• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಸಾಲೆ ದೋಸೆ, ಮೆರೂನ್‌ ಬಣ್ಣದ ಫ್ರಾಕು ಮತ್ತು ಎಸ್ಸೆಸ್ಸೆಲ್ಸಿ ರ್ಯಾಂಕು!

By Staff
|

ರೇಸ್‌ ಕುದುರೆಗಳಿಗಿರುವಂತೆ ನಂಬರ್‌ ಬೋರ್ಡ್‌ ಬೆನ್ನಿಗೆ ತೂಗಿಹಾಕಿ, ಇಂದಿನ ಮಕ್ಕಳಂತೆ ಅಂದು ನಮ್ಮನ್ನು ಯಾರು ಓಡಿಸಲಿಲ್ಲ. ನಕ್ಷತ್ರಿಕನಂತೆ ಅಪ್ಪ-ಅಮ್ಮ ಶಾಲೆಗೂ ಬೆನ್ನತ್ತಿ ನಮ್ಮನ್ನು ಕಾಡಲಿಲ್ಲ. ಮುಂದೇನು ಎನ್ನುವ ಭೂತಾಕಾರದ ಪ್ರಶ್ನಾರ್ಥಕ ಹಾಕಲೇ ಇಲ್ಲ ಆ ಸಮಾಜ ನಮ್ಮ ಮುಂದೆ.

Anjali Ramannaಆ ದಿನವೂ ಮನೆಯಲ್ಲಿ ಏನೂ ವ್ಯತ್ಯಯವಿಲ್ಲ. ಪಪ್ಪ ಕೆಲಸಕ್ಕೆ ಹೊರಟರು. ಅಮ್ಮ ತಿಂಡಿ ಮಾಡಿಕೊಟ್ಟು ತಲೆ ಬಾಚಿದಳು. ಫಲಿತಾಂಶದ ದಿನವೂ ಸಮವಸ್ತ್ರ ಧರಿಸಿಯೇ ಶಿಸ್ತಿನ ವಿದ್ಯಾರ್ಥಿಯಂತೆ ಶಾಲೆಗೆ ಹೋದೆ. ಎಂದಿನಂತೆ ಪ್ರಾರ್ಥನೆ ನಂತರವೇ ತರಗತಿಗೆ ಪ್ರವೇಶ. ಎಂದೂ ಕೂರುತ್ತಿದ್ದ ಜಾಗದಲ್ಲೆ ಕುಳಿತಿದ್ದದ್ದು.

ನಮ್ಮ ಮುಖ್ಯೋಪಾಧ್ಯಾಯಿನಿ ಸಿಸ್ಟರ್‌ ಒಂದು ಫೈಲ್‌ನೊಂದಿಗೆ ಒಳಕ್ಕೆ ಬಂದರು. ರಿಸಲ್ಟ್‌ ಹೇಳಿದರು. ನಾನು ರ್ಯಾಂಕ್‌ ಬಂದಿದ್ದೆ. (ಆಗೆಲ್ಲಾ ಮೊದಲ ಮೂರು ರ್ಯಾಂಕ್‌ಗಳನ್ನು ಮಾತ್ರ ಆ ದಿನವೇ ವೃತ್ತ ಪತ್ರಿಕೆಯಲ್ಲಿ ಹಾಕುತ್ತಿದ್ದರು. ಉಳಿದವುಗಳನ್ನು ದಿನಂಪ್ರತೀ ಹಾಕುತ್ತಿದ್ದರು.) ಅದನ್ನೂ ಆಕೆ ತುಂಬಾ ಸ್ಟ್ರಿಕ್ಟ್‌ ಆಗೇ ಹೇಳಿದರು.

ಆಗ ನಮಗೆ ರ್ಯಾಂಕ್‌ ಬಂದವರು ಹೆಚ್ಚು ಫೇಲ್‌ ಆದವರು ಕಡಿಮೆ ಎನ್ನುವ ಕಲ್ಪನೆಯನ್ನೂ ಕೊಡದೆ ಸಮಚಿತ್ತವನ್ನು ಬಿತ್ತುತ್ತಿದ್ದರು. ಮಾರ್ಕ್ಸ್‌ ಕಾರ್ಡ್‌ ತೆಗೆದುಕೊಡು ಮನೆಗೆ ಬಂದೆ. ನನ್ನ ಪಪ್ಪನ ಸ್ಥಿತಪ್ರಜ್ಞತೆ ಈಗ ಕಾಡುವಂತೆ ಆಗ ನನ್ನನ್ನು ಕಾಡಲಿಲ್ಲ.

