ಕಣ್ಣಾಸ್ಪತ್ರೆಗಾಗಿ ಬೃಂದಾವನದಿಂದ ದೇಣಿಗೆ ಸಂಗ್ರಹ
ಶಿಕಾಗೋ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮೆರವಣಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೃಂದಾವನದ ಸದಸ್ಯರು ಹುರುಪಿನಿಂದ ಭಾಗವಹಿಸಿದ್ದಲ್ಲದೆ ಅಲ್ಲಿ ನೆರೆದಿದ್ದ ಕನ್ನಡಿಗರಿಂದ ದೇಣಿಗೆಯನ್ನು ಸಂಗ್ರಹಿಸಿ ಶಂಕರ್ ಐ ಫೌಂಡೇಷನ್ ಗೆ ದಾನವಾಗಿ ನೀಡಿದೆ.
ಆಗಸ್ಟ್ 30ರಂದು ಶನಿವಾರ ಬೆಳಗ್ಗೆ ನಡೆದ ಮೆರವಣಿಗೆಯಲ್ಲಿ ಬೃಂದಾವನದ ಸದಸ್ಯರು ಶಿಕಾಗೊ ರಸ್ತೆಯಲ್ಲಿ ಜಾತ್ರೆಯನ್ನೇ ನಡೆಸಿಬಿಟ್ಟರು. ಮಾಲಿನಿ ಹಾಗು ರಘು ಮೂರ್ತಿ ದಂಪತಿಗಳು ಕಟ್ಟಿದ್ದ ದೇವರ ತೇರು, ತೇರಿನ ಮುಂದೆ ಊರಿನ ಗೌಡ ಗೌಡತಿ ಯಾಗಿ ಬೆನ್ ಹಾಗು ಹೇಮ ಕಾಂತರಾಜು, ಬೊಂಬೆ ಮಾರುವವನಾಗಿ ಮಧು ರಂಗಯ್ಯ, ಬಳೆಗಾರ ಚೆನ್ನಯ್ಯನಾಗಿ ಪ್ರಸನ್ನ ಕುಮಾರ್, ಕೊರವಂಜಿಯಾಗಿ ಸೀಮ ಮೂರ್ತಿ, ಕಡ್ಲೆಪುರಿ ಮಾರುವವರಾಗಿ ಚಂದ್ರಾವಳಿ ಮೋಹನ್ ಹಾಗು ಕಡ್ಲೆಕಾಯಿ ಮಾರುವವಳಾಗಿ ಬೃಂದಾವನದ ಅಧ್ಯಕ್ಷೆ ಉಷ ಪ್ರಸನ್ನ್ ಕುಮಾರ್ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮವನ್ನು ರಂಜಿಸಿದರು.
ಸೀಮ ಕೊರವಂಜಿಯಾಗಿ ಕಣಿ ಹೇಳಿ ಹಾಗು ಉಷ ಕಡ್ಲೆಕಾಯಿ ಮಾರಿ ಸುಮಾರು 400 ಡಾಲರ್ ಶೇಖರಿಸಿದರು. ಅಲ್ಲದೆ, ಆಗಸ್ಟ್ 2ರಂದು ನಡೆದ ಬೃಂದಾವನ ವಿಹಾರದಲ್ಲಿ ಯಕ್ಷಗಾನ ಮುಖವಾಡದಲ್ಲಿ ಮುಖವಿಟ್ಟು ತೆಗೆದ ಫೋಟೊದಿಂದ ಸುಮಾರು 600 ಡಾಲರ್ ಶೇಖರಣೆ ಆಗಿತ್ತು. ಇವೆರಡನ್ನು ಸೇರಿಸಿ, ಬೃಂದಾವನ ಕನ್ನಡ ಕೂಟ, ಸಮ್ಮೇಳನದಲ್ಲಿ ಶಂಕರ ಐ ಫೌಂಡೇಷನ್ ಗೆ 1000ಡಾಲರನ್ನು ಶಿವಮೊಗ್ಗದಲ್ಲಿ ಆಸ್ಪತ್ರೆ ಕಟ್ಟಲು ಅನುವಾಗಲೆಂದು ನೀಡಿದೆ.
ನಾಟಕ ಡ್ಯಾಂಡಿಮ್ಯಾನ್ ರಿಟರ್ನ್ಸ್ : ಪಾರ್ಕಲ್ಲಿ ಸ್ಪಾರ್ಕ್ ಹಾಗು ಕೋಲಾಟ ನಡೆಯಿತು. ಎಲ್ಲ ಪಾತ್ರಗಳನ್ನು ಒಂದು ವಿಶಿಷ್ಟವಾದ ನವೀನ ರೀತಿಯಲ್ಲಿ 10 ವರ್ಷದ ಸಂಹಿತ ಮೂರ್ತಿ ಪರಿಚಯಿಸಿದ್ದು ಈ ನಾಟಕದ ಒಂದು ವಿಶೇಷ. ಭಾನುವಾರ ಮಧ್ಯಾಹ್ನ ಪ್ಯಾರಲಲ್ ಸ್ಟೇಜ್ ನಲ್ಲಿ ನಡೆದ ನೃತ್ಯ ನಾಟಕ 'ಉದಯನ ಹಾವಳಿ' ಪ್ರೇಕ್ಷಕರನ್ನು ಭಾವಪರವಶರನ್ನಾಗಿ ಮಾಡಿತು. 2006 ಬಾಲ್ಟಿಮೋರ್ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನಗೊಂಡ 'ಗುರುವಿಗೆ ನಮನ' ನೃತ್ಯ ರೂಪಕಕ್ಕೆ ದೊರೆತ ಪ್ರೋತ್ಸಾಹದಿಂದ ಉತ್ತೇಜಿತರಾದ ಕುಮಾರಿ ಸ್ನೇಹ ಪ್ರಸನ್ನ ಕುಮಾರ್ ಹಾಗು ಕುಮಾರಿ ವಿವಾಹ್ನಿ ಶಾಸ್ತ್ರಿ ಈ ಬಾರಿ ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟ ಹಾಗು ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಕೂಟದ 16 ಮಕ್ಕಳನ್ನು ಸೇರಿಸಿಕೊಂಡು 'ಉದಯನ ಹಾವಳಿ' ನೃತ್ಯ ನಾಟಕವನ್ನು ಪ್ರದರ್ಶಿಸಿದರು.
