• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅಕ್ಕ’ ಅಧಿವೇಶನಗಳಲ್ಲಿ ಸಾಹಿತ್ಯ ಸಂಕಿರಣಗಳ ಸಾಧ್ಯಾಸಾಧ್ಯತೆಗಳು

By Staff
|
  • ಆಹಿತಾನಲ, ಆರ್ಕೇಡಿಯ, ಕ್ಯಾಲಿಫೋರ್ನಿಯ

nagaaithal@yahoo.com

Naga Aithal, California, USಫ್ಲೋರಿಡಾ ಪ್ರಜೆಗಳ ಮೇಲೆ ಅದೇನೋ ಶಾಪ ಈ ಬೇಸಿಗೆಯ ತಿಂಗಳುಗಳಲ್ಲಿ. ವಾಯು-ವರುಣರಿಬ್ಬರಿಂದಲೂ ಅವರು ಶಾಪಗ್ರಸ್ತರಾಗಿರುತ್ತಾರೆ. ಮೊನ್ನೆ ‘ಲೇಬರ್‌ ಡೇ’ ವಾರಾಂತ್ಯ ಆ ಶಾಪದ ಕೆಲವು ಅಂಶವನ್ನು ನಾವೂ ಅನುಭವಿದೆವು. ಅಕ್ಕ ಸಂಸ್ಥೆಯು, ಫ್ಲೋರಿಡಾದ ಶ್ರೀಗಂಧ ಕನ್ನಡ ಕೂಟದ ಆಶ್ರಯದಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ಒರ್ಲ್ಯಾಂಡೊದಲ್ಲಿ ಹಮ್ಮಿಕೊಂಡಿತ್ತು. ಫ್ಲೋರಿಡಾ ಜನತೆಯ ಮೇಲಿನ ಶಾಪ ಅಮೆರಿಕನ್ನಡಿಗರಿಗೂ ಸ್ವಲ್ಪ ಮುಟ್ಟಿದಂತಿತ್ತು. ಅದಕ್ಕೆ ಕಾರಣ ವಾಯು, ವರುಣ ದೇವತೆಯರ ದೂತ, ಫಾನ್ಸಿಸ್‌. ಆದರೆ, ನಮಗೆ GAYLORD ಎಂಬ ದೇವನಗರಿಯಲ್ಲಿ ರಕ್ಷಣೆ ಸಿಕ್ಕಿತ್ತು. ಇದ್ಯಾವ ದೇವನಗರವಪ್ಪಾ ಎಂದು ವಿಸ್ಮಯಗೊಂಡಿರಾ? ಹೌದು ಅದೊಂದು ಸ್ವರ್ಗನಿರ್ಮಿತ ದೇವಾಲಯ. ಆ ದೇವಾಲಯದೊಳಗಿದ್ದರೆ, ಹೊರಗಿನ ಫ್ರಾನ್ಸಿಸ್‌ ಕೂಡ ತನ್ನ ಆರ್ಭಟವನ್ನು ಕಮ್ಮಿ ಮಾಡಬೇಕಾಗುತ್ತದೆ. Gaylord Palms Resort Hotel ಒಂದು ಸ್ವರ್ಗವಿದ್ದ ಹಾಗೆ. ಅಲ್ಲಿ ನಡೆದ ಸಮ್ಮೇಳನ ಪ್ರಕೃತಿಯ ಪ್ರಕೋಪದಿಂದಲೂ ಪಾರಾಗಿ, ವಿಜೃಂಭಣೆಯಿಂದ ನಡೆದು ಪ್ರಚಂಡ ಯಶಸ್ವಿ ಪಡೆಯಿತು. ಆ ಸಮ್ಮೇಳನ ನಡೆಯಲು ಪ್ರಕೃತಿಯ ಆಟಾಟೋಪವಲ್ಲದೆ, ಬೇರೆ ಕೆಲವರ ತಕರಾರು, ಬೇಕಾದಷ್ಟು ವಾದ-ವಿವಾದಗಳು ನಡೆದಿದ್ದವು. ಆದರೂ ಯಶಸ್ವಿ ಸಮ್ಮೇಳನ ನಡೆಸಿಕೊಟ್ಟ ಶ್ರೀಗಂಧ ಕನ್ನಡ ಕೂಟಕ್ಕೆ, ಶ್ರೀಮತಿ ರೇಣುಕಾ ರಾಮಪ್ಪ ಮತ್ತು ಅವರ ಸಂಚಾಲಕ ವೃಂದಕ್ಕೆ ಅಭಿನಂದನೆ ಸಲ್ಲಬೇಕಾದುದೇ!

