ಕನ್ನಡ ಬರವಣಿಗೆ ಪ್ರಜಾಪ್ರಭುತ್ವದ ಬೇರುಗಳಿಗೆ ಹತ್ತಿರವಾದದ್ದು
ಇತ್ತೀಚಿನ ಆಂಗ್ಲ ಮತ್ತು ಕನ್ನಡ ಬರಹ : ಒಂದು ನೋಟ -ಇದು ಕೇವಲ ಕನ್ನಡ-ಕರ್ನಾಟಕದ ಚರ್ಚೆಯಲ್ಲ. ಎಲ್ಲಾ ಭಾರತೀಯ ಭಾಷೆಗಳಿಗೆ ಮತ್ತು ಬರಹಗಾರರಿಗೆ ಸಂಬಂಧಿಸಿದ ಚರ್ಚೆ. ಜಾಗತೀಕರಣದ ಕರಾಳ ಹಸ್ತಗಳು ಸಾಹಿತ್ಯಲೋಕದತ್ತ ಧಾವಿಸುತ್ತಿರುವ ಬಗ್ಗೆ ಇದೊಂದು ಮುನ್ನೋಟ. ಈ ನೋಟದಲ್ಲಿ ನೋಟ ಬೆರೆಸಿದವರಿಗೆ ಲೇಖಕರ ಧನ್ಯವಾದ.
ಜಾಗತೀಕರಣದ ಸಂದರ್ಭದಲ್ಲಿ ಇತ್ತೀಚಿನ ಕನ್ನಡದ ಬರವಣಿಗೆಯ ಬಗ್ಗೆ ಆರೋಗ್ಯಕರ ಚರ್ಚೆ ಸಾಧ್ಯವಾದೀತೆ ಇಲ್ಲವೆ ಎಂಬ ಆತಂಕದೊಂದಿಗೆ ಬರೆದ ಲೇಖನಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು ನನಗೆ ನಿಜಕ್ಕೂ ಸಂತೋಷ ತಂದಿವೆ.
ಈ ಅನುಭವದಿಂದ ವೈಚಾರಿಕ ಬರವಣಿಗೆಯ ಬಗೆಗೂ, ವಿಮರ್ಶಾ ಬರಹದ ಬಗೆಯೂ, ಎಲ್ಲಕ್ಕಿಂತ ಹೆಚ್ಚಾಗಿ ಲಲಿತ ಪ್ರಬಂಧಗಳ ಬಗೆಯೂ ಓರ್ವ ಹೊಸ ಬರಹಗಾರನಾಗಿ ಹಲವು ಪಾಠಗಳನ್ನು ಕಲಿಯುವಂತಾಗಿದೆ.
ಮುಖ್ಯವಾಗಿ ಗಂಭೀರ ಚಿಂತಕರು ಲಲಿತ ಪ್ರಬಂಧಗಳನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬಾರದೆಂಬುದು ಒಂದು ಪಾಠವಾದರೆ, ಇನ್ನೊಂದು ಪಾಠವು ಲಲಿತ ಪ್ರಬಂಧಕಾರರು ಗಂಭೀರ ವಸ್ತುಗಳನ್ನು ಸಲೀಸಾಗಿ ತೆಗೆದುಕೊಳ್ಳದಿರಲಿ ಎಂಬುದೂ ಆಗಿದೆ ಎಂದು ಧೃಡಪಡಿಸಬಯಸುತ್ತೇನೆ.
ಸುಮಂಗಲಾ ಮತ್ತು ಶಿವಕುಮಾರ್ ಇವರಿಬ್ಬರೂ ನನ್ನ ಲೇಖನದ ಆಶಯಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ. ಸುಮಂಗಲಾ ಅವರು ಸೂಕ್ಷ್ಮ, ಸಂವೇದನಾಶೀಲ ಬರಹಗಾರರು ಎಂದು ಈಗಾಗಲೇ ಸಾಹಿತ್ಯಲೋಕದಲ್ಲಿ ಮನ್ನಣೆಗಳಿಸಿದವರು. ಅವರ ಇದಿರೇಟುಗಳನ್ನೂ, ಸಲಹೆಗಳನ್ನೂ ವಿನಮ್ರತೆಯಿಂದ ಸ್ವೀಕರಿಸುತ್ತೇನೆ.
