತಲು ಪೀಣ್ಯಕ್ಕೆ ಹೋಗಬೇಕು]
ಪೀಣ್ಯಕ್ಕೆ ತೆರಳಿ ಬಸ್ ಹತ್ತುವುದು ಒಂದು ಕಡೆಯಾದರೆ, ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳಲು ಸಂಪರ್ಕ ಸಾರಿಗೆಗೆ 15 ರೂ. ಟಿಕೆಟ್ ದರ ನಿಗದಿಪಡಿಸಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕಿಂತ ಖಾಸಗಿ ಬಸ್ಸುಗಳಲ್ಲಿ ತೆರಳುವುದು ಉತ್ತಮ ಎಂದು ಪ್ರಾಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಒನ್ ಇಂಡಿಯಾ ಓದುಗರು ಮತ್ತು ಪ್ರಯಾಣಿಕರ ಅಭಿಪ್ರಾಯ ಇಲ್ಲಿದ. [ಪೀಣ್ಯ ನಿಲ್ದಾಣ ಹೇಗಿದೆ ಗೊತ್ತಾ?]

ಮನೆ ತಲುಪುವುದು ಹೇಗೆ ಸ್ವಾಮಿ?
ಸುನೀಲ್ ಎಂಬ ಓದುಗರು ಸರ್ಕಾರ ನಿರ್ಧಾರವನ್ನು ಖಂಡಿಸಿದ್ದಾರೆ. ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಹೋಗಲು 15 ರೂ.ದರ ದುಬಾರಿ ಆಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದು, ಬೇರೆ ಊರುಗಳಿಂದ ಮುಂಜಾನೆ ಪೀಣ್ಯಕ್ಕೆ ತಲುಪಿದರೆ, ಅಲ್ಲಿಂದ ಮನೆಗಳನ್ನು ತಲುಪುವುದು ಹೇಗೆ? ಕೆಲಸಗಳಿಗೆ ಹೋಗುವುದು ಯಾವಾಗ ಎಂದು ಅವರು ಪ್ರಶ್ನಿಸಿದ್ದಾರೆ.

ನಾನು ಖಾಸಗಿ ಬಸ್ಸುಗಳಲ್ಲೇ ಹೋಗುತ್ತೇನೆ
ನಾನು ವಾಸವಗಿರೋದು ಜೆ.ಪಿ.ನಗರದಲ್ಲಿ. ಪೀಣ್ಯಕ್ಕೆ ಹೋಗಬೇಕಾದರೆ, ರಸ್ತೆ ತಡೆ, ಮಳೆ, ಮುಷ್ಕರಗಳು ಇಲ್ಲದಿದ್ದರೆ ಕನಿಷ್ಠ ನಾಲ್ಕು ಗಂಟೆಗಳು ಬೇಕು, ಅದೂ ಎರಡೇ ಬಸ್ ಬದಲಾವಣೆ ಮಾಡಿ ಹೋಗಲು. ನಲವತ್ತು ರೂಪಾಯಿಗಳನ್ನು ಖರ್ಚು ಮಾಡಬೇಕು. ಲಗೇಜು ಇದ್ದು ಅಟೋ ಹಿಡಿದರೆ ನಾಲ್ಕುನೂರು ರೂಪಾಯಿಗಳು. ಇಷ್ಟೆಲ್ಲಾ ಖರ್ಚು ಮಾಡಿ ನಾನೇಕೆ ರಾಜ್ಯ ಸಾರಿಗೆ ಬಸ್ಸಿನಲ್ಲಿ ಹೋಗ್ಬೇಕು? ಖಾಸಗಿ ಬಸ್ಸುಗಳು ಮನೆಯ ಪಕ್ಕದಿಂದಲೇ ಹೊರಡುತ್ತವೆ. ಅವುಗಳಲ್ಲೇ ಹೋಗುತ್ತೇನೆ ಎಂದು hasuke ಎಂಬ ಓದುಗರೊಬ್ಬರು ಹೇಳಿದ್ದಾರೆ.

