ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಬೆಂಗಳೂರು ಸಂಚಾರಿ ಪೊಲೀಸರ ಹಿಂದಿ ಪ್ರೇಮ!

By Staff
|
Google Oneindia Kannada News


ಎಲ್ಲೆಡೆ ಎಲ್ಲರೂ ಪರಭಾಷೆಗೆ ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷ್‌ಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅದನ್ನು ಕಂಡು, ನಾವು ಯಾರಿಗೇನು ಕಡಿಮೆ ಎಂದು ಬೆಂಗಳೂರಿನ ಸಂಚಾರಿ ಪೋಲಿಸರು ಸಹ ಕಾರ್ಯಪ್ರವೃತ್ತರಾಗಿದ್ದಾರೆ... !

ಮಾನ್ಯರೆ,

ಬೆಂಗಳೂರಿನಲ್ಲಿ ಖಾಸಗಿ ವಲಯದ ‘ಕಾರ್ಪೊರೇಟ್‌’ ಸಂಸ್ಥೆಗಳು ಆಗಾಗ್ಗೆ ಪರಭಾಷೆಯ ಬೃಹತ್‌ ಸಿನಿಮಾ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತವೆ. ಮತ್ತೊಂದು ಕಡೆ, ಮನರಂಜನೆ ಹೆಸರಿನಲ್ಲಿ ‘ 24 ಘಂಟೆ ಕನ್ನಡ ಹಾಡುಗಳಿಗೆ ಮಾತ್ರ ಮೀಸಲು’ ಎನ್ನುತ್ತ ಹೆಜ್ಜೆಯಿಟ್ಟ ವಾಹಿನಿಯನ್ನೂ ಒಳಗೊಂಡು, ಎಲ್ಲಾ ಎಫ್‌ಎಂ ರೇಡಿಯೋಗಳೂ ಪರಭಾಷೆ ಹಾಡುಗಳಿಗೆ ಗಂಟು ಬಿದ್ದಿವೆ.

ಯಾವುದೇ ಕರೆ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿ ಕನ್ನಡ ಬಿಟ್ಟು ನಿಮಗೆ ಪರಭಾಷೆಯಲ್ಲಿ ಸಹಾಯವಾಣಿ ಲಭ್ಯವಿದೆ. ನೆನ್ನೆ-ಮೊನ್ನೆಯಷ್ಟೆ ಅಚ್ಚ ಕನ್ನಡದ ಕಾರ್ಯಕ್ರಮವೊಂದರಲ್ಲಿ ಪರಭಾಷಾ ಪ್ರೇಮ ಮೆರೆದ ಸುದ್ಧಿಯನ್ನು ಸಹ ಕೇಳಿರುತ್ತೀರಿ. ಹೀಗೆ ಬೆಂಗಳೂರಿನಲ್ಲಿ ಎಲ್ಲೆಡೆ ಎಲ್ಲರೂ ಪರಭಾಷೆಗೆ ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷ್‌ ಪ್ರಾಮುಖ್ಯತೆ ಕೊಡುತ್ತಿರುವಾಗ ನಾವು ಯಾರಿಗೇನು ಕಡಿಮೆ ಎಂದು ಬೆಂಗಳೂರಿನ ಸಂಚಾರಿ ಪೋಲಿಸರು ಸಹ ಮುಂದಾಗಿದ್ದಾರೆ!

ನಮ್ಮ ಪೊಲೀಸರು ‘ ಸುಲಭ ರಿಕ್ಷಾ ’ ಎಂಬ ಯೋಜನೆಯಡಿ ಹಿಂದಿ ಸಹಾಯವಾಣಿ ತೆರೆಯುವ ದೊಡ್ಡ ಔದಾರ್ಯಕ್ಕೆ ಮುಂದಾಗಿದ್ದಾರೆ. ಪರೋಕ್ಷವಾಗಿ ಇದು ಇಲ್ಲಿಗೆ ಬರುವ-ಬಂದು ನೆಲೆಸುವ ಹಿಂದಿ ಸಮುದಾಯಕ್ಕೆ, ‘ಬೆಂಗಳೂರಿಗೆ ಬನ್ನಿ - ನೆಲೆಸಿ - ಕನ್ನಡ ಕಲಿಯಬೇಡಿ - ನಾವು ನಿಮ್ಮಡನೆ ಹಿಂದಿಯಲ್ಲಿ ಸಂಪರ್ಕಿಸುತ್ತೇವೆ ’ ಎಂದು ಕರೆ ನೀಡಿದಂತಿದೆ!

