ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿರೋಧಿ ಎಫ್‌ಎಂ ರೇಡಿಯೋಗಳಿಂದ ನಮಗೆಂದು ಮುಕ್ತಿ?

By Super
|
Google Oneindia Kannada News

ರೇಡಿಯೋ ಸಿಟಿ ಮತ್ತು ರೇಡಿಯೋ ಮಿರ್ಚಿ ವಿರುದ್ಧ ಕನ್ನಡಿಗರ ಅಸಹನೆ ಸ್ಫೋಟಿಸುವ ಲಕ್ಷಣಗಳು ಕಾಣಿಸುತ್ತಿವೆ. ಈ ಖಾಸಗಿ ರೇಡಿಯೋ ಚಾನೆಲ್‌ಗಳು ಕರ್ನಾಟಕದಲ್ಲಿ, ಕನ್ನಡದ ಸಮಾಧಿಯ ಮೇಲೆ ಪರಭಾಷೆಯ ಗುಲಾಬಿ ಗಿಡ ನೆಟ್ಟಿವೆ ಎಂಬುದು ಕನ್ನಡಿಗರ ದೂರು. ಈ ವಿಚಾರವನ್ನು ಬಿಂಬಿಸುವ ಮೂರು ಪತ್ರಗಳು ಇಲ್ಲಿವೆ. ನಿಮ್ಮ ಅನಿಸಿಕೆಯನ್ನೂ ವ್ಯಕ್ತಪಡಿಸಬಹುದು.

ಮಾನ್ಯರೇ,

ಭಾರತದಲ್ಲೇ ಏಕೆ, ಪ್ರಪಂಚದ ಯಾವುದೇ ಪ್ರದೇಶವನ್ನು ಗಣನೆಗೆ ತೆಗೆದುಕೊಂಡಲ್ಲಿ ಕೇವಲ ಕನ್ನಡಿಗರು ಮಾತ್ರ ಕನ್ನಡೇತರವಾದ ಯಾವುದೇ ವಿಷಯ, ಭಾವನೆ, ಪ್ರಕರಣ, ಸಂಗತಿಗಳಿಗೆ ಕೋರುವ ಅಭೂತಪೂರ್ವ ಸ್ವಾಗತ, ತೋರುವ ಆತ್ಮೀಯತೆ, ಸಹೃದಯದಿಂದ ಪ್ರಕಟಪಡಿಸುವ ಆಪ್ಯಾಯಮಾನತೆ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಶೇಷಣ ಕನ್ನಡ, ಕನ್ನಡಿಗ ಪದಕ್ಕಿರುವ ಗುಣವಾಚಕ, ಇದು ಕನ್ನಡಿಗರಿಗಿರುವ ಹೆಮ್ಮೆಯ ಹೆಗ್ಗಳಿಕೆ!

ಇದು ಕೇವಲ ನೆನ್ನೆ ಮೊನ್ನೆಯ ಸಂಗತಿಯಲ್ಲ. ನಮ್ಮ ಹಿರಿಯರು ಮತ್ತು ಬುದ್ಧಿಜೀವಿಗಳು ಪರಂಪರಾಗತವಾಗಿ ಅನ್ಯ ಸಹೋದರ ಸಂಸ್ಕೃತಿಗಳೆಡೆಗೆ ಒಲವು ವ್ಯಕ್ತಪಡಿಸಿ ಹೃದಯ ವೈಶಾಲ್ಯತೆ ಮೆರೆದಿರುವ ಅನೇಕ ಉದಾಹರಣೆಗಳಿವೆ. ಆದರೆ ಕಾಲಾಂತರದಲ್ಲಿ ಇದು ನಮ್ಮ ಕನ್ನಡ ಸಂಸ್ಕೃತಿ, ಭಾಷೆ, ನೆಲ, ಜಲ ಸಮಸ್ಯೆಗಳಿಗೆ ಮೂಲಭೂತ ಕಾರಣವಾಗಿ ಪರಿಣಮಿಸಿದೆ. ಅನ್ಯರು ಇದನ್ನು ಕನ್ನಡಿಗರ ಬಲಹೀನತೆಯೆಂದು ಮನಗಂಡು ನಮ್ಮನ್ನು ಅವಹೇಳನ ಮಾಡುವಂತ ನಿರಂತರವಾದ ಪ್ರಯೋಗ ಬೆಂಗಳೂರು ಹಾಗು ಕರ್ನಾಟಕದಲ್ಲೆಡೆ ಕಾರ್ಯಶೀಲವಾಗಿದೆ.

