ಹುಟ್ಟುಹಬ್ಬಕ್ಕೊಂದು ಹಾಡು ಬೇಕಾಗಿದೆ..
ಹ್ಯಾಪಿ ಬರ್ತ್ ಡೇ ಟು ಸೋ ಅಂಡ್ ಸೋ..ಹಾಡಿಗೆ ಬೈ ಹೇಳಿ..
- ಚಂದ್ರಶೇಖರನ್ ಕಲ್ಯಾಣರಾಮನ್, ಬೆಂಗಳೂರು
[email protected]
ಕನ್ನಡ ಸಾಹಿತ್ಯಕ್ಕಾಗಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ನಾವು ಹೀಗೆ ಮಾಡುವುದಾ? ಇನ್ನೇನು ಕವಿವರ್ಯರೊಬ್ಬರಿಗೆ 3ನೇ ರಾಷ್ಟ್ರಕವಿ ಪಟ್ಟವೂ ದೊರೆಯಲಿದೆ. ನಮ್ಮಲ್ಲಿ ಅನೇಕ ಸಂಗೀತಗಾರರು, ರಾಗ ಸಂಯೋಜಕರು ರಾಷ್ಟ್ರ ಮಟ್ಟದಲ್ಲಿ ಪುರಸ್ಕೃತರಾದವರಿದ್ದಾರೆ. ಅದ್ಭುತವಾದ ಅನೇಕ ಶಾಸ್ತ್ರೀಯ-ಜನಪದ-ಸುಗಮ ಸಂಗೀತ-ನಾಟಕ-ಸಿನೆಮಾ-ಭಾವಗೀತೆಗಳು ರಚನೆಯಾಗಿ, ರಾಗಸಂಯೋಜನೆಗೊಂಡು ಕರ್ಣಾನಂದಕರವಾಗಿಸಿ ಕನ್ನಡ-ಕನ್ನಡಿಗರನ್ನು ಹೆಮ್ಮೆಯ ಶಿಖರಕ್ಕೇರಿಸಿದೆ. ಅನೇಕ ಗಾನಮೇಳ, ವಾದ್ಯಗೋಷ್ಠಿ, ಕಛೇರಿಗಳು ಕನ್ನಡ ಗಾಯನವನ್ನು ಗಟ್ಟಿಯಾಗಿ ನಿಲ್ಲಿಸಿವೆ. ಆದರೆ ಪರಮಾಶ್ಚರ್ಯದ ಸಂಗತಿಯೆಂದರೆ ಹುಟ್ಟು ಹಬ್ಬದ ಆಚರಣೆಗಾಗಿ ನಮ್ಮ ಮಕ್ಕಳು ನಾವು, ನೀವೆಲ್ಲರೂ ಕನ್ನಡದಲ್ಲಿ ಶುಭಾಶಯ ಹೇಳುವ ಒಂದು ಗೀತೆ ರಚನೆ ಇದುವರೆಗೆ ಆಗದಿರುವುದು!!!
ಈ ಕೊರೆತ ನೀಗುವ ನಿಟ್ಟಿನಲ್ಲಿ ನಮ್ಮ ಕವಿಗಳು ಯೋಚಿಸಿ ಹಾಡೊಂದರ ರಚನೆಗೆ ಮುಂದಾಗಲಿ. ಅದಕ್ಕೆ ರಾಗಸಂಯೋಜನೆಗೊಂಡು ಲಭ್ಯವಾದಲ್ಲಿ ನಮ್ಮ ಮಕ್ಕಳು ಹುಟ್ಟುಹಬ್ಬವನ್ನು, ಕನ್ನಡದಲ್ಲಿ ಶುಭಾಶಯ ಗೀತೆ ಹಾಡುವುದರ ಮೂಲಕ ಆಚರಿಸಿಕೊಳ್ಳಬಹುದಾಗಿದೆ. ಹಾಗೆಯೇ ಕನ್ನಡದ ನಮ್ಮ ಅನೇಕ ಶಿಶುಗೀತೆ, ಪ್ರಾಸಬದ್ಧ ಕವಿತೆ ಮತ್ತು ಪದ್ಯಪಂಕ್ತಿಗಳ ಪರಿಚಯ ನಮ್ಮ ಇಂದಿನ ಮಕ್ಕಳಿಗಿಲ್ಲ. ಪೋಷಕರು ಅವನ್ನು ತಮ್ಮ ಮಕ್ಕಳಿಗೆ ಪರಿಚಯಿಸುವಂತೆ ಮಾಡಲು ನಮ್ಮ ಸಂಗೀತಗಾರರು ಮತ್ತೊಮ್ಮೆ ಅವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.
ಆಕಾಶವಾಣಿ, ಎಫ್.ಎಂ ರೇಡಿಯೋಗಳಂತ ಪ್ರಭಾವಿ ಶ್ರವಣ ಮಾಧ್ಯಮಗಳು ಕನ್ನಡದ ಮಕ್ಕಳ ಗೀತೆಗಳಿಗಾಗಿಯೇ ಸಮಯ ಮೀಸಲಿಡಲು ಯೋಚಿಸಬೇಕಿದೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಕನ್ನಡತನದ ವಿಕಸನವನ್ನು ರೂಢಿಸುವ ಪ್ರಯತ್ನ 50 ನೇ ಕನ್ನಡರಾಜ್ಯೋತ್ಸವದ ಆಶಯಗಳಲ್ಲೊಂದಾಗಲಿ.












Click it and Unblock the Notifications