• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದಿನ ಕರ್ನಾಟಕ ಬಂದ್‌ನಿಂದ ಪ್ರಯೋಜನವಿಲ್ಲ!

By Staff
|

ಈ ಸಂದರ್ಭದಲ್ಲಿ ನಾವು ಮಾಡಬೇಕಾಗಿರುವುದು ತಣ್ಣನೆಯ ವಿವೇಕಯುತ ಸಕಾರಾತ್ಮಕ ಆತ್ಮವಿಶ್ಲೇಷಣೆ. ಎಲ್ಲಿ ತಪ್ಪಾಗಿದೆ? ನಮ್ಮ ಹೆಸರುಗಳನ್ನು ಕೆಡಿಸಿಕೊಳ್ಳದೇ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇರುವ ಮಾರ್ಗೋಪಾಯಗಳೇನು ಎಂಬ ಬಗ್ಗೆ ಕನ್ನಡಿಗರು ವಿಚಾರವಿನಿಮಯ ಮಾಡಬೇಕಾಗಿದೆ. ಇದನ್ನು ಮಾಡಬೇಕಾಗಿರುವುದು ನಮ್ಮ ಮನಸ್ಸುಗಳು, ನಾಲಿಗೆಗಳು ಮತ್ತು ಲೇಖನಿಗಳು. ಕೈಗಳು, ಗಂಟಲುಗಳು. ಉರಿಯುವ ಟೈರುಗಳು ಮತ್ತು ಕಲ್ಲುಗಳಲ್ಲ.

Is there any use from bandh?ಮಾನ್ಯರೇ,

ಕಾವೇರಿ ನ್ಯಾಯಮಂಡಳಿ ನೀಡಿರುವ ತನ್ನ ಅಂತಿಮ ತೀರ್ಪು ನ್ಯಾಯಸಮ್ಮತವಲ್ಲ ಎನ್ನುವುದು ಸರ್ವವಿದಿತ. ನೀರು ಹಂಚಿಕೆಯ ಪ್ರಮಾಣ, ಅದಕ್ಕೆ ಉಪಯೋಗಿಸಿರುವ ಮಾನದಂಡಗಳು- ಇವೆಲ್ಲವನ್ನೂ ಒಟ್ಟಾರೆಯಾಗಿ ಗಮನಿಸಿದರೆ ಟ್ರಿಬ್ಯೂನಲ್‌ ತಮಿಳುನಾಡಿನ ಪಕ್ಷಪಾತಿಯಂತೆ ವರ್ತಿಸಿರುವುದು ಎದ್ದುಕಾಣುತ್ತದೆ.

ಟ್ರಿಬ್ಯೂನಲ್‌ ರಚನೆಯಾದಾಗ ಅದು ನೀಡುವ ಅಂತಿಮ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ತಾತ್ವಿಕವಾಗಿ ಹೇಳಿದ್ದರೂ ಅನ್ಯಾಯಕರ ತೀರ್ಪನ್ನು ನಾವೀಗ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಟ್ರಿಬ್ಯೂನಲ್‌ ನಿಷ್ಪಕ್ಷಪಾತವಾಗಿ ವರ್ತಿಸದೇ ಒಂದು ಪಕ್ಷದ ಪರವಾಗಿ ನಿಂತಿರುವುದರಿಂದ ಹಾಗೂ ತನ್ಮೂಲಕ ನ್ಯಾಯವ್ಯವಸ್ಥೆಗೇ ಕಳಂಕ ತಂದಿರುವುದರಿಂದ ಅದರ ತೀರ್ಪನ್ನು ನಾವು ತಿರಸ್ಕರಿಸಲೇಬೇಕು. ಆದರೆ ಹೇಗೆ?