ಇದಕ್ಕೆ ಇತ್ತೀಚಿನ ಉತ್ತಮ ನಿದರ್ಶನ; ನಮ್ಮ ಕನ್ನಡದ ಚಲನಚಿತ್ರ ಕಲಾವಿದರು, ನಾಟಕಕಾರರು, ಸಾಹಿತಿಗಳು, ಹಾಡುಗಾರರು, ಕನ್ನಡ ಹಾಗು ಕರ್ನಾಟಕಕ್ಕೆ ಸಂಬಂಧಪಟ್ಟ ಇತರ ಗಣ್ಯರು ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ರೇಡಿಯೋ ಮಿರ್ಚಿ ಎಫ್‌.ಎಮ್‌. 93.3 ವಾಹಿನಿ ಪ್ರಕಾಶಗೊಳ್ಳಲು ನೀಡುತ್ತಿರುವ ಪ್ರಚಾರ ಮತ್ತು ಅದಕ್ಕೆ ಕೃತಜ್ಞರಾಗಿ ಪ್ರಾದೇಶಿಕ ಭಾವನೆಯನ್ನು ಬಿತ್ತರಿಸದೆ, ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ಇಲ್ಲಿ ಹೇರುವ ಮಹತ್ಕಾರ್ಯಕ್ಕೆ ಕೈ ಜೋಡಿಸಿರುವ ರೇಡಿಯೊ ಮಿರ್ಚಿ ಭಂಡ-ಫಟಿಂಗರ ಪರಿ.

ಬಹುಶಃ ನಮ್ಮ ಗಣ್ಯರು ಬೆಂಗಳೂರಿನ ಈ ಎಫ್‌. ಎಂ. ರೇಡಿಯೋಗಳು ಪ್ರಸಾರಗೊಳಿಸುವ ಕಾರ್ಯಕ್ರಮಗಳನ್ನು ಖಂಡಿತ ಆಲಿಸಿರಲಿಕ್ಕಿಲ್ಲ ಎಂದೇ ನನ್ನ ಅನಿಸಿಕೆ! ಕೊನೇ ಪಕ್ಷ ಈಗ ಕೆಲವು ಘಂಟೆ ಕಿವಿಗೊಟ್ಟು ಕೇಳಲಿ! ಇದು ಕೇವಲ ಹಿಂದಿ ಮತ್ತು ಇಂಗ್ಲಿಷ್‌ ಆರ್ಥ ಮಾಡಿಕೊಳ್ಳುವವರಿಗೆ ಮಾತ್ರ!

'ಸಕತ್‌ ಹಾಟ್‌ ಮಗ' 'ಬಿಟ್ಟಿ ಟಿಕೆಟ್‌ ', ' ಸ್ಲೀವ್‌ ಲೆಸ್‌ ಸರಸ ', ಮತ್ತು 'ಬೊಂಬಾಟ್‌ ಭಾಮ' ಎಂಬ ಇತ್ಯಾದಿ ಪದಗಳನ್ನು ಕನ್ನಡಿಗರ ಜತೆಗೆ ಕನ್ನಡೇತರರ ಮನದಲ್ಲಿ ಬಿತ್ತಿ, ಕನ್ನಡವೆಂದರೆ ಕೇವಲ ಈ ಕೀಳು ಅಭಿರುಚಿಯ ಅಸಂಬದ್ದ ಪದಗಳು ಎಂದು ಬಿಂಬಿಸುವ ರೇಡಿಯೋ ಜಾಕಿಗಳ ಅರಚಾಟ, ತಲೆಹರಟೆಯ ಪರಿಚಯವಾಗುವುದು. ಯಾವುದೇ ಕೋನದಲ್ಲಿ ಅವಲೋಕಿಸಿದರೂ ಇದು ಬೆಂಗಳೂರಿನ, ಕನ್ನಡಿಗರ ರೇಡಿಯೋ ಅನ್ನಿಸುವುದಿಲ್ಲ. ಇವರ ವ್ಯಾಪಾರಿ ಮನೋಭಾವದ ಬೇಳೆ ಬೇಯಿಸಿಕೊಳ್ಳಲು ಕನ್ನಡತನವನ್ನು ಅಸ್ತ್ರವನ್ನಾಗಿ ಪರಿಗಣಿಸಿದ ಕುತಂತ್ರ ಎಂದು ಅವರಿಗೆ ಮನದಟ್ಟಾಗುವುದು.

ಕನ್ನಡ ಸಂಸ್ಕೃತಿ ಮತ್ತು ಹಿತಕ್ಕೆ ಮಾರಕವಾದ ಸಾಧನಗಳಲ್ಲಿ ಈ ರೇಡಿಯೋ ಮಿರ್ಚಿ ಎಫ್‌. ಎಮ್‌. 93.3 ವಾಹಿನಿ ಪಿಡುಗು ಹೊಸ ಸೇರ್ಪಡೆ. ಅರಿತೋ ಅರಿಯದೆಯೋ ಇದಕ್ಕೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಪ್ರಚಾರ ನೀಡುತ್ತಿರುವ ಕನ್ನಡದ ಗಣ್ಯರು, ಕನ್ನಡಕ್ಕೆ ಪ್ರಾಶಸ್ತ್ಯ ನೀಡಲು ಅವರನ್ನು ಪ್ರೇರೇಪಿಸಲಿ ಇಲ್ಲವೇ ಕೂಡಲೇ ತಮ್ಮ ಪ್ರಚಾರ ಹೇಳಿಕೆಯನ್ನು ಹಿಂದಕ್ಕೆ ಪಡೆದು ರೇಡಿಯೋ ಮಿರ್ಚಿ ವಾಹಿನಿ ಕನ್ನಡ ವಿರೋಧಿ ನಿಲುವನ್ನು ಖಂಡಿಸಲಿ.

