ಎಸ್ಸೆಸ್ಸೆಲ್ಸಿ ನೆನಪಿನ ದೋಣಿ ಹತ್ತಿದ ವಾಣಿ
ಮಾನ್ಯರೇ,
ಎಸ್‌ಎಸ್‌ಎಲ್‌ಸಿ ನೆನಪಿನ ಉಯ್ಯಾಲೆಯಲ್ಲಿ ಜೀಕುತ್ತಿರುವಾಗ ಕಟ್ಟಿಟ್ಟ ನನ್ನ ನೆನಪಿನ ಬುತ್ತಿ , ‘ನಿಂದೂ ಹೇಳು, ನಿಂದೂ ಹೇಳು’ ಎನ್ನುತ್ತಿತ್ತು.
ಓಡಿತು ನೆನಪಿನಂಗಳ ಕಾರ್ಪೊರೇಷನ್ ಹಿಂದಿರುವ ಮಿತ್ರಾಲಯ ಶಾಲೆಯತ್ತ. ನಾನು ಓದಿದ್ದು ಏಳನೇ ಕ್ಲಾಸಿನವರೆಗೆ ಕನ್ನಡ ಮೀಡೀಯಮ್ ನಂತರ ಇಂಗ್ಲಿಷ್ ಮೀಡಿಯಂ. ಕನ್ನಡ ಫೌಂಡೇಶನ್ ಸ್ಟ್ರಾಂಗಿತ್ತು. ಇಂಗ್ಲಿಷ್, ಹಿಂದಿ ಜ್ಞಾನ ಶೇ.75ರಷ್ಟಿತ್ತು. ಇತಿಹಾಸ, ಭೂಗೋಳ 60ಕ್ಕೆ ಇಳಿದರೆ, ತಲೆಗೇರದ ಮ್ಯಾಥ್ಸ್, ಸೈನ್ಸ್‌ನಲ್ಲಿ ಬರೀ ಮೂವತ್ತೈದಕ್ಕೆ ನಿಲ್ಲುತ್ತಿತ್ತು. ಸದ್ಯ, ಎಲ್ಲಿಯೂ ಡುಮ್ಕಿ ಹೊಡೆಯಲಿಲ್ಲ ಅದು ನನ್ನ ಭಾಗ್ಯ.
ಅಪ್ಪ-ಅಮ್ಮ ಮಕ್ಕಳಿಗೆ ಜನರೇಷನ್ ಗ್ಯಾಪ್ ಓಕೆ. ನಮ್ಮ ಮನೆಯಲ್ಲಿ ಅಣ್ಣ-ತಂಗಿಗೂ ಜನರೇಷನ್ ಗ್ಯಾಪ್ ಯಾಕೆ? ಇದೀಗ ಕೇಳೋ ಪ್ರಶ್ನೆನೂ ಅಲ್ಲ ಅದಕ್ಕೆ ಉತ್ತರವೂ ಇಲ್ಲ. ನಾನು ಎಂಟನೇ ತರಗತಿಯಲ್ಲಿದ್ದಾಗ 1974ರಲ್ಲಿ ನನ್ನ ತಂದೆ ಹೃದಯಾಘಾತದಿಂದ ತೀರಿಕೊಂಡರು.
ನಾನು, ನನ್ನಕ್ಕ, ನನ್ನ ಅಣ್ಣ ಮೂವರೂ ಚಿಕ್ಕವರು. ಇನ್ನೊಬ್ಬ ಹಿರಿಯಕ್ಕನಿಗೆ ಮದುವೆಯಾಗಿ ಮಕ್ಕಳಾಗಿದ್ದರು. ನನ್ನ ಹಿರಿಯ ಅಣ್ಣ ಮಿಲಿಟಲಿ ಶಾಲೆಯಲ್ಲಿ ನೌಕರಿಯಲ್ಲಿದ್ದ. ಕಡೆಯ ಮುದ್ದು ಮಗಳೆಂದು, ಚಿಕ್ಕವಯಸ್ಸಿನಿಂದಲೇ ತಂದೆಗೆ ಅಂಟಿಕೊಂಡು ಬೆಳೆದ ನನಗೆ, ಅಣ್ಣನ (ತಂದೆಯನ್ನು ಅಣ್ಣ ಎಂದು ಕರೆಯುತ್ತಿದ್ದೆವು) ಸಾವು, ಅಗಲಿಕೆ ಬಲವಾಗಿ ಕಾಡಿತ್ತು.
