ಆ ಎಲೆಕ್ಷನ್ ಗೆದ್ದಿದ್ರೆ ಹೇಮಶ್ರೀ ಬದುಕೇ ಬದಲಾಗುತ್ತಿತ್ತು!
ಚುನಾವಣಾ ಕಣದಲ್ಲಿದ್ದ ಅತ್ಯಂತ ಚಿಕ್ಕ ವಯಸ್ಸಿನ ಸ್ಪುರದ್ರೂಪಿ, ಚಿನಕುರಳಿಯಂಥ ಅಭ್ಯರ್ಥಿಯಾಗಿ ಹೇಮಶ್ರೀ ಎಲ್ಲರ ಗಮನ ಸೆಳೆದಿದ್ದಳು. 'ಸೀರೆಗೊಂದು ಸವಾಲ್' ಕಾರ್ಯಕ್ರಮ ಆಕೆಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಅಪ್ಪನ ಮಾತಿಗೆ ಮಣಿದಳು: ಬೆಂಗಳೂರು ಬಿಟ್ಟು ಚಿಕ್ಕನಾಯಕನಹಳ್ಳಿಯಲ್ಲೇ ಯಾಕೆ ಸ್ಪರ್ಧಿಸಲು ಅದೂ ಇನ್ನೂ ರಾಜ್ಯದಲ್ಲಿ ಏಳಿಗೆ ಕಾಣದ ಬಹುಜನ ಸಮಾಜವಾದಿ ಪಕ್ಷದ ಟಿಕೆಟ್ ಏಕೆ ಪಡೆದಳು ಎಂಬುದು ಎಲ್ಲರಿಗೂ ಕುತೂಹಲಕಾರಿಯಾಗಿತ್ತು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಬಳಿಯ ಹೊಸಳ್ಳಿ ಹೇಮಶ್ರೀ ತಂದೆ ಊರು. ಹೀಗಾಗಿ ತಂದೆಯ ಆಶಯದಂತೆ ಅಲ್ಲೇ ಸ್ಪರ್ಧಿಸಲು ಹೇಮಶ್ರೀ ನಿರ್ಧರಿಸಿದ್ದಳು. ನಾಗರಾಜ್ ಕೂಡಾ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅನುಭವವಿತ್ತು. ಜನ ಸಂಪರ್ಕವಿತ್ತು. ಆದರೆ, ಚುನಾವಣೆ ಖರ್ಚಿಗೆ ಬೇಕಾದ ಅಗತ್ಯ ಹಣವಿರಲಿಲ್ಲ.
ನಾಗರಾಜ್ ಅವರಿಗೆ ಬಿಎಸ್ಪಿ ಟಿಕೆಟ್ ನೀಡಲಾಗಿತ್ತು. ಅದರೆ, ಕೊನೆ ಕ್ಷಣದಲ್ಲಿ ಮಗಳು ಹೇಮಶ್ರೀಯನ್ನು ಕಣಕ್ಕಿಳಿಸಲು ನಾಗರಾಜ್ ನಿರ್ಧರಿಸಿಬಿಟ್ಟರು. ನಟನೆಯಲ್ಲದೆ, ಓದಿನಲ್ಲೂ ಮುಂದಿದ್ದ ಹೇಮಶ್ರೀ ಕೂಡಾ ರಾಜಕೀಯ ರಂಗಕ್ಕೆ ಪ್ರವೇಶಿಸಲು ಸಂಪೂರ್ಣವಾಗಿ ಸಜ್ಜಾದಳು.
ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದು ಅರ್ಧಕ್ಕೆ ಮುಗಿಸಿದ್ದ ಹೇಮಶ್ರೀ, ಆದರ್ಶ ಫಿಲಂ ಇನ್ಸ್ ಸ್ಟಿಟ್ಯೂಟ್ ನಲ್ಲಿ ನಟನೆಯಲ್ಲಿ ಡಿಪ್ಲೋಮಾ ಪಡೆದಿದ್ದಳು.