ರೇಡಿಯೋ ಮಿರ್ಚಿ ಎಫ್‌. ಎಂ 93.3 ವಾಹಿನಿ ಕೇವಲ ಹಿಂದಿಯ ಹಾಟ್‌ ಮಿರ್ಚಿಯಾಗಿರದೆ, ಬ್ಯಾಡಗಿ ಮೆಣಸಿನಕಾಯಿಯಾಗಿ ಕನ್ನಡಿಗರ ರುಚಿಯನ್ನೂ ತಣಿಸಲಿ.

*

ಕನ್ನಡ ವಿರೋಧಿಗಳೇ, ಸರಿಯಾಗಿ ಕೇಳಿಸಿಕೊಳ್ಳಿ; ಕನ್ನಡಿಗರು ಹೇಡಿಗಳಲ್ಲ

ಅನಂತ ಜೋಯಿಸ್‌, ಬೆಂಗಳೂರು.
[email protected]

ಎಫ್‌ಎಂ ರೇಡಿಯೋ ಸಿಟಿ/ ರೇಡಿಯೋ ಮಿರ್ಚಿ ವಾಹಿನಿಗಳೇ, ನೀವು ಇಲ್ಲಿಗೆ ಬಂದಿರುವುದಾದರೂ ಏಕೆ?

ನಿಮ್ಮ ವಾಹಿನಿಗಳು ಪ್ರಾರಂಭವಾದ ದಿನದಿಂದಲೂ ನೀವು ಕನ್ನಡ ವಿರೋಧಿ ಧೋರಣೆಯನ್ನು ತೋರಿಸುತ್ತಿದ್ದೀರಿ. ಈ ನಾಡಿನ ಭಾಷೆ ಸಂಸ್ಕೃತಿಗೆ ಒಂದಿಷ್ಟೂ ಗೌರವ ತೋರಿಸುವ ಸೌಜನ್ಯ ನಿಮ್ಮಲ್ಲಿಲ್ಲ.

ರೇಡಿಯೋ ಮಿರ್ಚಿ ವಾಹಿನಿ ಕರ್ನಾಟಕಕ್ಕೆ ಬಂದಾಗಿನಿಂದ ಕೇವಲ ಹಿಂದಿ ಹಾಗು ತಮಿಳು ಹಾಡುಗಳನ್ನೇ ಪ್ರಸಾರ ಮಾಡುತ್ತಿದೆ. ಆದರೆ ನಿಮ್ಮದೇ ವಾಹಿನಿ ಚೆನ್ನೈ/ಹೈದರಾಬಾದ್‌ನಲ್ಲಿ ಅಲ್ಲಿನ ಪ್ರಾಂತೀಯ ಭಾಷೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತೀರಿ. ಕಳೆದ 6 ವರುಷಗಳಿಂದ ಕರ್ನಾಟಕದಲ್ಲಿರುವ ರೇಡಿಯೋ ಸಿಟಿ ಕೂಡ ಇದಕ್ಕೆ ಹೊರತಾಗಿಲ್ಲ.

ನೀವು ಕನ್ನಡ ಭಾಷೆ-ಸಂಸ್ಕೃತಿಗೆ ಎಂದಿಗೂ ಪ್ರಾಧಾನ್ಯ ನೀಡಿಲ್ಲ. ಕೇವಲ ಶೇಕಡಾ 13ರಷ್ಟು ಮಾತ್ರ ಕನ್ನಡ ಕಾರ್ಯಕ್ರಮಗಳನ್ನು ಬಿತ್ತರಿಸುತ್ತೀರಿ; ಅಲ್ಲದೆ ಈ ಕನ್ನಡ ಕಾರ್ಯಕ್ರಮಗಳನ್ನು ಹೆಚ್ಚು ಜನ ಶ್ರೋತೃಗಳು ಆಲಿಸದ ಸಮಯದಲ್ಲಿ ಪ್ರಸಾರ ಮಾಡುತ್ತೀರಿ.ಆರೋಗ್ಯ, ವಾತವರಣ ವರದಿ, ಸಂಚಾರ ಸ್ಥಗಿತದ ಮಾಹಿತಿಗಳನ್ನು ಹಿಂದಿ ಇಲ್ಲವೇ ಇ0ಗ್ಲಿಷ್‌ನಲ್ಲಿ ಬಿತ್ತರಿಸಲಾಗುತ್ತಿದೆ. ಕನ್ನಡದವರಿಗೆ ಈ ಮಾಹಿತಿಗಳು ಬೇಕಿಲ್ಲವೇ? ಅಥವಾ ಕನ್ನಡಿಗರಿಗೆ ಈ ಮಾಹಿತಿಗಳನ್ನು ನೀಡದಿದ್ದರೇನಂತೆ ಎಂಬ ಸೊಕ್ಕೇ?