ಆದರೆ ಬರವಣಿಗೆಯಲ್ಲಿ ಕಂಡ ಎಳೆಗಳನ್ನು ಎಚ್ಚರಿಕೆಯ ದೃಷ್ಟಿಯಿಂದ ಕೊಂಚ ದೊಡ್ಡದಾಗಿ ವಾಚಕ ಪ್ರಪಂಚದೆದುರು ಇಡುವ ಅವೈಜ್ಞಾನಿಕತೆಗೆ ಸಾಹಿತ್ಯದಲ್ಲಿ ಸ್ವಾತಂತ್ರ್ಯ ಇದೆ ಎಂದುಕೊಳ್ಳುತ್ತೇನೆ. (ಸಾಹಿತ್ಯದಲ್ಲಿಯೂ ಒಂದು ಮಿತಿಯ ಶಿಸ್ತನ್ನು ಒಪ್ಪುತ್ತೇನಾದರೂ, ಅಲ್ಲಿಯೂ ನೀವು ಅತಿವೈಜ್ಞಾನಿಕತೆ ತಂದರೆ, ವಿಜ್ಞಾನಿಗಳಲ್ಲಿನ ಸಾಹಿತಿ ಎಲ್ಲಿ ಓಡಿಹೋಗಬೇಕು?)
ಶಿವಕುಮಾರ್ ಅವರು ನನ್ನ ಬರಹದ ಸ್ಥೂಲ ಉದ್ದೇಶವನ್ನು ಗುರುತಿಸಿದ್ದಾರೆ. ಅವರಿಗೂ ಕೂಡಾ ನಾನು ಋಣಿಯಾಗಿದ್ದೇನೆ. ವಸುಧೇಂದ್ರ ಮತ್ತು ರಷ್ದೀ ಬರಹ ಎರಡೂ ಒಂದೇ ಮಾದರಿಯೆಂದು ಖಡಾಖಂಡಿತವಾಗಿ ಲೇಖನದಲ್ಲಿ ಎಲ್ಲೂ ಹೇಳಲಾಗಿಲ್ಲ.
ಆ ಸೂಕ್ಷ್ಮ ವ್ಯತ್ಯಾಸ, ಎಚ್ಚರಿಕೆಯನ್ನು ಲೇಖನದಲ್ಲಿ ಕಾಯ್ದುಕೊಳ್ಳಲಾಗಿದೆ. ಒಟ್ಟಾರೆಯಾಗಿ ಕನ್ನಡದ ಬರವಣಿಗೆ ಪ್ರಜಾಪ್ರಭುತ್ವದ ಬೇರುಗಳಿಗೇ ಹತ್ತಿರವಾದದ್ದು ಎಂಬ ಧ್ವನಿಯೇ ಲೇಖನದಲ್ಲಿ ಪ್ರಮುಖವಾಗಿದೆ ಎಂದುಕೊಂಡಿದ್ದೇನೆ.
ವಸುಧೇಂದ್ರರ ಬರಹದಲ್ಲಿ ನನಗೆ ಕಂಡುಬಂದ ಎಳೆಯೂ ಸೇರಿದಂತೆ, ಕೆಲವು ಅಧುನಿಕವಾದಿ ಲೇಖಕರ ಧ್ವನಿಯಲ್ಲಿ ಕಾಣುವ ಆಕಾಂಕ್ಷೆ, ಆಶಾವಾದಿತ್ವವನ್ನು ನಾವು ಹೇಗೆ ಸ್ವೀಕರಿಸಬೇಕೆಂಬುದರ ಕುರಿತು ಇನ್ನಷ್ಟು ವಿಸ್ತಾರವಾದ, ಕಾಳಜೀಪೂರ್ಣ ಚರ್ಚೆಯಾಗಲಿ ಎಂಬುದಷ್ಟೇ ಇಲ್ಲಿನ ಆಶಯವಾಗಿದೆ.
-ಸುದರ್ಶನ ಪಾಟೀಲಕುಲಕರ್ಣಿ, ಮುಂಬಯಿ.
ಈ ಬಗ್ಗೆ ನಿಮಗೇನನ್ನಿಸಿತು? ಎರಡು ಸಾಲು ಬರೆಯಿರಿ...
ಪೂರಕ ಓದಿಗೆ :
ಸಾಹಿತ್ಯ ವಯಲದ ಸುತ್ತ ಜಾಗತೀಕರಣದ ಹುತ್ತ !
ಸಾಹಿತ್ಯ ವಲಯದಲ್ಲಿ ಜಾಗತೀಕರಣದ ಕರಿನೆರಳು!
ಇತ್ತೀಚಿನ ಆಂಗ್ಲ ಮತ್ತು ಕನ್ನಡ ಬರಹ : ಒಂದು ನೋಟ












Click it and Unblock the Notifications