ಅಮ್ಮ ದೇವರಿಗೆ ದೀಪ ಹಚ್ಚಿ ಕುಟುಂಬದ ಹಿರಿಯರಿಗೆ ಫೋನ್‌ ಮಾಡಿ ವಿಷಯ ತಿಳಿಸಿದಳು. ನೂರು ಬಾರಿ ಹೋಗಿಬಂದಿದ್ದ ಮಧುನಿವಾಸ್‌ಗೆ ಆ ಸಂಜೆಯೂ ಕರೆದುಕೊಂಡು ಹೋದರು ನಮ್ಮ ತಂದೆ. ಮಸಾಲೆ ದೋಸೆ, ಜಾಮೂನು ಆದ ನಂತರ ಮೆರೂನ್‌ ಬಣ್ಣದ ಫ್ರಾಕ್‌ ಕೊಡಿಸಿದರು. ಇದು ನನ್ನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಬಂದ ದಿನದ ಹವಾಮಾನ ವರದಿ! ಓದಿದಷ್ಟು ಎಷ್ಟು ಸರಳ ಸಹಜ ಅನ್ನಿಸುತ್ತೆ.

ರೇಸ್‌ ಕುದುರೆಗಳಿಗಿರುವಂತೆ ನಂಬರ್‌ ಬೋರ್ಡ್‌ ಬೆನ್ನಿಗೆ ತೂಗಿಹಾಕಿ ಇಂದಿನ ಮಕ್ಕಳಂತೆ ಅಂದು ನಮ್ಮನ್ನು ಯಾರು ಓಡಿಸಲಿಲ್ಲ. ನಕ್ಷತ್ರಿಕನಂತೆ ಅಪ್ಪ ಅಮ್ಮ ಶಾಲೆಗೂ ಬೆನ್ನತ್ತಿ ನಮ್ಮನ್ನು ಕಾಡಲಿಲ್ಲ. ಮುಂದೇನು ಎನ್ನುವ ಭೂತಾಕಾರದ ಪ್ರಶ್ನಾರ್ಥಕ ಹಾಕಲೇ ಇಲ್ಲ ಆ ಸಮಾಜ ನಮ್ಮ ಮುಂದೆ. ಈಗಿನ ಮಕ್ಕಳಿಗಾದಂತೆ ಒತ್ತಡ ನಮ್ಮ ಸ್ವಾನುಭವ ಆಗಲಿಲ್ಲ ಆಗ. ಅದನ್ನು ನಾವು ನೋಡಿದ್ದು ಬರೀ ನಿಘಂಟಿನಲ್ಲಿ ಮಾತ್ರ!

ಫಲಿತಾಂಶದ ಆಸುಪಾಸಿನ ದಿನಗಳಲ್ಲಿ ಆಗಲೀ ಎಂದೇ ಆಗಲಿ, ನಾವು ಮಕ್ಕಳಿಂದ ಆತ್ಮಹತ್ಯೆ ಎನ್ನುವ ನ್ಯೂಸ್‌ ಓದಲೇ ಇಲ್ಲ. ಕಾಲೇಜಿನ ಅರ್ಜಿ ತರಲು ಕ್ಯೂ ನಿಲ್ಲಲಿಲ್ಲ. ವಿಜ್ಞಾನ ಕಾಲೇಜಿನಲ್ಲೂ ಹೋದ ಕೂಡಲೇ ಕೌಂಟರ್‌ನಲ್ಲಿ ಅಡ್ಮಿಷನ್ನೇ ಸಿಕ್ಕುತ್ತಿತ್ತು. ಈಗಿನ ಮಕ್ಕಳು ಹೇಳುವಂತೆ ಪಾಸಾದ ಎಲ್ಲ ಮಕ್ಕಳ ಬಾಯಲ್ಲೂ ಪಿ.ಸಿ.ಎಂ.ಬಿ ಎನ್ನುವ ಏಕತಾನದ ಉತ್ತರ ಬರುತ್ತಿರಲಿಲ್ಲ ನಮ್ಮಿಂದ. ಇದು ನಾನು ಎಸ್‌.ಎಸ್‌.ಎಲ್‌.ಸಿ ಪಾಸು ಮಾಡಿದಾಗ ಇದ್ದ ಪರಿಸರ ವರದಿ! ಈಗ ಓದಿದಷ್ಟೂ ಅಸಹಜ ಅನ್ನಿಸುತ್ತೆ.