ಶಾಲೆಯ ಸಮಾರಂಭಗಳಲ್ಲಿ, ಹಾದಿಯಲಿ ನನ್ನದೇ ವಯಸ್ಸಿನ ಮಕ್ಕಳು ತಂದೆಯ ಕೈಹಿಡಿದು ನಡೆವುದ ಕಂಡಾಗ, ‘ನೀನು ನಿರ್ದಯಿ’ ಎಂದು ದೇವರನ್ನು ಬಯ್ಯುತ್ತಿದ್ದೆ.
1977ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ನಂದು. ಯೂನಿಟಿ ಬಿಲ್ಡಿಂಗ್ ಹಿಂದಿನಲ್ಲಿದ್ದ ಕಾರ್ಪೊರೇಷನ್ ಬಾಯ್ಸ್ ಹೈಸ್ಕೂಲ್ ಪರೀಕ್ಷೆಯ ತಾಣ. ಪರೀಕ್ಷೆಯ ಮೊದಲ ದಿನ ಹಾಲ್ಟಿಕೆಟ್ ದೇವರ ಬಳಿ ಇಟ್ಟು, ಮನೆಯಲ್ಲಿ ಅಮ್ಮ ಹರಸಿ, ಕೈಯಲ್ಲಿ 1 ರೂ. ಇಟ್ಟು , ‘ಮಧ್ಯಾಹ್ನ ಕೇಕ್ ಸಿಕ್ಕರೆ ತಿನ್ನು’ ಎಂದು ಕಳಿಸಿದ್ದಳು.
ಶಾಲೆಯ ಬಳಿ ಮಕ್ಕಳನ್ನು ಬಿಡಲು ಬಂದ ತಂದೆ-ತಾಯಿಗಳ ಕಂಡು ಅಣ್ಣನೂ ಇದ್ದಿದ್ರೆ, ಬರ್ತಾ ಇದ್ರೂ ನನ್ನ ಬಿಡೋಕ್ಕೆ ಎಂದು ಕಣ್ಣಾಲಿಗಳು ತುಂಬಿದ್ದವು. ಅನಾಥ ಪ್ರಜ್ಞೆ, ಒಂಟಿತನ, ನನಗ್ಯಾರು ಇಲ್ಲ ಎಂಬ ನೋವು ತಂದಿತ್ತು.
ನನಗಾಗ ಪರೀಕ್ಷೆ ಇದ್ದದ್ದು -ಬೆಳಗ್ಗೆ ಒಂದು ಹಾಗೂ ಮಧ್ಯಾಹ್ನ ಒಂದು ಪೇಪರ್.
ಮೊದಲನೇ ಪತ್ರಿಕೆ ಇಂಗ್ಲಿಷ್. ಪತ್ರಿಕೆ ಮುಗಿಸಿ ಹೊರಬಂದೆ. ಮತ್ತದೇ ನೋಟ ತಮ್ಮ ತಮ್ಮ ಮಕ್ಕಳ ಬರುವಿಕೆಯನ್ನು ಎದುರು ನೋಡುತ್ತಾ, ಹೇಗ್ ಮಾಡಿದೀಯ ಎನ್ನುತ್ತಾ ಬಳಿ ಬರುತ್ತಿದ್ದವರ ಕಂಡು ಮನ ಕುಗ್ಗಿತ್ತು. ಹೊಟ್ಟೆ ತಾಳ ಹಾಕುತ್ತಿತ್ತು. ಅರಿಯದ ನೋವು, ಒಂದು ರೂ. ಮುಟ್ಟಿ ನೋಡಿದೆ. ಅಮ್ಮ ಕಣ್ಮುಂದೆ ಬಂದಳು. ಬೇಡ ಎಂದು ನೀರು ಕುಡಿದು, ಯೋಚಿಸುತ್ತಾ ಮುನ್ನಡೆದೆ.
