ನಾಚಿಕೆ, ಸೋಮಾರಿತನ, ಹಿಂಜರಿಕೆ ಕನ್ನಡಿಗನ ವೈಶಿಷ್ಟ್ಯ!
ಇಂದು ಲಕ್ಷಾಂತರ ತಮಿಳರು, ತೆಲುಗರೂ ಕನ್ನಡ ಮಾತನಾಡುತ್ತಾರೆ. ಹೊರಗಿನವರಿಗೆ ಕನ್ನಡ ಕಲಿಯಲು ಜನರೇಷನ್ನುಗಳು ಬೇಕಾಗಬಹುದು, ಆದರೆ ಅವರಿಗೆ ಕನ್ನಡ ಕಲಿಸುವ ಶಕ್ತಿ ಈ ಮಣ್ಣಿಗಿದೆ.
- ರಂಗನಾಥ ಅವಧಾನಿ, ಬೆಂಗಳೂರು
ಪ್ರಿಯ ಶ್ಯಾಮ್,
ಕವಿ ಸಿದ್ದಲಿಂಗಯ್ಯನವರ ಕುರಿ-ತಾದ ‘ಕನ್ನಡಿಗರಿಗೆ ಧೈರ್ಯನೇ ಇಲ್ಲ ಕಣ್ರೀ’ ಎಂಬ ಸೊಗಸಾದ ಲೇಖ-ನ-ದಲ್ಲಿ ಮೂಡಿ ಬಂದ ಕೆಲವು ವಿಷಯಗಳ ಬಗ್ಗೆ ನಾಲ್ಕು ಸಾಲು ಬರೆಯೋಣವೆನ್ನಿಸಿತು. ವಾಸ್ತವ ಸತ್ಯವನ್ನು ಈ ಲೇಖನ ಹಿಡಿದಿಟ್ಟಿದೆ. ಕನ್ನಡಿಗರಿಗೆ ಜಾತಿಗಿರುವಷ್ಟು ಆದರ ಕನ್ನಡಕ್ಕಿಲ್ಲ. ಬೇರಾವ ರಾಜ್ಯದಲ್ಲೂ ಕಾಣಲಾರದಷ್ಟು ಜಾತೀಯತೆ ಇಲ್ಲಿ ತುಂಬಿದೆ. ಇದರೊಂದಿಗೆ ಗಾಢವಾಗಿ ಸೇರಿರುವ ಪ್ರಾಂತೀಯತೆ, ಸಂಕೋಚ, ಸೋಮಾರಿತನ, ಹಿಂಜರಿಕೆ ಇವು ಕನ್ನಡಿಗನ ವೈಶಿಷ್ಟ್ಯ.
ಮೊನ್ನೆ ಯಾರೋ ನಮ್ಮ ಚಿತ್ರನಟನೊಬ್ಬನ ಬಗ್ಗೆ ಮಾತನಾಡುತ್ತಾ ಹೇಳಿದರು: ‘ ಇವನು ಇಷ್ಟೆ ಬಿಡ್ರೀ... ಚಿಕ್ಕ ಪುಟ್ಟ ಕನ್ನಡ ಚಿತ್ರಗಳಿಗೆ ಸರಿ... ಹಿಂದಿ ಚಿತ್ರಗಳಲ್ಲಿ ಅವನು ಅಭಿನಯಿಸಲಾರ...’. ನಾನು ಕೇಳಿದೆ: ‘ಅವನು ಅಷ್ಟಾದರೂ ಮಾಡಿದ್ದಾನೆ, ನೀವೇನು ಮಾಡಿದ್ದೀರಿ ಹೇಳಿ’. ಅವರಿಂದ ಉತ್ತರ ಬರಲಿಲ್ಲ. ನಮ್ಮವರನ್ನೇ ಉತ್ತೇಜಿಸದ ಕನ್ನಡಿಗರು ನಾವು. ನಾನು ಕೆಲಸ ಮಾಡುವ ಐ.ಟಿ. ಕಂಪನಿಯಲ್ಲಿ ಕೆಲವು ಕನ್ನಡಿಗರು ಕನ್ನಡಿಗರೊಡನೆ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ನೋಡುತ್ತಿರುತ್ತೇನೆ.