ಇಂಗ್ಲಿಷ್ನಲ್ಲಿ ಮಾತನಾಡದಿದ್ದರೆ ನಾಲ್ಕಾಣೆ ಫೈನ್‌ ಎನ್ನುತ್ತಿದ್ದ ರಿಚ್ಮಂಡ್‌ ಮಿಸ್‌, ಮುದ್ದಣನ ‘ಶ್ರೀಮತಿ’ಯ ಸೌಂದರ್ಯವನ್ನು ಮುಜುಗರ ಪಟ್ಟುಕೊಳ್ಳದೆ ತಣ್ಣಗೆ ವರ್ಣಿಸಿದ್ದ ಪದ್ಮಾ ಮಿಸ್‌, ‘ಭಾಗಶಃ ’ ಅಂದರೆ ನಮ್ಮ ದೇಹದ ಒಂದು ಭಾಗ ಎಂದು ಹೇಳಿಕೊಟ್ಟಿದ್ದ ವತ್ಸಲಾ ಮಿಸ್‌, ಗಣಿತವನ್ನೂ ಇಂದಿಗೂ ನನ್ನಿಂದ ದೂರವೇ ಇಟ್ಟ ಶೇಷಮ್ಮ ಮತ್ತು ಜಯ ಮಿಸ್‌, ಇತಿಹಾಸದ ಪೀರಿಯಡ್‌ನಲ್ಲಿ ‘ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು’ ಎಂದು ಹಾಡುತ್ತಿದ್ದ ಸುಶೀಲ ಮಿಸ್‌, ಹೊಗಳಿಕೆ ಹೊನ್ನ ಶೂಲ ಎನ್ನುವುದನ್ನು ನನಗೆ ಮನವರಿಕೆ ಮಾಡಿಕೊಡಲೇ ಎನ್ನುವಂತೆ ವಿನಾಕಾರಣ ನನ್ನ ಮೇಲೆ ಸಿಟ್ಟಾಗುತ್ತಿದ್ದ ಹಿಂದಿ ಪ್ರವೀಣೆ ಶಾರದಮ್ಮ ಮಿಸ್‌ ಎಲ್ಲರನ್ನೂ ಈಗ ನಿಜಕ್ಕೂ ನಾನು ಮಿಸ್ಸ್‌ ಮಾಡಿಕೊಳ್ಳುತ್ತಿದ್ದೇನೆ.

ಕನ್ನಡ ಮಾಧ್ಯಮದಲ್ಲಿದ್ದೂ ಇಂಗ್ಲಿಷ್ನಲ್ಲಿ ಜಿಲ್ಲೆಗೇ ಮೊದಲು ಬಂದಿದ್ದೆ. ಆದರೂ ಇಂದಿಗೂ ಜಾರ್ಜ್‌ ಈಲಿಯಟ್‌ನನ್ನು ಓದುವಾಗ ನಾನು ಫೇಲ್‌ ಆಗಿದ್ದೇನಾ ಅನ್ನಿಸುತ್ತೆ. ಕನ್ನಡದಲ್ಲಿ ನೂರೈವತ್ತಕ್ಕೆ ನೂರನಲವತ್ತೆಂಟು ನಂಬರ್‌ ಪಡೆದಿದ್ದೆ. ಆದರೆ ಕಂಬಾರರ ಭಾಷಾ ಬಳಕೆ, ಜಯಂತ್‌ ಕಾಯ್ಕಿಣಿಯ ಬರಹದ ಆರ್ದ್ರತೆ ಕಂಡಾಗ ನಾನು ಕನ್ನಡ ಓದ್ದಿದ್ದೇನಾ ಅನ್ನಿಸುತ್ತೆ! ಜಗಜೀತ್‌ ಸಿಂಗ್‌ನ ಗಜಲ್‌ ಕೇಳುತ್ತಾ ಕಣ್ಣಂಚಿನ ನೀರನ್ನು ಗಾಳಿಗೆ ಆರಲು ಹಾಗೇ ಬಿಟ್ಟಾಗ ಹಿಂದಿಯಲ್ಲಿ ನನಗೆ ಐವತ್ತಕ್ಕೆ ನಲವತ್ತೆಂಟು ಬಂದಿತ್ತಲ್ಲ ಎಂದು ನೆನಪಾಗುತ್ತೆ.

