ಇದು ಇರುವೆಗಳೇ ನಿರ್ಮಿಸಿದ ಭೂಗತ ಮಹಾ ನಗರ: ಎಂಜಿನಿಯರ್‌ಗಳನ್ನೇ ಮೀರಿಸುವಂತಿದೆ ಕೌಶಲ್ಯ
ಇರುವೆ ಅತ್ಯಂತ ಸಣ್ಣ ಕೀಟ. ನೆಲದ ಮೇಲೆ ಗೋಡೆಗಳ ಮೇಲೆ ಹರಿದಾಡುವ ಈ ಕೀಟ ಶಿಸ್ತು ಮತ್ತು ಪರಿಶ್ರಮಕ್ಕೆ ಹೆಸರುವಾಸಿ. ಇರುವೆಗಳ ಸಾಮಾಜಿಕ ಸಂಘಟನೆ, ಕಠಿಣ ಪರಿಶ್ರಮ ಮತ್ತು ಒಗ್ಗಟ್ಟಿನ ಜೀವನ ಮನುಷ್ಯರಿಗೂ ಮಾದರಿ. ಇರುವೆಯಲ್ಲಿ ನಾನಾ ವಿಧಗಳಿವೆ. ಈ ಇರುವೆಯ ಪ್ರಭೇದಗಳಲ್ಲಿ ಒಂದು ಅಟ್ಟಾ ಲೇವಿಗಾಟಾ. ಇದು ಎಲೆ ಕತ್ತರಿಸುವ ಜಾರಿಗೆ ಸೇರಿದ ಇರುವೆಯಾಗಿದೆ. ಈ ಇರುವೆಗಳು ನಿರ್ಮಿಸುವ ಗೂಡು ಪ್ರಕೃತಿ ವೈಚಿತ್ರ್ಯಕ್ಕೆ ಸಾಕ್ಷಿಯಾಗುವಂತಿವೆ. ಈ ಗೂಡಿನ ವಿನ್ಯಾಸ ಸಿವಿಲ್ ಎಂಜಿನಿಯರ್‌ಗಳ ಕೌಶಲ್ಯವನ್ನು ಕೂಡಾ ಮೀರಿಸುಂತಿರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಬ್ರೆಜಿಲ್‌ನ ವಿಶಾಲವಾದ ಸೆರಾಡೊ ಪ್ರದೇಶದಲ್ಲಿ ಈ ಇರುವೆಗಳ ದೈತ್ಯ ಗೂಡು ಪತ್ತೆಯಾಗಿದೆ.
ಪ್ರೊಫೆಸರ್ ಲೂಯಿಜ್ ಕಾರ್ಲೋಸ್ ಫೋರ್ಟಿ ಮತ್ತು ಅವರ ತಂಡವು ಇರುವೆಗಳ ಈ ಭೂಗತ ನಗರವನ್ನು ಪತ್ತೆ ಹಚ್ಚಿದೆ. ಇಲ್ಲಿ ಹತ್ತು ಟನ್ ಸಿಮೆಂಟ್ ಅನ್ನು ಎಲೆ-ಕತ್ತರಿಸುವ ಇರುವೆ ಅಂದರೆ ಅಟ್ಟಾ ಲೇವಿಗಾಟಾ ಪ್ರಭೇದದ ಇರುವೆ ಗೂಡಿಗೆ ಸುರಿಯಲಾಗಿದೆ. ಈ ದ್ರವ ಕಾಂಕ್ರೀಟ್ 26 ಅಡಿ ಆಳವನ್ನು ತಲುಪಿ ಇರುವೆಗಳು ನಿರ್ಮಿಸಿುವ ಸಂಕೀರ್ಣ ಜಾಲವನ್ನು ತುಂಬಿದೆ. ಇದಾದ ನಂತರ ಮಾಡಿದ ಉತ್ಖನನದಲ್ಲಿ ಬೃಹತ್ 'ಭೂಗತ ರಚನೆ ಪತ್ತೆಯಾಗಿದೆ. ಇದರಲ್ಲಿ ಸುಮಾರು ಲಕ್ಷಾಂತರ ಇರುವೆಗಳು ವಾಸವಾಗಿದ್ದವು ಎನ್ನುವ ಅಂಶ ಕೂಡಾ ಇಲ್ಲಿ ಬೆಳಕಿಗೆ ಬಂದಿದೆ. ಈ ಇರುವೆ ಗೂಡಿನಲ್ಲಿ ಆಹಾರ ಹುಡುಕುವ ಸುರಂಗಗಳು, ಶಿಲೀಂಧ್ರ ಉದ್ಯಾನಗಳು ಮತ್ತು ವಾತಾಯನ ಶಾಫ್ಟ್‌ಗಳನ್ನು ನಿರ್ಮಿಸಲಾಗಿತ್ತು ಎಂದರೆ ಆಶ್ಚರ್ಯವೇ ಸರಿ.