ನಿಮ್ಮ ವಾಹಿನಿಗಳಲ್ಲಿ ಬರುವ ಹೆಚ್ಚಿನ ನಿರೂಪಕಿಯರು ಕನ್ನಡ ಮಾತನಾಡುವುದಿಲ್ಲ; ಕೇವಲ ಹಿಂದಿ ಹಾಗು ಇಂಗ್ಲಿಷ್‌ ನವರಿಗೆ ಮಾತ್ರ ತಮ್ಮ ಸೇವೆಯನ್ನು ಮೀಸಲಿಟ್ಟಿದ್ದಾರೆ. ರೇಡಿಯೋ ಸಿಟಿ ಯಲ್ಲಿ ಒಬ್ಬ ನಿರೂಪಕಿ ಹಿ0ದಿಯವರನ್ನು ಮೆಚ್ಚಿಸಲು ತನ್ನ ಹೆಸರನ್ನು ಬದಲಿಸಿಕೊಂಡಿದ್ದಾಳೆ. ಪರಭಾಷಿಕರಿಗೋಸ್ಕರ ತನ್ನ ಹೆಸರನ್ನೇ ಬದಲಿಸಿಕೊಳ್ಳುವ ಇಂತಹವರನ್ನು ಜೀತದಾಳುಗಳು ಅಥವಾ ಗುಲಾಮರು ಎನ್ನದೇ ಏನೆನ್ನಬೇಕು?

ವಾರಕ್ಕೊಮ್ಮೆ ಶಾರುಖ್‌ಖಾನ್‌ ಸ್ಪೆಷಲ್‌/ಸಲ್ಮಾನ್‌ಖಾನ್‌ ಸ್ಪೆಷಲ್‌/ಟಾಮ್‌ ಕ್ರೂಸ್‌ ಸ್ಪೆಷಲ್‌ ಎಂದೆಲ್ಲಾ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತೀರಿ; ಎಂದಾದರೂ ಕುವೆಂಪು/ಪುಟ್ಟಣ್ಣ ಕಣಗಾಲ್‌/ಹಂಸಲೇಖ ವಿಶೇಷ ಎಂದು ಯಾವುದಾದರೂ ಕಾರ್ಯಕ್ರಮಗಳನ್ನು ಬಿತ್ತರಿಸಿದ್ದೀರಾ? ಹಿಂದಿ ಗಜಲ್‌/ಸಿನೆಮಾಗೀತೆಗಳು ಇಂಗ್ಲಿಷ್‌ ಪಾಪ್‌ ಗೀತೆಗಳಿಗೆ ಪ್ರಾಮುಖ್ಯತೆ ನೀಡಿದ್ದೀರಿ, ಹಿಂದಿ ಶಾಯರಿಗಳಿಗೆಂದೇ ಒಂದಿಷ್ಟು ಸಮಯವನ್ನು ಮುಡಿಪಾಗಿಟ್ಟಿದ್ದೀರಿ. ಅದೇ ಕನ್ನಡ ಜಾನಪದ ಗೀತೆಗಳಿಗಾಗಲೀ, ಸುಗಮ ಸಂಗೀತಕ್ಕಾಗಲೀ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಲೀ ಯಾವುದಾದರೂ ಕಾರ್ಯಕ್ರಮ ಬಿತ್ತರಿಸುತ್ತಿದ್ದೀರಾ?

ಬೆಂಗಳೂರಿನಲ್ಲಿ ನಡೆಯುವ ರಾಕ್‌ ಸಂಗೀತ ಸಂಜೆಗಳನ್ನು ಹೊಗಳಿ ಕೊಂಡಾಡುವುದು ನಿಮಗೆ ಹೆಮ್ಮೆಯ ಸಂಗತಿ. ಇಂತಹ ಕಾರ್ಯಕ್ರಮಗಳನ್ನು ಇನ್ನಿಲ್ಲದಂತೆ ಹೊಗಳಿ ಅಟ್ಟಕ್ಕೇರಿಸಿ ಕೂರಿಸುತ್ತೀರಿ. ಎಂದಾದರೂ ನಗರದಲ್ಲಿ ನಡೆಯುವ ಕರಗದ ಹಬ್ಬಕ್ಕಾಗಲೀ ಅಥವಾ ಇನ್ನಾವುದೇ ಜಾನಪದ ಕಾರ್ಯಕ್ರಮಗಳಿಗೆ ಪ್ರಚಾರ ನೀಡಿದ್ದೀರಾ?

ಈ ನಾಡಿಗೆ ಬಂದು ಇಲ್ಲಿನ ನೆಲ-ನೀರು-ಗಾಳಿ-ಅನ್ನ ಸೇವಿಸುತ್ತಿರುವ ನಿಮಗೆ ಸ್ವಲ್ಪವಾದರೂ ಕೃತಜ್ಞತೆ ಇದೆಯೇ? ಅಥವಾ ನಿಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಸೊಕ್ಕಿನಿಂದ ಬೀಗುತ್ತಿದ್ದೀರೋ? ನೀವು ಇಲ್ಲಿ ಬಂದಿರುವ ಉದ್ದೇಶವಾದರೂ ಏನು? ನಾಡಿನಲ್ಲೆಲ್ಲಾ ಹಿಂದಿ ಹಾಗೂ ಅನ್ಯಭಾಷೆಗಳನ್ನು ಹೇರಲು ಬ0ದಿದ್ದೀರಾ? ಹಾಗೇನಾದರೂ ತಿಳಿದಿದ್ದರೆ ಅದು ನಿಮ್ಮ ತಪ್ಪು ಅಭಿಪ್ರಾಯ.

