ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ್ಪಅವರಿಗೊಂದು ಬಹಿರಂಗ ಪತ್ರ

By Staff
|
Google Oneindia Kannada News

ಸನ್ಮಾನ್ಯ ಮುಖ್ಯಮಂತ್ರಿಗಳೇ,

ಬಡತನ ನಿರ್ಮೂಲನೆ ಮಾಡ್ತೀವಿ, ವಿದ್ಯಾವಂತರಿಗೆ ಉದ್ಯೋಗ ನೀಡ್ತೀವಿ, ಸಮೃದ್ಧಿ ನಾಡು ಕಟ್ತೀವಿ ಅಂಥ ಕಾಂಗ್ರೆಸ್ಸಿನ ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಆದ್ದರಿಂದ ಮತದಾರ ಪ್ರಭುಗಳೇ, ನಮಗೆ ಒಂದೇ ಒಂದು ಬಾರಿ ಅವಕಾಶ ಕೊಡಿ. 50 ವರ್ಷಗಳಲ್ಲಿ ಮಾಡದ ಕೆಲಸಗಳನ್ನು ಕೇವಲ ಐದೇ ವರ್ಷಗಳಲ್ಲಿ ಮಾಡಿ ತೊರಿಸ್ತೀವಿ. ನಮಗೆ ಒಂದು ಬಾರಿಗೆ ಆಶೀರ್ವಾದ ಮಾಡಿ ಎಂದು ಚುನಾವಣೆ ಪೂರ್ವದಲ್ಲಿ ಟಿವಿ ಮೂಲಕ ಯಡಿಯೂರಪ್ಪ ಕೈ ಮುಗಿದು ಕೇಳಿಕೊಳ್ಳುತ್ತಿರುವಾಗ ಈ ಯಪ್ಪನಿಗೆ ಒಂದು ಸಾರಿ ಅಧಿಕಾರ ಕೊಟ್ಟು ನೋಡಬೇಕು ಬಿಡಿ ಸರ್ ಅಂದವರೆ ಹೆಚ್ಚು ಜನ.

ಚುನಾವಣೆಗೂ ಮುಂಚೆ ಕಂಡ ಕಂಡವರಲ್ಲಿ ನಮಗೂ ಒಂದು ಅವಕಾಶ ಕೊಟ್ಟು ನೋಡಿ, ಮಾದರಿ ರಾಜ್ಯ ಮಾಡ್ತೀವಿ, ದೇಶದಲ್ಲಿ ರಾಜ್ಯವನ್ನು ಮುಂಚೂಣಿಗೆ ತಂದು ನಿಲ್ಲಿಸುತ್ತೇವೆ ಅಂದಾತ ರಾಜ್ಯದ ಮುಖ್ಯಮಂತ್ರಿ ಪದವಿಯಲ್ಲಿ ಆಸೀನರಾಗಿರುವ ಯಡಿಯೂರಪ್ಪ ಎಂಬ ಆಸಾಮಿ. ಬಿಜೆಪಿ ತುಂಬಾ ಶಿಸ್ತಿನ ಪಕ್ಷ, ಈ ಪಕ್ಷಕ್ಕೆ ಮತ ನೀಡಿದರೆ ಕೆಲಸಗಳು ಆಗ್ತವೆ, ದಿಲ್ಲಿಯ ಅಣತಿಯಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮುಖಕ್ಕೆ ಮಂಗಳಾರತಿ ಎತ್ತಿದ ಮತದಾರ ಬಿಜೆಪಿಯನ್ನು ಅಪ್ಪಿಕೊಂಡ. ಅದರಲ್ಲಿ ಉತ್ತರ ಕರ್ನಾಟಕ ಜನ ಕಮಲ ಬಿಟ್ಟು ಅತ್ತಿತ್ತ ಕದಲಲಿಲ್ಲ. ಫಲಿತಾಂಶ ಬಂದಾಗ ಬಹುದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು.

