ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನದಿಯುದ್ದಕ್ಕೂ ಪ್ರೀತಿ-ಭಾವನೆಯ ತರು-ಲತೆ!

By Staff
|
Google Oneindia Kannada News


(ಕಾವೇರಿ ವಿವಾದಕ್ಕೆ ಸಂಬಂಧಿಸಿದ ಎರಡು ಪ್ರತಿಕ್ರಿಯೆಗಳು ಇಲ್ಲಿವೆ. ಒಂದು ಭಾವನಾತ್ಮಕ ನೆಲೆಯಲ್ಲಿ, ಇನ್ನೊಂದು ಉಳಿವಿನ ನೆಲೆಯಲ್ಲಿ ಸಕಾಲದಲ್ಲಿ ಮೂಡಿವೆ.)

Water problem : The wearer knows where the shoe pinchesನನ್ನ ತವರುಮನೆಯಲ್ಲಿ ಒಂದು ಭಾವಿ ಇತ್ತು. ಊರಿನ ಬಹಳಷ್ಟು ಭಾವಿಗಳು ಬತ್ತಿದರೂ ಏನು ಅದೃಷ್ಟವೋ ಇನ್ನೂ ನೀರಿನ ಒರತೆ ಇತ್ತು. ಅಕ್ಕ ಪಕ್ಕದ ಮನೆಯವರೆಲ್ಲಾ ಬಂದು ನೀರು ಸೇದಿಕೊಂಡು ಹೋಗುತ್ತಿದ್ದರು. ಮಳೆ ಬರದಿದ್ದಾಗ ನೀರು ಕೆಳಕ್ಕೆ ಹೋಗಿ ಕೆಲವೊಮ್ಮೆ ಬೊಗ್ಗಡವಾಗುತಿತ್ತು. ಆಗೆಲ್ಲಾ ನಾವು (ಮಕ್ಕಳು, ಅಮ್ಮ, ಚಿಕ್ಕಮ್ಮ) ಗಲಾಟೆ ಮಾಡುತ್ತಿದ್ದೆವು. ಬೇರೆಯವರಿಗೆ ನೀರು ಸೇದಲು ಬಿಡಬೇಡಿ, ನಮಗೇ ಸಾಲಲ್ಲ ಅಂತ. ಜೊತೆಗೆ, ನೀರಿಲ್ಲದಿದ್ದಾಗ ಬೇರೆಡೆಯಿಂದ ನೀರು ಹೊರುವ ಕರ್ಮ ನಮ್ಮದೇ ನೋಡಿ, ಅದಕ್ಕೆ. ಆದರೆ, ನನ್ನ ಅಪ್ಪ, ಚಿಕ್ಕಪ್ಪ ‘ಅಯ್ಯೋ ಪಾಪ’ ಅಂತ ಬೇರೆಯವರಿಗೆ ಹಿತ್ತಲು ಬಾಗಿಲು ತೆಗೆದು ನೀರು ಸೇದಲು ಬಿಟ್ಟು, ಒಂದೆರಡು ಬಿಂದಿಗೆ ಸೇದಿಕೊಳ್ಳಿ ಅನ್ನುತ್ತಿದ್ದರು.

ಕೆಲವರು ಒಂದೆರಡು ಬಿಂದಿಗೆ ನೀರಿಗೆ ತೃಪ್ತರಾದರೆ, ಹಲವರು ಎಷ್ಟು ಕೊಡ ಎಳೆದರೂ ಸಾಕಾಗದೆ, ‘‘ಸಾಕು ಸೇದಿದ್ದು’’ ಎಂದ ನಮ್ಮ ಮೇಲೇ ಶಾಪ ಹಾಕಿದ್ದೂ ಉಂಟು. ಕೊನೆಗೆ ನೀರೆಲ್ಲಾ ಬೊಗ್ಗಡವಾಗಿ ನಮಗೆ ಕುಡಿಯಲೂ ನೀರಿಲ್ಲದೆ ಒದ್ದಾಡಿದ್ದುಂಟು. 2/3 ದಿನ ಕಳೆದ ಮೇಲೆ ನಲ್ಲಿಯಲ್ಲಿ ನೀರು ಬಿಟ್ಟಾಗ ಕೆಲವು ಕೊಡ ನಮ್ಮಿಂದ ನೀರು ಪಡೆದವರೇ ನಮಗೂ ನೀರು ಹಿಡಿಯಲು ಜಾಗ ಕೊಟ್ಟಿದ್ದು. ಬೇಕಾದಷ್ಟು ಸೇದಿದವರಾರೂ ನಮ್ಮನ್ನು ಸೇರಿಸಲಿಲ್ಲ ಎಂದು ನನಗೆ ಚೆನ್ನಾಗಿ ನೆನಪಿದೆ.

