• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೈಕೋರ್ಟ್‌ ಕಣ್ಣಿಗೆ ಮಣ್ಣೆರಚಲಾಗದ ಕಂಗ್ಲಿಷ್‌ ಶಾಲೆಗಳು

By Staff
|

ಇತ್ತೀಚೆಗೆ ಕಾವೇರಿರುವ ಕಂಗ್ಲಿಷ್‌ ಶಾಲೆಗಳ ಸಮಸ್ಯೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ವ್ಯಕ್ತ ಪಡಿಸುತ್ತಿರುವ ಅಭಿಪ್ರಾಯಗಳು ಸಮಂಜಸವಾಗಿದೆ. ಈ ವಿಚಾರವಾಗಿ ನಾವು ಸ್ವಲ್ಪ ಆಲೋಚಿಸಿದರೆ ಖಾಸಗಿ ಶಾಲೆಗಳ ನೀಚತನ ಕಣ್ಣಿಗೆ ರಾಚುತ್ತದೆ.

ಇತ್ತೀಚೆಗೆ ಕಾವೇರಿರುವ ಕಂಗ್ಲಿಷ್‌ ಶಾಲೆಗಳ ಸಮಸ್ಯೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ವ್ಯಕ್ತ ಪಡಿಸುತ್ತಿರುವ ಅಭಿಪ್ರಾಯಗಳು ಸಮಂಜಸವಾಗಿದೆ. ಈ ವಿಚಾರವಾಗಿ ನಾವು ಸ್ವಲ್ಪ ಆಲೋಚಿಸಿದರೆ ಖಾಸಗಿ ಶಾಲೆಗಳ ನೀಚತನ ಕಣ್ಣಿಗೆ ರಾಚುತ್ತದೆ.

ಮೊದಲಿಗೆ ಈ ಶಾಲೆಗಳು ಯಾವ ಮಾಧ್ಯಮದ ಪರವಾಗಿವೆ, ಅಥವಾ ವಿರುದ್ಧವಾಗಿವೆ ಎನ್ನುವ ಪ್ರಶ್ನೆಯೇ ಇಲ್ಲಿ ಅಪ್ರಸ್ತುತ. ಸರ್ಕಾರಕ್ಕೆ ಶಾಲೆ ಆರಂಭಿಸಲು ಅನುಮತಿ ಪಡೆಯುವಾಗ ಬರೆದು ಕೊಟ್ಟಿದ್ದೊಂದು, ಈಗ ಆಚರಿಸುತ್ತಾ ಇರುವುದು ಇನ್ನೊಂದು. ಹೀಗೆ ಅಕ್ರಮವಾಗಿ ನಡೆಸುತ್ತಿರುವ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವುದೂ ಮಾನ್ಯತೆ ಇಲ್ಲದ ಖಾಸಗಿ ಪಠ್ಯಗಳನ್ನು. ವಸೂಲಿ ಮಾಡುವುದು ಸಾವಿರಾರು ರೂಪಾಯಿಗಳ ಶುಲ್ಕವನ್ನು/ ದೇಣಿಗೆಯನ್ನು. ಸೌಕರ್ಯಗಳೋ ದೇವರಿಗೇ ಪ್ರೀತಿ. ಆಟದ ಮೈದಾನವಿಲ್ಲ, ಸರಿಯಾದ ಶಿಕ್ಷಕ ವರ್ಗವಿಲ್ಲ, ಅನುಸರಿಸುತ್ತಿರುವ ಪಠ್ಯ ಕ್ರಮ ಅನಧಿಕೃತ. ಇಲ್ಲಿನ ಶಿಕ್ಷಕರ ಸ್ಥಿತಿಯೂ ಘೋರವೇ ಆಗಿದೆ. ಅನುದಾನ ಇಲ್ಲದ ಶಾಲೆ ಎನ್ನುವ ನೆಪದಿಂದ ಸಾವಿರವೋ, ಎರಡು ಸಾವಿರವೋ ಸಂಬಳ, ಶಿಕ್ಷಣ ಸಂಬಂಧಿತವಲ್ಲದ ವಿದ್ಯಾರ್ಹತೆ ಹೊಂದಿರುವವರೂ ಸಹ ಇಲ್ಲಿ ಶಿಕ್ಷಕರಾಗಿ ಸಲ್ಲುತ್ತಾರೆ.