ಪೊಲೀಸ್‌ ಇಲಾಖೆ ಮೂಲಕ ಹಿಂದಿಯನ್ನು, ಕರ್ನಾಟಕ ರಾಜ್ಯ ಸರ್ಕಾರವೇ ಹೇರಲು ಪಣ ತೊಟ್ಟಿದೆ! ಹಿಂದಿಗೆ ಇಂದು ಮಣೆ ಹಾಕುವ ಸರ್ಕಾರ, ನಾಳೆ ತೆಲುಗು, ತಮಿಳು, ಮಲಯಾಳಿಗೆ ಮಣಿ ಹಾಕುವುದಿಲ್ಲ ಎನ್ನುವಂತಿಲ್ಲ.

ಕನ್ನಡಿಗರು ಸಹ ಪ್ರತಿನಿತ್ಯ ದೇಶದ ಇತರೆಡೆಗಳಿಗೆ ಪ್ರಯಾಣ ಮಾಡುತ್ತಾರೆ. ಹಾಗು ಅಲ್ಲಿ ನೆಲೆಸುತ್ತಾರೆ. ಎಲ್ಲಿ ಯಾವ ಊರಿನಲ್ಲಿ ಕನ್ನಡ ಸಹಾಯ ಕೇಂದ್ರಗಳಿವೆ ಎಂದು ನಾವು ಪ್ರಶ್ನಿಸಬೇಕಿದೆ. ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ ಕರ್ನಾಟಕದಲ್ಲೇ ಪರದಾಡಬೇಕಾಗಿರುವ ಪರಿಸ್ಥಿತಿ ಇರುವಾಗ, ಬೇರೆ ಊರುಗಳಲ್ಲಿ ನಾವು ಕನ್ನಡ ಕಾಣುವುದು ಕನಸಿನ ಮಾತು.

ಇಲ್ಲಿ ಬಂದು ನೆಲೆಸುವ ವಲಸಿಗರು ತಮ್ಮ ಸಾಮ್ರಾಜ್ಯ ಸ್ಥಾಪಿಸಿ, ಕನ್ನಡಿಗರಿಗೆ ಅವಹೇಳನ ಮಾಡುವ ಅನೇಕ ಪ್ರಸಂಗಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಾಗಿ ಇಲ್ಲಿ ಬರುವವರು/ನೆಲಸುವವರು ಕನ್ನಡ ಜ್ಞಾನವನ್ನು ಬೆಳೆಸಿಕೊಂಡು-ಕನ್ನಡಿಗರೊಡನೆ ಬೆರೆತು- ಕನ್ನಡಿಗರೊಡನೆ ಸಹಕರಿಸಿ - ಕನ್ನಡಿಗರಾಗಿ ಬಾಳಿ ಎಂಬ ಕರೆ ನೀಡುವುದು ಪೊಲೀಸ್‌ ಇಲಾಖೆಯ ಧರ್ಮ.

ಇನ್ನಾದರೂ ನಮ್ಮ ಪೊಲೀಸ್‌ ಇಲಾಖೆ, ಹಿಂದಿ ಸಹಾಯವಾಣಿ ಸ್ಥಾಪಿಸಬೇಕೆನ್ನುವ ನಿರ್ಧಾರವನ್ನು ಕೈ ಬಿಡುವುದೆಂದು ಭಾವಿಸೋಣವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X