ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗೋಲಿ ಇಲ್ಲದ ಮನೆಗೆ ಭಿಕ್ಷುಕರು ಸಹಾ ಬರೋದಿಲ್ಲ!

By Staff
|
Google Oneindia Kannada News


ಮಾನ್ಯರೇ,

ರಂಗೋಲಿ ಕುರಿತು ಅಳಿಯುತ್ತಿರುವ ಶ್ರದ್ಧೆ .. ಲೇಖನ ಓದಿದೆ. ಚೆನ್ನಾಗಿದೆ. ಭಾರತದಿಂದ ದೂರ ಹೋದ ಕನ್ನಡತಿ ಮಾತ್ರ ಇದನ್ನು ಬರೆಯಲು ಸಾಧ್ಯ. ಬೆಂಗಳೂರಿನಲ್ಲಿ ಇರುವ ಯಾರಾದರೂ ಇಂಥ ವಿಷಯ ಪ್ರಸ್ತಾಪಿಸಿದರೆ ನನ್ನಾಣೆ!

ನನ್ನ ಪ್ರಶ್ನೆ ಅಥವಾ ಆಲೋಚಗಳು ಹೀಗಿವೆ. ಮನೆ ಮುಂದೆ ರಂಗೋಲಿ ಯಾಕೆ ಹಾಕುತ್ತಾರೆ? ಈ ಪ್ರಶ್ನೆ ಆಗಾಗ ನಿಮ್ಮನ್ನು ಕಾಡುತ್ತಿರಬಹುದು. ರಂಗೋಲಿ ಹಾಕುವುದು ಒಂದು ಆಚಾರವೇ? ಹಾಗಿದ್ದರೆ ಅದಕ್ಕೇನು ಅರ್ಥ ಎಂದು ನೀವು ಯೋಚಿಸಿರಬಹುದು.

ಅದೊಂದು ಏಸ್ತೆಟಿಕ್‌ ಪರಿಕಲ್ಪನೆ. ಮಹಿಳೆಗೆ ತನ್ನ ಪ್ರತಿಭೆಯನ್ನು ತೋರಿಸುವುದಕ್ಕೆ ಇರುವ ಒಂದು ಹಾದಿ. ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ಗೃಹಿಣಿಯ ಪ್ರತಿಭಾವಲಯ ಸಂಪನ್ನವಾಗುತ್ತದೆ ಎಂದು ಎಲ್‌. ಎಸ್‌. ಶೇಷಗಿರಿರಾವ್‌ ಹೇಳಿದ್ದರು.

ಅದೆಲ್ಲ ಆಧುನಿಕ ವಿಮರ್ಶೆಯ ಮಾತಾಯಿತು. ಅಂಥ ವಿಶ್ಲೇಷಣೆಗಳೇ ಇಲ್ಲದ ಕಾಲದಿಂದಲೂ ಯಾಕೆ ಈ ಸಂಪ್ರದಾಯ ನಡೆದುಬರುತ್ತಿದೆ. ಮನೆ ಮುಂದೆ ರಂಗೋಲಿ ಹಾಕುವುದರಿಂದ ಏನು ಸಾಧಿಸಿದ ಹಾಗಾಯಿತು? ಅಷ್ಟಕ್ಕೂ ಮಲೆನಾಡಿನ ಕಡೆ ಈ ಸಂಪ್ರದಾಯ ಏಕಿಲ್ಲ?

