Cockroach Is Back: ಕೇಂದ್ರ ಸರ್ಕಾರದ ನಿರ್ಬಂಧದ ಬೆನ್ನಲ್ಲೇ 'ಕಾಕ್ರೋಚ್ ಈಸ್ ಬ್ಯಾಕ್' ಎಂಬ ಹೊಸ ಖಾತೆ ತೆರೆದ ದೀಪ್ಕೆ
Cockroach Is Back: ಸರ್ಕಾರ ಮತ್ತು ವ್ಯವಸ್ಥೆಯನ್ನು ವ್ಯಂಗ್ಯದ ಮೂಲಕ ಟೀಕಿಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಇದಾದ ಎರಡೇ ಗಂಟೆಗಳಲ್ಲೇ ಸಂಸ್ಥಾಪಕ ಅಭಿಜೀತ್ ದೀಪ್ಕೆ "Cockroach Is Back" ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದಾರೆ. ಆ ಮೂಲಕ ಕಾನೂನು ಸಮರಕ್ಕೆ ಸಜ್ಜಾಗಿದ್ದು, ಇದು ಮತ್ತಷ್ಟು ಸಂಚಲನ ಮೂಡಿಸಿದೆ.
'ಕಾಕ್ರೋಚ್ ಜನತಾ ಪಾರ್ಟಿ' (Cockroach Janta Party) ಎಂಬ ಹೆಸರಿನ ಸಾಮಾಜಿಕ ಜಾಲತಾಣದ ಖಾತೆಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ. ಆದ್ದರಿಂದ ಈ ಖಾತೆಯನ್ನು ತಕ್ಷಣವೇ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಎಕ್ಸ್ ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಿದೆ.
'ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69 (A) ಅಡಿಯಲ್ಲಿ ಈ ಖಾತೆಯನ್ನು ನಿರ್ಬಂಧಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಕ್ಸ್ ಸಂಸ್ಥೆಗೆ ಸೂಚಿಸಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ,' ಎಂದು ಇಂಡಿಯನ್ಸ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
'ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಗುಪ್ತಚರ ಇಲಾಖೆಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಮಾಹಿತಿ ಲಭಿಸಿತ್ತು. ಈ ಖಾತೆಯು ಪ್ರಚೋದನಾಕಾರಿ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದು, ದೇಶದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ನಾವು ಈ ನಿರ್ಧಾರಕ್ಕೆ ಬಂದೆವು,' ಅಂತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ವಿಶೇಷವಾಗಿ ಈ ಖಾತೆಯ ವಿಷಯಗಳು ಯುವಜನರಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಿವೆ ಎಂಬ ಅಂಶವೇ ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ,' ಅಂತಲೂ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69(ಎ) ಅಡಿಯಲ್ಲಿ ರಾಷ್ಟ್ರದ ಸಾರ್ವಭೌಮತ್ವ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಲಭ್ಯವಾಗುವ ಮಾಹಿತಿಗೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
'ಭಾರತದಲ್ಲಿ ಈ ಖಾತೆಯನ್ನು ನಿರ್ಬಂಧಿಸಲಾಗಿದೆ. ಆದರೂ ಇತರೆ ದೇಶಗಳಲ್ಲಿ ಇನ್ನೂ ಲಭ್ಯವಿದೆ. ಗುರುವಾರ ಸಂಜೆ ವೇಳೆಗೆ ಇದು ಟ್ವಿಟರ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿತ್ತು. ಈ ಖಾತೆಯು ಸುಮಾರು 90,000 ಫಾಲೋವರ್ಸ್‌ಗಳನ್ನು ಹೊಂದಿದ್ದಾಗಲೇ ಅದನ್ನು ನಿರ್ಬಂಧಿಸುವಂತೆ ಸಾಮಾಜಿಕ ಜಾಲತಾಣ ಸಂಸ್ಥೆಗೆ ಆದೇಶ ಕಳುಹಿಸಲಾಗಿತ್ತು,' ಎಂದು ಮತ್ತೊಬ್ಬ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ ಬಳಕೆದಾರರಿಗೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ಇನ್ನೂ ನಿರ್ಬಂಧಿಸಲಾಗಿಲ್ಲ. ಗುರುವಾರದ ವೇಳೆಗೆ ಅದು 16 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿತ್ತು. 'ಈ ಇನ್‌ಸ್ಟಾಗ್ರಾಂ ಖಾತೆಯನ್ನು ಸಹ ನಿರ್ಬಂಧಿಸುವ ಸಾಧ್ಯತೆಯಿದ್ದು, ಆ ಪ್ರಕ್ರಿಯೆಯು ಪ್ರಸ್ತುತ ಜಾರಿಯಲ್ಲಿದೆ,' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಈ ಮಧ್ಯೆ ಮೂಲ ಖಾತೆಯನ್ನು ನಿರ್ಬಂಧಿಸಿದ ಎರಡು ಗಂಟೆಗಳ ನಂತರ ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ದೀಪ್ಕೆ ಟ್ವಿಟರ್‌ನಲ್ಲಿ'Cockroach Is Back' ಹೆಸರಿನ ಹೊಸ ಖಾತೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಈ ವಿಷಯದ ಕುರಿತು ತಮ್ಮ ತಂಡವು ಕಾನೂನಾತ್ಮಕವಾಗಿ ಹೋರಾಟ ನಡೆಸಲಿದೆ,' ಎಂದು ಅವರು ತನಿಖಾ ಸಂಸ್ಥೆಗಳಿಗೆ ತಿಳಿಸಲಾಗಿದೆ.












Click it and Unblock the Notifications