ನಿರೀಕ್ಷೆಯಂತೆ ಬೂಕನಕರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಕಿರೀಟ ಧರಿಸಿದರು. ಎಲ್ಲವೂ ಸರಿ, ಅಧಿಕಾರ ಸಿಕ್ಕಾದ ಮೇಲೆ ಮಾತು ಬದಲಿಸುವ ಚಾಳಿ ಬರೀ ಕಾಂಗ್ರೆಸ್ಸಿಗರಿಗೆ ಮಾತ್ರ ಗೊತ್ತು ಎಂದು ಜನ ತಿಳಿದುಕೊಂಡಿದ್ದರು. ಆದರೆ ಯಡಿಯೂರಪ್ಪ ಇದಕ್ಕೆ ಹೊರತಲ್ಲ ಎನ್ನುವುದು ಈಗ ಕೆಲ ದಿನಗಳ ಹಿಂದೆ ತಿಳಿಯಿತು. ಅಧಿಕಾರದ ಅಮಲಿನಲ್ಲಿರುವ ಅವರ ಬಣ್ಣ ಬಯಲಾಗ ತೊಡಗಿತು. ಪ್ರಣಾಳಿಕೆಯಲ್ಲಿ ಘೋಷಿಸಿದ ಹಾಗೆ ರಾಜ್ಯದ ರೈತರಿಗೆ ಉಚಿತ 10 ಎಚ್ ಪಿ ಪಂಪಸೆಟ್ ಹೊಂದಿರುವವರಿಗೆ ಉಚಿತ ವಿದ್ಯುತ್ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಈಗ ರಾಗ ಬದಲಾಗಿದೆ. ರಾಜ್ಯದಲ್ಲಿ ಮಳೆ ಆಭಾವವಿದೆ. ಜತೆಗೆ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಜಲಾಶಯಗಳು ದಿನದಿಂದ ದಿನಕ್ಕೆ ಭತ್ತಿಹೋಗತೊಡಗಿವೆ. ಆದ್ದರಿಂದ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಮೊನ್ನೆ ಯಡಿಯೂರಪ್ಪ ಮೈಸೂರಿನಲ್ಲಿ ಮಾತನಾಡಿದ್ದಾರೆ. ಜು. 17 ರಂದು ಮಂಡಿಸುವ ಬಜೆಟ್ ನಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎನ್ನುವ ಹಾರಿಕೆ ಉತ್ತರವನ್ನು ನೀಡಿದ್ದಾರೆ. ಬಿಜೆಪಿ ಎಂಬ ಮಹಾಶಿಸ್ತಿನ ಪಕ್ಷ ಆಡಳಿತಕ್ಕೆ ಬಂದರೆ ಏನೋ ಮಹಾ ಬಲಾವಣೆಯಾಗಲಿದೆ ಎಂದು ಹೇಳುತ್ತಾ ತಿರುಗುತ್ತಿರುವವರಿಗೆ ಯಡಿಯೂರಪ್ಪ ಅವರ ಮಾತು ಉಸಿರುಗಟ್ಟಿಸುವಂತಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ ಗಳಿಗೆಯೇ ಸರಿಯಿಲ್ಲ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿವೆ. ಅದರೆ ವಸ್ತು ಸ್ಥಿತಿ ಅದು ಅಲ್ಲ, ಈ ರಾಜ್ಯದ ರೈತರ ಹಣೆಬರಹವೇ ಸರಿಯಿಲ್ಲ ಎನ್ನಬೇಕು. ನಿಸರ್ಗದ ಕೋಪವೂ ಏನೂ, ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಆಗುತ್ತಿಲ್ಲ. ಮಳೆ ಆದ ಸಂದರ್ಭಧಲ್ಲಿ ರೈತರಿಗೆ ಬಿತ್ತನೆ ಮಾಡಲು ರಸಗೊಬ್ಬರಗಳು ಸಿಗುತ್ತಿಲ್ಲ. ಭೂಮಿ ತಾಯಿಯನ್ನು ನಂಬಿ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ರೈತನ ಹೊಲ ಮಳೆ ಇಲ್ಲದೇ ಬೆಳೆ ನಾಶವಾಗಿವೆ. ಈ ಸಂದರ್ಭದಲ್ಲಿ ಸರ್ಕಾರ ರೈತರನ ಆಸರೆಗೆ ನಿಂತರೆ ಅವನ ಜೀವವನ್ನು ಉಳಿಸಿಬಹುದು. ಆದರೆ ಯಡಿಯೂರಪ್ಪ ಸೇರಿ ಯಾವ ಸರ್ಕಾರವೂ ಆತನ ಜೀವ ಉಳಿಸುವ ಕೆಲಸ ಮಾಡುತ್ತಿಲ್ಲ. ಬರೀ ಆಶ್ವಾಸನೆ ನೀಡಿ ಮತ ಗಳಿಸುತ್ತಾರೆಯೇ ಹೊರತು ಪ್ರಾಮಾಣಿಕವಾಗಿ, ಹೇಳಿದಂತೆ ನಡೆದುಕೊಳ್ಳುವ ನಾಯಕ ಸಿಗದಿರುವುದು ದುರಂತ. ಯಡಿಯೂರಪ್ಪ ವಿದ್ಯುತ್ ನೀಡಲು ಪರಿಶೀಲನೆ ಮಾಡುತ್ತೇವೆ ಎಂದು ಒಮ್ಮೆ ಹೇಳಿದರೆ, ಇನ್ನೊಂದು ಸಲ ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಹಣದುಬ್ಬರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ರೈತ ಬೆಳೆದ ಬೆಳೆ ಕುಸಿಯತೊಡಗಿದೆ. ಕೋಲಾರ ಮತ್ತು ಮೈಸೂರಿನಲ್ಲಿ ರೈತರು ತಾವು ಬೆಳೆದ ಟೊಮ್ಯಾಟೋಗಳನ್ನು ಚರಂಡಿಗೆ ಚೆಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕಬ್ಬು ಬೆಳೆಗೆ ಕೂಡಾ ಅದೇ ಹಣೆಬರಹವೇ, ಬೆಂಬಲ ಬೆಲೆ ನಿಗಧಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಅನೇಕ ದಿನಗಳ ಕಾಲ ಕಷ್ಟ ಪಟ್ಟು ಬೆಳೆದ ಹಣ್ಣಿಗೆ ಕೆಜಿ 1 ರುಪಾಯಿ ಅಂದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ. ಇದರಿಂದ ಸಾಲ ಮಾಡಿಕೊಂಡ ರೈತ ಆತ್ಮಹತ್ಯೆಗೆ ಮುಂದಾಗುತ್ತಿದ್ದಾನೆ. ಯಾವ ಸರ್ಕಾರಗಳು ಕೂಡಾ ರೈತ ಕಷ್ಟವನ್ನು ಅರಿಯಲು ಚಿಂತನೆ ನಡೆಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ರೈತರೊಂದಿಗೆ ಸಂವಾದ ನಡೆಸಿ ಪ್ರಚಾರ ತಗೆದುಕೊಂಡರೆ ರೈತರ ಸಮಸ್ಯೆಗಳು ಪರಿಹಾರ ಸಿಗುತ್ತವೆಯೇ. ದೂರದೃಷ್ಟಿಯ ಕೊರತೆ ಇಂಥಹ ಗಿಮಿಕ್ಕುಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಯಡಿಯೂರಪ್ಪ ಮುಂಬರುವ ಬಜೆಟ್ ನಲ್ಲಿ ರೈತರಿಗೆ ವಿಶೇಷ ಆದ್ಯತೆ ನೀಡಬೇಕು. ಸಾಧ್ಯವಾದಲ್ಲಿ ಮಾತು ಕೊಟ್ಟಂತೆ ಉಚಿತ ವಿದ್ಯುತ್ ನೀಡಲು ಮುಂದಾಗಬೇಕು. ಶ್ರಮ ಜೀವಿ ರೈತನ ಬಾಯಿ ಒಣಗಿದೆ ಒಂದು ತೊಟ್ಟು ನೀರನ್ನಾದರೂ ಹಣಿಸಬೇಕಲ್ಲವೇ ಮುಖ್ಯಮಂತ್ರಿಯವರೆ ?

-ಮೃತ್ಯುಂಜಯ ಕಲ್ಮಠ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X