ಎರಡು ಕೊತ್ತಂಬರಿ ಕಂತೆಗಳನ್ನು ಕೊಂಡು ಇಪ್ಪತ್ತು ನಿಮಿಷ ಚಿಲ್ಲರೆ ಎಣಿಸುವಾಗ ಗಣಿತದಲ್ಲಿ ನನಗೆ ನೂರಕ್ಕೆ ನೂರು ಕೊಟ್ಟವರ್ಯಾರು ಅಂತ ಕುತೂಹಲವಾಗುತ್ತದೆ. ಭಾವನೆಗಳ ಮಹಾಪೂರದಲ್ಲಿ ಕೊಚ್ಚಿಹೋಗದಂತೆ ಒಮ್ಮೊಮ್ಮೆ ನನ್ನನ್ನು ಕೈಹಿಡಿದು ನಡೆಸುವ ಲಾಜಿಕ್‌ ನೋಡಿದಾಗ ವಿಜ್ಞಾನದಲ್ಲಿ ತೊಂಭತ್ತೈದು ಬಂದಿದ್ದು ಒಳ್ಳೆಯದಾಯಿತು ಅನ್ನಿಸುತ್ತೆ.

ಹಾಳು ಹಂಪೆಯಲ್ಲಿ ನಿಂತು ಚರಿತ್ರೆಯನ್ನು, ಭೂಗೋಳವನ್ನು ಅನುಭವಿಸಿದಾಗ ಸಮಾಜ ಶಾಸ್ತ್ರದಲ್ಲಿ ತೊಂಭತ್ತ್ತೆಂಟು ಬಂದಿದ್ದು ಮೋಸವೇನಲ್ಲ ಅನ್ನಿಸುತ್ತೆ. ಹೀಗೆ ಹಿಂದಿರುಗಿನೋಡಿದರೆ ನಿಜಕ್ಕೂ ವಿನಮ್ರವಾಗಿ ನನ್ನಿಂದ ವಿದ್ಯಾಭ್ಯಾಸ ಮಾಡಿಸಿದೆ ಈ ಜಗತ್ತು ಅನ್ನಿಸುತ್ತೆ!

ಈ ಅನುಭವ ಎಲ್ಲರ ಮನೆಯ ಕಥೆಯೂ ಹೌದೂ. ಎಲ್ಲರೂ ಎಸ್‌.ಎಸ್‌.ಎಲ್‌.ಸಿ ಮಾಡಿರುವುದೂ ಹೌದು. ಆದರೆ ಅದು ಬದುಕುರೂಪಿಸಿಕೊಟ್ಟ ಒಂದು ಅನುಭವ ಅಂತ ಮಾತ್ರ ಎಷ್ಟು ಜನ ನೆನಪುಮಾಡಿಕೊಂಡಿದ್ದೆವು ಈವರೆಗೂ?!

ಹೊಟ್ಟೆಗಾಗಿ ಡಿಗ್ರೀ ಪಡೆಯುತ್ತಿರುವ ನಮ್ಮ ಮಕ್ಕಳ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಮತ್ತು ಫಲಿತಾಂಶಗಳ ಭರಾಟೆಯ ನಡುವೆ ನಾವೆಲ್ಲಾ ಮೊಗ್ಗಿನಿಂದ ಹೂವಾಗಿ ಅರಳುವಂತೆ ಮಾಡಿದ ಆ ದಿನಗಳನ್ನು ಮೆಲಕು ಹಾಕುವಂತೆ ಮಾಡಿಕೊಟ್ಟ ದಟ್ಸ್‌ ಕನ್ನಡ ಟೀಂಗೆ ನಾನು ಋಣಿ. ಅಂದಹಾಗೆ, ನಾನು ಯಾವ ವರ್ಷದಲ್ಲಿ ಪಾಸಾದೆ? ಅದರ ನೆನಪು ನನಗೆ ಈಗ ಬೇಡವಾಗಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X