ನಾನೂ ನನ್ನ ಧರ್ಮಪತ್ನಿಯೂ ಆ ಅಧಿವೇಶನದಲ್ಲಿ ಭಾಗಿಯಾಗಿದ್ದೆವು. ಚಂಡಮಾರುತನ ಬೆದರಿಕೆಯಿದ್ದರೂ, ಸ್ವಲ್ಪ ಮುಂಚೆಯೇ ಒರ್ಲ್ಯಾಂಡೊಗೆ ಪಯಣಿಸಿದ್ದೆವು. ಅಕ್ಕ ಕಾರ್ಯಕರ್ತರೂ ನಮ್ಮನ್ನೂ, ನಮ್ಮಂತೆ ಇತರರನ್ನೂ ವಿಮಾನ ಸಂಚಾರ ನಿಲ್ಲುವ ಮೊದಲೇ ಬನ್ನಿರೆಂದು ಫೋನಿನ ಮೂಲಕ ಕೇಳಿಕೊಂಡಿದ್ದರು. ಅಷ್ಟೆಲ್ಲ ಅನಿಶ್ಚಿತ ಸಂದರ್ಭವಿದ್ದರೂ, ಯಶಸ್ವಿ ಸಮ್ಮೇಳನ ನಡೆದು, ನಮಗೆ ತುಂಬಾ ಹಿತ ಕೊಟ್ಟಿತು; ಹೋದುದಕ್ಕೆ ಸಾರ್ಥಕವಾಯ್ತೆನ್ನುವ ಭಾವನೆ ಮೂಡಿಸಿತು. ಎಲ್ಲ ಕಾರ್ಯಕ್ರಮಗಳೂ, ಎಚಢ್ಝಟ್ಟಛ ಕಚ್ಝಞಠ ್ಕಛಿಠಟ್ಟಠಿ ನಲ್ಲಿ ಸುರಕ್ಷಿತವಾಗಿಯೂ ಊಹಿಸಿದಕ್ಕಿಂತಲೂ ಉತ್ತಮವಾಗಿ ನಡೆಯಿತು. ಡೆಟ್ರಾಯ್ಟ್‌ ಅಧಿವೇಶನದಿಂದ ಪಡೆದ ನಿರಾಶೆ, ಈ ಅಧಿವೇಶನ ತಣಿಸಿತ್ತು.

