ನಮಸ್ಕಾರ ಸಂಸ್ಕೃತಿಯ ಬಗೆಗೊಂದು ಜಿಜ್ಞಾಸೆ
ಕೈಮುಗಿದ ಭಂಗಿಯನ್ನು ‘ಅಂಜಲಿ’ ಅನ್ನೋಣವೇ? ಅಥವಾ ‘ಬೊಗಸೆ’ ಅನ್ನೋಣವೇ?-ಕುತೂಹಲಕರವಾದ ಈ ಪ್ರಶ್ನೆ ಅರ್ಥಪೂರ್ಣ ಚರ್ಚೆಗೆ ಗ್ರಾಸವಾಗಿದೆ.
ನೀವು ಬರೆದ ‘ನಮಸ್ಕಾರ’ ಕುರಿತ ಪ್ರಬಂಧದಲ್ಲಿ ಒಂದು ಸೂಕ್ಷ್ಮ ತಿದ್ದುಪಡಿ ತಿಳಿಸಲು ಬಯಸುತ್ತೇನೆ.
‘ಹೃದಯದ ಮಟ್ಟದಲ್ಲಿ ಕೈಮುಗಿದು ನಿಂತ ಭಂಗಿಯೇ ‘ಅಂಜಲಿ’ ಎಂದು ಅರ್ಥ ಬರುವಂತಿದೆ ನಿಮ್ಮ ವ್ಯಾಖ್ಯೆ. ಬೊಗಸೆ ಎಂಬ ಕನ್ನಡ ಪದವನ್ನೂ ಬಳಸಿದಿರಿ, ಆದರೆ ಕೈಮುಗಿದರೆ ಅದು ಬೊಗಸೆಯಾಗುವುದಿಲ್ಲ ! ಬೊಗಸೆ (ಅಥವಾ ಅಂಜಲಿ ಎಂದರೂ) ಎರಡು ಕೈಗಳನ್ನು (ಅಂಗೈ ಮೇಲಾಗಿ) ಒಂದರ ಪಕ್ಕ ಒಂದು ಹಿಡಿದಾಗ ಅದೊಂದು ಪಾತ್ರೆ, ಬೋಗುಣಿ, ಬಟ್ಟಲಿನ ತರಹ, ವಸ್ತುವನ್ನು ಹಿಡಿದಿಡಲು ಸಮರ್ಥವಾಗುತ್ತದೆ ನೋಡಿ, ಅದು! ಇಲ್ಲಿ ಒಂದು ಚಿತ್ರವನ್ನು ಲಗತ್ತಿಸಿದ್ದೇನೆ, ‘ಬೊಗಸೆ’ ಅಥವಾ ‘ಅಂಜಲಿ’ಯನ್ನು ಸಂಕೇತಿಸುವಂಥದು.
ಇನ್ನೂ ವಿಮರ್ಶೆ ಬೇಕೆಂದರೆ, ‘ತಿಲಾಂಜಲಿ’ ಎಂಬ ಪದಪ್ರಯೋಗವಿದೆಯಲ್ಲ? ಉತ್ತರ ಕ್ರಿಯೆಗಳಲ್ಲೊಂದಾದ ಇದರ ಅರ್ಥ, ಬೊಗಸೆಯಲ್ಲಿ ಎಳ್ಳು-ನೀರು ಹಿಡಿದು ತರ್ಪಣ ಕೊಡುವುದು. ಹೃದಯದ ಮಟ್ಟದಲ್ಲಿ ಕೈಮುಗಿದು ನಿಂತರೆ ಆ ಕೈಗಳಲ್ಲಿ ಎಳ್ಳು-ನೀರು ಹಿಡಿಯುವುದು ಅದು ಹೇಗೆ ಸಾಧ್ಯ?
