ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನದ ಉದ್ಘಾಟನೆ ಶುಕ್ರವಾರ ಸಂಜೆಯೇ!

By Staff
|
Google Oneindia Kannada News

ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್‌ 1ರಂದು ಶುಕ್ರವಾರ ಸಂಜೆ 5 ಗಂಟೆಗೇ ನಡೆಯುತ್ತದೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಿದ ನಂತರ ಸಮ್ಮೇಳನದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ.

ಈ ಹಿಂದಿನ ಸಮ್ಮೇಳನಗಳಲ್ಲಿ ಹೆಚ್ಚಾಗಿ ಶುಕ್ರವಾರ ಅನೌಪಚಾರಿಕ ಕಾರ್ಯಕ್ರಮಗಳು ಮಾತ್ರ ಇರುತ್ತಿದ್ದು ಶನಿವಾರ ಬೆಳಗ್ಗೆ ಮೆರವಣಿಗೆಯ ನಂತರ ಮುಖ್ಯ ಸಭಾಂಗಣದ ವೇದಿಕೆಯಲ್ಲಿ ದೀಪ ಬೆಳಗಿ ಸಮ್ಮೇಳನ ಉದ್ಘಾಟನೆ ನಡೆದುಬಂದ ಕ್ರಮ. ಈಬಾರಿ ಶುಕ್ರವಾರ ಸಂಜೆಯೇ ನುಡಿಹಬ್ಬದ ದೃಶ್ಯವೈಭವ ತೆರೆದುಕೊಳ್ಳುತ್ತದೆ.

H.D. Kumarswamyಅತಿಜನಪ್ರಿಯವೆಂದುಕೊಳ್ಳಲಾಗಿರುವ ‘ಹಾಸ್ಯೋತ್ಸವ ’ ಮತ್ತು ಈ ಸಮ್ಮೇಳನದ ವಿಶೇಷ ಆಕರ್ಷಣೆಯಾಗಿರುವ ‘ನೃತ್ಯ ನೃತ್ಯ ’ ಕಾರ್ಯಕ್ರಮಗಳೂ ಶುಕ್ರವಾರ ರಾತ್ರಿಯ ವೇಳಾಪಟ್ಟಿಯಲ್ಲೇ ಇವೆ. ಶನಿ-ಭಾನುವಾರಗಳಂದು ದಿನವಿಡೀ ಮುಖ್ಯವೇದಿಕೆಯಲ್ಲಿ ಮತ್ತು ಸಮಾನಾಂತರ ಅಧಿವೇಶನಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ದೂರದೂರುಗಳಿಂದ ಆಗಮಿಸುವ ಸಮ್ಮೇಳನಾರ್ಥಿಗಳು ಶುಕ್ರವಾರ ಸಂಜೆಯೇ ಉದ್ಘಾಟನಾ ಸಮಾರಂಭವೆಂಬುದನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಳ್ಳಬೇಕೆಂದು ಸಮ್ಮೇಳನ ಸಂಚಾಲಕರು ವಿನಂತಿಸಿದ್ದಾರೆ.

ಮಹಿಳಾಲೋಕದ ಕಾರ್ಯಕ್ರಮಗಳು :

ಯಶಸ್ವಿ ಪುರುಷನ ಹಿಂದೆ ಮಹಿಳೆಯ ಶ್ರಮವಿರುತ್ತದೆ... ಎನ್ನುತ್ತಾರೆ. ಈ ಸಲದ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಸಮಿತಿಗಳಲ್ಲಿ ಮಹಿಳೆಯರೂ ಸಕ್ರಿಯರಾಗಿರುವುದಷ್ಟೇ ಅಲ್ಲದೆ ಮಹಿಳೆಯರದೇ ಪ್ರತ್ಯೇಕ ಸಮಿತಿಯೂ ಇದೆ. ಈ ಸಮಿತಿಯು ಆಯೋಜಿಸಿರುವ ಮುಖ್ಯ ಕಾರ್ಯಕ್ರಮಗಳ ಪೈಕಿ ವಿಚಾರಗೋಷ್ಠಿಗಳು, ಭಾಷಣಗಳು, ಪ್ರಾತ್ಯಕ್ಷಿಕೆಗಳು ಮತ್ತು ಕಲಾಪ್ರದರ್ಶನಗಳು ಸೇರಿವೆ. ವೇದಿಕೆ ಮಹಿಳೆಯರದೇ ಆದರೂ ಪ್ರೇಕ್ಷಕರಾಗಿ ಪುರುಷರಿಗೂ ಆದರದ ಆಹ್ವಾನವಿದೆಯೆನ್ನಿ!