ದೂರದಲ್ಲಿ ಒಂದು ಮರದ ಕೆಳಗೆ ಕೈಯಲ್ಲಿ ಪುಸ್ತಕ ಓದುತ್ತಾ ನಿಂತ ನನ್ನ ಹಿರಿಯಣ್ಣನನ್ನು ಕಂಡೆ. ಮತ್ತೆ ಮತ್ತೆ ನೋಡಿದೆ. ಅವನ ಕಣ್ಣು ನಾನೆಲ್ಲಾದರೂ ಕಾಣಿಸುವೆನೋ ಎಂದು ಹುಡುಕುತಿತ್ತು. ಆ ಘಳಿಗೆಯಲಿ ನಾನು ಅವನಲ್ಲಿ ಕಂಡೆ ನನ್ನ ತಂದೆಯನು. ಅವನು ನಿಜ ಅರ್ಥದಲಿ ನನಗೆ ಅಣ್ಣ (ತಂದೆ) ಎನಿಸಿದ. ಅಂದು ಆ ಕಣ್ಣಿನಲ್ಲಿದ್ದ ಆತಂಕ, ಕಾತುರದಲಿ ನಾ ಮರಳಿ ಪಡೆದೆ ಅಗಲಿದ ನನ್ನ ತಂದೆಯನು.
ಅವನ ಬಳಿ ಓಡಿದೆ. ಬಾಚಿ ತಬ್ಬಿ, ‘ಹೇಗೆ ಮಾಡಿದ್ದೀಯಾ?’ ಎಂದಾಗ ಆ ಅಪ್ಪುಗೆ, ಮಾನಲ್ಲಿ ಅಡಗಿತ್ತು ಕಳಕಳಿ, ಆತ್ಮೀಯತೆ, ಮಗುವೆಂಬ ಭಾವ, ಮರೆಯಾಗಿಸಿತು ನನ್ನ ಮನದ ನೋವ, ಒಂಟಿತನದ ಭಾವ.
ಮೊದ್ಲು ಏನಾದ್ರು ತಿನ್ನೋಣ ಬಾ ಎಂದು ಯೂನಿಟಿ ಬಿಲ್ಡಿಂಗಿನಲ್ಲಿದ್ದ ಕಾಮತ್ ಹೋಟೆಲಿಗೆ ಕರೆದೊಯ್ದು ಇಡ್ಲಿ-ಸಾಂಬರ್ ಕೊಡಿಸಿ, ನನ್ನ ಉತ್ತರಗಳ ಕೇಳಿ ಮತ್ತೆ ಪರೀಕ್ಷಾ ಕೊಠಡಿಯ ಬಾಗಿಲಿನವರೆಗೂ ಬಿಟ್ಟ ಘಳಿಗೆಯನು ನಾ ಹೇಗೆ ತಾನೆ ಮರೆಯಲಿ.
ಅಂದಿನಿಂದ ನನಗೆ ತಂದೆ ಇಲ್ಲ ಎನ್ನುವ ಕೊರತೆಯೇ ಇಲ್ಲ. ಅದೇ ಕೊನೆ. ಮತ್ತೆಂದು ಯಾವ ಕಾರಣಕ್ಕೂ ದೇವರನು ಬೈಯಲು ಹೋಗಲಿಲ್ಲ.
ಮರೆಯಲಾರೆ ಆ ದಿನ, ನನ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ.
-ವಾಣಿ, ಸಿಂಗಪುರ
(ಓದುಗರೇ, ವಾಣಿ ಅವರ ಅನುಭವ ಕೇಳಿ ಏನನ್ನಿಸಿತು? ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.. -ಸಂ)












Click it and Unblock the Notifications