ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಪಿ , ವಸುಂಧರಾ ನಾವು ಮತ್ತು ಕನ್ನಡ

By Staff
|
Google Oneindia Kannada News
Dr. Guruprasad Kaginele, Minnesota, USಇನ್ನೊಂದು ವಿಶ್ವ ಕನ್ನಡಸಮ್ಮೇಳನ ಮುಗಿದಿದೆ. ಚಂಡಮಾರುತವನ್ನೂ ಲೆಕ್ಕಿಸದೆ ಹೋಗಿಬಂದಿದ್ದೇವೆ. ಪೂರಾ ಮೂರುದಿನ ಮನೆಯಲ್ಲಿದ್ದ ಶರ್ವಾನಿ, ಸೂಟುಗಳನ್ನೂ, ರೇಷ್ಮೆಸೀರೆಗಳನ್ನೂ, ಒಡವೆಗಳನ್ನೂ , ಫ‚ೌಂಡೇಶನ್ನುಗಳಿಂದ ಹಿಡಿದು ಲಿಪ್‌ಸ್ಟಿಕ್‌ ಷೇಡುಗಳನ್ನೂ ಬದಲಿಸಿದ್ದೇವೆ. ಸಂಗೀತ ಕೇಳಿದ್ದೇವೆ. ಬೇಕಾದವರೊಡನೆ ನಿಂತು ಫ‚ೋಟೋ ತೆಗೆಸಿಕೊಂಡಿದ್ದೇವೆ. ಫ‚ೈವ್‌ ಸ್ಟಾರ್‌ ಹೋಟೆಲಿನ ಸಕಲ ಸವಲತ್ತುಗಳೊಡನೆ ಸಮ್ಮೇಳನ ಯಶಸ್ವಿಯಾಗಿ ಮುಗಿದಿದೆ. ಶ್ರೀಗಂಧಿಗರ ತೃಪ್ತಿಯ ನಗೆಯಲ್ಲಿ ‘ಅಕ್ಕ’ ಳ ನಗುವೂ ಅಡಗಿದೆ. ಅಕ್ಕಳ ಸಿಬ್ಲಿಂಗುಗಳು ಇನ್ನೂ ಜಾಸ್ತಿಯಾಗಿ ಸಂಸಾರ ವೃದ್ಧಿಸಿದೆ. ತುಂಬುಸಂಸಾರವನ್ನು ದಡಸೇರಿಸಬಲ್ಲೆ ಅನ್ನುವ ಆತ್ಮವಿಶ್ವಾಸ ಎಲ್ಲ ಸಂಸಾರೊಂದಿಗರ ಮುಖದಲ್ಲಿ ಕಾಣಿಸುತ್ತಿದೆ. ಎಲ್ಲೆಲ್ಲೂ ಖುಷಿ, ಎಲ್ಲರಿಗೂ ಧನ್ಯವಾದ.

ಆದರೆ, ನಾವು ಈ ಅಕ್ಕಳ ಸಮ್ಮೇಳನಕ್ಕೆ ಹೋಗಿ ಕೂತು, ಊಟ ಹೊಡೆದು, ಯಮನ ಆರ್ಭಟಕ್ಕೂ, ಅ ರಾ ಮಿತ್ರರ ಕೃಷ್ಣೇಗೌಡರ ಮಾತುಗಳಿಗೂ ನಕ್ಕು ಸಂಗೀತವನ್ನು ಕೇಳಿ, ಏನೂ ಬೇರೆ ಕಾರ್ಯಕ್ರಮವಿಲ್ಲದಿದ್ದರೆ ಸಾಹಿತ್ಯ ಮಂಟಪದೊಲ್ಲೊಮ್ಮೆ ಇಣುಕುಹಾಕಿ, ಕುರುಡು ಮಕ್ಕಳ ಭರತನಾಟ್ಯ ನೋಡಿ ಕಣ್ಣೊರೆಸಿಕೊಂಡು, ಪಕ್ಕದ ಗಾಂಧಿಬಜ‚ಾರಿನ ಒಡವೆಯಂಗಡಿಗಳಿಗೂ, ಕರಕುಶಲ ವಿಭಾಗಕ್ಕೂ, ಡಿವಿಡಿ ಅಂಗಡಿಗೂ, ವಿವೇಕಾನಂದ ಟ್ರಸ್ಟಿನ ಬೂತಿಗೂ ಮತ್ತು ಪುಸ್ತಕದಂಗಡಿಗೂ ( ಅದೇ ಅನುಕ್ರಮಣದಲ್ಲಿ) ಹೋಗಿ ಬಂದಿದ್ದೇವೆ. ರಾತ್ರಿ ಕ್ಯಾಶ್‌ಬಾರಿನ ಕಾಕ್‌ಟೈಲುಗಳ ನಡುವೆ ಇಮ್ಮಿಗ್ರೇಶನ್‌ ಸುದ್ದಿಯನ್ನು ಮತ್ತು ಬುಶ್ಶು, ಇರಾಕು ಎಲ್ಲ ಮಾತಾಡಿ ಆಮೇಲೆ ಒಂಚೂರು ಹುಡುಕಾಡುತ್ತೇವೆ- ಕಾಂಟೆಂಪೊರರಿ ಕನ್ನಡಕ್ಕೆ.