ಒಂದು ಯಕ್ಷಗಾನ ಪ್ರಸಂಗದಲ್ಲಿ ‘ಅಂಜಲಿಯುದಕವನು ಬಿಸಾಡದೆ ಕಂಜದಳಾಕ್ಷವನು...’ ಅಂತೇನೊ ಒಂದು ಪದ್ಯ ಕೇಳಿದ ನೆನಪಿದೆ. ಅಲ್ಲೂ ಅಷ್ಟೇ, ಅರ್ಘ್ಯ ಕೊಡಲು ನೀರನ್ನು ಬೊಗಸೆ (ಅಂಜಲಿ)ಯಲ್ಲಿ ಹಿಡಿದ ಬಗ್ಗೆ ಉಲ್ಲೇಖ.
ಇನ್ನು ಕಾವ್ಯಾಂಜಲಿ, ಗೀತಾಂಜಲಿ, ಶೃದ್ಧಾಂಜಲಿ -ಇವೆಲ್ಲದರಲ್ಲೂ ಭಕ್ತಿಪೂರ್ವಕ ನಮನಗಳು ಧ್ವನಿತವಾಗುತ್ತವಾದರೂ‘ಬೊಗಸೆಯಲ್ಲಿ ಅರ್ಪಣೆ’ಯ ಭಾವ ಇನ್ನೂ ಹೆಚ್ಚು ಸ್ಫುಟವಾಗಿ ಇರುವುದು.
ಕೊನೆಯಲ್ಲಿ, ಇನ್ನೂ ಒಂದು ಆಸಕ್ತಿಕರ ಸಂಗತಿ ಎಂದರೆ, ನಮ್ಮ ಚಿತ್ಪಾವನಿ ಮರಾಠಿ ಭಾಷೆಯಲ್ಲಿ ‘ಬೊಗಸೆ’ಗೆ ಸಮಾನಾರ್ಥಕ ಪದ ‘ಉಂಜಳಿ’ (ಅದು ‘ಅಂಜಲಿ’ಯಿಂದಲೇ ಬಂದದ್ದು ಎಂದು ಬೇರೆ ಹೇಳಬೇಕಿಲ್ಲ!)
ಇದಿಷ್ಟು ‘ಅಂಜಲಿ’ ಪದದ ಬಗ್ಗೆ ವಿಮರ್ಶಾಂಜಲಿ )
-ಶ್ರೀವತ್ಸ ಜೋಶಿ
[email protected]
***
ಜೋಶಿಯವರೇ,
‘ಬೊಗಸೆ’ ಪದದ ಬಗ್ಗೆ ನಿಮ್ಮ ವಿವರಣೆ ನನಗೆ ತೃಪ್ತಿ ತರದಿದ್ದುದರಿಂದ, ಆ ಬಗ್ಗೆ ಮತ್ತಷ್ಟು ಚರ್ಚೆ ನಡೆಯಲಿ...
ಸುಧಾ, ಮಯೂರದಲ್ಲಿ ಚಿತ್ರಿಸುತ್ತಿದ್ದ ಹೆಣ್ಣಿನ ಪಾತ್ರಗಳ ಕಣ್ಣುಗಳ ನೆನಪಿದೆಯೇ? ಆಕೆ ಬೊಗಸೆ ಕಂಗಳ ಚೆಲುವೆ. ಆದರೆ ಅದು ನೀವು ತೋರಿಸಿರುವ ‘ಬೊಗಸೆ’ಯಲ್ಲ. ಆಗ ಅವರು ವಿಶಾಲಾಕ್ಷಿಯರಾಗಬೇಕಾಗುತ್ತದೆ! ಮೀನಿನ ಆಕಾರದಲ್ಲಿರುವ ಆ ಕಣ್ಣುಗಳು ‘ನಮಸ್ತೆ’ ಎನ್ನುವಾಗ ಜೋಡಿಸಿದ ಕೈಗಳ ಆಕಾರವಿರುವುದಿಲ್ಲವೇ?
-ಕೆ. ತ್ರಿವೇಣಿ ಶ್ರೀನಿವಾಸರಾವ್
[email protected]
ಎಂಗೈತೆ ಸೇರಿಗೆ ಸವ್ವಾಸೇರು? ನೀವೇನಂತೀರಾ?
ಇದನ್ನೂ ಓದಿ












Click it and Unblock the Notifications