ಹೀಗೆ ಸುಲಿಗೆಯನ್ನೇ ಉಸಿರಾಗಿಸಿಕೊಂಡಿರುವ ಇಂತಹ ಸಂಸ್ಥೆಗಳ ಬೆನ್ನೆಲುಬಾಗಿ ಅನೇಕ ರಾಜಕಾರಣಿಗಳು, ಲಾಭಬಡುಕರೂ ಸೇರಿಕೊಂಡು ಸಮಾಜ ಸೇವೆಯ ಮುಖವಾಡ ಧರಿಸಿರುವುದನ್ನು ನಾವೆಲ್ಲ ಅರಿಯಬೇಕಾಗಿದೆ. ಮಕ್ಕಳಿಗೆ ಸತ್ಯವನ್ನೇ ಹೇಳಬೇಕು, ಸುಳ್ಳಾಡುವುದು ಪಾಪ ಎಂದು ಹೇಳಿಕೊಡಬೇಕಾದ ಮತ್ತು ಹಾಗೆ ಬೋಧಿಸುತ್ತಾ ಇರುವರು ಎಂದು ನಾವೆಲ್ಲ ನಂಬಿರುವ, ಹೇಳಿ ಕೊಡಲಿ ಎನ್ನುವ ನಿರೀಕ್ಷೆಗೆ ಪಾತ್ರರಾಗಿರುವ ಈ ಸಂಸ್ಥೆಗಳ ನೈತಿಕತೆಯೇ ಪೊಳ್ಳಲ್ಲವೇ? ಯಾವ ಸಂಸ್ಥೆಯ ಅಸ್ತಿತ್ವವೇ ಸುಳ್ಳಿನ, ವಂಚನೆಯ ತಳಪಾಯದ ಮೇಲೆ ನಿಂತಿದೆಯೋ ಅವುಗಳಿಂದ ನಮ್ಮ ಮಕ್ಕಳಿಗೆ ನೈತಿಕ ಶಿಕ್ಷಣದ ಪಾಠ ದೊರೆಯುವುದು ಸಾಧ್ಯವೇ?

ಇನ್ನು ಅವರ ವಾದ ಸರಣಿಯನ್ನು ನೋಡಿ. ಇಂದಿನ ದಿನಗಳಲ್ಲಿ ಇಂಗ್ಲಿಷ್‌ ಶಿಕ್ಷಣದಿಂದ ವಂಚಿತರಾದರೆ ಉದ್ಯೋಗ ಸಿಗದು ಎನ್ನುತ್ತಾರೆ. ಮೇಲಾಗಿ ಈ ಮಾತುಗಳನ್ನು ಮುಗ್ಧ ಸಾರ್ವಜನಿಕರಿಂದ ಹೇಳಿಸುತ್ತಾ, ಹಾಗೆ ಹೇಳಿಸುವ ಸಲುವಾಗಿ ಮಕ್ಕಳ ಭವಿಷ್ಯ ಇಂಗ್ಲಿಷ್‌ ಇಲ್ಲದಿದ್ದರೆ ಸರ್ವನಾಶ ಎಂದು ಅವರುಗಳಿಗೆ ಸುಳ್ಳು ಪ್ರಚಾರ ಮಾಡುತ್ತಾ ತಮ್ಮ ಅನೈತಿಕ ನಡೆಗೆ ಸಾಮಾಜಿಕ ಕಳಾಕಳಿಯ ಸ್ವರೂಪ ಕೊಡುತ್ತಿದ್ದಾರೆ, ಈ ವಾದಕ್ಕೆ ಆಧಾರವೇನಾದರೋ ಇದೆಯೋ ಗೊತ್ತಿಲ್ಲ. ಆದರೆ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಕಲಿತರೆ ಓದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ಸರಳ ವೈಜ್ಞಾನಿಕ ಸತ್ಯವನ್ನು ಮಾತ್ರ ಹೇಳುವುದಿಲ್ಲ.

