ಭ್ರಷ್ಟಾಚಾರ : ಎಲ್ಲಾ ಪಕ್ಷಗಳು ಒಂದೇ, ಪೇಜಾವರ ಶ್ರೀ

ಭ್ರಷ್ಟಾಚಾರವನ್ನು ಹತ್ತಿಕ್ಕಲು ಕಟ್ಟುನಿಟ್ಟಾದ ತ್ವರಿತಗತಿಯ ವ್ಯವಸ್ಥೆಯಾಗಬೇಕೆಂಬುದೇ ನನ್ನ ಆಗ್ರಹವಾಗಿದೆ. ಭ್ರಷ್ಟಾಚಾರದ ಆರೋಪಗಳು ಬಂದಾಗ ಅದನ್ನು ನಿರ್ಣಯಿಸುವವನು ನಾನಲ್ಲ. ಪ್ರಜಾಪ್ರಭುತ್ವದಲ್ಲಿ ಪಕ್ಷದ ಹೈಕಮಾಂಡ್, ಲೋಕಾಯುಕ್ತರು, ನ್ಯಾಯಾಲಯಗಳು ನಿರ್ಧರಿಸಬೇಕು. ಅದು ತ್ವರಿತಗತಿಯಿಂದಾಗಬೇಕೆಂದು ಮಾತ್ರ ನಾನು ಹೇಳಬಯಸುತ್ತೇನೆ. ನಾನು ಪಕ್ಷಪಾತವನ್ನು ತೋರಿರುವ ಒಂದೇ ಒಂದು ಉದಾಹರಣೆಯನ್ನು ತೋರಿಸುವಂತೆ ಆಹ್ವಾನಿಸುತ್ತಿದ್ದೇನೆ.
ಭ್ರಷ್ಟಾಚಾರದ ಆರೋಪಗಳು ಬಂದಾಗ ಸಂಬಂಧಪಟ್ಟವರು ಕೂಡಲೇ ಪರಿಶೀಲಿಸಿ ವಿಳಂಬವಿಲ್ಲದೇ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದೇನೆಯೇ ಹೊರತು ಯಾರನ್ನೂ ಬೆಂಬಲಿಸಿಲ್ಲ ಮತ್ತು ವಿರೋಧಿಸಿಯೂ ಇಲ್ಲ. ನಾನು ಎಲ್ಲಾ ರಾಜಕೀಯ ಪಕ್ಷಗಳನ್ನೂ ಸಮಾನವಾಗಿ ನೊಡುತ್ತೇನೆ. ಎಲ್ಲಾ ಪಕ್ಷದ ಪ್ರಮುಖರೊಂದಿಗೆ ಒಳ್ಳೆಯ ಸಂಪರ್ಕವನ್ನು ಇಟ್ಟುಕೊಂಡಿದ್ದರೂ ಪಕ್ಷ ರಾಜಕೀಯದಿಂದ ನಾನು ದೂರವೇ ಇದ್ದೇನೆ.
ನನ್ನ ಪಾಡಿಗೆ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಕೊಂಡಿದ್ದೇನೆ. ಹಿಂದೂ ಧರ್ಮದ ರಕ್ಷಣೆಗಾಗಿ, ಪರಿಸರ ಮಾಲಿನ್ಯ, ಅಸ್ಪೃಶ್ಯತೆ, ಭ್ರಷ್ಟಾಚಾರ ಮುಂತಾದ ಪಿಡುಗುಗಳ ವಿರುದ್ಧವಾಗಿ ನಡೆಯುವ ಹೋರಾಟಗಳಲ್ಲಿಯೂ ಭಾಗವಹಿಸುತ್ತೇನೆ. ಆದರೆ ಪಕ್ಷ ರಾಜಕೀಯದಿಂದ ಮಾತ್ರ ದೂರವಾಗಿಯೇ ಇರುತ್ತೇನೆ. ಬಾಬಾ ರಾಮದೇವರ ಸತ್ಯಾಗ್ರಹವೂ ಪಕ್ಷಾತೀತವಾಗಿತ್ತು. ಎಲ್ಲಾ ಧರ್ಮಗಳ ಸಂತರೂ ಅಲ್ಲಿ ಭಾಗವಹಿಸಿದ್ದರು.
ಆದ್ದರಿಂದ ಒಂದು ದಿನದ ಮಟ್ಟಿಗೆ ಆ ಸತ್ಯಾಗ್ರಹದಲ್ಲಿ ಭಾಗವಹಿಸಿ ಅದಕ್ಕೆ ನೈತಿಕ ಬೆಂಬಲ ನೀಡಿದ್ದೇನೆ. ಇದನ್ನೂ ತಪ್ಪೆಂದು ಕೆಲವರು ದೂರಿದ್ದಾರೆ. ಪಕ್ಷಾತೀತವಾದ ಇಂತಹ ಎಲ್ಲಾ ಹೋರಾಟಗಳಿಗೂ ನನ್ನ ಬೆಂಬಲವಿದೆ. ಸರಿಯಾಗಿ ಪರಿಶೀಲಿಸದೆ ರಾಜಕಾರಣಿಗಳು ನನ್ನ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ನನ್ನೊಡನೆ ಒಳ್ಳೆಯ ರೀತಿಯ ಸಂಪರ್ಕವನ್ನು ಇಟ್ಟುಕೊಳ್ಳಬೇಕೆಂದು ಹೇಳಬಯಸುತ್ತೇನೆ.












Click it and Unblock the Notifications