  • www.murthy.comನ ಪ್ರಖ್ಯಾತ ಇಮಿಗ್ರೇಷನ್‌ ಎಟಾರ್ನಿ ಶೀಲಾಮೂರ್ತಿ secrets of a successful CEO ಏನೆಂದು ತಿಳಿಸಲಿದ್ದಾರೆ.
  • ಡಾ. ಪ್ರೇಮಾ ಗಂಗಣ್ಣ ಅವರು ಪೌಷ್ಟಿಕ ಆಹಾರದ ಕುರಿತು ಮಾತಾಡುತ್ತಾರೆ.
  • ‘ದಕ್ಷಿಣ ಏಷ್ಯಾದ ಮಹಿಳೆಯರು ಅಮೆರಿಕದಲ್ಲಿ ತೋರುತ್ತಿರುವ ನಿರ್ವಹಣೆ ’ ಕುರಿತು ಗೀತಾ ರಾಮಮೂರ್ತಿ ಬೆಳಕುಚೆಲ್ಲುತ್ತಾರೆ.
  • ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕ-ರಕ್ಷಕ ಸಹಯೋಗದ ಪ್ರಯೋಜನಗಳ ಬಗ್ಗೆ ಪೂರ್ಣಿಮಾ ಜೈರಾಜ್‌ ಮಾತನಾಡುತ್ತಾರೆ.
  • ಅಮೆರಿಕ ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಅಮೆರಿಕನ್ನಡತಿ ರಾಜಕಾರಣಿ ಜಯಂತಿ ರಾವ್‌ ಮಾತನಾಡಲಿದ್ದಾರೆ.
  • ಡಾ. ಅಂಜನಾ ರಾಮ್‌ ಅವರಿಂದ ‘ಎಂಪ್ಟಿ ನೆಸ್ಟ್‌ ಸಿಂಡ್ರೊಮ್‌’ ವಿಷಯದ ಬಗ್ಗೆ ಮಾಹಿತಿ.
  • ಪ್ರತಿಮಾ ರಾಮ್‌ ಅವರಿಂದ ಬ್ಯಾಂಕಿಂಗ್‌ ಉದ್ಯಮದ ಬಗ್ಗೆ ಉಪನ್ಯಾಸಗಳಿವೆ. ಇವಲ್ಲದೆ ಬಹುಜನರ ಆಸಕ್ತಿಯನ್ನು ಕೆರಳಿಸಬಹುದಾದ ವಿಚಾರಗೋಷ್ಠಿಯಾಂದೂ ಏರ್ಪಟ್ಟಿದೆ. ವಿಷಯ - Dating and Marriage
ಸ್ಥಳೀಯ ಪ್ರತಿಭೆಗಳ ವಿವಿಧ ಕರಕುಶಲ ಕಲೆಗಳ ಪ್ರದರ್ಶನ, ಮೆಹಂದಿ, ಫೇಶಿಯಲ್ಸ್‌ ಮತ್ತಿತರ ಸೌಂದರ್ಯವರ್ಧನೆಯ ಕಾರ್ಯಾಗಾರಗಳು, ರೇಷ್ಮೆಸೀರೆ ಬಹುಮಾನದ ಅದೃಷ್ಟಚೀಟಿ, ಆರು ವರ್ಷಗಳೊಳಗಿನ ಮಕ್ಕಳಿಗೆ ಫೇಸ್‌ಪೈಂಟಿಂಗ್‌, ಕಾರ್ಟೂನ್‌ ಕಾಸ್ಟ್ಯೂಮ್ಸ್‌ ಆಕರ್ಷಣೆಗಳು - ಇವು ಮಹಿಳಾಸಮಿತಿ ಆಯೋಜಿಸಿರುವ ಇನ್ನಿತರ ಪ್ರಸ್ತುತಿಗಳು.

ಒಂದು ನಿಮಿಷದಲ್ಲಿ ಕೇಶ ಶೃಂಗಾರ ಮಾಡಿಕೊಡುವ ಗಿನೆಸ್‌ ದಾಖಲೆ ಸ್ಥಾಪಿಸಿರುವ ಬೆಂಗಳೂರಿನ ’ವನ್‌ ಮಿನಿಟ್‌ ಉಮಾ’ ಅವರನ್ನು ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದ್ದು ಅವರ ಭಾಗವಹಿಸುವಿಕೆ ಮತ್ತು ಅದ್ಭುತ ಕೈಚಳಕದ ಪ್ರದರ್ಶನಗಳು ಅವರಿಗೆ ಅಮೆರಿಕ ಪ್ರಯಾಣದ ವಿಸಾ ಲಭ್ಯತೆಯ ಮೇಲೆ ನಿರ್ಧಾರವಾಗಲಿವೆ.

(4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ‘ವಾರ್ತಾ ಮತ್ತು ಪ್ರಚಾರ’ ಸಮಿತಿಯ ಪ್ರಕಟಣೆ. ಸಂಯೋಜನೆ: ಶ್ರೀವತ್ಸ ಜೋಶಿ)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X