ಇವರು ಇಂಗ್ಲಿಷ್‌ ಮಾಧ್ಯಮವನ್ನು ಕನ್ನಡ ಮಾಡಿದರೆ ಇನ್ನು ಮುಂದೆ ಜನರು ಮಕ್ಕಳನ್ನು ಶಾಲೆಗಳಿಗೆ ಸೇರಿಸದೆ ಶಾಲೆಗಳು ಖಾಲಿ ಹೊಡೆಯುತ್ತವೆ ಎಂಬ ವಾದ ಮುಂದಿಡುತ್ತಾ ಬಂದಿದ್ದಾರೆ. ಆದರೆ ಇರುವ ಶಾಲೆಗಳಿಗೆ ಮಕ್ಕಳನ್ನು ಸೇರಿಸದೆ ಅನಕ್ಷರಸ್ಥರನ್ನಾಗಿಯಂತೂ ಯಾವ ತಂದೆ ತಾಯಿಯೂ ಮಾಡುವುದಿಲ್ಲ ಅಲ್ಲವೇ? ಈಗಾಗಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ ತೊಡಕಾಗುತ್ತದೆ ಎನ್ನುವ ಇವರು ಸರ್ಕಾರದ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುತ್ತಿದ್ದಾರೆ. ಸರ್ಕಾರ ಈಗ ಓದುತ್ತಿರುವ ಮಕ್ಕಳನ್ನೆಲ್ಲಾ ಕನ್ನಡ ಮಾಧ್ಯಮಕ್ಕೆ ಬದಲಾಯಿಸಿ ಎಂದು ಎಲ್ಲಿಯೂ ಹೇಳಿಲ್ಲ. ಆ ಮಕ್ಕಳು ಹಾಗೆ ಮುಂದುವರೆಯಲಿ, ಆದರೆ ಮುಂದಿನ ವರ್ಷದಿಂದ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಬೇಕು ಎಂದು ಮಾತ್ರ ಹೇಳಿದೆ.

ಖಾಸಗಿ ಶಾಲೆಗಳವರು ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ಮುಂದುವರೆಸಲು ಹಠ ಹಿಡಿದಿರುವ ಕಾರಣವಾದರೂ ಏನಿರಬಹುದು? ಇಂಗ್ಲಿಷ್‌ ಅಂದರೆ ಉತ್ಕೃಷ್ಟ, ಅದರ ಮೂಲಕ ನಿಮ್ಮ ಮಗುವಿಗೆ ಕೆಲಸ ಸಿಗುತ್ತೆ, ಆ ಮೂಲಕ ಮಗುವಿನ ಬಾಳು ಹಸನಾಗುತ್ತದೆ ಎನ್ನುವ ಆಧಾರರಹಿತ ಭರವಸೆ ನೀಡುತ್ತಾ ಪೋಷಕರಿಂದ ಮಾಡುತ್ತಿರುವ ಸಾವಿರಾರು ರೂಪಾಯಿಗಳ ದೇಣಿಗೆ, ಶುಲ್ಕ ವಸೂಲಿಯ ದಂಧೆಗೆ ಹೊಡೆತ ಬೀಳುತ್ತದೆ ಎಂಬ ಭಯ. ಯಾವುದೇ ವ್ಯಾಪಾರ ಮಾಡುವವರು ಅದರಲ್ಲಿ ಬರಬಹುದಾದ ಲಾಭ ನಷ್ಟದ ಲೆಕ್ಕ ಹಾಕಿಯೇ ಆರಂಭಿಸುವವರಿದ್ದಾಗ, ಈ ಶಾಲೆಗಳು ಕನ್ನಡ ಮಾಧ್ಯಮ ಆರಂಭಿಸಲು ಅನುಮತಿ ಪಡೆಯುವ್‌ ಮುನ್ನ ಅದರಿಂದ ದೊರೆಯಬಹುದಾದ ಲಾಭದ ಅರಿವಿರಲಿಲ್ಲವೇ? ಅಥವಾ ಸರ್ಕಾರಕ್ಕೆ ಸುಳ್ಳು ಹೇಳಿ ಶುರುಮಾಡೋಣ ಎನ್ನುವ ವಂಚನೆಯಾಂದಿಗೇ ಅವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದವೇ?

ಈ ಜನ ತಮ್ಮ ಪರವಾಗಿ ನೇಮಿಸಿಕೊಂಡಿರುವ ವಕೀಲರಾದ ಕೆ.ವಿ.ಧನಂಜಯ ಅವರ ಸಾಮಾಜಿಕ ಕಳಕಳಿ ಎಂಥದ್ದು ಎಂಬುದು ಅವರು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನದ ಮೊಕದ್ದಮೆಯಲ್ಲಿ ನಾಡಿನ ವಿರೋಧಿಗಳ ಪರ ವಕಾಲತ್ತು ವಹಿಸಿದಾಗಲೇ ಜಾಹೀರಾಗಿದೆ. ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಗುರಾಣಿಯನ್ನಾಗಿ ಮಾಡಿಕೊಂಡು ತಮ್ಮ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಖಾಸಗಿ ಶಾಲೆಗಳ ಮಾಲಿಕರು ಹಾಕುತ್ತಿರುವ ಸಾಮಾಜಿಕ ಕಳಕಳಿಯ ಮುಖವಾಡ ಮತ್ತವರ ಢೋಂಗಿತನಗಳು ಈಗ ಹೈಕೋರ್ಟ್‌ ಹಾಕಿದ ಛೀಮಾರಿಯಿಂದ ಬಯಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more