ರಾಜ್ಯದ ವಿವಿಧ ಸಂಘಟನೆಗಳು ಫೆ. 5 ಮಂಗಳವಾರ ಆರಂಭಿಸಿದ ಮುಷ್ಕರ, ಜಾಥಾಗಳು ಇಂದು(ಫೆ.11) ರಾಜ್ಯವ್ಯಾಪೀ ಬಂದ್‌ನೊಡನೆ ಉತ್ಕರ್ಷಕ್ಕೇರಿದೆ. ಕಳೆದ ಏಳು ದಿನಗಳಲ್ಲಿ ನಡೆದಿರುವ ಘಟನೆಗಳ ಆಧಾರದ ಮೇಲೆ ಬಂದ್‌ದಿನ ಏನು ನಡೆಯಬಹುದೆಂದು ಸ್ಪಷ್ಟವಾಗಿ ಊಹಿಸಬಹುದಾಗಿದೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗುತ್ತದೆ, ಜನತೆ ಸಂಕಷ್ಟಕ್ಕೀಡಾಗುತ್ತದೆ. ಇಂಥಾ ಸಮಯಗಳಿಗೇ ರಣಹದ್ದುಗಳಂತೆ ಕಾದು ಕೂತಿರುವ ಸಮಾಜಘಾತಕ ಶಕ್ತಿಗಳಿಂದಾಗಿ ಆಸ್ತಿಪಾಸ್ತಿಗೆ ಹಾನಿಯೂ ಆಗಬಹುದು. ಜೀವಹಾನಿಯೂ ಆಗಬಹುದು.

ಬೆಂಗಳೂರು ನಗರದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದರ ಇತ್ತೀಚೆಗೆ ಆಳವಾಗಿಬಿಟ್ಟಿರುವುದರಿಂದ ಒಂದು ಅಸಂತೃಪ್ತ ಜ್ವಾಲಾಮುಖಿಯೇ ಅಲ್ಲಿದೆ. ಸುಪ್ತವಾಗಿರುವ ಇದು ಬಂದ್‌ ಹಾಗೂ ಮುಷ್ಕರ ಅಥವಾ ಇನ್ನಾವುದೇ ಗೊಂದಲಮಯ ಸಂದರ್ಭಗಳಲ್ಲಿ ಭುಗಿಲೇಳುತ್ತದೆ, 1968ರಲ್ಲಿ ಅಮೆರಿಕಾದ ಪೂರ್ವಕರಾವಳಿಯ ನಗರಗಳಲ್ಲಿ ವಿದ್ಯುತ್‌ ಕಡಿತವಾಗಿ ರಾತ್ರಿಗಳು ಕತ್ತಲೆಗೆ ಬಿದ್ದಾಗ ನಡೆದ ವ್ಯಾಪಕ ಲೂಟಿ ಸುಲಿಗೆಗಳಂತೆ.

ದುರಂತವೆಂದರೆ ಇದೆಲ್ಲವೂ ನಡೆಯುವುದು ಕರ್ನಾಟಕದಲ್ಲಿ! ನೋಯುವವರು, ನರಳುವವರು ಕರ್ನಾಟಕದ ಜನತೆ! ಒಳಗೊಳಗೇ ಮಸಲತ್ತು ನಡೆಸಿದ ತಮಿಳುನಾಡಿನ ಮುಖಂಡರು, ಅವರಿಗೆ ಸಹಕರಿಸಿದ ಕೇಂದ್ರ ಸರಕಾರದ ನೇತಾರರು, ಅನ್ಯಾಯಕರ ತೀರ್ಪು ನೀಡಿದ ಟ್ರಿಬ್ಯೂನಲ್‌ನ ‘ನ್ಯಾಯ’ವಾದಿಗಳು ಇವರೆಲ್ಲದೂ ಕುಡಿದ ನೀರು ಅಲ್ಲಾಡಂತೆ ತಂತಮ್ಮ ಮನೆಗಳಲ್ಲಿ ಬೆಚ್ಚಗೆ ಕುಳಿತಿರುತ್ತಾರೆ. ಅವರ ಕೂದಲೂ ಕೊಂಕುವುದಿಲ್ಲ. ಅಟ್ಟದಿಂದ ಬಿದ್ದವನಿಗೆ ಕೊಡತಿಯಿಂದ ಚಚ್ಚಿದರು ಎಂಬಂತೆ ತೀರ್ಪಿನಿಂದ ಈಗಾಗಲೇ ಕಂಗೆಟ್ಟಿರುವ ಕರ್ನಾಟಕದ ಜನತೆಯ ಸಂಕಷ್ಟಗಳನ್ನು ಈ ಬಂದ್‌ ಹಾಗೂ ಮುಷ್ಕರಗಳು ಮತ್ತಷ್ಟು ಹೆಚ್ಚಿಸುತ್ತವೆ.

