• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಕುಂಬಾರರಿಗೆ ವರುಷ ನ್ಯಾಯಾಲಯಕ್ಕೆ ನಿಮಿಷ

By Staff
|

Medium of teaching, where Karnataka HC fumbledಮಾನ್ಯರೇ,

ಕನ್ನಡದ ಕುಂಬಾರ ವರುಷಗಳ ಪರಿಶ್ರಮದಿಂದ ಮಾಡಿದ ಮಣ್ಣಿನ (ಭಾಷೆಯ) ಮಡಕೆಯನ್ನು ನ್ಯಾಯಾಲಯ ತನ್ನ ದೊಣ್ಣೆಯಿಂದ ಒಂದೇ ನಿಮಿಷದಲ್ಲಿ ಒಡೆದುಹಾಕಿದೆ! ನ್ಯಾಯಾಲಯವಾದರೂ ಪಾಪ ಏನು ಮಾಡೀತು, ಕಾನೂನು ಮತ್ತು ಸಂವಿಧಾನಗಳಿಗನುಗುಣವಾಗಿ ತೀರ್ಪು ಕೊಡುವುದಕ್ಕಿಂತ ಹೆಚ್ಚಿನ ಅಧಿಕಾರ ಅದಕ್ಕಿಲ್ಲ. ಭಾಷೆಯ ಬಗ್ಗೆ ಎಲ್ಲ ಬಲ್ಲವರಂತೆ ಅದು ಮಾತನಾಡಿದ್ದು ಮಾತ್ರ ಸ್ವಲ್ಪ ಅತಿಯಾಯಿತು ಅಷ್ಟೆ.

ಇದೀಗ ಈ ತೀರ್ಪಿನಿಂದಾಗಿ ಸರ್ಕಾರಿ ಶಾಲೆ/ಅನುದಾನಿತ ಶಾಲೆ - ಅನುದಾನರಹಿತ ಖಾಸಗಿ ಶಾಲೆ, ಬಡವ - ಶ್ರೀಮಂತ, ಹಳ್ಳಿಯವ - ಪೇಟೆಯವ, ಕರ್ನಾಟಕದವ - ಹೊರ ರಾಜ್ಯದವ, ಈ ಉಭಯರ ನಡುವಣ ಅಂತರ ಇನ್ನಷ್ಟು ಹೆಚ್ಚಾಗುತ್ತದೆ. ಘೋರ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಈ ತೀರ್ಪು ಹಾದಿ ಹಾಕಿಕೊಟ್ಟಿದೆ. ಇದಕ್ಕಿಂತ, ಸರ್ಕಾರಿ/ಅನುದಾನಿತ ಶಾಲೆಗಳಲ್ಲಿಯೂ ಯಾವ ಭಾಷೆಯ ಮಾಧ್ಯಮದಲ್ಲಿ ಬೇಕಾದರೂ ಕಲಿಸಬಹುದು ಎಂದು ಏಕರೂಪ ಶಿಕ್ಷಣ ನೀತಿ ಜಾರಿಗೆ ತಂದರೆ ಆಗ ಮೇಲೆ ಹೇಳಿದ ಅಸಮಾನತೆಯಾದರೂ ನಿವಾರಣೆಯಾದೀತು. ಕನ್ನಡ ಕಣ್ಮರೆಯಾಗಿ ಹೋದರೆ ಹೋಗಲಿ. ಕೆಲ ಬರಹಗಾರರಿಗೆ, ಹೋರಾಟಗಾರರಿಗೆ ಮತ್ತು ಕೆಲವೇ ಕೆಲವು ಪೋಷಕರಿಗೆ ಬಿಟ್ಟರೆ ಇಂದು ಯಾರಿಗೆ ಬೇಕಾಗಿದೆ ಕನ್ನಡ?

ಕನ್ನಡ ಮಾತೃಭಾಷೆಯಾಗುಳ್ಳವರೂ ಇಂಗ್ಲಿಷ್ ವ್ಯಾಮೋಹಿಗಳಾಗಿದ್ದಾರೆ. 'ಜೀವನವೆಂದರೆ ಧನಾರ್ಜನೆ; ಧನಾರ್ಜನೆಗೆ ಬೇಕು ತಕ್ಕ ನೌಕರಿ; ಅದಕ್ಕೆ ಅನಿವಾರ್ಯ ಇಂಗ್ಲಿಷ್' ಎಂದು ಇವರು ನಿರ್ಧರಿಸಿಬಿಟ್ಟಿದ್ದಾರೆ. ಹೀಗಿರುವಾಗ ಕನ್ನಡ ತೊಲಗಿಬಿಡಲಿ. ಮುಂದೊಂದು ದಿನ ನಮಗೆ ನಮ್ಮ ಮಾತೆಂಬುದೇ ಇಲ್ಲದೆ, ನಮ್ಮತನವೆಂಬುದೇ ಇಲ್ಲದೆ ಅನ್ಯಭಾಷಿಕರ/ಆಂಗ್ಲರೂಪಿಗಳ ಅಡಿಯಾಳುಗಳಾಗಿ ಜೀವಿಸುವ ದುರವಸ್ಥೆ ಬಂದರೂ ಅಡ್ಡಿಯಿಲ್ಲ. ತಿನ್ನಲು ಮತ್ತು ಮಜಾ ಮಾಡಲು ಕಾಸಿದ್ದರಾಯಿತು. ಕ್ರಮೇಣ ಅದಕ್ಕೂ ಸಂಚಕಾರ ಉಂಟಾದರೆ? ಆಗ ನೋಡಿಕೊಂಡರಾಯಿತು, ಈಗ್ಯಾಕೆ ಅದರ ಚಿಂತೆ?

