ಮೇಯರ್ ಹುದ್ದೆಗೆ ಅರ್ಹ ಬ್ರಾಹ್ಮಣರೇಕೆ ಬೇಡ ?

ಬಿಜೆಪಿ ಎಂದೊಡನೆ ಬ್ರಾಹ್ಮಣರ ಜನತಾ ಪಕ್ಷವೆಂದು ಎಲ್ಲೆಡೆ ಬಿಂಬಿಸಲಾಗುತ್ತದೆ. ಬಿಜೆಪಿ ಪಕ್ಷ ಧುರೀಣರು ಸಾರ್ವಜನಿಕ ಸಮಾರಂಭಗಳಲ್ಲಿ ಉಲಿಯುವ ವರಸೆಯೆಂದರೆ ಬ್ರಾಹ್ಮಣರು ಆಡಳಿತದಲ್ಲಿ ಚಾಣಾಕ್ಷರು, ಬುದ್ಧಿವಂತರು, ಕಷ್ಟ ಸಹಿಷ್ಣುಗಳು ಎಂದೆಲ್ಲಾ ಹೊಗಳಲಾಗುತ್ತದೆ. ಬ್ರಾಹ್ಮಣರು ಹೆಚ್ಚು ಹೆಚ್ಚು ರಾಜಕಾರಣದಲ್ಲಿ ಪಾಲ್ಗೊಳ್ಳಬೇಕೆಂಬ ತುತ್ತೂರಿಯೂದುತ್ತಾರೆ. ಆದರೆ, ಅರ್ಹ ಬ್ರಾಹ್ಮಣ ವ್ಯಕ್ತಿಗೆ ಸೂಕ್ತ ಹುದ್ದೆ ಕೊಡಬೇಕೆಂದೊಡನೆ ತೆರೆಮರೆಯ ರಾಜಕಾರಣ ಆರಂಭವಾಗುತ್ತದೆ. ಯಾಕೆ ಹೀಗೆ?
ಉದಾಹರಣೆ ನೀಡುವುದಾದರೆ, ಬಸವನಗುಡಿಯನ್ನು ನಿರಂತರವಾಗಿ ಪಾಲಿಕೆಯಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿದ, ಜನ ಮೆಚ್ಚುಗೆ ಪಡೆದ ಆ ವಲಯದಲ್ಲಿ ಅಭಿವೃದ್ಧಿಯ ಕೊಡುಗೆಯನ್ನು ನೀಡಿದ ಕಟ್ಟೆ ಸತ್ಯ ನಾರಾಯಣರನ್ನು ಅರ್ಹತೆಯ ಆಧಾರದಲ್ಲಿ ಮೇಯರ್ ಹುದ್ದೆಗೆ ಆಯ್ಕೆ ಮಾಡಬೇಕೆಂದೊಡನೆ ಪಕ್ಷ ರಾಜಕಾರಣ, ಜಾತಿ ರಾಜಕಾರಣ ತಲೆಯೆತ್ತುತ್ತದೆ.
ಮಹಾನಗರ ಪಾಲಿಕೆಯ ದಾಖಲೆಯನ್ನು ಪರಿಶೀಲಿಸಿದರೆ 1986ರಲ್ಲಿ ಡಾ. ಶೇಷಾದ್ರಿ ಎನ್ನುವ ಬ್ರಾಹ್ಮಣ ಬಂಧು ಮೇಯರ್ ಹುದ್ದೆಗೆ ಆಯ್ಕೆಯಾದುದನ್ನು ಬಿಟ್ಟರೆ ಬ್ರಾಹ್ಮಣ ವರ್ಗವೆ ಮೂಲೆ ಗುಂಪಾಗಿರುವುದು ನಿಖರವಾಗಿ ಗಮನಿಸಬಹುದಾಗಿದೆ.
ಕಟ್ಟೆ ಸತ್ಯ ಪ್ರತಿನಿಧಿಸುವ ಬಸವನಗುಡಿಯ ನಾಗರಿಕರ ಒಕ್ಕೊರಲ ಬೇಡಿಕೆಯೆಂದರೆ ನಾಲ್ಕು ಬಾರಿ ನಾವು ಆಯ್ಕೆ ಮಾಡಿ ಕಳುಹಿಸಿದ ಕಟ್ಟೆ ಸತ್ಯರವರನ್ನು ಮುಂದಿನ ಮೇಯರ್ ಗಾದಿಗೆ ಆಯ್ಕೆ ಮಾಡಬೇಕೆನ್ನುವುದಾಗಿದೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಮೇಯರ್ ಹುದ್ದೆಯಲ್ಲಿರುವ ವ್ಯಕ್ತಿಯ ಅರ್ಹತೆ, ಪ್ರಾಮಾಣಿಕತೆ ಪರಿಗಣನೆಗೆ ಬರುತ್ತದೆ.
ಈ ಎಲ್ಲಾ ವಿಧದ ಪರೀಕ್ಷೆಯಲ್ಲೂ ಗೆದ್ದು ಬರಬಹುದಾದಂತಹ ವ್ಯಕ್ತಿತ್ವವಿರುವ ಕಟ್ಟೆ ಸತ್ಯರವರನ್ನು ಮುಂದಿನ ಮೇಯರ್ ಹುದ್ದೆಗೆ ಆಯ್ಕೆ ಮಾಡಬೇಕಾದ ಕರ್ತವ್ಯ ಭಾರತೀಯ ಜನತಾ ಪಕ್ಷಕ್ಕಿದೆ. ಬೆಂಗಳೂರು ನಾಗರಿಕರ ಈ ಕೂಗು ಪಕ್ಷದ ವರಿಷ್ಠರಿಗೆ ಕೇಳಿಸೀತೆ? ಬ್ರಾಹ್ಮಣ ವರ್ಗಕ್ಕೆ ನ್ಯಾಯ ದೊರಕೀತೇ?












Click it and Unblock the Notifications