ಶೆಟ್ಟರ್‌ಗೆ ಲೆಟರ್ : ಲೋಕಾಯುಕ್ತ ನೇಮಕ ಮಾಡ್ರೀ

Anand Yadwad
ಲೋಕಾಯುಕ್ತ ಹುದ್ದೆಯಿಂದ ನ್ಯಾ.ಸಂತೋಷ್ ಹೆಗ್ಡೆ ಅವರು ನಿವೃತ್ತರಾಗಿ ಆಗಸ್ಟ್ ತಿಂಗಳಿಗೆ 1 ವರ್ಷ. ಅವರು ನಿವೃತ್ತರಾಗಿದ್ದು 2011ರ ಆಗಸ್ಟ್ 2ರಂದು. ಅಲ್ಲಿಂದ ಇಲ್ಲಿಯವರೆಗೆ ನಿಷ್ಕಳಂಕ ವ್ಯಕ್ತಿಯನ್ನು ಲೋಕಾಯುಕ್ತನನ್ನಾಗಿ ನೇಮಕ ಮಾಡಲು ಕರ್ನಾಟಕ ಸರಕಾರ ಸೋತಿದೆ. ಭ್ರಷ್ಟಾಚಾರವನ್ನು ನಿಗ್ರಹಿಸಲು ಇಚ್ಛಾಶಕ್ತಿ ಇಲ್ಲದಿರುವುದು ಇದರಿಂದ ಸಾಬೀತಾಗಿದೆ. ಲೋಕಾಯುಕ್ತ ಸಂಸ್ಥೆ ತನ್ನ ಕೆಲಸವನ್ನು ನಿಭಾಯಿಸುತ್ತಿದೆಯಾದರೂ ಅದಕ್ಕೆ ಒಬ್ಬ ಸಮರ್ಥ ದಂಡನಾಯಕ ಇನ್ನೂ ದಕ್ಕಿಲ್ಲ. ಭ್ರಷ್ಟಾಚಾರ ರಹಿತ ಸರಕಾರ ನೀಡುವುದಾಗಿ ಹೇಳಿರುವ ಶೆಟ್ಟರ್ ಅವರು ತಮ್ಮ ಅಲ್ಪಾಧಿಯಲ್ಲಾದರೂ ಲೋಕಾಯುಕ್ತರನ್ನು ನೇಮಿಸುವರೆ? ಲೋಕಾಯುಕ್ತರನ್ನು ನೇಮಿಸಿ ಭ್ರಷ್ಟರನ್ನು ನಿಗ್ರಹಿಸಲು ಶೆಟ್ಟರ್ ಅವರಿಗೆ ಬಹಿರಂಗ ಪತ್ರ.

ಸನ್ಮಾನ್ಯ ಮುಖ್ಯಮಂತ್ರಿಗಳೆ,

ಸಜ್ಜನ ಹಾಗು ಪ್ರಾಮಾಣಿಕರಾದ ತಾವು ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಅಭಿನಂದನೆಗಳು.

ಅಧಿಕಾರ ವಹಿಸಿಕೊಂಡ ತಕ್ಷಣ ತಮ್ಮ ಪ್ರಪ್ರಥಮ ಪತ್ರಿಕಾ ಹೇಳಿಕೆಯಲ್ಲಿ, ಪಾರದರ್ಶಕ ಹಾಗೂ ಭ್ರಷ್ಟಾಚಾರ-ಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದೀರಿ. ಇದು ನಮಗೆಲ್ಲ ಸಂತಸದ ವಿಷಯ. ನಿಮ್ಮ ಭರವಸೆಯ ಮಾತು ಕೃತಿಗೆ ಇಳಿಯಬೇಕಾದರೆ, ಮೊಟ್ಟಮೊದಲನೆಯದಾಗಿ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿರುವ ಲೋಕಾಯುಕ್ತರ ನೇಮಕವನ್ನು ತಾವು ತಕ್ಷಣದಲ್ಲಿ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.

ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದಿಂದ ನೊಂದು ಕಂಗೆಟ್ಟಿರುವ ಜನಸಾಮಾನ್ಯರಿಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಒಂದು ಆಶಾಕಿರಣವಾಗಿತ್ತು. ದೇಶದಲ್ಲೇ ಅತ್ಯುತ್ತಮ ಭ್ರಷ್ಟಾಚಾರ ನಿಗ್ರಹ ದಳವೆಂದು ಹೆಸರು ಮಾಡಿತ್ತು. ಇಂತಹ ಸಂಸ್ಥೆಯನ್ನು ಬಲಹೀನ ಮಾಡಿ, ಭ್ರಷ್ಟರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಕಳಂಕ ನಿಮ್ಮ ಪಕ್ಷದ ಸರಕಾರದ ಮೇಲಿದೆ. ಈ ಕಳಂಕವನ್ನು ಹೊಡೆದೋಡಿಸಲು ತಮಗೊಂದು ಅಪೂರ್ವ ಅವಕಾಶ ದೊರೆತಿದೆ.

ತಮ್ಮ ಆಶಯವು ಕೂಡ ಭ್ರಷ್ಟಾಚಾರ-ಮುಕ್ತ ಸಮಾಜ ನಿರ್ಮಾಣವಾಗಿರುವುದುರಿಂದ ತಾವು ಅತೀ ಶೀಘ್ರದಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಇಡೇರಿಸಬೇಕಾಗಿ ಕೋರಿಕೆ.

1. ಕಳೆದ ಹಲವಾರು ತಿಂಗಳುಗಳಿಂದ ಖಾಲಿ ಬಿದ್ದಿರುವ ಲೋಕಾಯುಕ್ತ ಹಾಗೂ ಉಪ-ಲೋಕಾಯುಕ್ತ ಹುದ್ದೆಗಳಿಗೆ ಸೂಕ್ತ ಹಾಗೂ ಯೋಗ್ಯ ವ್ಯಕ್ತಿಗಳನ್ನು ನೇಮಿಸುವುದು.

2. ಲೋಕಾಯುಕ್ತದಲ್ಲಿ ಖಾಲಿ ಇರುವ ಇನ್ನುಳಿದ ಹುದ್ದೆಗಳಿಗೆ ಅರ್ಹರನ್ನು ನೇಮಿಸುವುದು.

3. ಲೋಕಾಯುಕ್ತ ಕಾನೂನಿಗೆ ತಿದ್ದುಪಡಿಯನ್ನು ತಂದು ನಿಷ್ಪಕ್ಷಪಾತ ತನಿಖೆ ಮತ್ತು ಭ್ರಷ್ಟರಿಗೆ ಶಿಕ್ಷೆಯಾಗುವಂತೆ ಮಾಡಲು ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀಡುವುದು. ಸುಪ್ರೀಂ ಕೋರ್ಟ್‌ನ ಮಾಡಿ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಇನ್ನೂ ಹಲವರ ಸಲಹೆ ಸೂಚನೆಗಳನ್ನು ಕ್ರೋಡಿಕರಿಸಿ ಪ್ರಬಲ ಲೋಕಯುಕ್ತ ಮಸೂದೆಯನ್ನು ಬರೆದಿದ್ದಾರೆ. ಈ ಮಸೂದೆ ಜಾರಿಯಾಗುವಂತೆ ಮಾಡಿ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕಾಗಿ ಕೋರಿಕೆ.

ಅಂಕೆಯಿಲ್ಲದೆ ಬೆಳೆಯುತ್ತಿರುವ ಭ್ರಷ್ಟಾಚಾರಕ್ಕೆ ಮತ್ತು ಭ್ರಷ್ಟಾಚಾರದಿಂದಾಗಿ ನಶಿಸಿ ಹೋಗುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ತಾವು ದಿಟ್ಟ ಹಾಗೂ ಅತ್ಯವಶ್ಯವಾದ ಕ್ರಮಗಳನ್ನು ಕೈಗೊಳ್ಳಿತ್ತೀರೆಂದು ನಂಬಿದ್ದೇನೆ. ತಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಕಾಯುತ್ತೇನೆ.

ತಮ್ಮ ವಿಶ್ವಾಸಿ,
ಆನಂದ ರಾ. ಯಾದವಾಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+