ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿ ಚಲನಚಿತ್ರವನ್ನು ನಾವೇಕೆ ತಡೆಯಬೇಕು?

By Staff
|
Google Oneindia Kannada News


ಜೂನ್‌ 15ರಂದು ರಜನಿಕಾಂತ್‌ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಶಿವಾಜಿ’ ಬಿಡುಗಡೆ. ಈಗಾಗಲೇ ಮುಂದಿನ ಎರಡುವಾರಗಳ ಟಿಕೆಟ್‌ಗಳು ಖಾಲಿ.. ಎಲ್ಲೆಡೆ ‘ಶಿವಾಜಿ’ಯದೇ ಮಾತು. ಸುಮಾರು 80ಕೋಟಿ ಬಜೆಟ್‌ನ ಈ ಚಿತ್ರ, ರಜನಿಕಾಂತ್‌ ಅಭಿನಯದ ನೂರನೇ ಚಿತ್ರ. ಎಲ್ಲವೂ ಸರಿ.. ಚಿತ್ರದ ಬಗ್ಗೆ ರಜನೀಕಾಂತ್‌ ಬಗ್ಗೆ ಅಭಿಮಾನವೂ ಸರಿ. ಆದರೆ ಕನ್ನಡಿಗರು ಈ ಚಿತ್ರವನ್ನು ಬಹಿಷ್ಕರಿಸಬೇಕು.. ಯಾಕೆ ಗೊತ್ತೆ?

Rajanikant in Shivajiಕಾವೇರಿ ನ್ಯಾಯುಮಂಡಳಿ ತೀರ್ಪು ಹೊರಬಿದ್ದ ನಂತರ, ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧದ ಹೋರಾಟದ ಸಮಯದಲ್ಲಿ ತಮಿಳು ಚಲನಚಿತ್ರ ಪ್ರದರ್ಶನ ಮತ್ತು ದೂರದರ್ಶನ ವಾಹಿನಿಗಳ ಪ್ರಸಾರ ಕರ್ನಾಟಕದಲ್ಲಿ ಸ್ಥಗಿತಗೊಂಡಿತ್ತು. ಅದು ನಿಮಗೆ ಗೊತ್ತು.

ಸ್ಥಳೀಯ ರಾಜಕೀಯ ನಾಯಕರ ಮೇಲೆ ಒತ್ತಡ ಹೇರುವುದರ ಮೂಲಕ ತಮಿಳು ದೂರದರ್ಶನ ವಾಹಿನಿಗಳ ಪ್ರಸಾರವನ್ನು ತಮಿಳರು ಮತ್ತೊಮ್ಮೆ ದಕ್ಕಿಸಿಕೊಂಡರು. ಹಾಗೆಯೇ ಈ ಹೋರಾಟ ತಣ್ಣಗಾಗಿದೆ ಎಂದೆಣಿಸಿ, ಇತ್ತೀಚೆಗೆ ಕೆಲ ಹೊಸ ತಮಿಳು ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದ್ದರೂ, ಕನ್ನಡ ಜಾಗೃತಿಯ ಈ ದಿನಗಳಲ್ಲಿ ಅವು ಯಶಸ್ವಿಯಾಗಲು ವಿಫಲವಾಗುತ್ತಿವೆ.

ಈ ಹಿನ್ನಲೆಯಲ್ಲಿ ತಮಿಳು ಸಿನಿಮಾಗಳ ಖಾಯಂ ಅಡ್ಡೆಯಾಗಿದ್ದ ಕೆಲ ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಮುಂದಾದರು. ಕನ್ನಡ ಚಿತ್ರ ವೀಕ್ಷಿಸಲು ಕೆಲವು ಚಿತ್ರಮಂದಿರಗಳತ್ತ ತಲೆಹಾಕುವುದಿಲ್ಲ ಎಂದು ಹೇಳುತ್ತಿದ್ದವರ ಹುಬ್ಬೇರುವಂತೆ ಅಲ್ಲಿ ಕನ್ನಡ ಚಿತ್ರಗಳು ಶತದಿನ ಆಚರಿಸಿಕೊಂಡ ನಿದರ್ಶನ ಇಂದು ನಮ್ಮ ಮುಂದಿದೆ. ಅದೂ ನಿಮಗೆ ಗೊತ್ತಿದೆ.