ಕೊಂಚ ಹಿಂದೆ ಹೋಗಿ ನೋಡಿದರೆ ಇದರ ಹಿನ್ನೆಲೆ ನಿಮಗೆ ಅರ್ಥವಾಗುತ್ತದೆ. ಹಿಂದಿನವರ ಪ್ರಕಾರ ಮನೆಮುಂದೆ ರಂಗೋಲಿ ಹಾಕಿದರೆ ಆ ಮನೆಯಾಳಗೆ ಎಲ್ಲವೂ ಕ್ಷೇಮ ಎಂದು ಅರ್ಥ. ಆಕಸ್ಮಿಕಗಳೋ ಅನಾಹುತಗಳೋ ಸಂಭವಿಸಿದ ಮನೆಯ ಮುಂದೆ ರಂಗೋಲಿ ಇರುವುದಿಲ್ಲ ಎನ್ನುವುದನ್ನು ನೀವು ಗಮನಿಸಬೇಕು. ಊರಿನಲ್ಲಿ ಯಾವ ಮನೆಯ ಮುಂದೆ ರಂಗೋಲಿ ಕಾಣಿಸದಿದ್ದರೆ ಅದು, ಆ ಮನೆಯಲ್ಲಿ ಯಾರೋ ತೀರಿಕೊಂಡಿದ್ದಾರೆ, ಅವರ ನೆರವಿಗೆ ಧಾವಿಸಿ ಎಂದು ಊರಿನ ಇತರರಿಗೆ ಆಹ್ವಾನ. ಬೇಕಿದ್ದರೆ ಗಮನಿಸಿ ನೋಡಿ, ರಂಗೋಲಿ ಹಾಕದ ಮನೆಗೆ ಭಿಕ್ಷುಕರು ಕೂಡ ಕಾಲಿಡುವುದಿಲ್ಲ. ಅದು ಸಂಕಷ್ಟದಲ್ಲಿರುವ ಮನೆ ಎನ್ನುವುದಕ್ಕೆ ಸೂಚನೆ.

ಅಷ್ಟೇ ಅಲ್ಲ, ರಂಗೋಲಿ ಮನೆ ಮುಂದಿದ್ದರೆ ಅದು ಅತಿಥಿಗಳಿಗೆ ಆಹ್ವಾನವಿದ್ದಂತೆ. ಅದೊಂದು ರೀತಿಯಲ್ಲಿ ವೆಲ್‌ಕಮ್‌ ನೋಟ್‌. ಒಳಗೆ ಬರಬಹುದು ಅನ್ನುವುದಕ್ಕೆ ಸೂಚನೆ.

ಅದು ಸರಿ! ಆದರೆ ಮದುವೆಯ ಮನೆಯಲ್ಲಿ ಊಟದ ಹೊತ್ತಿಗೆ ಬೀಗರು ಮತ್ತು ಅವರ ಸಂಬಂಧಿಗಳ ಎಲೆ ಮುಂದೆ ರಂಗೋಲಿ ಹಾಕಿ ದೀಪ ಹಚ್ಚಿಡುತ್ತಾರಲ್ಲ, ಅದೇಕೆ?

ಭಾರತದಲ್ಲಿ ಗಂಡಿನ ಕಡೆಯ ಬೀಗರಷ್ಟು ಅಪಾಯಕಾರಿಗಳು ಮತ್ತೊಬ್ಬರಿಲ್ಲ. ಅವರ ಅಸಹನೆಗೆ ಕಾರಣವಾದರೆ ಮದುವೆಯೇ ಮುರಿದುಬೀಳಬಹುದು. ಹೀಗಾಗಿ ಅವರ ಎಲೆಯ ಮುಂದೆ ರಂಗೋಲಿ, ದೀಪ ಇರಿಸಿ ಅವರೇ ಬೀಗರು ಎಂದು ಎಲ್ಲರಿಗೂ ತಿಳಿಯುವಂತೆ ಮಾಡುವುದೇ ಉದ್ದೇಶ. ಯಾಕೆಂದರೆ ಮದುವೆಗೆ ಬರುವ ಅಸಂಖ್ಯಾತ ಮಂದಿಗೆ ಗಂಡಿನ ಕಡೆಯ ಬೀಗರು ಯಾರು ಎಂದು ಗೊತ್ತಾಗದೇ ಹೋಗಬಹುದು. ಆಗ ಊಟ ಬಡಿಸುವವರಿಗೂ ಬೀಗರ ಕಡೆಯವರು ಯಾರೆಂದು ತಿಳಿದು ಅವರಿಗೆ ಆಸ್ಥೆಯಿಂದ ಕಾಳಜಿಯಿಂದ ಬಡಿಸೋದು ಸಾಧ್ಯವಾಗುತ್ತದೆ.

- ಜ್ಯೋತಿರ್ಮಯಿ, ಸಾಗರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X