ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸಲ್ಟ್‌ ನೋಡಿದರೆ ಇಂಗ್ಲಿಷಿನಲ್ಲೇ ಅತಿ ಹೆಚ್ಚು ಅಂಕ!

By Staff
|
Google Oneindia Kannada News


ರಣರಂಗದಲ್ಲಿ ಮಂತ್ರಗಳು ಮರೆತು ಹೋಗಲಿ ಎಂದು ಶಾಪಹೊತ್ತ ಕರ್ಣನ ಪರಿಸ್ಥಿತಿ ನನ್ನದಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಐದು ನಿಮಿಷಗಳ ಕಾಲ ಸುಮ್ಮನೆ ಕುಳಿತು ಮನಸ್ಸು ತಹಬದಿಗೆ ಬಂದ ಮೇಲೆ, ಒಂದೊಂದೇ ಉತ್ತರಗಳು ತಿಳಿಯತೊಡಗಿತು. ಆಮೇಲೆ?

Srinath Bhalle, Richmond, USAಎಸ್‌.ಎಸ್‌.ಎಲ್‌.ಸಿ ನೆನಪುಗಳ ಸರಮಾಲೆ ಓದುತ್ತಿದ್ದಂತೆ ನನ್ನ ಎದೆಯಾಳದಲ್ಲಿ ಹುದುಗಿದ್ದ ಅಚ್ಚಳಿಯದ ಅನುಭವ ಒದ್ದುಗೊಂಡು ಬಂತು!

ಸೋಮವಾರ ಸಂಸ್ಕೃತ ಪರೀಕ್ಷೆಯಾದ ನಂತರ ಬಸ್ಸು ಹಿಡಿದು ಮನೆಗೆ ತಲುಪುವಷ್ಟರಲ್ಲಿ ಸಂಜೆ ಆರಾಗಿತ್ತು. ಮನೆಗೆ ಕಾಲಿಟ್ಟೊಡಣೆ ಟನ್‌ ಎಂದು ದೀಪ ಹೋಗಬೇಕೇ? ಆಯ್ತು ಶುಭ ಶಕುನವೆಂದು ಗೊಣಗುತ್ತಾ, ಮುಖ ತೊಳೆದು ಸಿದ್ಧವಾಗಿ ಹೊರಬಂದಾಗ ಅಮ್ಮ ಕಾಫಿ ಕೊಟ್ಟರು. ಕತ್ತಲಲ್ಲಿ ಅವರಿಗೆ ತಿಳಿಯಲಿಲ್ಲ, ಹಾಲು ಒಡೆದಿತ್ತು ಎಂದು!!! ಒಡೆದ ಹಾಲಿನ ಕಾಫಿ ಹೀರಲು ಬಹಳ ಕಷ್ಟವಾಯಿತು. ಅಮ್ಮ ಅದನ್ನು ಚೆಲ್ಲಲು ಹೇಳಿ, ಬೇರೆ ಹಾಲಿನ ಹೊಸ ಕಾಫಿ ಸಿದ್ದ ಮಾಡಿ ಕೊಟ್ಟರು. ಅಂತೂ ಕಾಫಿಯಾದ ಮೇಲೆ ಕ್ಯಾಂಡಲ್‌ ಬೆಳಕಿನ ಅಡಿ ಇಂಗ್ಲಿಷ್‌ ಓದಲು ಆರಂಭ ಮಾಡಿದೆ.