ನಾನು ಒರ್ಲ್ಯಾಂಡೊ ಅಧಿವೇಶನಕ್ಕೆ ಹೋಗುವ ನಿಶ್ಚಯ ಈ ಮೊದಲೇ ಮಾಡಿಕೊಂಡಿದ್ದರೂ, ಆ ನಿಶ್ಚಯಕ್ಕೆ ಹೆಚ್ಚಿನ ಸ್ಫುಟ ಮತ್ತು ಸ್ಫೂರ್ತಿ ಕೊಟ್ಟವರು ಡಾ. ನಂಜುಂಡಸ್ವಾಮಿಯವರು. ಅವರು, ಆ ಅಧಿವೇಶನದ ಅಂಗವಾಗಿ ಸಾಹಿತ್ಯ ಸಂಕಿರಣಗಳನ್ನೂ ನಡೆಸುವ ಜವಾಬ್ದಾರಿ ಹೊತ್ತಿದ್ದರು. ಅವರ ಅನನ್ಯ ಶ್ರಮಗಳ ಫಲವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎದುರಾಗಿದ್ದರೂ, ಹಲವು ಸಾಹಿತ್ಯ ಅಧಿವೇಶನಗಳೂ ಜರಗಿದುವು. ಸಾಹಿತ್ಯದ ವಿವಿಧ ವಿಷಯಗಳ ಮೇಲೆ ಸ್ವಾರಸ್ಯವಾದ ಚರ್ಚಾ ಕೂಟಗಳೂ ನಡೆದುವು. ಸಾಹಿತ್ಯದಲ್ಲಿ ಸಾಕಷ್ಟು ಅಭಿರುಚಿಯಿದ್ದ ನನಗೆ ಈ ಚರ್ಚಾ ಕೂಟಗಳು ಹಿತ ಭಾವನೆಗಳನ್ನು ಮೂಡಿಸಿತ್ತು.

ಸ್ವಾಮಿಯವರ ಮುಂದಾಳತ್ವದಲ್ಲಿ ನಡೆದ ಅಧಿವೇಶನಗಳಲ್ಲಿ ಕರ್ನಾಟಕದಿಂದ ಹಲವಾರು ಕನ್ನಡ ಸಾಹಿತಿಗಳು - ಬರಗೂರು ರಾಮಚಂದ್ರಪ್ಪ, ದೊಡ್ಡ ರಂಗೇಗೌಡ, ಅ.ರಾ. ಮಿತ್ರ, ಕೃಷ್ಣೇಗೌಡ, ನೀಳಾ ದೇವಿ, ಉಷಾ ರೈ, ಪ್ರಭಾಕರ ರೈ, ಎಚ್‌.ಎಸ್‌.ಪಾರ್ವತಿ, ಉದ್ಯಾವರ ಮಾಧವ ಆಚಾರ್ಯ- ಬಂದು ಭಾಗವಹಿದ್ದರು. ಅವರೆಲ್ಲರೂ ಸ್ವಾರಸ್ಯವಾದ ವಿಷಯಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದ್ದರು. ಬರಗೂರರವರು ಮಾಡಿದ ಅಧಿವೇಶನದ ಮುಖ್ಯ ಭಾಷಣವಂತೂ (ಕೀ ನೋಟ್‌ ಲೆಕ್ಚರ್‌) ಅದ್ಭುತವಾಗಿತ್ತು. ಡೆಟ್ರಾಯ್ಟ್‌ ಅಧಿವೇಶನಕ್ಕೆ ಆಮಂತ್ರಿತರಾಗಿ ಬಂದಿದ್ದ ಕವಿ ನಿಸಾರ್‌ ಅಹಮ್ಮದ್‌ರಿಗೆ ಮೂರು ನಿಮಿಷಗಳ ಕಾಲವೂ ಮಾತನಾಡಲು ಅವಕಾಶ ಸಿಗದಿದ್ದುದನ್ನು ನಾನಿಲ್ಲಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ಒರ್ಲ್ಯಾಂಡೊದ ಅಧಿವೇಶನಗಳನ್ನು ಕುವೆಂಪು ಮತ್ತು ಪು.ತಿ.ನ. ರಿಗೆ ಅರ್ಪಣೆ ಮಾಡಲಾಗಿತ್ತು. ಈ ವರ್ಷ ಈ ಎರಡು ಕನ್ನಡ ಸಾಹಿತ್ಯ ದಿಗ್ಗಜರ ಜನ್ಮಶತಾಬ್ಧಿಯನ್ನು ಆಚರಿಸುತ್ತಿರುವುದನ್ನು ನಾವಿಲ್ಲಿ ನೆನೆಯಬಹುದು. ಅಂತೂ ನಂಜುಂಡಸ್ವಾಮಿಯವರ ಶ್ರಮ ಸಾರ್ಥಕವಾಗಿತ್ತು ಎಂದೆನಿಸಿತು ನನಗೆ.