ಇದೀಗ ರಜನೀಕಾಂತ್‌ ಅಭಿನಯದ ‘ಶಿವಾಜಿ’ ಎಂಬ ತಮಿಳು ಸಿನಿಮಾ ಬಿಡುಗಡೆಗಾಗಿ ತಮಿಳರು ತುದಿಗಾಲಲ್ಲಿ ನಿಂತು ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕದಲ್ಲಿ ತಮಿಳು ಸಿನಿಮಾ ಮಾರುಕಟ್ಟೆಯ ಪುನರುತ್ಥಾನಕ್ಕಾಗಿ ಶಿವಾಜಿ ಚಿತ್ರದ ಯಶಸ್ಸನ್ನು ಬಹುವಾಗಿ ಅವಲಂಬಿಸಿದೆ. ಹೀಗೆಂದು ಅಂತರ್ಜಾಲದಲ್ಲಿರುವ ತಮಿಳು ತಾಣಗಳು, ಬ್ಲಾಗ್‌ಗಳು ಪತ್ರಿಕೆಗಳು ಮತ್ತು ತಮಿಳು ಜನಾಭಿಪ್ರಾಯಗಳು ಸಾರಿ ಹೇಳುತ್ತಿವೆ. ಬೆಂಗಳೂರಿನಲ್ಲಿ ತಮಿಳು ವಾಹಿನಿ ನಿಲ್ಲಿಸುವ, ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವ, ತಮಿಳು ಪತ್ರಿಕೆ ಪ್ರಸಾರ ನಿಲ್ಲಿಸಿದ ಘಟನೆ ನಡೆದರೂ ನಾವು ಅವುಗಳನ್ನು ಮತ್ತೆ ದಕ್ಕಿಸಿಕೊಂಡಿದ್ದೇವೆ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಇದು ನಮ್ಮ ಗೆಲುವು ಎಂಬಂತಹ ದುರಹಂಕಾರದ ಮಾತುಗಳನ್ನು ತಮಿಳರು ದಾಖಲಿಸಿ ಅಟ್ಟಹಾಸದಿಂದ ಮೆರೆಯುತ್ತಿರುವುದನ್ನು ಕಾಣಬಹುದಾಗಿದೆ. ಇವರಿಗೇನು ಹೇಳೋರು ಕೇಳೋರು ಇಲ್ಲವಾ?

ಶಿವಾಜಿ ಚಿತ್ರವನ್ನು ಹೆಚ್ಚಿನ ಬೆಲೆಗೆ ಖರೀದಿಸಿರುವ ಕರ್ನಾಟಕದ ಹಂಚಿಕೆದಾರರು, ಬಿಡುಗಡೆಗೊಳಿಸಿದ ಕೂಡಲೆ ಹಾಕಿದ ಹಣವನ್ನು ಗಳಿಸಲು ಆದಷ್ಟೂ ಚಿತ್ರಮಂದಿರಗಳಲ್ಲಿ ವಿತರಣೆಗೆ ಪ್ರಯತ್ನಿಸುತ್ತಿದ್ದಾರೆ ಮತ್ತು ಈ ಸಲುವಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲ ಕನ್ನಡ ಚಿತ್ರಗಳನ್ನು ಕಿತ್ತೊಗೆಯುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಹಿಂದೆ ಜಾರಿಗೆ ತಂದಿದ್ದ ನಿಯಮದಂತೆ ಅನ್ಯ ಭಾಷಾ ಚಿತ್ರಗಳು ಆಯಾ ರಾಜ್ಯದಲ್ಲಿ ಬಿಡುಗಡೆಗೊಂಡ ಏಳು ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆಗೊಳ್ಳಬೇಕು ಮತ್ತು ಅದು ಕೇವಲ ಇಂತಿಷ್ಟು ಪ್ರತಿಗಳೊಡನೆ ಮಾತ್ರ ಪ್ರದರ್ಶಿಸಲ್ಪಡಬೇಕು ಎಂಬ ನಿಯಮವನ್ನು ಬಹುತೇಕ ಎಲ್ಲಾ ಹಂಚಿಕೆದಾರರು ಗಾಳಿಗೆ ತೂರಿರುವುದು ನಮಗೆ ಗೊತ್ತಿದೆ.