ಮೊದಲಿಂದಲೂ ಆಂಗ್ಲ ಮೀಡಿಯಂನಲ್ಲೇ ಓದಿದ್ದರಿಂದ ಸಬ್ಜಕ್ಟ್‌ ಕಠಿಣವಾಗಲಿಲ್ಲ. ಹಾಗೆಂದು ಓದದೇ ಹೋಗಲಿಕ್ಕೆ ಆಗುವುದೇ? ನಾನೇನು, ಹಳೆಯ ರೆಕಾರ್ಡ್‌ ಚೆನ್ನಾಗಿದೆ ಎಂದು ಸೆಲೆಕ್ಟ್‌ ಆಗುವ ಭಾರತದ ಕ್ರಿಕೆಟ್‌ ಆಟಗಾರನೇ? ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮತ್ತೊಮ್ಮೆ ಗುರುತು ಹಾಕಿಕೊಂಡಿದ್ದ ವಿಷಯಗಳನ್ನು ಮನನ ಮಾಡಿಕೊಂಡು, ಮಲಗುವ ಮುನ್ನ ಎಲ್ಲ ಮತಗಳ ದೇವರುಗಳಿಗೂ ಮನದಲ್ಲೇ ನಮಸ್ಕಾರ ಮಾಡಿದೆ. ಯಾಕೇ ಅಂದರೆ, ಸರಿ ಸುಮಾರು ಜನ ಗಣೇಶನನ್ನು ಪರೀಕ್ಷೆ ಚೆನ್ನಾಗಿ ಮಾಡುವಂತೆ ಹರಸು ಎಂದು ಬೇಡಿಕೊಂಡಿರುತ್ತಾರೆ. ಮುಂದಿನ ದಿನ ನನ್ನ ಬೇಡಿಕೆ ಅವನ ಮುಂದೆ ಬರುವಾಗ ತಡವಾಗಿ ಹೋದರೆ ಏನು ಗತಿ? ಅದಕ್ಕೇ, ಇರಲಿ ಅಂತ ಎಲ್ಲರಿಗೂ ವಂದನೆ ಸಲ್ಲಿಸಿದ್ದೆ. ಯಾರಾದರೂ ಸರಿ, ಕಾಪಾಡಿ ಎಂದು!!

ದಿನವೂ ಎರಡು ಬಸ್‌ ಹಿಡಿದು ನನ್ನ ಶಾಲೆಗೆ ತಲುಪುತ್ತಿದ್ದೆ. ಹಿಂದಿನ ದಿನದ ಹಾಗೇ ಒಂಬತ್ತು ಘಂಟೆಗೆ ಮನೆ ಬಿಟ್ಟು ಹತ್ತು ಘಂಟೆಗೆಲ್ಲಾ ಶಾಲೆಯಲ್ಲಿದ್ದೆ. ಪರೀಕ್ಷೆ ಹತ್ತೂವರೆಗೆ ಆರಂಭ. ಈ ದಿನವೂ ಅದೇ ಭ್ರಮೆಯಲ್ಲಿ ಒಂಬತ್ತು ಘಂಟೆಗೆ ಹೊರಟೆ. ಬಹುಶ: ಇದ್ದಬದ್ದ ಗ್ರಹಚಾರವೆಲ್ಲಾ ಒಟ್ಟಾಗಿ ಸೇರಿ, ನನ್ನ ವಿರುದ್ಧ ತಿರುಗಿತ್ತೋ ಏನೋ, ಹತ್ತು ಘಂಟೆಗೆಲ್ಲಾ ಬೆಂಗಳೂರು ಬಸ್‌ ನಿಲ್ದಾಣವನ್ನು ತಲುಪಿದ್ದೆ! ಅಲ್ಲಿಂದ ನನ್ನ ಶಾಲೆಗೆ ಅರ್ಧ ಘಂಟೆ ಪ್ರಯಾಣ. ರೈಲ್ವೇ ಸ್ಟೇಶನ್‌ ಮೇಲಿನ ಗಡಿಯಾರ ಹತ್ತು ಹೊಡೆದದ್ದು ಯಾರಿಗೆ ಕೇಳಿಸಿತ್ತೋ ಇಲ್ಲವೋ, ನನ್ನೆದೆ ಬಡಿತವಂತೂ ಬಹುಶ: ಎಲ್ಲರಿಗೂ ಕೇಳಿಸುತ್ತಿತ್ತು.