ಆದರೆ, ಈಗ ಈ ಸಾಹಿತ್ಯ ಅಧಿವೇಶನಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಒಂದೆರಡು ಮಾತುಗಳನ್ನು ಹೇಳ ಬಯಸುತ್ತಿದ್ದೇನೆ. ಇದನ್ನು ‘ನಕಾರಾರ್ಥ’ವಾಗಿ ತಿಳಿಯಬಾರದೆಂದು ಮೊದಲಿಗೇ ಒತ್ತಿ ಹೇಳುತ್ತಿದ್ದೇನೆ. ಹಿಂದೆ ತಿಳಿಸಿದಂತೆ ಚರ್ಚಾ ಕೂಟಗಳು, ಅಲ್ಲಿ ಮಂಡಿಸಿದ ಪ್ರಬಂಧಗಳು ಎಲ್ಲ ಬಲು ಸ್ವಾರಸ್ಯವಾಗಿದ್ದುವು. ಆದರೆ, ಅದರಿಂದ ಫಲ ಪಡೆದವರ ಸಂಖ್ಯೆ ಬಹಳ ಕಡಿಮೆ. ಇದಕ್ಕೆ ಹಲವು ಕಾರಣಗಳಿವೆ: ಅಕ್ಕ ಸಮ್ಮೇಳನವೆಂದರೆ ಒಂದು ಜಾತ್ರೆಯಂತೆ. ಬಹಳ ದಿನಗಳಿಂದ ಭೇಟಿಯಾಗದ ಪರಿಚಿತರನ್ನು ಭೇಟಿಯಾಗಿ, ಉಭಯಕುಶಲೋಪರಿ ವಿನಿಯಮ, ಹೊಸ-ಹೊಸ ವ್ಯಕ್ತಿಗಳ ಪರಿಚಯ, ಮನರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು (ಸ್ಥಳೀಯ ಮತ್ತು ಭಾರತದಿಂದ ಬಂದ ಕಲಾವಿದರಿಂದ), ಸುಖಭೋಜನ, ತಂತಮ್ಮ ಮಕ್ಕಳಿಂದ ಮಾಡಿಸುವ ಕಾರ್ಯಕ್ರಮಗಳು ಇತ್ಯಾದಿ, ಇತ್ಯಾದಿ - ಇವುಗಳೇ ಆ ಅಧಿವೇಶನಗಳಲ್ಲಿ ಬಲು ಮುಖ್ಯ ಪಾತ್ರವಹಿಸುತ್ತವೆ. ಕೆಲವೊಮ್ಮೆ, ನಮ್ಮ ಮುಂದಿನ ಪೀಳಿಗೆಯವರಿಗೆ ಕರ್ನಾಟಕ ಸಂಸ್ಕೃತಿ, ಸಂಪ್ರದಾಯಗಳ ಅರಿವು ಮಾಡಿಕೊಡಲೂ ಸಹಾಯವಾಗುವುದೆನ್ನಿ! (ಕೆಲವು ಹೆಣ್ಣು-ಗಂಡುಗಳ ಮಿಲನ ಪರಿಣಾಮವಾಗಿ ಅವರೊಳಗೆ ವಿವಾಹಗಳೂ ಸಂಭವಿಸುವುದಕ್ಕೆ ಅನುಕೂಲವಾಗಲೂ ಬಹುದು.) ಇವೆಲ್ಲವನ್ನೂ ಅಕ್ಕ ಅಧಿವೇಶನ ಒಂದೆಡೆ ಒದಗಿಸಿ ಕೊಡುವುದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿ ಸೇರುತ್ತಾರೆ. ಆದರೆ, ಸಾಹಿತ್ಯ ಪ್ರೇಮಿಗಳ ಅಂಶ ಅಲ್ಲಿ ಬಹಳ ಕಡಿಮೆಯೆಂದೇ ಹೇಳಬಹುದು. ಸಾಕಷ್ಟು