ಎಸ್‌. ಪಿ. ಬಾಲಸುಬ್ರಮಣ್ಯಂ ‘ಜೊತೆಯಲಿ, ಜೊತೆಜೊತೆಯಲಿ’ ಹೇಳಿದಾಗ ಸಿಳ್ಳೆ ತಾರಕಕ್ಕೇರುತ್ತವೆ. ಇನ್ನೊಬ್ಬ ಶಿಷ್ಯ ‘ ಹುಟ್ಟಿದರೆ, ಕನ್ನಡನಾಡಲ್ಹುಟ್ಟಬೇಕು’ ಅಂದಾಗ ಇಡೀ ಸಭಾಂಗಣ ನರ್ತಿಸತೊಡಗುತ್ತದೆ. ಒಂದಿಪ್ಪತ್ತೈದು ವರ್ಷದ ಹಿಂದೆ ಬಂದವರು ‘ಆಕಾಶದಿಂದ ಧರೆಗಿಳಿದ ರಂಭೆ’ ಗೆ ಕೋರಿ ಚೀಟಿ ಕಳಿಸುತ್ತಾರೆ. ಅರವತ್ತರಲ್ಲಿ ಬಂದವರು ಹಿಂದಿನ ದಿನ ಕ್ಯಾಲಿಫ‚ೋರ್ನಿಯಾದವರು ಹಾಡಿದ್ದ ‘ದೋಣಿಸಾಗಲಿ’ಯೇ ನಮಗೆ ಗಿಟ್ಟಿದ್ದು ಅಂದುಕೊಂಡು ಆದರೂ ತಮ್ಮ ಫ‚ೆಲೋ ಕನ್ನಡಿಗರು ಹಾಡುತ್ತಾ, ನರ್ತಿಸುತ್ತಾ ಇರುವಾಗ ಇಲ್ಲವೆನ್ನಲಾಗದೇ ತಾವೂ ತಲೆದೂಗುತ್ತಾರೆ. ಎಸ್‌. ಪಿ. ಹಂಸಲೇಖನ ಹತ್ತಿರ ಬರುತ್ತಿರುವಾಗ ಇನ್ನೂ ಎಚ್‌ ಒನ್‌ ನಲ್ಲಿರುವವರು ಮಾತ್ರ ‘ವಾ’ ಅನ್ನುತ್ತಾರೆ. ‘ಅಣ್ಣಯ್ಯ ತಮ್ಮಯ್ಯ , ನಂಜುಂಡೇಶ್ವರ ನಾನಯ್ಯ’ ಹಾಡಿದಾಗ, ‘ಈ ಎಸ್ಪಿ ತೀರ ಇಷ್ಟು ಹೊಸ ಹಾಡು ಹೇಳಿದರೆ ನಮಗೆ ಗೊತ್ತಾಗುವುದು ಹೇಗೆ’ ಅಂದುಕೊಂಡು ಕೊಂಚ ಪಿಚ್ಚಾಗುತ್ತೇವೆ. ಕೋಟಿಗೊಬ್ಬ ಚಿತ್ರ ಬೆಂಗಳೂರಲ್ಲಿ ಬಿಡುಗಡೆಯಾದಮೇಲೆ ಇಂಡಿಯಾಗೆ ಹೋಗಿ ಮದುವೆಯಾಗಿ ಬಂದಾತನೊಬ್ಬ ತನ್ನ ಹೊಸಾ ಹೆಂಡತಿಯನ್ನು ಕೇಳುತ್ತಾನೆ- ‘ನಿನಗೆ, ಈ ಹಾಡು ಗೊತ್ತಿಲ್ಲವ’ . ‘ಆರ್‌ ಯು ಕಿಡ್ಡಿಂಗ್‌’ ಅನ್ನುತ್ತಾಳೆ, ಆಕೆ. ನಾವೆಲ್ಲರೂ ಎಸ್ಪಿಯನ್ನು ಮನದಲ್ಲೇ ಕ್ಷಮಿಸುತ್ತೇವೆ. ಒಟ್ಟಾರೆ, ತನ್ನ ಹಾಡಿನ 98% ಎಪ್ಪತ್ತರ ಮತ್ತು ಎಂಬತ್ತರ ದಶಕದ ಹಾಡುಗಳನ್ನು ಹೇಳಿದ ಎಸ್ಪಿ ನಮಗೆ ತುಂಬಾ ಪ್ರಿಯನಾಗುತ್ತಾನೆ.

