ಸರ್ಕಾರದಿಂದ ನೇತ್ರಾವತಿ ನದಿ ಮಾರಾಟ!

ಈ ಯೋಜನೆಯಿಂದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನದಿ ನೀರನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿರುವ ಅಸಂಖ್ಯ ಕುಟುಂಬಗಳ ದೈನಂದಿನ ಬದುಕು ದಿಕ್ಕು ತಪ್ಪುತ್ತದೆ. ಪಶ್ಚಿಮ ಘಟ್ಟ ಹಾಗೂ ಕರಾವಳಿ ಪ್ರದೇಶದ ಪ್ರಾಣಿ ಪಕ್ಷಿ ಸಂಕುಲಕ್ಕೆ ಮೊದಲ ಹೊಡೆತ ತಪ್ಪಿದ್ದಲ್ಲ. ಕುಡಿಯುವ ನೀರಿಗೂ ಅಭಾವ ಉಂಟಾಗುತ್ತದೆ ಎಂದು ಅನೇಕ ವರದಿಗಳು ಹೇಳಿವೆ. ಕನ್ನಡ ಜಿಲ್ಲೆಗಳನ್ನು ಕಡೆಗಣಿಸಿ, ಬಯಲು ಸೀಮೆಗೆ ನೀರುಣುಸುವ ಮೂಲಕ ಸರ್ಕಾರ ರಾಜಕೀಯ ತಂತ್ರ ಮೆರೆಯುತ್ತಿದೆ. ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ದೊಡ್ಡ ಬಳ್ಳಾಪುರ ಹಾಗೂ ತುಮಕೂರಿಗೆ ನೀರು ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.
ಹತ್ತಿರದಲ್ಲೇ ಸಮುದ್ರ, ತೀರದ ದಾಹ ಎಂಬಂತೆ, ಕನ್ನಡ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ದಾಹ ಹೆಚ್ಚುತ್ತಿದೆ. ನೇತ್ರಾವತಿ ನದಿಯನ್ನು ಮಾರಾಟ ಮಾಡುವ ಮೂಲಕ ಪಶ್ಚಿಮ ಘಟ್ಟಗಳ ಪತನಕ್ಕೆ ಸರ್ಕಾರ ನಾಂದಿಯಾಡುತ್ತಿದೆ. ವೈಜ್ಞಾನಿಕವಾಗಿ ನದಿ ನೀರು ಜೋಡಣೆ ಕಾರ್ಯದ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯ. ಇದೇ ಮಾತನ್ನು ಉಡುಪಿಯ ಪೇಜಾವರ ಶ್ರೀಗಳು ಹೇಳಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ನದಿ ತಿರುವು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ನದಿ ತಿರುವು ಯೋಜನೆಗೆ ಮತ್ತೊಂದು ಹೆಸರಿಟ್ಟು 250 ಕೋಟಿ ರು ವೆಚ್ಚದಲ್ಲಿ ಸರ್ಕಾರ ಯೋಜನೆ ಸಾಕಾರಗೊಳಿಸಲು ಮುಂದಾಗಿರುವುದು ದುರದೃಷ್ಟಕರ.
ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಪಡೆಯದೆ ಹಾಗೂ ಸಂವಾದ ನಡೆಸದೆ ಸರ್ಕಾರ ಯೋಜನೆಯನ್ನು ಪ್ರಕಟಿಸಿರುವುದು ರಾಜಕೀಯ ಪ್ರೇರಿತ ಎಂಬುದರಲ್ಲಿ ಅನುಮಾನವಿಲ್ಲ. ನೇತ್ರಾವತಿ ನದಿ ತುಳು ಸಂಸ್ಕೃತಿಯ ಮೂಲ. ನಮ್ಮ ಸಂಸ್ಕೃತಿ ನಾಶ ಮಾಡುವುದು ಎಷ್ಟು ಸರಿ. ಪಶ್ಚಿಮ ಘಟ್ಟದ ನದಿಗಳನ್ನು ತಿರುಗಿಸುವುದು ಸಾಧ್ಯವೇ ಎಂದು ಶಾಸಕರು ಬಂದು ನೋಡಲಿ. ಸಮೀಕ್ಷೆ ನಡೆಸಲು ನೇತ್ರಾವತಿ ನೀರು ಬೇಡುತ್ತಿರುವ ಜಿಲ್ಲೆಗಳ ಶಾಸಕರ ತಂಡ ಒಮ್ಮೆ ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಲಿ.












Click it and Unblock the Notifications