ನಾಯಕಿಯಾಗುವ ನಿರೀಕ್ಷೆಯಿತ್ತು: 15 ವರ್ಷ ವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಹೇಮಶ್ರೀಗೆ ಚುನಾವಣೆ ಗೆದ್ದು ಉತ್ತಮ ರಾಜಕಾರಣಿಯಾಗುವ ಆಸೆಯಿತ್ತು. ನಾಯಕಿಯಾಗುವ ಎಲ್ಲಾ ಅರ್ಹತೆ ಆಕೆಗಿತ್ತು.
ಅಂದಿನ ಉತ್ತರಪ್ರದೇಶದ ಮುಖ್ಯಮಂತ್ರಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರ ಸಾಮಾಜಿಕ ಕಳಕಳಿಯನ್ನು ಇಷ್ಟಪಟ್ಟಿದ್ದ ಹೇಮಶ್ರೀ, ಎಲ್ಲಾ ಮತ ಪಂಥಗಳ ಜನರನ್ನು ಒಟ್ಟಿಗೆ ಕರೆದೊಯ್ದು ಸಮಾಜಮುಖಿ ರಾಜಕಾರಣಿ ಎನಿಸುವ ಹುಮ್ಮಸ್ಸಿತ್ತು.
ಚುನಾವಣೆ ಗೆದ್ದು ಎಂಎಲ್ ಎ ಆದರೂ ನಟನೆಯನ್ನು ಮಾತ್ರ ಕೈಬಿಡುವುದಿಲ್ಲ ಎಂದು ಹೇಮ ಆಪ್ತರಲ್ಲಿ ಹೇಳಿಕೊಂಡಿಳು.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವೋಟ್ ಬ್ಯಾಂಕ್ ಒಡೆದು ಹೇಮಶ್ರೀ ವಿಜಯಿಯಾಗುತ್ತಾಳೆ. ಚುನಾವಣಾ ಪ್ರಚಾರದ ಸಮಯದಲಿ ಹೇಮಶ್ರೀ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆಕೆ ಗೆಲ್ಲುತ್ತಾಳೆ ಎಂಬ ಭರವಸೆ ಇದೆ ಎಂದು ಬಿಎಸ್ ಪಿ ಮುಖಂಡ ಪಿಜಿಆರ್ ಸಿಂಧ್ಯಾ ಕೂಡಾ ಹೇಳಿದ್ದರು. ಆದರೆ, ಇಂದು ಆಕೆ ಅಕಾಲಿಕ ಸಾವಿನಿಂದ ದಿಗ್ಭ್ರಮೆಗೊಂಡಿದ್ದಾರೆ.
'ನನಗೆ ಹುಟ್ಟಿನಿಂದ ಎಲ್ಲಾ ಸೌಲಭ್ಯಗಳು, ಅಪ್ಪ ಅಮ್ಮನ ಪ್ರೀತಿ ಸಿಕ್ಕಿದೆ. ಆದರೆ, ನನ್ನ ಕ್ಷೇತ್ರದ ಜನರಿಗೆ ಎಲೆಕ್ಟ್ರಿಸಿಟಿ ಎಂದರೆ ಏನು ಎಂಬುದು ಕೂಡಾ ತಿಳಿದಿಲ್ಲ. ಆವರ ಕಷ್ಟಗಳನ್ನು ಕಂಡು ಕೂಡಾ ಸ್ಪಂದಿಸಲು ಆಗದಿದ್ದಾಗ ನನ್ನನ್ನೇ ಕೊಂದುಕೊಳ್ಳುವಷ್ಟು ಕೋಪ ಬರುತ್ತದೆ' ಎಂದು ಹೇಮಶ್ರೀ ಹೇಳಿದ್ದಳು
ರಾಜಕೀಯ ಕ್ಷೇತ್ರಕ್ಕೆ ನಾನು ತಮಾಷೆಗಾಗಿ ಇಳಿದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಲು ಇದು ಸೂಕ್ತ ವೇದಿಕೆ ಎಂದು ಅನ್ನಿಸಿದ್ದರಿಂದ ಅಪ್ಪನ ಮಾತಿಗೆ ಒಪ್ಪಿಕೊಂಡೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾಕಷ್ಟು ಕಲಿತೆ ಎಂದು ಹೇಮಶ್ರೀ ಹೇಳಿದ್ದಳು.