ಈಗಲೂ ಕಾಲ ಮಿಂಚಿಲ್ಲ, ಈ ನಾಡಿನ ಭಾಷೆ-ಸಂಸ್ಕೃತಿ ಗಳಿಗೆ ಗೌರವ ನೀಡಿ, ಕನ್ನಡ ಕಾರ್ಯಕ್ರಮಗಳನ್ನು ನಿಮ್ಮ ವಾಹಿನಿಗಳಲ್ಲಿ ಬಿತ್ತರಿಸಿ. ಬೇರೆ ಭಾಷೆಯ ಕಾರ್ಯಕ್ರಮಗಳಿಗೆ ಆ ಭಾಷೆ ಮಾತನಾಡುವ ರಾಜ್ಯಗಳಿವೆ. ಅಲ್ಲಿಗೆ ಹೋಗಿ ನಿಮಗೆ ಆ ಭಾಷೆಗಳ ಮೇಲಿರುವ ಅಭಿಮಾನವನ್ನು ಪ್ರಕಟಿಸಬಹುದು. ಬೆಂಗಳೂರು ಕರ್ನಾಟಕದ ರಾಜಧಾನಿ, ಕನ್ನಡಿಗರ ಸೊತ್ತು. ಇಲ್ಲಿರುತನಕ ಕನ್ನಡ ಭಾಷೆ-ಸಂಸ್ಕೃತಿಯನ್ನು ಪಾಲಿಸಿ, ಇದರಿಂದ ನಿಮಗೂ ಗೌರವ ಸಿಗುತ್ತದೆ.

ಈಗಲಾದರೂ ಇದನ್ನು ಒಂದು ಎಚ್ಚರಿಕೆಯ ಗಂಟೆಯೆಂದು ತಿಳಿಯಿರಿ. ಇಷ್ಟಾದರೂ ನೀವು ನಿಮ್ಮ ತಪ್ಪನ್ನು ತಿದ್ದುಕೊಳ್ಳದಿದ್ದರೆ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಕನ್ನಡಿಗರು ಶಾಂತಿ ಪ್ರಿಯರು ಆದರೆ ಹೇಡಿಗಳಲ್ಲ.

*

ಮಸಿ ಬಳಿಯುವ ಧೈರ್ಯ ಪ್ರದರ್ಶಿಸಿ

ಎ.ಎಸ್‌.ರವಿ
[email protected]

ಟಿವಿ ವಾಹಿನಿಗಳ ಅಬ್ಬರ ಮತ್ತು ಸರ್ಕಾರಿ ರೇಡಿಯೊ ವಾಹಿನಿಗಳ ಏಕತಾನತೆಯ ಕಾರ್ಯಕ್ರಮಗಳನ್ನು ಕೇಳಿ ಬೇಸತ್ತು ರೇಡಿಯೊವನ್ನು ಮೂಲೆಗೆಸೆದಿದ್ದ ಜನರನ್ನು ಮತ್ತೆ ರೇಡಿಯೋದೆಡೆಗೆ ಕಿವಿತೆರೆಯುವಂತೆ ಮಾಡಿದ ಕೀರ್ತಿ ಖಾಸಗಿ ರೇಡಿಯೋ ವಾಹಿನಿಗಳಿಗೆ ಸಲ್ಲಬೇಕು.

ರೇಡಿಯೊ ಕೇಳುವುದು ಒಂದು ಸೀಮಿತ ಸಮಯಕ್ಕೆ ಮಾತ್ರ ಮೀಸಲು ಎಂಬಂತಿದ್ದ ಕಾಲದಲ್ಲಿ ಎಲ್ಲರೂ ಯಾವ ಕಾಲದಲ್ಲೂ ಕೇಳುವಂತೆ ಮಾಡಿದ್ದು ಖಾಸಗಿ ರೇಡಿಯೊ ವಾಹಿನಿಗಳು.ಖಾಸಗಿ ವಾಹಿನಿಗಳು ರೇಡಿಯೋ ಕೇಳುವ ರೀತಿ ನೀತಿಗಳನ್ನೇ ಬದಲಾಯಿಸಿದವು. ರೇಡಿಯೋದ ಆಕಾರದ ಬಗೆಗಿನ ಕಲ್ಪನೆಗಳು ಬದಲಾದವು.

ರೇಡಿಯೊ ಪೆನ್ನಿನ ಒಳಗೆ ಅಷ್ಟೇ ಏಕೆ ಮೊಬೈಲ್‌ನ ಒಳಗೂ ಅಡಗಿಸಬಹುದಾದ ವಸ್ತುವಾಯಿತು. ನೂರು-ಸಾವಿರಗಳಲ್ಲಿದ್ದ ರೇಡಿಯೊ ಬೆಲೆ ಹತ್ತಾರು ರೂಪಾಯಿಗಳಿಗೆ ಇಳಿಯಿತು. ರೇಡಿಯೊ ಜಾಕಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ಮಾತು- ಮಾತೆಂಬುದೇ ಅವರ ಬಂಡವಾಳವಾಯಿತು. ಜಾಹಿರಾತುದಾರರು ಟಿವಿ ಹಿಡಿತಕ್ಕೆ ಸಿಗದ ಗ್ರಾಹಕರನ್ನು ರೇಡಿಯೊ ಮೂಲಕ ತಲುಪಿದರು. -ಇವೆಲ್ಲ ಖಾಸಗಿ ರೇಡಿಯೋಗಳ ಬಗೆಗಿನ ಒಳ್ಳೆಯ ಮಾತುಗಳಾದವು.