ಪ್ರಯಾಣಿಕರಿಗೆ ತೊಂದರೆ ಕೊಡುಲು ಈ ಕ್ರಮ
ಇದು ಖಾಸಗಿ ಬಸ್ಸಿನವರ ಜೊತೆ ಮಾಡಿಕೊಂಡಿರುವ ಒಳ-ಒಪ್ಪಂದಂತೆ ಕಾಣುತ್ತಿದೆ? ಎಂದು ಓದುಗರೊಬ್ಬರು ಹೇಳಿದ್ದಾರೆ. ಖಾಸಗಿ ಬಸ್ಸುಗಳು ಮನೆ ಪಕ್ಕದಲ್ಲಿಯೇ ಬಂದು ಪಿಕ್-ಅಪ್ ಮಾಡಿಕೊಂಡು ಹೋಗುತ್ತಿದ್ದರೆ, ಕೆಎಸ್‌ಆರ್‌ಟಿಸಿ ಪೀಣ್ಯ ತನಕ ಬರಲು ಹೇಳುತ್ತದೆ. ಇದು ಪ್ರಯಾಣಿಕರಿಗೆ ಕೊಡುತ್ತಿರುವ ಕಷ್ಟವಲ್ಲವೇ ಎಂದು Young Indian ಎಂಬ ಓದುಗರು ಪ್ರಶ್ನಿಸಿದ್ದಾರೆ.

ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಬಹುದಿತ್ತು
ಸರ್ಕಾರಿ ಬಸ್ಸುಗಳು ಪೀಣ್ಯದಿಂದ ಹೊರಡಲಿವೆ, ಆದರೆ ಖಾಸಗಿ ಬಸ್ಸುಗಳ ಕಥೆ ಏನು?. ಮೆಜೆಸ್ಟಿಕ್ ಗೆ ಬರುವ ಖಾಸಗಿ ಬಸ್ಸುಗಳಿಗೆ ಕಡಿವಾಣ ಹಾಕಿದ್ದರೆ ಸಾಕಾಗಿತ್ತು. ಆಗ ಎಲ್ಲಾ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಯೋಗಿ ಎಂಬ ಓದುಗರು ಹೇಳುತ್ತಿದ್ದಾರೆ.

ಪೀಣ್ಯಕ್ಕೆ ಹೋಗಲು 15, ವಾಪಸ್ ಬರಲು 15 ರೂ. ಖರ್ಚು
ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಹೋಗಲು 15 ರೂ. ಕೊಡಬೇಕು ಅಲ್ಲಿಂದ ವಾಪಸ್ ಬರಲು 15 ರೂ. ಕೊಡಬೇಕು ಒಟ್ಟು 30 ರೂ. ಖರ್ಚು. ಜೊತೆಗೆ ಸಮಯವೂ ವ್ಯರ್ಥ ಎಂದು ವಿನೋದ್ ಅಭಿಪ್ರಾಯಪಟ್ಟಿದ್ದಾರೆ.

ಹಣ ಹೆಚ್ಚಾದರೂ ಖಾಸಗಿ ಬಸ್ಸಲ್ಲಿ ಹೋಗುವೆ
ಖಾಸಗಿ ಬಸ್ಸುಗಳು ಮನೆಯ ಪಕ್ಕದಿಂದಲೇ ಹೊರಡುತ್ತವೆ 10 ರೂಪಾಯಿ ಜಾಸ್ತಿ ಆದರೂ ಅದರಲ್ಲಿಯೇ ಹೋಗುತ್ತೇವೆ. ಅಷ್ಟು ದೂರ ಹೋಗಿ ಏಕೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಲಿ ಎಂದು ಸಿದ್ದಲಿಂಗೇಶ್ ಎಂಬ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ.

ನಾವು ರೈಲಿನಲ್ಲಿ ಹೋಗ್ತೀವಿ
ಇದೊಂದು ಅವೈಜ್ಞಾನಿಕ ವ್ಯವಸ್ಥೆ ಜೆ. ಪಿ. ನಗರ , ಬನಶಂಕರಿ ಕಡೆಯಲ್ಲಿ ವಾಸವಿರುವವರು ಪೀಣ್ಯಗೆ ಹೋಗಲು ಸುಮಾರು 3 ರಿಂದ 4 ಗಂಟೆ ಬೇಕು. ಅದರ ಬದಲು ರೈಲಿನಲ್ಲಿ ಇನ್ನು 4 ಗಂಟೆ ಪ್ರಯಾಣ ಮಾಡಿದರೆ ಹುಬ್ಬಳ್ಳಿ, ಧಾರವಾಡಕ್ಕೆ ಹೋಗುತ್ತೇವೆ. ಬೆಂಗಳೂರಿನ ದಕ್ಷಿಣ ಭಾಗದ ಜನರಿಗೆ ಇದು ಉಪಯೋಗವಾಗದ ಯೋಜನೆ ಎಂದು ಸಂತೋಷ್ ಎಂಬ ಓದುಗರು ಹೇಳಿದ್ದಾರೆ.












Click it and Unblock the Notifications