ಸಾಹಿತ್ಯಾಸಕ್ತರು ಕೂಡ ಅಪರೂಪವಾಗಿ ದೊರೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಹಲವು ಬಾರಿ ಪ್ರಾಧಾನ್ಯತೆಗಳು ಬದಲಾಗಿ, ನನ್ನಂಥವರಿಗೆ ಕೊಂಚ ಗೊಂದಲವೇ ಉಂಟಾಗುತ್ತದೆ. ಮನಸ್ಸಿಲ್ಲದಿದ್ದರೂ, ನಾವು ಕೆಲವು ಸಾಹಿತ್ಯಾಧಿವೇಶನಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಹಾಗೆಂದು, ಆ ಅಧಿವೇಶನಗಳಲ್ಲಿನ ವಿಷಯ ಅನಾಸಕ್ತವೆಂದಲ್ಲ. ನಮ್ಮ ಪ್ರಯಾರಿಟಿ ಬದಲಾಗಿದೆಯಷ್ಟೆ ! ಹಾಗಾಗಿ, ಅಕ್ಕ ಅಧಿವೇಶನಗಳಲ್ಲಿ ‘ಹಾರ್ಡ್‌ ಕೋರ್‌’ ಸಾಹಿತ್ಯಾಧಿವೇಶನಗಳ ಬಗ್ಗೆ ಸ್ವಲ್ಪ ಆಲೋಚಿಸಬೇಕಾಗಿದೆ. ನಿರೀಕ್ಷಿಸಿದ ಸಫಲತೆಯನ್ನು ಇಂತಹ ಅಧಿವೇಶನಗಳಲ್ಲಿ ಪಡೆಯಲು ಸಾಧವೇ? ಒರ್ಲ್ಯಾಂಡೊ ಸಮ್ಮೇಳನದಲ್ಲಿ , ಕೆಲವು ಸಾಹಿತ್ಯ ಕೂಟದಲ್ಲಿ ಹಾಜರಿದ್ದ ಜನರ ಸಂಖ್ಯೆ ನಿರಾಶಾದಾಯಕವಾಗಿತ್ತು.

ಸಾಹಿತ್ಯವೂ ಅಕ್ಕ ಅಧಿವೇಶನಗಳ ಭಾಗವಾಗಿರುವುದು ಸೂಕ್ತವಾದರೂ ಇಂತಹ ಉತ್ತಮ ದರ್ಜೆ ಸಾಹಿತ್ಯ ಸಂಕಿರಣಗಳಿಗೂ, ಅಕ್ಕ ಅಧಿವೇಶನಗಳಿಗೂ ಹೆಚ್ಚಿನ ಹೊಂದಾಣಿಕೆ ಇಲ್ಲವೆಂದು ನನ್ನ ವೈಯಕ್ತಿಕ ಅಭಿಮತ. ಸಮ್ಮೇಳನದ ಮೂರು ದಿನಗಳಲ್ಲಿ , ದಿನವೂ ಒಂದೆರಡು ಗಂಟೆಗಳು ಮಾತ್ರ ಸಾಹಿತ್ಯಾಧಿವೇಶನಗಳಿಗೆ ಮೀಸಲಾಗಿಡಲಿ. ಸಂಚಾಲಕರು ಈ ಸಂಕಿರಣಗಳನ್ನು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎದುರಾಗಿ ನಡೆಯದಂತೆ ಯೋಜನೆ ಮಾಡಬೇಕು. ಬರಿಯ ಸಾಹಿತ್ಯಕ್ಕೆಂದೇ ಮೀಸಲಾದ ‘ಕನ್ನಡ ಸಾಹಿತ್ಯ ರಂಗ’ ದಂತಹ ಸಂಸ್ಥೆಗಳು ಇಂತಹ ‘ಹಾರ್ಡ್‌ ಕೋರ್‌’ ಸಾಹಿತ್ಯಾಧಿವೇಶನಗಳನ್ನು ನಡೆಸಿಕೊಡಲಿ. ಎಲ್ಲ ರಾಜಕೀಯದಿಂದಲೂ ದೂರವಿರುವ ‘ಕನ್ನಡ ಸಾಹಿತ್ಯ ರಂಗ’ವು ಅಂತಹ ಕಾರ್ಯಕ್ರಮ ಕೈಗೊಳ್ಳಲು ಹಮ್ಮಿಕೊಂಡಿದೆ. ಈ ರಂಗಕ್ಕೆ ಸಾಹಿತ್ಯಾಸಕ್ತರ ಬೆಂಬಲ ಅತ್ಯಗತ್ಯ, ಹಾಗೂ ಆ ಬೆಂಬಲ ದೊರೆಯುವ ಛಾಯೆ ಕಾಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟು ಮುಂದಿನ ಅಕ್ಕ ಅಧಿವೇಶನಗಳಲ್ಲಿ ಸೀಮಿತ ಸಾಹಿತ್ಯ ಅಧಿವೇಶನಗಳನ್ನು ಏರ್ಪಡಿಸಿದರೆ ಉತ್ತಮವೆಂದು ನನ್ನ ಅಭಿಪ್ರಾಯ. ನನ್ನ ಸಲಹೆ (for all its worth) ಇಷ್ಟೆ :

ಅಕ್ಕ ಸಮ್ಮೇಳನದಲ್ಲಿ ಮೊದಲಿನ ರಾತ್ರಿ ಎರಡು ಗಂಟೆ ಸಾಹಿತ್ಯಕ್ಕಾಗಿಯೇ ಮುಖ್ಯ ಸಭಾಂಗಣದಲ್ಲಿ ಸಮಯ ಮೀಸಲಾಗಿಡಲಿ. ಇದು ಕಳೆದ ನಂತರ ಯಾವುದಾದರೂ ಉತ್ತಮ (ಕರ್ನಾಟಕದಿಂದ ಆಗಮಿಸಿದ ಕಲಾಕಾರರಿಂದ) ಸಾಂಸ್ಕೃತಿಕ ಕಾರ್ಯಕ್ರಮವಿಟ್ಟುಕೊಳ್ಳಲಿ. ಎರಡನೆಯ ದಿನ ಇನ್ನೆರಡು ಗಂಟೆ ಪ್ರತ್ಯೇಕವಾಗಿ (parallel session), ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಡ್ಡಿ ಬಾರದಂತೆ ಸಾಹಿತ್ಯದ ಬಗ್ಗೆ ಚರ್ಚಾಕೂಟವನ್ನೋ ಮತ್ತಿನ್ನೇನನ್ನೋ ಏರ್ಪಡಿಸಲಿ. ಮೂರನೆಯ ದಿನವೂ ಎರಡನೆಯ ದಿನದಂತೇ ಬೇರೆ-ಬೇರೆ ವಿಷಯಗಳ ಮೇಲೆ ಸಾಹಿತ್ಯ ಚರ್ಚೆ ನಡೆಯಲಿ. ಹೀಗಾಗಿ, ಮೂರೂ ದಿನವೂ ಬೆಳಗಿನಿಂದ ಸಂಜೆಯವರಿಗೂ heavey dose ಸಾಹಿತ್ಯದ ಊಟ ಉಣಿಸಬೇಕಾಗಿಲ್ಲ. ಕನ್ನಡ ಸಾಹಿತ್ಯ ರಂಗ ತನ್ನ ಸಾಹಿತ್ಯ ಅಧಿವೇಶನಗಳನ್ನು ಸ್ವತಂತ್ರವಾಗಿ ನಡೆಸಿಕೊಂಡು ಬರುತ್ತಿರಲಿ. ಅದಕ್ಕೆ ಎಲ್ಲ ಸಾಹಿತ್ಯಾಸಕ್ತರ ಬೆಂಬಲವಂತೂ ಅತಿ ಅಗತ್ಯ. ಆ ನಿಟ್ಟಿನಲ್ಲಿ ಸಾಹಿತ್ಯಾಭಿಮಾನಿಗಳ ಸಂಘಟನೆ ಬೆಳೆಯಬೇಕಾದುದು ಅನಿವಾರ್ಯ.