ಗಡಿಯಾರದ ಮುಳ್ಳು ಹತ್ತೂ ಐದು ತೋರಿಸಿತು. ಬಸ್‌ ಪತ್ತೆಯೇ ಇಲ್ಲ. ಆಟೋ ಹಿಡಿದು ಹೋಗೋಣ ಎಂದರೆ ಜೇಬಲ್ಲಿ ಕಾಸಿಲ್ಲ! ಎಲ್ಲಿ ನಿಂತು ಯಾರನ್ನು ಡ್ರಾಪ್‌ ಕೇಳುವುದು? ಟೆಲಿಫೋನ್‌ಗಳೇ ಬರವಾಗಿದ್ದ ಆಗ ಇನ್ನು ಸೆಲ್ಫೋನ್‌ ಎಲ್ಲಿಂದ ಬರಬೇಕು? ಗಡಿಯಾರ ಹತ್ತೂ ಏಳು ತೋರಿಸಿತು. ಮೂಲೆಯಲ್ಲಿ ಬಸ್‌ ಒಂದು ಪ್ರತ್ಯಕ್ಷವಾಯಿತು. ಛತ್ರದ ಹೊರಗಿನ ತೊಟ್ಟಿಯ ಮುಂದೆ ಎಲೆ ಎಸೆದಾಗ ದಂಬಾಲು ಬೀಳುವ ಭಿಕ್ಷುಕರಂತೆ ಜನರು ಬಸ್ಸಿಗೆ ನುಗ್ಗಿದರು. ನನಗೆ ಸೀಟಿನ ಅವಶ್ಯಕತೆಗಿಂತ ಅದು ಹೊರಡುವುದು ಮುಖ್ಯವಾಗಿತ್ತು.

ಸರಿ ಕಂಡಕ್ಟರ್‌ ಬಂದು, ಎಲ್ಲರಿಗೂ ಟಿಕೆಟ್‌ ಹರಿಯುತ್ತಾ ಸಾಗಿದ. ನನ್ನ ಕಡೆ ನೋಡಿ ಪಾಸ್‌ ತೋರಿಸು ಎಂದ. ‘ಅಯ್ಯೋ ದೇವಾ! ನನ್ನ ಪಾಸ್‌ ನೋಡಲು ಇವನಿಗೆ ಇದೇ ಸಮಯವೇ?’. ಸಾಯಂಕಾಲ ತೋರಿಸುತ್ತೇನೆ ಮೊದಲು ಬಸ್‌ ಹೊರಡುವಂತೆ ಮಾಡಯ್ಯಾ ಅಂತ ಜೋರಾಗಿ ಕೂಗಿ ಹೇಳಿದೆ.. ಮನದಲ್ಲಿ. ಸರಿ, ಅದೂ ಆಯಿತು. ಅಂತೂ ಇಂತೂ ಕೃಪೆದೋರಿ ಬಸ್‌ ಹತ್ತೂ ಕಾಲಿಗೆ ಹೊರಟಿತು.

ಎಂದೂ ಸಿಗದ ಕೆಂಪು ದೀಪಗಳಲ್ಲಿ ನಿಂತು, ಸಾವಧಾನವಾಗಿ ಸಾಗುತ್ತಿತ್ತು ಪ್ರಯಾಣ. ದಾರಿಯಲ್ಲಿ ದಿನವೂ ಕಾಣುತ್ತಿದ್ದ ಸಿನಿಮಾ ಪೋಸ್ಟರ್‌ಗಳು ಹಿತ ತೋರಲಿಲ್ಲ. ನಾನಿಳಿಯಬೇಕಾದ ಚಾಮರಾಜಪೇಟೆ ಸ್ಟಾಪಿನಲ್ಲಿ ಇಳಿದರೆ ಸಾಕು ಎಂದು ಮನ ಹಾತೊರೆಯುತ್ತಿತ್ತು. ಅಂತೂ ಇಂತೂ ಸಿಟಿ ಮಾರ್ಕೆಟ್‌ ತಲುಪುವಷ್ಟರಲ್ಲಿ ಹತ್ತೂವರೆಯಾಗಿತ್ತು. ಈ ಬಾರಿ ಪರೀಕ್ಷೆ ಶ್ರೀಮದ್‌ ರಮಾರಮಣ ಗೋವಿಂದ ಎಂದು ಮನ ಸಾರಿ ಸಾರಿ ಹೇಳುತ್ತಿತ್ತು. ಮುಖದಲ್ಲಿ ಇಳಿಯುತ್ತಿದ್ದ ಬೆವರು ಒರೆಸಿಕೊಳ್ಳಲೂ ತೋರಲಿಲ್ಲ.