ಬೆಂಗಳೂರಿನಲ್ಲಿ ಮೊದಲ ಖಾಸಗಿ ರೇಡಿಯೊ ವಾಹಿನಿ 'ರೇಡಿಯೊ ಸಿಟಿ' ಪ್ರಾರಂಭವಾದಾಗ ಅದರಲ್ಲಿ ಕನ್ನಡದ ತಾತ್ಸಾರವಾಗುತ್ತಿದೆಂಬುದು ಬಹುಬೇಗ ಎಲ್ಲರ ಗಮನಕ್ಕೆ ಬಂತು. ಮಿಸ್‌ ಲಿಂಗೋಲೀಲ ಹೆಸರಿನಲ್ಲಿ ಕನ್ನಡದ ಅವಹೇಳನಕ್ಕೂ ಅದು ಮುಂದಾಯಿತು. ಇದರ ವಿರುದ್ಧ ಪ್ರತಿಭಟನೆಗಳಾದವು. ಆದರೆ ರೆಡಿಯೋ ಸಿಟಿಯ ಇಂಗ್ಲಿಷ್‌ ಮಾತು, ಹಗಲಿನ ಹಿಂದಿ ಹಾಡುಗಳು, ರಾತ್ರಿಯ ಪಾಶ್ಚಾತ್ಯ ಹಾಡುಗಳನ್ನು ಕೇಳುವುದರಲ್ಲಿ ಮೈಮರೆತಿದ್ದ ಕನ್ನಡಿಗರಿಗೆ ಚಳುವಳಿ-ಪ್ರತಿಭಟನೆಗಳು ವ್ಯರ್ಥ ಚಟುವಟಿಕೆಗಳಂತೆ ಕಂಡವು.

ರೇಡಿಯೊ ಸಿಟಿಯ ವಿರುದ್ಧ ಜನಾಭಿಪ್ರಾಯವೊಂದು ರೂಪುಗೊಳ್ಳಲೇ ಇಲ್ಲ. ರೇಡಿಯೊ ಸಿಟಿಯ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಬೆಂಬಲ ಕ್ರೋಡೀಕರಣದ ಯತ್ನವೂ ನೆಡೆಯಲಿಲ್ಲ. ರೇಡಿಯೊ ಸಿಟಿ ಕನ್ನಡವನ್ನು 'ಚೌ-ಚೌ ಬಾತ್‌' ಮಾಡಿತು. ಆಗಾಗ್ಗೆ ತಮಿಳು ಹಾಡುಗಳನ್ನು ಪ್ರಸರಿಸುವ ಉದ್ಧಟತನವೂ ನೆಡೆಯಿತು. ರೇಡಿಯೊ ಸಿಟಿ ಕನ್ನಡಿಗರ ನಿರಭಿಮಾನವನ್ನು ಚೆನ್ನಾಗಿಯೇ ಬಳಸಿಕೊಂಡಿತು. ಪ್ರತಿಭಟನೆಗಿಳಿದಿದ್ದವರು ಕಾವು ಆರಿದಂತೆ ಸುಮ್ಮನಾದರು. ರೇಡಿಯೋ ಸಿಟಿಯ ದೈನಂದಿನ ಕಾರ್ಯಕ್ರಮಗಳಲ್ಲಿ ಕನ್ನಡ ಇರಲಿಲ್ಲ ಮತ್ತು ಇಂದಿಗೂ ಇಲ್ಲ.

ಈಗ ರೇಡಿಯೊ ಮಿರ್ಚಿ 'ಸಕತ್‌ ಹಾಟ್‌ ಮಗಾ..' ಎಂದು ಕೂಗುತ್ತ ಬಂದಿದೆ. ಕನ್ನಡದ ನಟರಿಗೆ ಈ ಕೂಗು ರತ್ನನ ಪದದಂತೆ ಕೇಳಿಸಿದೆ. ಪುನೀತು, ಉಪೇಂದ್ರ, ಹಿರಣ್ಣಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು 'ರೇಡಿಯೋ ಮಿರ್ಚಿ ಕೇಳಿ, ನಾನೂ ಇದನ್ನೇ ಕೇಳೋದು. ಸಕತ್‌ ಹಾಟ್‌ ಮಗಾ..' ಎಂದು ಯಾವುದೇ ನಾಚಿಕೆಯಿಲ್ಲದೆ ತಮ್ಮ ಧ್ವನಿಯನ್ನು ಕೊಟ್ಟು ಆನಂದಿಸುತ್ತಿದ್ದಾರೆ.

