ಸ್ವಾತಂತ್ರ್ಯಯೋಧರ ಗೌರವಧನ ಹೆಚ್ಚಿಸಲು ಮೊರೆ
ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಹಿರಿಯರನ್ನು ಸಮಾಜ ಚೆನ್ನಾಗಿ ನೋಡಿಕೊಳ್ಳಬೇಕು. ಕಾಲ ಮಿಂಚಿಹೋದ ಮೇಲೆ ಚಿಂತಿಸಿ ಫಲವಿಲ್ಲ.
- ವಿ.ಎಸ್. ರಾಮಚಂದ್ರನ್, ಸ್ವಾತಂತ್ರ್ಯ ಹೋರಾಟಗಾರರು,
ಸಪ್ತಗಿರಿ ಬಡಾವಣೆ, ತುಮಕೂರು-572 102
ದೇಶದ ಸ್ವಾತಂತ್ರ್ಯಕ್ಕಾಗಿ ಅಪಾರ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಇಂದು ಈ ಇಳಿವಯಸ್ಸಿನಲ್ಲಿ ಕಷ್ಟಕರ ಜೀವನ ನಡೆಸುವಂತಾಗಿದೆ. ವೃದ್ಧಾಪ್ಯ ಹಾಗೂ ಅನಾರೋಗ್ಯದ ಸಮಸ್ಯೆಗಳ ಜೊತೆಗೆ, ಆರ್ಥಿಕ ಸಂಕಷ್ಟವನ್ನೂ ಅನುಭವಿಸುವಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಪ್ರಸ್ತುತ ನೀಡುತ್ತಿರುವ 1,500 ರೂಪಾಯಿ ಮಾಸಿಕ ಗೌರವಧನವನ್ನು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಕನಿಷ್ಟ 5,000 ರೂಪಾಯಿಗಳಿಗೆ ಏರಿಕೆ ಮಾಡಿ, ತಕ್ಷಣದಿಂದಲೇ ಜಾರಿಗೆ ತರಬೇಕೆಂದು ವಿನಂತಿ.
ಏಕೆಂದರೆ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ದಿನೇ ದಿನೇ ಕ್ಷೀಣವಾಗುತ್ತಿರುವುದರಿಂದ, ಈ ವಿಷಯದಲ್ಲಿ ಸರ್ಕಾರ ಉದಾರವಾಗಿ ಆಲೋಚನೆ ಮಾಡಬೇಕೆಂದು ವಿನಂತಿ. ಕೇಂದ್ರ ಸರ್ಕಾರ ನೀಡುತ್ತಿರುವ ಗೌರವ ಧನಕ್ಕೂ, ರಾಜ್ಯ ಸರ್ಕಾರ ನೀಡುತ್ತಿರುವ ಗೌರವ ಧನಕ್ಕೂ ಅಪಾರ ಪ್ರಮಾಣದ ವ್ಯತ್ಯಾಸ ಇರುವುದರಿಂದ , ರಾಜ್ಯ ಸರ್ಕಾರವು ಈ ಬಗ್ಗೆ ಚಿಂತಿಸಿ ಉಪಯುಕ್ತ ನಿರ್ಧಾರ ಕೈಗೊಳ್ಳಬೇಕೆಂದು ವಿನಂತಿ.
ಪ್ರಸ್ತುತ ಸ್ವಾತಂತ್ರ್ಯ ಹೋರಾಟಗಾರರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಪಾಸ್ ನೀಡಿರುವುದು ಸರಿಯಷ್ಟೇ. ಆದರೆ ಅದರಲ್ಲಿ ಪರಿಷ್ಕಾರ ಮಾಡುವ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಸಹಾಯಕರೊಂದಿಗೆ ಕೇವಲ ಸಾಧಾರಣ ಬಸ್‌ಗಳಲ್ಲಿ ಸಂಚರಿಸಬಹುದೇ ಹೊರತು, ಇತರೆ ಬಸ್‌ಗಳಲ್ಲಿ ಸಂಚರಿಸಲು ಅವಕಾಶವಿಲ್ಲ. ಉದಾಹರಣೆಗೆ ಬೆಂಗಳೂರಿನಲ್ಲಿ ಪುಷ್ಪಕ್ ಬಸ್‌ಗಳಲ್ಲಿ ಈ ಪಾಸ್ ಮೂಲಕ ಸಂಚರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ತಾರತಮ್ಯವನ್ನು ತಕ್ಷಣದಿಂದಲೇ ಬದಲಾಯಿಸಿ, ಎಲ್ಲ ರೀತಿಯ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲೂ ಸಂಚರಿಸಲು ಅವಕಾಶ ಕಲ್ಪಿಸಬೇಕೆಂದು ವಿನಂತಿ.
ಬದುಕಿನ ಕೊನೆಗಾಲದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಹಾಗೂ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ವಿನಂತಿ.
ಸ್ವಾತಂತ್ರ್ಯ ಹೋರಾಟಗಾರರು ನಿಧನ ಹೊಂದಿದ ಸಂದರ್ಭದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಅವರ ಕುಟುಂಬ ವರ್ಗಕ್ಕೆ ಈಗ 1,000 ರೂಪಾಯಿ ನೀಡುತ್ತಿದ್ದು, ಅದನ್ನು 5,000 ರೂಪಾಯಿಗಳಿಗೆ ಏರಿಸಬೇಕೆಂದು ವಿನಂತಿ.
ದಯವಿಟ್ಟು ರಾಜ್ಯ ಸರ್ಕಾರವು ಈ ವಿಷಯಗಳ ಬಗ್ಗೆ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಂಡು, ಅತ್ಯಲ್ಪ ಸಂಖ್ಯೆಯಲ್ಲಿರುವ ಹಾಗೂ ಇಳಿವಯಸ್ಸಿನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಮುಖದಲ್ಲಿ ಮುಗುಳ್ನಗೆ ಮೂಡಿಸಬೇಕೆಂದು ವಿನಂತಿ.












Click it and Unblock the Notifications