ದುಗುಡ ಹೊತ್ತ ಮುಖ, ನೀರು ತುಂಬಿಕೊಂಡ ಕಣ್ಣಾಲಿಗಳು, ಅದರುತ್ತಿದ್ದ ಕೈ-ಕಾಲುಗಳನ್ನು ಹೊತ್ತುಕೊಂಡು ಒಂದೇ ಸಮನೆ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ನನ್ನ ಸ್ಟಾಪ್‌ ಯಾವಾಗ ಬರುತ್ತೆ ಎಂದು. ಚಾಮರಾಜಪೇಟೆ ಬಸ್‌ ನಿಲ್ದಾಣದಲ್ಲಿ ಇಳಿದಾಗ ಹತ್ತೂ ಮುಕ್ಕಾಲು! ಎದ್ದೂ ಬಿದ್ದೂ ಓಡಿದೆ.

ಬಿಲ್ಡಿಂಗ್‌ ಒಳಗೆ ಓಡುತ್ತಿದ್ದಂತೆ ನನ್ನ ಕ್ಲಾಸ್‌ ಟೀಚರ್‌ ಸಿಗಬೇಕೇ? ಅವರಲ್ಲಿ ವಿಷಯ ಹೇಳಲೂ ನಾಲಿಗೆ ಹೊರಡಲಿಲ್ಲ. ಮೊದಲು ಕ್ಲಾಸಿನೊಳಗೆ ಕೂಡುವಂತೆ ಹೇಳಿದರು. ಓಡಿ ಹೋಗಿ ನನ್ನ ಬೆಂಚಿನ ಮೇಲೆ ಕುಳಿತ ನಂತರವೇ ಉಸಿರು ಬಿಟ್ಟೆ. ಇನ್ನು ಏಳು ನಿಮಿಷ ತಡವಾಗಿದ್ದರೆ ನನ್ನನ್ನು ಪರೀಕ್ಷೆ ಬರೆಯಲು ಬಿಡುತ್ತಿರಲಿಲ್ಲ!

ಸುಸ್ತಾಗಿ ಕುಳಿತವನಿಗೆ ಸುಧಾರಿಸಿಕೊಳ್ಳುವಂತೆ ಹೇಳಿದರು ರೂಮ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಉರ್ದು ಟೀಚರ್‌. ನಂತರ ಪ್ರಶ್ನೆ ಪತ್ರಿಕೆ ನೀಡಿ ಖಾಲಿ ಹಾಳೆ ಕೊಟ್ಟರು. ನನ್ನ ಹೆಸರು, ಕುಲಗೋತ್ರವೆಲ್ಲ ಬರೆದು ಪ್ರಶ್ನೆ ಪತ್ರಿಕೆ ನೋಡಲು, ಇವೆಲ್ಲ ನಮ್ಮ ಸಿಲಬಸ್‌ ಪ್ರಶ್ನೆಗಳೇ ಎನ್ನಿಸಿತು.

ರಣರಂಗದಲ್ಲಿ ಮಂತ್ರಗಳು ಮರೆತು ಹೋಗಲಿ ಎಂದು ಶಾಪಹೊತ್ತ ಕರ್ಣನ ಪರಿಸ್ಥಿತಿ ನನ್ನದಾಗಿತ್ತು. ಐದು ನಿಮಿಷಗಳ ಕಾಲ ಸುಮ್ಮನೆ ಕುಳಿತು ಮನಸ್ಸು ತಹಬದಿಗೆ ಬಂದ ಮೇಲೆ, ಒಂದೊಂದೇ ಉತ್ತರಗಳು ತಿಳಿಯತೊಡಗಿತು. ಅಂತೂ ಇಂತೂ ಜಯ ಜಯಾ ಅಂತ ಪರೀಕ್ಷೆ ಮುಗಿಸಿ, ರಿಸಲ್ಟ್‌ ನೋಡಿದರೇ ಇಂಗ್ಲಿಷಿನಲ್ಲೇ ಅತಿ ಹೆಚ್ಚು ಅಂಕ!!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X