ಟ್ರಾಫಿಕ್ ದಂಡ: ಉದ್ದೇಶ ಒಳ್ಳೆಯದು, ಜಾರಿ ವಿಧಾನ ಮಧ್ಯಮ ವರ್ಗಕ್ಕೆ ಹೊರೆ
ಅತಿಯಾದ ವೇಗವಾಗಿ ಗಾಡಿ ಚಲಾಯಿಸಿದರೆ 1000 ರೂಪಾಯಿ ದಂಡ ಬೀಳಲಿದೆ. ವೇಗವಾಗಿ ಗಾಡಿ ಚಲಾಯಿಸುವಂತೆ ಸೂಚಿಸಿದರೂ ಅದಕ್ಕೆ 500 ರೂಪಾಯಿ ದಂಡ ಬೀಳಲಿದೆ. ವಿಮೆ (ಇನ್ಶೂರೆನ್ಸ್) ಇಲ್ಲದ ಗಾಡಿಯನ್ನು ಚಲಾಯಿಸಿದಲ್ಲಿ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ನೊಂದಣಿ ರಹಿತ ವಾಹನವನ್ನು ಓಡಿಸಿದಲ್ಲಿ ಬರೋಬ್ಬರಿ 5000 ದಂಡ ತೆರಬೇಕಾಗುತ್ತದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಅಪಾಯಕಾರಿಯಾಗಿ ವಾಹನ ನಿಲ್ಲಿಸುವುದು, ಇವುಗಳಿಗೆ 1000 ರೂಪಾಯಿ ದಂಡ ತೆರಬೇಕಾಗುತ್ತದೆ.
ಹವಾಯ್ ಚಪ್ಪಲಿ ಹಾಕಿಕೊಂಡರೂ ದಂಡ, ಕಾರಿನಲ್ಲಿದ್ದು ಹೆಲ್ಮೆಟ್ ಹಾಕಿಲ್ಲ ಎಂದು ದಂಡ, ಬರಿಗಾಲಲ್ಲಿ ಗಾಡಿ ಓಡಿಸಿದ್ರು ದಂಡ, ಲುಂಗಿಯುಟ್ಟ ಟ್ರಕ್ ಚಾಲಕನಿಗೂ ದಂಡ, ಪೊಲೀಸರು ಸರ್ಕಾರ ಉದ್ದೇಶ ಒಂದೇ ದಂಡ ಸಂಗ್ರಹ, ಆದರೆ, ಮಾರ್ಗ ಮಾತ್ರ ಬೇರೆ ಬೇರೆ.
ಸೆಪ್ಟೆಂಬರ್ 1 ರಿಂದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದಲ್ಲಿ ಬದಲಾವಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಕಾಯ್ದೆಯ ಉದ್ದೇಶ ಒಳ್ಳೆಯದಾಗಿದ್ದರೂ, ಅದರ ಜಾರಿಯಿಂದ
ಬಡವರು ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಪ್ರಮುಖವಾಗಿ ಪ್ರವಾಹ ಪೀಡಿತ ಉತ್ತರ ಕರ್ನಾಟಕದಲ್ಲಿ ಜನ ಜೀವನ ಇನ್ನೂ ಸುಧಾರಿಸಿಲ್ಲ. ಹೀಗಾಗಿ, ವಾಹನ ಸವಾರರ ಮೇಲೆ ಆಡಳಿತ ವರ್ಗ ಸ್ವಲ್ಪ ದಯೆ ತೋರಲಿ.

ಎಲ್ಲಕ್ಕೂ ದಂಡೇ ಮಾನದಂಡವಲ್ಲ
ದಾಖಲೆ ಹೊಂದದೇ ಇರುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮುಂತಾದ ನಿಯಮ ಉಲ್ಲಂಘನೆಯನ್ನು ಒಂದೇ ದೃಷ್ಟಿಯಿಂದ ನೋಡುವುದು ಸಹಜವಲ್ಲ, ಈ ರೀತಿಯಲ್ಲಿ ದಂಡ ವಿಧಿಸುವುದು ಸರಿಯೂ ಅಲ್ಲ, ಮಾನವ ಸಹಜ ತಪ್ಪುಗಳಿಂದ, ಮರೆವಿನಿಂದ ಕೆಲವೊಮ್ಮೆ ಡಿಎಲ್, ಆರ್ ಸಿ ಬುಕ್, ವಿಮೆ ಮುಂತಾದ ಅಗತ್ಯ ದಾಖಲೆಗಳು ವಾಹನದಲ್ಲಿ ಇಟ್ಟುಕೊಳ್ಳದೆ ರಸ್ತೆಗಿಳಿದಿರಬಹುದು. ಅಥವಾ ತುರ್ತಾಗಿ ಹೊರಗಡೆ ಹೋಗಬೇಕಾಗಿ ಬಂದು, ಬೇರೆಯವರ ವಾಹನ ಓಡಿಸುತ್ತಿರಬಹುದು, ಇಂಥ ತಪ್ಪುಗಳು ಎಲ್ಲರಿಂದಲೂ, ಆಗುತ್ತಿರುತ್ತವೆ.