ಒಟ್ಟಿನಲ್ಲಿ ನಾನು ಹೇಳಬೇಕಾದ ವಿಷಯವಿಷ್ಟೆ : ಅಕ್ಕ ಸಮ್ಮೇಳನ ಒಂದು get together ಮಾದರಿಯ ಅಧಿವೇಶನ. ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯಗಳೇ ಹೆಚ್ಚಿನದು; ಸಾಹಿತ್ಯ ಅಲ್ಲಿ ನೀರಿಂದ ಬೇರ್ಪಟ್ಟ ಮೀನಿನಂತೆ. ಸಾಹಿತ್ಯಕ್ಕಾಗಿಯೇ ಕೆಲಸ ಮಾಡುವ ‘ಕನ್ನಡ ಸಾಹಿತ್ಯ ರಂಗ’ದಂತಹ ಸಂಸ್ಥೆಗಳು ಸಾಹಿತ್ಯಾಧಿವೇಶನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರಲಿ. ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯಕ್ಕೂ ಅವಕಾಶವಿರಲಿ, ಆದರೆ, not too heavey dose ಸಾಹಿತ್ಯ. ನನಗೆ ತೀರ ಬೇಸರವಾದುದು ಒರ್ಲ್ಯಾಂಡೊ ಸಮ್ಮೇಳನದಲ್ಲಿ ನಂಜುಂಡಸ್ವಾಮಿಯವರ ಶ್ರಮಕ್ಕೆ ತಕ್ಕ ಸಾಫಲ್ಯ ದೊರಕಲಿಲ್ಲವಲ್ಲ ಎಂದು. ನಂಜುಂಡಸ್ವಾಮಿಯವರಿಗೆ ತಾವು ಒಂದು ಆದರ್ಶ ಕೆಲಸ ಮಾಡಿರುತ್ತೇನೆಂಬ ಸಂತೃಪ್ತಿ ಸಿಕ್ಕಿರುವುದು ಸಹಜವೇ! ಅವರ ಶ್ರಮಕ್ಕೆ ಅಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿತ್ತು. ಅದು ಅವರನ್ನೂ ಕಾಡಿರಬಹುದು; ನನ್ನನ್ನಂತೂ ಕಾಡುತ್ತಲೇ ಇದೆ. ಅದಕ್ಕಾಗಿಯೇ ನನ್ನೀ ಸಲಹೆಗಳನ್ನು ಸೂಕ್ಷ್ಮವಾಗಿ ಮಂಡಿಸಿರುತ್ತೇನೆ. ನಂಜುಂಡಸ್ವಾಮಿಯವರಿಗೆ ನನ್ನ ಮನಃಪೂರ್ವಕ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸಲು ತುಂಬ ಹೆಮ್ಮೆಯಾಗುತ್ತಿದೆ. ಕನ್ನಡ ಸಾಹಿತ್ಯವು ಅಮೆರಿಕದಲ್ಲಿ ಸ್ವಾಮಿ ಮತ್ತು ಅವರಂಥ ಇತರ ಅಭಿಮಾನಿಗಳ ಶ್ರಮದಿಂದ ಇನ್ನೂ ಹೆಚ್ಚಿನ ಪ್ರಗತಿಪರ ವ್ಯವಸ್ಥಿತ ಕ್ರಮದಲ್ಲಿ ಮುನ್ನಡೆಯಿಡುತ್ತಿರಲಿ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more