ವಿಧಾನಸಭಾ ಕ್ಷೇತ್ರದ ನಂ.128 ರಲ್ಲಿ ಕಣದಲ್ಲಿದ್ದ 62 ಅಭ್ಯರ್ಥಿಗಳ ಪೈಕಿ ಆಸ್ತಿ ಘೋಷಿಸಿದವರಲ್ಲಿ ಹೇಮಶ್ರೀ 16 ನೇ ಸ್ಥಾನದಲ್ಲಿದ್ದರು. 0.56 ಕೋಟಿ ರು ಎಂದು ಆಸ್ತಿ ಘೋಷಿಸಿದ್ದ ಹೇಮಶ್ರೀ ಬಳಿ ಪ್ಯಾನ್ ಕಾರ್ಡ್ ಕೂಡಾ ಇರಲಿಲ್ಲ ಎಂಬುದು ಗಮನಾರ್ಹ.
ಸೋಲೇ ಸಾವಿಗೆ ದಾರಿಯಾಯ್ತೆ?: ಆದರೆ, ಹೇಮಶ್ರೀ ಚುನಾವಣೆಯಲ್ಲಿ ಗೆಲ್ಲದೇ ಹೋದಾಗ ಮೈಮೇಲಿದ್ದ ಸಾಲವನ್ನು ತೀರಿಸಿಕೊಳ್ಳಲು ಆಕೆ ಪೋಷಕರು ಅನ್ಯಮಾರ್ಗಗಳನ್ನು ಹುಡುಕಿದರು. ಈ ಸಮಯಕ್ಕೆ ಸಿಕ್ಕ ಸುರೇಂದ್ರ ಬಾಬು ಆಕೆ ಸೌಂದರ್ಯಕ್ಕೆ ಮರುಳಾಗಿ ಕೈ ಹಿಡಿಯಲು ಮುಂದಾಗಿದ್ದಾನೆ.
ಅಪ್ಪ ಅಮ್ಮನ ಒತ್ತಡಕ್ಕೆ ಮಣಿದು ಹಸೆಮಣೆ ಏರಿದ್ದ ಹೇಮಶ್ರೀ ಮೈಮೇಲೆ ಆಕೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ ಆಸ್ತಿ ಪ್ರಮಾಣದ ಡಬ್ಬಲ್ ಮೊತ್ತ ಒಡವೆ ವಸ್ತ್ರ ಇತ್ತು ಎಂದರೆ ಸುರೇಂದ್ರನ ಪ್ರಭಾವ ಎಷ್ಟಿತ್ತು ಎಂದು ಊಹಿಸಬಹುದು.
ಆಸ್ತಿಗಾಗಿ ಸುರೇಂದ್ರನಿಂದ ಹೇಮಶ್ರೀ ವಿಚ್ಛೇದನ ಬಯಸಿದ್ದಳು. ಹೇಮಶ್ರೀ ಮೈಮುಟ್ಟಲು ಆಗದೇ ಆಕೆಯನ್ನು ಸುರೇಂದ್ರ ಮುಗಿಸಿಬಿಟ್ಟ ಎಂಬ ಆರೋಪ ಪ್ರತ್ಯಾರೋಪಗಳು ಇನ್ನೂ ತನಿಖೆ ಹಂತದಲ್ಲಿದೆ. ಎಲ್ಲದರ ನಡುವೆ ನಮ್ಮನ್ನು ಕಾಡುವ ಮೊದಲನೇ ಪ್ರಶ್ನೆ ಹೇಮಶ್ರೀ ಚುನಾವಣೆಯಲ್ಲಿ ಗೆದ್ದಿದ್ರೆ ಕತೆ ಬೇರೆಯಾಗುತ್ತಿತ್ತೇ?













Click it and Unblock the Notifications