ಈ ಸಂದರ್ಭದಲ್ಲಿ ನಾವು ಮಾಡಬೇಕಾಗಿರುವುದು ತಣ್ಣನೆಯ ವಿವೇಕಯುತ ಸಕಾರಾತ್ಮಕ ಆತ್ಮವಿಶ್ಲೇಷಣೆ. ಎಲ್ಲಿ ತಪ್ಪಾಗಿದೆ? ನಮ್ಮ ಹೆಸರುಗಳನ್ನು ಕೆಡಿಸಿಕೊಳ್ಳದೇ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇರುವ ಮಾರ್ಗೋಪಾಯಗಳೇನು ಎಂಬ ಬಗ್ಗೆ ಕನ್ನಡಿಗರು ವಿಚಾರವಿನಿಮಯ ಮಾಡಬೇಕಾಗಿದೆ. ಇದನ್ನು ಮಾಡಬೇಕಾಗಿರುವುದು ನಮ್ಮ ಮನಸ್ಸುಗಳು, ನಾಲಿಗೆಗಳು ಮತ್ತು ಲೇಖನಿಗಳು. ಕೈಗಳು, ಗಂಟಲುಗಳು. ಉರಿಯುವ ಟೈರುಗಳು ಮತ್ತು ಕಲ್ಲುಗಳಲ್ಲ.

ನಮ್ಮ ಬಗ್ಗೆ ಹೇಳುವುದಾದರೆ ನಮ್ಮ ಸೋಲಿಗೆ ಈಗಿರುವ ಸರಕಾರ ಮಾತ್ರ ಜವಾಬ್ದಾರವಲ್ಲ. ಹದಿನೇಳು ವರ್ಷಗಳಲ್ಲಿ ರಾಜ್ಯವನ್ನಾಳಿದ ವಿವಿಧ ಸರಕಾರಗಳ ಬೇಜವಾಬ್ದಾರೀ ನಡವಳಿಕೆಗಳಿಂದ, ವಿರೋಧಪಕ್ಷಗಳ ಉದಾಸೀನತೆಯಿಂದ, ನಮ್ಮ ವಕೀಲರುಗಳ ಕಳಪೆ ವಾದಗಳಿಂದ, ನಮ್ಮ ಪ್ರಚಾರ ಮಾಧ್ಯಮಗಳ ನಿರ್ಲಕ್ಷ್ಯದಿಂದ ತೀರ್ಪು ನಮ್ಮ ವಿರುದ್ಧವಾಗಿದೆ. ಪರಿಸ್ಥಿತಿಯನ್ನು ಸರಿಪಡಿಸಲು ಇವರೆಲ್ಲರೂ ಒಟ್ಟಾಗಿ ಕುಳಿತು ಸಮಾಲೋಚಿಸುವ ಅಗತ್ಯವಿದೆ.

‘ನಾವೆಲ್ಲರೂ ತಪ್ಪು ಮಾಡಿದ್ದೇವೆ. ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ, ಆದರ್ಶಮಯ ನಾಗರೀಕ ನಡವಳಿಕೆಗೆ, ಇಡೀ ಕನ್ನಡಜನತೆಯ ಹೆಸರಿಗೆ ಕಳಂಕ ಹಚ್ಚದಂತಹ, ನಮ್ಮ ಈಗಿನ ಹಾಗೂ ನಾಳಿನ ಹಿತಾಸಕ್ತಿಗಳಿಗೆ ಧಕ್ಕೆ ತರದಂತಹ ಕಾರ್ಯತಂತ್ರ ರೂಪಿಸಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳೋಣ ಮತ್ತು ನಮ್ಮ ಜನತೆಯ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳೋಣ’ ಎಂಬ ಪ್ರೊಆ್ಯಕ್ಟಿವ್‌ ಮನೋಭಾವನೆಯಾಂದಿಗೆ ಇವರೆಲ್ಲರೂ ಕಾರ್ಯಶೀಲರಾಗುವ ಅಗತ್ಯ ಈಗಿದೆ. ಇದು ಬಂದ್‌ನಿಂದ ಸಾಧ್ಯವಾಗುವುದಿಲ್ಲ.

ಆದರೆ ಬಂದ್‌ ಚಲನಶೀಲವಾಗಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X