ಶಿವಾಜಿ ಚಿತ್ರದ ನಿರ್ದೇಶಕ ಶಂಕರ್‌ ನಮ್ಮ ಸಂಸ್ಕೃತಿಗೆೆ ಮಸಿಬಳಿಯಲೆತ್ನಿಸಿದ್ದ ಕನ್ನಡ ದ್ರೋಹಿ ಎನ್ನುವುದನ್ನು ನಾವು ಮರೆಯಬಾರದು. ಕಳೆದ ವರ್ಷ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಕನ್ನಡಿಗರ ಆಕ್ರೊಶಕ್ಕೆ ಗುರಿಯಾಗಿ, ಚಿತ್ರಮಂದಿರಗಳಿಂದ ಎತ್ತಂಗಡಿಗೊಂಡ ‘ಹಿಂಸೈಅರಸನ್‌ 23ನೇ ಪುಲಿಕೇಶಿ’ ಎಂಬ ತಮಿಳು ಚಿತ್ರದ ನಿರ್ಮಾತೃ ಈತ.

ಚಾಲುಕ್ಯ ಮನೆತನದ ಅತ್ಯಂತ ಶ್ರೇಷ್ಟ- ಕನ್ನಡದ ಕಡುಗಲಿ ಪುಲಿಕೇಶಿಗೆ ಅವಮಾನ ಮಾಡಿ, ನಮ್ಮ ನಾಡು ಕಂಡ ಮತ್ತೊಬ್ಬ ಧೀಮಂತ ಸಂಗೊಳ್ಳಿ ರಾಯಣ್ಣ ಎಂಬ ಪಾತ್ರ ಸೃಷ್ಟಿಸಿ ಅವನನ್ನು ದೇಶದ್ರೋಹಿ ಮತ್ತು ಬ್ರಿಟೀಷರ ಏಜಂಟನಂತೆ ಚಿತ್ರಿಸಿ ಕನ್ನಡಿಗರನ್ನು ಅವಮಾನಿಸಿರುವ ಕಿಡಿಗೇಡಿ. ಆ ಚಿತ್ರದ ಬಗ್ಗೆ ಇದುವರೆಗೂ ಒಂದು ಹೇಳಿಕೆ ನೀಡದ ಆತ, ಕನ್ನಡಿಗರ ಕ್ಷಮಾಪಣೆ ಕೇಳಬೇಕಾಗಿರುವುದು ಇನ್ನೂ ಬಾಕಿ ಇದ್ದು, ಈಗ ಈತನ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿರುವುದು ಸಹೃದಯ ಕನ್ನಡಿಗನ ಸ್ವಾಭಿಮಾನಕ್ಕೆ ಚೂರಿ ಹಾಕಿದಂತಾಗಿದೆ.

ನಮ್ಮದೆ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಲುವನ್ನು ಪ್ರತಿಭಟಿಸುತ್ತ ಮತ್ತು ಕನ್ನಡಿಗನ ಸ್ವಾಭಿಮಾನವನ್ನು ಕೆಣಕುತ್ತಿರುವ ಈ ಮೇಲಿನ ಇನ್ನೂ ಹಲವು ಕಾರಣಗಳನ್ನೂ ಒಳಗೊಂಡಂತೆ ಶಿವಾಜಿ ಚಿತ್ರದ ಬಿಡುಗಡೆಯನ್ನು, ಕನ್ನಡ ನಾಡಿನಲ್ಲಿ ವಾಸಿಸುತ್ತ ಈ ಮಣ್ಣಿಗೆ ಋಣಿಯಾಗಿರುವ ಎಲ್ಲರೂ ಬಹಿಷ್ಕರಿಸಬೇಕಿದೆ.

ತಮಿಳುನಾಡಿನಲ್ಲಿ ಅಥವ ಇನ್ಯಾವುದೇ ಪ್ರದೇಶದಲ್ಲಿ ಕನ್ನಡ ಮನರಂಜನೆಗೆ ಅವಕಾಶವಿಲ್ಲವಾದರೆ, ಕನ್ನಡವಲ್ಲದ ಮತ್ಯಾವ ಮನೋರಂಜನಾ ಮಾಧ್ಯಮಕ್ಕೂ ಇಲ್ಲಿ ಅವಕಾಶವಿಲ್ಲ ಎಂದು ಈ ಸಂದರ್ಭದಲ್ಲಿ ಕನ್ನಡೇತರರಿಗೆಲ್ಲರಿಗೂ ಸಾಂಕೇತಿಕವಾಗಿ ತಿಳಿ ಹೇಳುವುದು ಅತ್ಯಂತ ಸೂಕ್ತ ಮತ್ತು ಅವಶ್ಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X