ಆಗೆಲ್ಲಾ ನನ್ನ ಮನಸ್ಸು ಒಮ್ಮೊಮ್ಮೆ ಅಪ್ಪನ ಸಾಮರಸ್ಯಕ್ಕೆ ತಲೆಬಾಗಿದರೆ, ಮತ್ತೊಮ್ಮೆ ಅಮ್ಮನ ಗೋಳಿಗೆ ಕರಗುತಿತ್ತು. ಬರೀ ಕುಡಿಯುವ ನೀರು ಸೇದಿದವರ ಮೇಲೆ ಮರುಕವಿತ್ತು, ಒಳ್ಳೆತನದ ದುರುಪಯೋಗ ಪಡೆದವರ ಬಗ್ಗೆ ರೇಗುತಿತ್ತು. ಆ ಗೊಂದಲ ಈಗಲೂ ಸ್ವಲ್ಪಮಟ್ಟಿಗೆ ಹಾಗೇ ಉಳಿದುಬಿಟ್ಟಿದೆ. ಹಲವು ಬೋರ್ವೆಲ್ಗಳ ಧಾಳಿಗೆ ಸಿಕ್ಕಿದ ಭಾವಿ ಬತ್ತಿ ಹತ್ತಾರು ವರ್ಷ ಕಳೆಯಿತು. ಈಗ ನಮ್ಮ ಮನೆಗೂ ನಲ್ಲಿ ಬಂದಿದೆ. ಭಾವಿಯ ಮುಂದೆಯೇ ದೊಡ್ಡ ತೊಟ್ಟಿ ಕೂತಿದೆ. ಹಬ್ಬಗಳಲ್ಲಿ ಕಡ್ಡಾಯವಾಗಿದ್ದ ಭಾವಿ ಪೂಜೆ ನಡೆಯುತ್ತಿದೆಯೋ ಏನೋ ಗೊತ್ತಿಲ್ಲ. ನಲ್ಲಿನೀರು ಬರದಿದ್ದಾಗ ಬೋರ್ವೆಲ್‌ ಯಾತ್ರೆ ಸಾಮಾನ್ಯವಾಗಿ ಬಿಟ್ಟಿದೆ. ಅನಿವಾರ್ಯವಾದಾಗ ನೀರು ಬಿಡುವವನಿಗೆ ದುಡ್ಡು ಕೊಟ್ಟು ನೀರು ಬಿಡಿಸಿಕೊಳ್ಳುವುದೂ ಉಂಟು!

ಕಾವೇರಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದ ಹಿತ ಕಾಯುವವಳು. ನ್ಯಾಯ ಹೇಳುವವರು ರಾಜಕಾರಣದ ಕೊಚ್ಚೆಯಲ್ಲಿ ಬೀಳದೆ ಪುಣ್ಯನದಿ ಕಾವೇರಿಯಲ್ಲೊಮ್ಮೆ ಸ್ನಾನ ಮಾಡಿ ಶುದ್ಧ ಮನಸ್ಸಿನಿಂದ ಸಾಧಕ ಬಾಧಕಗಳನ್ನು ಪರಿಶೀಲಿಸಲಿ. ಎರಡೂ ನಾಡಿನ ಜಲ ಸಂಪನ್ಮೂಲ, ಜನಸಾಂದ್ರತೆ, ಬೆಳೆಯ ಪ್ರಮಾಣ ಎಲ್ಲಾ ವಿಷಯಗಳನ್ನೂ ಪಕ್ಷಪಾತವಿಲ್ಲದೆ ಪರಿಶೀಲಿಸಿ. 3 ಬೆಳೆ ತೆಗೆಯುವವರಿಗೆ ಬೇಕಾದಷ್ಟು , 1 ಬೆಳೆಗೆ ಬೇಕಾಬಿಟ್ಟಿ ; ಧೋರಣೆ ಸಲ್ಲದು. ಅವರೂ 2 ಬೆಳೆ ತೆಗೆಯಲಿ, ಇವರೂ 2 ಬೆಳೆ ತೆಗೆಯಲಿ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡಿದರೆ ಒಂದು ಕಣ್ಣೂ ಕುರುಡಾಗುತ್ತದೆ, ದೇಹಕ್ಕೂ ನಷ್ಟ.

-ಪೂರ್ಣಿಮಾ ಹಿರಿಯಣ್ಣಯ್ಯ, ಅಮೆರಿಕ
[email protected]

***

ತಾಯಿ ಕಾವೇರಿ...ನೀ..ತುಂಬಿ ಹರಿ

ತಾಯಿ ನಿನ್ನಯ ಕರುಳ ಕುಡಿಗಳು-
ನಾವು ನಿನ್ನನೆ ನಂಬಿರುವೆವು
ನಮ್ಮ ಜೀವದ ನಾಡಿ ನೀನು!
ನಿನ್ಹದೇಗೆ ಆಚೆ ಹರಿಯ ಬಿಡುವುದು?

ರಾಗಿ ಅಕ್ಕಿಯ ಜೊತೆಗೆ, ತೆಂಗು ಕಬ್ಬನು ಬೆರಸಿ
ಕಾಡು ಮೇಡಲ್ಲಾಡಿಸುತ - ಉನಿಸಿದಾಕೆ ನೀನು
ಭರದಿಂ ಗಗನದಿಂ ನಾಗರದ ತೆರ ಹರಿದು ತಿಟ್ಟು-ಬೆಟ್ಟಗಳಲಿ ಇಳಿದು
ಕೊಡಗ ಬೆಡಗಲಿ ಬೆರೆವ ಬಾಳ್ವ ಕಲಿಸಿದಾಕೆ ನೀನು
ಹೇಳು ತಾಯೆ ?ಏಕಾಚೆ ಹರಿದೆ ಅಂದು ನೀನು ?

ಈಗ ನೋಡು-
ಅವರಿಗಿಷ್ಟಂತೆ! ಇವರಿಗಷ್ಟಂತೆ
ನನಗೆ ಮಾತ್ರ ಇಷ್ಟೆಯಂತೆ! ತಾಯಿ ನೀನು!
ಎತ್ತ ಹೋಗಲಿ ಇದನು ಕೇಳುತ?
ಅಗಲಿ ಇರಲೆನು ತಾಯಿ ನಿನ್ನನು!
-ರಾಜಶೇಖರ.ಎಸ್‌.ಹಿರೇಮಠ, ಬೆಂಗಳೂರು
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X