ರೇಡಿಯೊ ಮಿರ್ಚಿ ಹಿಂದಿ ಹಾಡುಗಳ ಮಧ್ಯೆ ಇವರ ಧ್ವನಿಯನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದೆ. ರೇಡಿಯೋ ಮಿರ್ಚಿಯಲ್ಲಿ ನಿರೂಪಣೆಯೆಂಬುದು ಅರೆಬರೆ 'ಕನ್ನಡ' ಎಂಬುದನ್ನು ಬಿಟ್ಟರೆ ಎಲ್ಲಾ ಕಾರ್ಯಕ್ರಮಗಳೂ ಹಿಂದಿ ಇಂಗ್ಲಿಷ್‌ಮಯವಾಗಿವೆ. ಕನ್ನಡ ಹಾಡುಗಳಿಲ್ಲಿ ನಿಷಿದ್ಧ. ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದರೂ ಕಂಗ್ಲೀಷ್‌ನಲ್ಲಿ ಮಾತನಾಡುವವರಿಗೆ ಮಾತ್ರ ಪ್ರಾಮುಖ್ಯತೆ. ತಮಿಳುನಾಡಿನಲ್ಲಿ ತಮಿಳಿನ ಹಾಡುಗಳನ್ನು ಪ್ರಸಾರ ಮಾಡುವ ರೇಡಿಯೋ ಮಿರ್ಚಿ ಇಲ್ಲಿಯೂ ಮುಂದೆ ತಮಿಳಿನ ಹಾಡುಗಳನ್ನು ಪ್ರಸಾರ ಮಾಡಬಹುದು

ಕನ್ನಡವೆಂಬುದು ರೇಡಿಯೊ ಸಿಟಿಯ ಎದುರು ಒಂದು ಬಾರಿ ಸೋತಿತ್ತು. ಈಗ ಮತ್ತೊಮ್ಮೆ ಸೋಲುತ್ತಿದೆ. ಈಗ ಕನ್ನಡವನ್ನು ಮಣಿಸುವ ಕೆಲಸಕ್ಕೆ ಕನ್ನಡ ಚಿತ್ರರಂಗದವರ ಅಧಿಕೃತ ಬೆಂಬಲ ಸಿಕ್ಕಿದೆ. ಅವರ ಅಣಿಮುತ್ತುಗಳು ರೇಡಿಯೊ ಮಿರ್ಚಿಯಲ್ಲಿ ನಿಯಮಿತವಾಗಿ ಪ್ರಸಾರವಾಗುತ್ತಿವೆ.

'ಮೋರೆ'ಗಳಿಗೆ ಮಸಿ ಬಳಿದು ವೀರರಾದವರು, ಕನ್ನಡಕ್ಕಾಗಿ ಪ್ರತ್ಯೇಕ ಪಕ್ಷ ಬೇಕೆಂದು ಒರಲುವವರು, ಕನ್ನಡದ 'ಹುಟ್ಟು ಹೋರಾಟಗಾರ'ರೆಂಬ ವಿಶೇಷಣವನ್ನು ಅಂಟಿಸಿಕೊಂಡಿರುವವರು, ಕನ್ನಡವನ್ನು ಕಾಯುವ ಕೆಲಸ ಮಾಡಬೇಕಾದ ಕನ್ನಡ ಮಾಧ್ಯಮಗಳವರು ಈಗಲೂ ಸುಮ್ಮನಿದ್ದಾರೆ. ಯಾಕೆಂದು ಕೇಳಿದವರಿಗೆ ನಾವು ರೇಡಿಯೊ ಕೇಳುವುದಿಲ್ಲ. ನೀವೂ ಕೇಳಬೇಡಿ ಅಷ್ಟೆ ಎನ್ನುತ್ತಾರೆ. ಇದು ಪಲಾಯನವಾದವಲ್ಲದೆ ಬೇರೇನೂ ಅಲ್ಲ. ಖಾಸಗಿವಾಹಿನಿಗಳ ಜಾಡು ಹಿಡಿದಿರುವ ಸರ್ಕಾರಿವಾಹಿನಿ ಎಫ್‌.ಎಮ್‌.ರೈನ್‌ಬೊ ಕೂಡ ತನ್ನ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಪ್ರತಿಶತ 50ರಷ್ಟು ಕಡಿಮೆ ಮಾಡಿ ಹಿಂದಿ, ಇಂಗ್ಲೀಷ್‌ಗೆ 'ಮೀಸಲಾತಿ' ಸೃಷ್ಟಿಸಿದೆ.

ಯಾವುದೇ ಹೊಸ ಚಿತ್ರದ ಬಗ್ಗೆ ಜನರಿಗೆ ಕುತೂಹಲ ಹುಟ್ಟುವಂತೆ ಮಾಡಬೇಕೆಂದರೆ ಅದರ ಹಾಡುಗಳನ್ನು ಪದೇ ಕೇಳಿಸುವ ತಂತ್ರವೊಂದು ಜಾರಿಯಲ್ಲಿದೆ. ಇದು ಕನ್ನಡ ಚಿತ್ರರಂಗದವರಿಗೆ ತಿಳಿದಿಲ್ಲವೆಂದೇನೂ ಅಲ್ಲ. ಇದೇ ರೇಡಿಯೊ ಮಿರ್ಚಿ ಚೆನ್ನೈನಲ್ಲಿ ಹೊಸಹೊಸ ತಮಿಳು ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ತಮಿಳರಿಗೆ ಹಿಂದಿಯನ್ನು ಉಣಬಡಿಸುವ ಕೆಲಸ ಯಾವ ಮಿರ್ಚಿಗಳಿಂದಲೂ ಆಗದು. ಅದು ತಮಿಳರ ಅಭಿಮಾನವೆನ್ನಿ, ದುರಭಿಮಾನವೆನ್ನಿ-ಕನ್ನಡಿಗರಿಗೆ ಅದೂ ಇಲ್ಲ.