ಈ ಸಿಮೆಂಟ್ ಎರಕವನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಅಧ್ಯಯನದಲ್ಲಿ ಈ ಕೀಟಗಳು ಮಾನವ ಸಿವಿಲ್ ಎಂಜಿನಿಯರಿಂಗ್ ಅದ್ಭುತಗಳಂತೆ ಸಂಕೀರ್ಣ ಮತ್ತು ಪರಿಣಾಮಕಾರಿ ನಗರ ಪರಿಸರವನ್ನು ನಿರ್ಮಿಸಲು 40 ಟನ್ ಮಣ್ಣನ್ನು ಹೇಗೆ ಸ್ಥಳಾಂತರಿಸಿದವು ಎನ್ನುವ ಅಂಶವನ್ನು ಕಂಡುಹಿಡಿಯಲಾಗಿದೆ. ಈ ಸುರಂಗಗಳ ವಾಸ್ತುಶಿಲ್ಪ ಇರುವೆ ಕಾಲೋನಿಗಳಲ್ಲಿ ಅಂತರ್ಗತವಾಗಿರುವ ಅಸಾಧಾರಣ ಸಾಮೂಹಿಕ ಬುದ್ಧಿವಂತಿಕೆಯನ್ನು ಇದು ಎತ್ತಿ ತೋರಿಸುತ್ತದೆ.
ಇರುವೆ ಗೂಡಿನ ಒಳಗೆ ಸಂಕೀರ್ಣವಾದ ಭೂಗತ ಜಾಲ ನಿರ್ಮಾಣವಾದದ್ದು ಹೇಗೆ ?:
ರಿಸರ್ಚ್ ಗೇಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಇರುವೆಗಳ ಈ ವಸಾಹತುವಿನ ಪ್ರಾದೇಶಿಕ ವಿನ್ಯಾಸವನ್ನು ಕಂಡು ಹಿಡಿಯುವ ಸಲುವಾಗಿಯೇ ಅದರೊಳಗೆ ಸಿಮೆಂಟ್ ಸುರಿಯಲಾಯಿತು. ಆಗ ಈ ಇರುವೆ ಗೂಡಿನಲ್ಲಿ ನಿರ್ದಿಷ್ಟ ಉದ್ದೇಶಗಳಿಗಾಗಿ ಹಲವಾರು ಕೋಣೆಗಳನ್ನು ನಿರ್ಮಿಸಿರುವುದು ಬಹಿರಂಗಗೊಂಡಿದೆ. ಇರುವೆಗಳು ತಮ್ಮ ಮುಖ್ಯ ಆಹಾರ ಮೂಲವನ್ನು ಬೆಳೆಸಲು ಅಂಡಾಕಾರದ 'ಶಿಲೀಂಧ್ರ ಕೋಣೆ'ಗಳನ್ನು ನಿರ್ಮಿಸಿದ್ದವು. ಈ ಇರುವೆಗಳು ಎಲೆಗಳನ್ನು ಕತ್ತರಿಸಿ ತಂದು ನೇರವಾಗಿ ತಿನ್ನುವುದಿಲ್ಲ. ಬದಲಿಗೆ, ಆ ಎಲೆಗಳನ್ನು ಅಗಿದು ಅದರಿಂದ ಗೂಡಿನ ಒಳಗಿನ ವಿಶೇಷ ಕೋಣೆಗಳಲ್ಲಿ ಒಂದು ವಿಶಿಷ್ಟ ಶಿಲೀಂಧ್ರವನ್ನು ಬೆಳೆಸುತ್ತವೆ. ಈ ಶಿಲೀಂಧ್ರವೇ ಇಡೀ ಇರುವೆ ವಸಾಹತಿಗೆ ಪ್ರಮುಖ ಆಹಾರವಾಗಿರುತ್ತದೆ. ಇನ್ನು ತ್ಯಾಜ್ಯಕ್ಕಾಗಿ ಎರಡು ಕೋಣೆಗಳು ಕೂಡಾ ಅಲ್ಲಿದ್ದವು. ಈ ಇರುವೆಗಳು ಸುರಂಗಗಳನ್ನು ಹಾಗೆಯೇ ಸುಮ್ಮನೆ ಅಗೆಯುವುದಿಲ್ಲ. ಈ ಮಾರ್ಗಗಳು ಇರುವೆಗಳ ಪಾಲಿಗೆ ಹೆದ್ದಾರಿಗಳಂತೆ ಕೆಲಸ ಮಾಡುತ್ತವೆ. ಹೊತ್ತು ತರುವ ಎಲೆಗಳನ್ನು ಸಾಗಿಸಲು ಹಾದಿಯನ್ನು ಸುಲಭಗೊಳಿಸುತ್ತವೆ. ಬಹಳ ಮುಖ್ಯವಗಿ ಇಡೀ ಗೂಡಿನ ಆಳ ಅಗಲದಾದ್ಯಂತ ಆಮ್ಲಜನಕವನ್ನು ಪರಿಚಲನೆ ಸರಾಗವಾಗಿರುವಂತೆ ಮಾಡುತ್ತವೆ.
ಕುಸಿತ ನಿರೋಧಕ ಭೂಗತ ಸುರಂಗ ನಿರ್ಮಾಣದಲ್ಲಿ ಇರುವೆಗಳ ಎಂಜಿನಿಯರಿಂಗ್:
ಇನ್ಸೆಕ್ಟ್ಸ್ ಜರ್ನಲ್ ಪ್ರಕಾರ, ಮಾನವರು ಚೀನಾದ ಮಹಾ ಗೋಡೆಯನ್ನು ನಿರ್ಮಿಸುವಂತೆಯೇ ಈ ಇರುವೆಗಳು ಸುಮಾರು 40 ಟನ್ ಮಣ್ಣನ್ನು ಮೇಲ್ಮೈಗೆ ಸಾಗಿಸಿದವು ಎನ್ನಲಾಗಿದೆ. ಮಣ್ಣಿನ ಭೂತಾಂತ್ರಿಕ ಗುಣಲಕ್ಷಣಗಳಲ್ಲಿ ಅವುಗಳ ನಿರ್ಮಾಣ ಕೌಶಲ್ಯಗಳು ಆಕರ್ಷಕವಾಗಿವೆ. ನಿಖರವಾಗಿ ರಚಿಸಲಾದ ಸುರಂಗಗಳು ಮೇಲಿನ ಭಾರವನ್ನು ತಡೆದುಕೊಳ್ಳುತ್ತವೆ. ಈ ಸುರಂಗಗಳನ್ನು ಆಳವಾಗಿ ಅಗೆದರೂ ಅದು ಕುಸಿಯುವುದಿಲ್ಲ. ಪರಿಣಾಮವಾಗಿ, ಇರುವೆ ರಾಣಿ ಮತ್ತು ಅವುಗಳ ಮರಿಗಳು ತಮ್ಮ ಮನೆಯ ಅತ್ಯಂತ ಕೆಳಮಟ್ಟದಲ್ಲಿ ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಬದುಕುತ್ತವೆ.