ಆದರೂ ಆ ಲೇಖನದಲ್ಲಿ ಒಪ್ಪಲಾರದ ಸಂಗತಿಗಳೂ ಇವೆ. ನಾನು ಕಂಡಂತೆ ಯಾವ ಕನ್ನಡಿಗನೂ ತಮಿಳು, ತೆಲುಗು ಕಲಿತು ಅವರೊಡನೆ ವ್ಯವಹರಿಸಲಿಲ್ಲ. ಮಲಯಾಳವನ್ನು ಕಲಿಯುವುದಂತೂ ದೂರವೇ ಸರಿ. ತಮಿಳು, ತೆಲುಗು ಸಿನೆಮಾಗಳನ್ನು ನೋಡಿ ‘ವಣಕ್ಕಂ’, ‘ಬಾಗುಂಡಾರಾ’ ‘ಇಕ್ಕ-ಡ-ರಾಮ್ಮಾ ’ ಶಬ್ದಗಳನ್ನು ಕಲಿತಿರಬಹುದಷ್ಟೆ. ನನಗೆ ತಿಳಿದಿರುವ ಯಾವ ಕನ್ನಡಿಗನಿಗೂ ಒಂದಕ್ಷರ ಮಲಯಾಳವೂ ಬರುವುದಿಲ್ಲ. ಬದಲಾಗಿ ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರೇ ಕನ್ನಡ ಕಲಿತಿದ್ದಾರೆ.
ಕನ್ನಡದಲ್ಲೇ ಮಾತನಾಡಬೇಕಾದ ಸಂದರ್ಭ ಬಂದಾಗ ಮಾತ್ರ ಅವ-ರು-ಗಳು ಮಾತನಾಡುತ್ತಾರೆಯಾದ್ದರಿಂದ ನಮಗೆ ತಿಳಿಯುವುದಿಲ್ಲ. ಇಂದು ಲಕ್ಷಾಂತರ ತಮಿಳರು, ತೆಲುಗರೂ ಕನ್ನಡ ಮಾತನಾಡುತ್ತಾರೆ. ಹೊರಗಿನವರಿಗೆ ಕನ್ನಡ ಕಲಿಯಲು ಜನರೇಷನ್ನುಗಳು ಬೇಕಾಗಬಹುದು, ಆದರೆ ಅವರಿಗೆ ಕನ್ನಡ ಕಲಿಸುವ ಶಕ್ತಿ ಈ ಮಣ್ಣಿಗಿದೆ.
ಹಾಗೆಯೇ ಯಾವ ಕನ್ನಡಿಗನೂ ಕೆಳದರ್ಜೆಯೆಂದು ಪರಿಗಣಿಸಲ್ಪಡುವ ಝಾಡಮಾಲಿ ಅಥವಾ ಮಲ ಹೊರುವ ಕೆಲಸವನ್ನೂ ಮಾಡಲಿಲ್ಲ. ಝಾಡಮಾಲಿಗಳೆಲ್ಲ ತೆಲುಗು ಮಾತನಾಡುವುದನ್ನು ನೋಡಬಹುದು. ಹಾಗಾಗಿ ಕೆಳದರ್ಜೆಯ ಕೆಲಸಗಳೆಲ್ಲ ಇಂದು ತಮಿಳರ ಹಾಗೂ ತೆಲುಗರ ಪಾಲಾಗಿವೆ. ಹಾಗೆಯೇ ತೀರಾ ಉನ್ನತ ದರ್ಜೆಯ ಕೆಲಸಗಳು ಕೂಡ.












Click it and Unblock the Notifications