ಈಗ ಮತ್ತೊಮ್ಮೆ 'ರೇಡಿಯೋಗಳಲ್ಲಿ ಕನ್ನಡ'ದ ವಿಷಯ ಚರ್ಚೆಗೆ ಬರುತ್ತಿದೆ. ಪ್ರತಿಭಟನೆಯ ದನಿಗಳು ಸಣ್ಣಗೆ ಕೇಳಿಸುತ್ತಿವೆ. ಜನಾಭಿಪ್ರಾಯವೊಂದನ್ನು ರೂಪಿಸಲು ಇದು ಸಕಾಲವಾಗಿದೆ.

ಇದೇ ಸಂದರ್ಭದಲ್ಲಿ ಕನ್ನಡಿಗರ ಹಂಗಿನಲ್ಲಿರುವ ಕನ್ನಡ ಚಿತ್ರರಂಗದವರಿಗೊಂದು ಪಾಠ ಕಲಿಸಬೇಕಿದೆ. ಅಣ್ಣಾವ್ರ ಸಾವಿನ ಜೊತೆಯಲ್ಲಿಯೇ ಚಿತ್ರರಂಗದವರ(ಅವರ ಮಕ್ಕಳೂ ಸೇರಿದಂತೆ) ಕನ್ನಡಾಭಿಮಾನ ಮರೆಯಾಯಿತೆ ಎಂಬುದು ಸ್ಪಷ್ಟವಾಗಬೇಕಾಗಿದೆ.

ಜಾಣರಾದರೆ ಅವರು ರೇಡಿಯೋ ಮಿರ್ಚಿಯ ಜೊತೆಗಿನ ತಮ್ಮ ಸಂಬಂಧವನ್ನು ಕಳಚಿಕೊಳ್ಳುತ್ತಾರೆ. ಮುಖ್ಯವಾಗಿ ಜಡ್ಡುಗಟ್ಟಿರುವ ಕನ್ನಡದ ಮನಸ್ಸುಗಳು ಮೈಕೊಡವಿಕೊಂಡು ಮೇಲೇಳಬೇಕಿದೆ. 'ಕನ್ನಡ'ವನ್ನು ಟಿವಿಗಿಂತ ಚೆನ್ನಾಗಿ ರೇಡಿಯೊದಲ್ಲಿ ಜನಕ್ಕೆ ತಲುಪಿಸಬಹುದೆಂಬುದನ್ನು ಅರಿಯಬೇಕಾಗಿದೆ. ಬಿ.ಎಂ.ಟಿ.ಸಿ.ಬಸ್ಸುಗಳಲ್ಲಿ ಮಾತ್ರ ಉಳಿದುಕೊಂಡಿರುವ ಕನ್ನಡವನ್ನು ಬೆಂಗಳೂರಿನಲ್ಲೆಡೆ ಒಂದು 'ಅಗತ್ಯ'ವನ್ನಾಗಿ ಮಾಡಬೇಕಿದೆ.

ನಾರಾಯಣಗೌಡರಂಥವರು ರೇಡಿಯೋ ಸಿಟಿ, ಮಿರ್ಚಿಗಳಿಗೆ ಮಸಿ ಬಳಿಯುವ ಧೈರ್ಯ ಮಾಡಬೇಕಾಗಿದೆ. ವಾಟಾಳರಂಥವರು ಕನ್ನಡ ಹೋರಾಟವೆಂಬ ವಿಶೇಷಣಕ್ಕೆ ಅರ್ಥ ನೀಡಬೇಕಿದೆ. ಕನ್ನಡಕ್ಕಾಗಿ ಪಕ್ಷ ಕಟ್ಟುವವರು ಮೊದಲು ಕನ್ನಡವನ್ನು ಕಟ್ಟಬೇಕಿದೆ.

ಹಾಗೆಯೇ 'ಹಿಂದಿ ಹೇರಿಕೆಯ' ವಿರುದ್ಧ ಆಂದೋಲನ ತಮಿಳುನಾಡಿನ ಮಾದರಿಯಲ್ಲಿ ರೂಪುಗೊಳ್ಳಬೇಕಿದೆ. ಅಂತಿಮವಾಗಿ ರೇಡಿಯೊ ಸಿಟಿ, ಮಿರ್ಚಿಗಳಿಗೆ ಕನ್ನಡವನ್ನು ಅರ್ಥ ಮಾಡಿಸುವ ಕೆಲಸದಲ್ಲಿ ಎಲ್ಲರೂ ಒಂದಾಗಬೇಕಿದೆ.

ನಿಮ್ಮ ಹಕ್ಕೊತ್ತಾಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ... ಸಹಿ ಹಾಕಿ... ಎಚ್ಚರಿಕೆ ರವಾನಿಸಿ!

English summary
Why dont the FM Station Radio City and Radio Mirchi in Bangalore care about Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X