ಇತ್ತಿಚಿನ ಸಿನಿಮಾ ಹಾಡುಗಳ ತುಣಿಕಿಗೆ ಮೊದಲು 6 ಚಿಕ್ಕ ಮಕ್ಕಳು ತದನಂತರ 6 ಯುವಕರು ಮಾಡಿದ ನೃತ್ಯ ತುಂಬಾನೆ ಕಷ್ಟ ಪಟ್ಟು ಅತ್ಯಂತ ಮುತುವರ್ಜಿಯಿಂದ ಮಾಡಿದುದು ಕಂಡುಬಂದಿತು. ಮಧ್ಯದಲ್ಲಿ ಉಷ ಪ್ರಸನ್ನ, ಸೀಮ ಮೂರ್ತಿ, ವಿದ್ಯಾ ಮೂರ್ತಿ ಹಾಗೂ ಸವಿತ ರವಿಶಂಕರ್ ರವರ ಹಾಸ್ಯಮಯ ಸಂಭಾಷಣೆ ಹಾಗು ಪುಟ್ಟ ಮಕ್ಕಳಿಬ್ಬರ ಹುಟ್ಟಿದರೆ ಕೆಂಟಕಿಲಿ ಹುಟ್ಟಬೇಕು ಹಾಡು, ನೃತ್ಯ ನಾಟಕಕ್ಕೆ ಮತ್ತಷ್ಟು ರಂಗನ್ನು ನೀಡಿತು. 20 ನಿಮಿಷಗಳ ನೃತ್ಯ ನಾಟಕ ಮುಗಿದಾಗ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು.
ಈ ಬಾರಿ ಅಕ್ಕ ಹಾಗು ವಿದ್ಯಾರಣ್ಯ ಕನ್ನಡ ಕೂಟ, ವಿಶ್ವ ಸಮ್ಮೇಳನವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿತು. ಸಮ್ಮೇಳನವು ಯಶಸ್ವಿಯಾಗಿ ನಡೆಸಲು 2 ವರ್ಷ ಅವಿರತವಾಗಿ ದುಡಿದ ಎಲ್ಲ ಸ್ವಯಂಸೇವಕರಿಗು ಹಾಗು ಎಲ್ಲ ಸಮಿತಿಗಳ ಎಲ್ಲ ಸದಸ್ಯರಿಗು ಬೃಂದಾವನದ ಸಮಸ್ತ ಕನ್ನಡಿಗರಿಂದ ಹೃತ್ಪೂರ್ವಕ ವಂದನೆಗಳು.
ಬೃಂದಾವನದ ಮುಂದಿನ ಕಾರ್ಯಕ್ರಮ ಭಾನುವಾರ ಸೆಪ್ಟೆಂಬರ್ 14ರಂದು ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ M H Krepps School Auditorium, 5 Kent Lane, East Windsor, NJನಲ್ಲಿ ಗಣೇಶೋತ್ಸವ ಹಮ್ಮಿಕೊಂಡಿದೆ. ಸಾಮೂಹಿಕ ಗಣೇಶ ಪೂಜೆ, ಬೃಂದಾವನದ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು, ಸಾಹಿತ್ಯ (ಜಯಂತ್ ಕಾಯ್ಕಿಣಿ), ಸಂಗೀತ(ಗುರುಕಿರಣ್), ನೃತ್ಯ (ರಂಜಿನಿ ಎತ್ತಿಗೆ) ಹಾಗು ನಾಟಕ (ಟಿ ಎಸ್ ನಾಗಭರಣ ಹಾಗು ತಂಡ) ಗಣಪನ ಹಬ್ಬಕ್ಕೆ ಮೆರುಗನ್ನು ನೀಡಲಿವೆ. ಕೊನೆಯಲ್ಲಿ ಕಡಬು ಪ್ರಸಾದ ಹಾಗು ಹಬ್ಬದೂಟ ಯಾರೂ ತಪ್ಪಿಸಿಕೊಳ್ಳಬಾರದು.
ಹೆಚ್ಚಿನ ವಿವರಗಳಿಗೆ http://www.brindavana.org/ಗೆ ಭೇಟಿ ಕೊಡಿ.












Click it and Unblock the Notifications