ಬ್ರಹ್ಮಾಂಡ ಭ್ರಷ್ಟಾಚಾರಿಗಳಿಗಾಗಿ ಜೈಲಿನ ಆಸ್ಪತ್ರೆಗಳು ಮೇಲ್ದರ್ಜೆಗೇರಲಿ

ಪ್ರಕರಣ ವಿಚಾರಣೆಗೆ ಬರುತ್ತಿದೆ ಎಂದು ಮುದ್ದತ್ ನೀಡುವ ಮೊದಲೇ ಆಸ್ಪತ್ರೆಗೆ ಓಡಿ ಹೋಗಿ ಕಾಯಿಲೆಗಳನ್ನು ಬರಮಾಡಿಕೊಳ್ಳುವುದು, ನ್ಯಾಯಾಂಗ ಬಂಧನ ಪ್ರಕಟಿಸುತ್ತಿದ್ದಂತೆಯೇ ಕೋರ್ಟಿನಲ್ಲೇ ಕುಸಿದು ಬೀಳುವ ನಾಟಕ ಆಡುವುದನ್ನು ನೋಡಿದರೆ (ಇಂಥದ್ದನ್ನೆಲ್ಲಾ ವಕೀಲರೇ ಹೇಳಿ ಕೊಡುತ್ತಾರೆ ಎಂಬ ಆಪಾದನೆಗಳೂ ಇವೆ) ಇವರಿಗೆಲ್ಲಾ 'ಪೇಡೆ' ತಿನ್ನುವಾಗ ದಕ್ಕುವ ಸಿಹಿ, ಅರಗಿಸಿಕೊಳ್ಳುವಾಗ ಯಾಕಿರುವುದಿಲ್ಲ ಎಂಬುದು ಮಾತ್ರ ವಿವರಣೆಗೆ ನಿಲುಕದ ಸಂಗತಿ!
ವಾಸ್ತವವಾಗಿ ಪ್ರತಿಷ್ಠಿತ ಆರೋಪಿಗಳು ಕೋರ್ಟಿನ ದಾಖಲೆಗಳಲ್ಲಿ ನಮೂದಿಸುವ ರೋಗಗಳೆಲ್ಲಾ ಅತ್ಯಂತ ಸಾಮಾನ್ಯ ರೋಗಗಳು. ಯಾವುದೇ ವ್ಯಕ್ತಿಗೆ 'ನೀನಿವತ್ತು ಜೈಲಿಗೆ ಹೋಗಬೇಕು' ಎಂದಾಕ್ಷಣ ಸಹಜವಾಗಿಯೇ ರಕ್ತದೊತ್ತಡ ಜಾಸ್ತಿಯಾಗುತ್ತದೆ ಇಲ್ಲವೇ ಕಡಿಮೆಯಾಗುತ್ತದೆ.
ಹೃದಯದ ಬಡಿತವೂ ಏರುಪೇರಾಗುತ್ತದೆ. ಆ ವರೆಗೂ ಮೈಯಲ್ಲಿ ಮರೆಯಾಗಿದ್ದ ಹಳೆಯ ನೋವುಗಳೆಲ್ಲಾ ಒಮ್ಮೆಲೇ ಒತ್ತರಿಸಿಕೊಂಡು ಹೊರಬರುತ್ತವೆ. ಬರಲೇ ಬೇಕು. ಇಲ್ಲದಿದ್ದರೆ ಅದನ್ನು 'ಜೈಲು ಯಾತ್ರೆ' ಎಂದು ಹೇಳಲಾಗದು.
ಜೈಲಿಗೆ ಹೋಗಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡರೆ ಎರಡು ದಿನದಲ್ಲಿ ಇವೆಲ್ಲಾ ಸರಿ ಹೋಗುತ್ತವೆ. ಆದರೆ ಇವನ್ನೇ ನಮ್ಮ ನಾಯಕರು ಭಾರಿ ಪ್ರಾಣ ಹೋಗುವ ಕಾಯಿಲೆಗಳು ಎಂಬಂತೆ ಬಿಂಬಿಸಿ ಜೈಲಿನ ವಾಸ ತಪ್ಪಿಸಿಕೊಳ್ಳಲಿಕ್ಕಾಗಿಯೇ ಆಸ್ಪತ್ರೆ ಸೇರುವ ಕಳ್ಳಾಟ ನೋಡಿದರೆ ಇವರೆಲ್ಲಾ ಹಾಡ ಹಗಲೇ ಕಾನೂನಿನ ಗೌರವಕ್ಕೆ ಮಸಿ ಬಳಿಯುತ್ತಿದ್ದಾರೆ ಎನ್ನದೆ ವಿಧಿಯಿಲ್ಲ.
ವೈದ್ಯರೂ ಕೂಡಾ ಈ ವಿಷಯಗಳಲ್ಲಿ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಇಂತಹ ಆರೋಪಿಗಳು ಜೈಲು ಸೇರಿದಾಗ ಇವರ ಆರೋಗ್ಯದ ಬಗ್ಗೆ ದೃಢೀಕರಣ ಮಾಡುತ್ತಿದ್ದಾರೆಂಬುದೂ ಈಗ ಪ್ರಶ್ನಾರ್ಹವಾಗಿದೆ.












Click it and Unblock the Notifications