ಇರುವೆಗಳ ಈ ಕಾಲೋನಿ ಹೇಗೆ ತಂಪಾಗಿರುತ್ತದೆ ?:
ಬ್ರೆಜಿಲಿಯನ್ ಜರ್ನಲ್ ಆಫ್ ಬಯಾಲಜಿ ಆಫ್ ದಿ ಸಿಮೆಂಟ್ ಕ್ಯಾಸ್ಟ್ಸ್‌ನಲ್ಲಿ ಪ್ರಕಟವಾದ ವೈಜ್ಞಾನಿಕ ವಿಶ್ಲೇಷಣೆಯು ಗೂಡನ್ನು ನೈಸರ್ಗಿಕ ಉಷ್ಣ-ನಿಯಂತ್ರಕ ವಾತಾಯನದೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದೆ. ಸುರಂಗಗಳ ನಿಯೋಜನೆಯು 'ಚಿಮಣಿ ಪರಿಣಾಮ'ಕ್ಕೆ ಅವಕಾಶ ನೀಡುತ್ತದೆ. ಅಲ್ಲಿ ಶಿಲೀಂಧ್ರ ಕೋಣೆಗಳು ಮತ್ತು ಲಕ್ಷಾಂತರ ಇರುವೆಗಳಿಂದ ಉತ್ಪತ್ತಿಯಾಗುವ ಶಾಖವು ಸಂವಹನ ಪ್ರವಾಹವನ್ನು ಪ್ರಚೋದಿಸುತ್ತದೆ. ಮೇಲ್ಮೈಯಿಂದ ತಾಜಾ ಆಮ್ಲಜನಕವನ್ನು ಒಳಗೆ ಎಳೆಯುತ್ತದೆ. ಇದಲ್ಲದೆ, ಪರಾವಲಂಬಿಗಳು ಮತ್ತು ರೋಗಕಾರಕಗಳು ಮುಖ್ಯ ವಸಾಹತುವಿಗೆ ಹರಡುವುದನ್ನು ತಡೆಯಲು ತ್ಯಾಜ್ಯ ಕೋಣೆಗಳನ್ನು ಗೂಡಿನ ಪರಿಧಿಯಲ್ಲಿ ಅಥವಾ ಕೆಳಭಾಗದಲ್ಲಿ ಕಾರ್ಯತಂತ್ರವಾಗಿ ಇರಿಸಲಾಗಿತ್ತು.
ಬ್ರೆಜಿಲ್‌ನಲ್ಲಿ ನಡೆದ ಅಧ್ಯಯನದ ಸಮಯದಲ್ಲಿ, ವಿಜ್ಞಾನಿಗಳು ಗೂಡಿನ ಗಾತ್ರವನ್ನು ಅವಲಂಬಿಸಿ 3,500 ರಿಂದ 10,000 ಕಿಲೋಗ್ರಾಂಗಳಷ್ಟು ತೂಕದ ಮಿಶ್ರಣವನ್ನು ಸಿದ್ಧಪಡಿಸಿದ್ದರು. ಅದಕ್ಕೆ ನೀರನ್ನು ಸೇರಿಸಲಾಗಿತ್ತು. ಆದ್ದರಿಂದ ಅದು ಘನೀಕರಿಸುವ ಮೊದಲು ಚಿಕ್ಕ ಹಾದಿಗಳಿಗೆ ಹರಿಯಲು ಸಹಾಯ ಮಾಡುತ್ತದೆ. ಅದು ಗಟ್ಟಿಯಾಗುವ ಮೂಲಕ ಗೂಡಿನ ವಿವರವಾದ ನಕ್ಷೆಯನ್ನು ನೀಡುತ್ತದೆ. ಇದು ಇರುವೆ ಗೂಡಿನ ರಚನೆಯ ಒಳನೋಟಗಳನ್ನು ವಿಸ್ತಾರಚಗಿ ನೀಡುವುದು ಸಾಧ್ಯವಾಗಿದೆ.
(ಬರಹ: ರಂಜಿತಾ ಆರ್.ಕೆ.)













Click it and Unblock the Notifications