ಆದರೆ, ಸ್ವಾಮೀ, ಬಡವರನ್ನು ಮತ್ತು ಹಳ್ಳಿಗಳವರನ್ನು ಹೊಸಕಿಹಾಕಿ ಶ್ರೀಮಂತರನ್ನು ಮತ್ತು ಪೇಟೆಗಳವರನ್ನು ಮಾತ್ರ ಮೇಲಕ್ಕೆತ್ತುವ ತಾರತಮ್ಯದ (ಅ)ನೀತಿ ಮಾತ್ರ ಸರ್ವಥಾ ಸರಿಯಲ್ಲ.

ಅಂದಹಾಗೆ, ನಾನೂ ನನ್ನ ಸೋದರ ಸೋದರಿಯರೆಲ್ಲರೂ ಕಾಲೇಜಿನ ಮೆಟ್ಟಿಲು ಹತ್ತುವವರೆಗೂ ಸರ್ಕಾರಿ ಶಾಲೆಗಳಲ್ಲಿ, ಕನ್ನಡ ಮಾಧ್ಯಮದಲ್ಲೇ ಓದಿದ್ದೇವೆ. ನಾನು ರಾಷ್ಟ್ರೀಕೃತ ಬ್ಯಾಂಕೊಂದರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರೆ ನನ್ನ ಒಬ್ಬ ತಮ್ಮ ಯಶಸ್ವಿ ವೃತ್ತಿಪರನೂ ಇನ್ನೊಬ್ಬ ತಮ್ಮ ಜಿಲ್ಲಾ ನ್ಯಾಯಾಧೀಶನೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಮಕ್ಕಳಿಬ್ಬರನ್ನು ಕಾಲೇಜು ಹಂತದವರೆಗೂ ಕನ್ನಡ ಮಾಧ್ಯಮದಲ್ಲಿ ಓದಿಸಿದ್ದೇನಲ್ಲದೆ ಪ್ರಾಥಮಿಕ ಹಂತ ಮುಗಿಯುವವರೆಗೆ ಸರ್ಕಾರಿ ಶಾಲೆಯಲ್ಲಿ ಓದಿಸಿದ್ದೇನೆ. ಯುವ ವಯಸ್ಸಿನ ಅವರೀಗ ನೌಕರಿಯಲ್ಲಿದ್ದಾರೆ. ಊರೂರಿಗೆ ವರ್ಗವಾದಂತೆಲ್ಲ ಸಂಸಾರವನ್ನು ಕೊಂಡೊಯ್ಯುತ್ತ, ಗುಜರಾತ್‌ಗೆ ವರ್ಗವಾದಾಗ ಮಾತ್ರ ಮೂರು ವರ್ಷ ಸಂಸಾರವನ್ನು ಕರ್ನಾಟಕದಲ್ಲಿ ಬಿಟ್ಟು ನಾನೀ ರೀತಿ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವಲ್ಲಿ ಸಫಲನಾಗಿದ್ದೇನೆ.

ಎಳವೆಯಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಕಲಿತದ್ದರಿಂದಾಗಿ ನಮ್ಮೆಲ್ಲರಿಗೂ ಕನ್ನಡ ಸಾಹಿತ್ಯದ ಬಗ್ಗೆ ವಿಶೇಷ ಒಲವು ಉಂಟಾಗಿದೆಯಲ್ಲದೆ ಉತ್ತಮ ಕನ್ನಡ ಕೃತಿಗಳ ಓದಿನ ಭಾಗ್ಯ ಮತ್ತು ತಕ್ಕಮಟ್ಟಿನ ಸಾಹಿತ್ಯರಚನಾ ಕೌಶಲ ಲಭ್ಯವಾಗಿದೆ. ಇದರಿಂದಾಗಿ ಜೀವನಸಂತೃಪ್ತಿ ದೊರೆತಿದೆ. 'ದಟ್ಸ್ ಕನ್ನಡ'ದ ಓದುಗರಿಗೊಂದು ಉದಾಹರಣೆಯಾಗಿ ಈ ವಿಷಯವನ್ನಿಲ್ಲಿ ಪ್ರಚುರಪಡಿಸಿದ್ದೇನೆ, ಅಷ್ಟೆ.

ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಪೂರಕ ಓದಿಗೆ

ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಇಲ್ಲ

ಕನ್ನಡ ಮಾಧ್ಯಮ ಉತ್ತಮವೋ? ಇಂಗ್ಲಿಷ್ ಮಾಧ್ಯಮವೋ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more