ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ದಂಡು

By Staff
|
Google Oneindia Kannada News

KFCC president Jayamala to lead artists team to Chicago WKCಬೆಂಗಳೂರು, ಜು. 24 : ಆಗಸ್ಟ್ 29ರಿಂದ 31ರವರೆಗೆ ಅಮೆರಿಕಾದ ಶಿಕಾಗೊದಲ್ಲಿ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಮತ್ತು ವಿದ್ಯಾರಣ್ಯ ಕನ್ನಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ 15 ಜನರ ತಂಡವನ್ನು ಕಳುಹಿಸುತ್ತಿದೆ.

ಇಲ್ಲಿಯತನಕ ನಡೆದ ಸಮ್ಮೇಳನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿಬಾರಿ ಇಲಾಖೆಯ ಪರವಾಗಿ ಕಲಾವಿದರ ತಂಡವನ್ನು ಕಳಿಸುವ ಪರಿಪಾಠ ಇಟ್ಟುಕೊಂಡಿತ್ತು. ಈ ಬಾರಿಯ ವಿಶೇಷವೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಚಲನಚಿತ್ರ ಕಲಾವಿದರ ತಂಡವನ್ನು ಶಿಕಾಗೊಗೆ ಕಳುಹಿಸುತ್ತಿದೆ.

ಕೆಲ ದಿನಗಳ ಹಿಂದೆ ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 30 ಜನರ ಚಲನಚಿತ್ರ ಕಲಾವಿದರ ತಂಡವನ್ನು 'ಅಕ್ಕ' ಸಮ್ಮೇಳನಕ್ಕೆ ಕಳುಹಿಸುವುದಾಗಿ ವಾಗ್ದಾನ ನೀಡಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿದ್ದ 30 ಕಲಾವಿದರ ಪಟ್ಟಿಯಲ್ಲಿ 15 ಜನರನ್ನು ಅಮೆರಿಕಕ್ಕೆ ಕಳುಹಿಸಲು ಅನುಮೋದನೆ ನೀಡಿ ಕಟ್ಟಾ ತಮ್ಮ ವಾಗ್ದಾನವನ್ನು ಅರ್ಧದಷ್ಟು ಉಳಿಸಿಕೊಂಡಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಾಲಾ ಕಲಾವಿದರ ಪಟ್ಟಿಯನ್ನು ಕಟ್ಟಾ ಅವರಿಗೆ ಬುಧವಾರ ನೀಡಿದ್ದರು.

ಅಮೆರಿಕಕ್ಕೆ ತೆರಳಲು ಗ್ರೀನ್ ಸಿಗ್ನಲ್ ಪಡೆದಿರುವ ಪ್ರಮುಖ ಕಲಾವಿದರ ಪಟ್ಟಿ ಕೆಳಗಿನಂತಿದೆ.

ಡಾ. ಜಯಮಾಲಾ ರಾಮಚಂದ್ರ (ನಟಿ, ನಿರ್ಮಾಪಕಿ)
ಕೆಸಿಎನ್ ಚಂದ್ರಶೇಖರ್ (ನಿರ್ಮಾಪಕ)
ಕೆಸಿಎನ್ ಕುಮಾರ್ (ನಿರ್ಮಾಪಕ)
ಪ್ರಕಾಶ್ (ನಿರ್ದೇಶಕ : ಖುಷಿ, ರಿಷಿ, ಶ್ರೀ, ಮಿಲನ)
ಟಿಎನ್ ಸೀತಾರಾಮ್ (ಕಿರುತೆರೆ ನಿರ್ದೇಶಕ)
ಸಾ.ರಾ. ಗೋವಿಂದು (ನಿರ್ಮಾಪಕ)
ಶ್ರುತಿ (ನಟಿ)
ಥಾಮಸ್ (ಪ್ರದರ್ಶಕ)

ಇವರೆಲ್ಲರ ಜೊತೆಗೆ ವಿಶ್ವಕನ್ನಡಿಗರನ್ನು ರಂಜಿಸಲು ಮತ್ತು ಮಿನುಗಲು ಕನ್ನಡ ಚಿತ್ರರಂಗದ ಇತರ ತಾರೆಗಳ ದಂಡೇ ತುದಿಗಾಲಲ್ಲಿ ನಿಂತಿದೆ. ಉಪ್ಪಿ, ಪ್ರಿಯಾಂಕಾ, ಪುನೀತ್ ರಾಜಕುಮಾರ್, ಪೂಜಾ ಗಾಂಧಿ, ರಮೇಶ್ ಅರವಿಂದ್, ರಾಕ್‌ಲೈನ್ ವೆಂಕಟೇಶ್... ಜೊತೆಗೆ ತಮ್ಮ ಟ್ರೂಪ್‌ನೊಡನೆ ರಂಜಿಸಲು ಗುರುಕಿರಣ್ ಇದ್ದಾರೆ. ಗುರುಕಿರಣ್ ಕಳೆದ ಬಾರಿ ಬಾಲ್ಟಿಮೋರ್ ನಲ್ಲಿ ನಡೆದ ಸಮ್ಮೇಳನದಲ್ಲಿಯೂ ಸಭಿಕರನ್ನು ರಂಜಿಸಿದ್ದರು. ಟಿ.ಎಸ್.ನಾಗಾಭರಣ ಅವರ ತಂಡ 'ಜೋಕುಮಾರ ಸ್ವಾಮಿ' ನಾಟಕ ಪ್ರದರ್ಶಿಸಲಿದೆ. ಸಿ.ಅಶ್ವತ್ಥ್ ಅವರ 'ಕನ್ನಡವೇ ಸತ್ಯ' ತಂಡ ಅಮೆರಿಕನ್ನಡಿಗರನ್ನು ಸಂಗೀತದಲ್ಲಿ ಮುಳುಗಿಸಲು ಸಿದ್ಧವಾಗಿದೆ.

ಅಮೆರಿಕ, ಕೆನಡಾ ಮಾತ್ರವಲ್ಲ ವಿಶ್ವದ ಎಲ್ಲ ಮೂಲೆಗಳಿಂದ ಸಮ್ಮೇಳನಕ್ಕೆ ಬರುವ ಕನ್ನಡಿಗರಿಗೆ ತಮ್ಮ ನೆಚ್ಚಿನ ತಾರೆಗಳನ್ನು ಭೇಟಿ ಮಾಡಿ, ಕೈಕುಲುಕಿ, ಉಭಯಕುಶಲೋಪರಿ ವಿಚಾರಿಸುವ ಯೋಗ ಕೂಡಿಬಂದಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X