ಮೊದಲು ಅರಿವು ಮೂಡಿಸಬೇಕು
ಆದರೆ, ಇದಕ್ಕೂ ದುಬಾರಿ ದಂಡ ವಿಧಿಸುವುದು ಹೊಟ್ಟೆಪಾಡಿಗೆ ಕಷ್ಟಪಡುವ ಜನರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿದಂತೆ ಆಗುತ್ತಿದೆ. ಹೀಗಾಗಿ ಜನರಲ್ಲಿ ಮೊದಲು ಅರಿವು ಮೂಡಿಸಬೇಕು. ದಂಡದ ಬದಲು ಅಗತ್ಯ ದಾಖಲೆಗಳನ್ನು ಪಡೆಯಲು ನೆರವಾಗಬೇಕು. ಟ್ರಾಫಿಕ್ ಪೊಲೀಸರು ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕಾನೂನಿನ ಅರಿವು ಮೂಡಿಸುವುದು, ಜನರಿಗೆ ಶಿಕ್ಷಣ ನೀಡಿ, ಮತ್ತೆ ತಪ್ಪು ಮಾಡದಂತೆ ನೋಡಿಕೊಳ್ಳುವುದು ಮುಖ್ಯ ಉದ್ದೇಶವಾಗೇ ಹೊರತೂ, ದಂಡ ವಿಧಿಸಿ ಭಯ ಹುಟ್ಟಿಸುವುದಲ್ಲ.

ಜೀವದ ಬೆಲೆ ಸವಾರನಿಗೂ ಗೊತ್ತಿರುತ್ತದೆ
ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವುದು, ಹೆಲ್ಮೆಟ್ ರಹಿತವಾಗಿ ವಾಹನ ಚಲಾಯಿಸುವುದರಿಂದ ಚಾಲಕರ ಹಾಗೂ ಸಾರ್ವಜನಿಕರ ಜೀವನಕ್ಕೆ ಅಪಾಯಕಾರಿ. ಇದರ ಬಗ್ಗೆ ಸವಾರನಿಗೂ ಗೊತ್ತಿರುತ್ತದೆ. ಅವರು ವಾಹನ ಚಲಾಯಿಸಲು ಮಾನಸಿಕವಾಗಿ ಫಿಟ್ ಎಂದೇ ಇಲಾಖೆಗೆ ಲೈಸನ್ಸ್ ನೀಡಿರುತ್ತದೆ. ಹೀಗಾಗಿ ಇಂತಹ ವರ್ತನೆಗೆ ದಂಡ ವಿಧಿಸುವುದು ಸೂಕ್ತವೇ ಆಗಿದೆ. ಆದರೆ, ಇಂತಹ ನಿಯಮಗಳನ್ನು ಜಾರಿಗೆ ತರು ವಾಗ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು. ದುಡ್ಡು ಕೊಟ್ಟು ನಿಯಮ ಉಲ್ಲಂಘಿಸಬಹುದು ಎಂದಾದರೆ ಕಾಯ್ದೆ ರೂಪಿಸಿದ ಉದ್ದೇಶವೇ ವಿಫಲವಾಗುತ್ತದೆ.

ಕೆಟ್ಟ ರಸ್ತೆಗಳ ಕಾರಣದಿಂದ ಅಪಘಾತ
ಇದರ ಜೊತೆಗೆ ಕೆಟ್ಟ ರಸ್ತೆಗಳ ಕಾರಣದಿಂದಲೂ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳು ಹಾಗೂ ಸಂಚಾರಿ ವ್ಯವಸ್ಥೆ ಸುರಕ್ಷಿತವಾಗಿರುವಂತೆ ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ. ಈಗಾಗಲೇ ಗೋವಾ ಸರ್ಕಾರ ಈ ನಿಟ್ಟಿನಲ್ಲಿ ಘೋಷಣೆ ಮಾಡಿದ್ದು, ಮೊದಲು ಉತ್ತಮ ರಸ್ತೆ ನಿರ್ಮಿಸಿ ನಂತರ ವಾಹನ ಕಾಯ್ದೆ ನಿಯಮ ಜಾರಿಗೊಳಿಸುವುದಾಗಿ ಹೇಳಿದ್ದಾರೆ.