ನಮ್ಮ ಬೆಂಗಳೂರಿನವಳು ಅನ್ನುವ ಒಂದೇ ಒಂದು ಕಾರಣಕ್ಕೆ ಅದೇ ಅಭಿಮಾನದಿಂದ ವಸುಂಣರಾದಾಸ್‌ಳನ್ನು ಕರೆಸುತ್ತೇವೆ. ಆಕೆಯೂ ‘ಚಲೆ ಜೈಸೆ ಹವಾ ಯೇ’ ರೀತಿಯ ಫ‚ೂ್ಯಷನ್‌ ಹಾಡಿಗೆ ತನ್ನ ಗೆಳತಿ ಕಾವೇರಿಯ ರಚನೆ ‘ಹಾಡುವೆ ನಾ’ ಅನ್ನೋ ಹೊಸ ಹಾಡಿಗೆ ಕನ್ನಡದ ಜನಗಳ kಡಿ ತಟ್ಟಿಸಲು ನೋಡಿ ಸುಸ್ತಾಗುತ್ತಾಳೆ. ಅತ್ಲಾಗೂ ಇಲ್ಲದ ಇತ್ಲಾಗೂ ಇಲ್ಲದ ಹಾಡು ನಮಗೆ ಸೇರುವುದೇ ಇಲ್ಲ. ‘ನಮಗೆ ಬೇಕಾದ ಹಾಡನ್ನು ನುಡಿಸಮ್ಮ ವಸುಂಧರೆ’, ಎಂದು ಕೇಳಿಕೊಳ್ಳುತ್ತೇವೆ. ‘ನನಗೆ ಬೇರೆ ಬರುವುದಿಲ್ಲ’ ಅಂದಾಗ, ‘ಇರಲಿ ಹೋಗಲಿ ಬಿಡು, ನಮಗೆ ಒಳ್ಳೆಯ ಮೂಡಿದೆ, ನೀನು ಹಿಂದಿ ಹಾಡಿದರೂ ಕ್ಷಮಿಸುತ್ತೇವೆ’ ಅಂತೇವೆ. ಆಕೆ ಟೈಮ್‌ ಪಾಸಿಗಂತ ‘ಇಟ್ಸ್‌ ದ ಟೈಮ್‌ ಟು ಡಿಸ್ಕೋ’ ಅಂತ ಘಟ, ಆರ್ಗನ್ನು, ಡ್ರಮ್ಮುಗಳು, ವಯಲಿನ್ನು ಎಲ್ಲವನ್ನೂ ಸೇರಿಸಿ ಫ‚ೂ್ಯಷನ್ನು ಮಾಡಿ ಹೇಳುತ್ತಾಳೆ. ಈ ಫ‚ೂ್ಯಷನ್‌ ಒಂತರಾ ಸಂಗೀತ. ದೀಕ್ಷಿತರ ಕೃತಿಗಳಂತೆ, ಒಂದರ್ಧ ಘಂಟೆ ಎಲ್ಲಾ ಸಂಗೀತ ಸಾಧನಗಳನ್ನೂ ತನಿ ಬಿಟ್ಟು ಕೊನೆಗೆ ಮತ್ತೆ ಮತ್ತೆ ‘ಇಟ್ಸ್‌ ದ ಟೈಮ್‌ ಟು ಡಿಸ್ಕೊ’ ಎಂದು ಮತ್ತೆ ಮತ್ತೆ ಹೇಳಿಬಿಡಬಹುದು.. ಆದರೆ, ನಾವು ಕಾಯುತ್ತಿದ್ದುದು ವೆರೈಟಿಗೋಸ್ಕರ. ಮತ್ತೆ ಉಳಿದವರಿಗೆ ರೆಸ್ಟ್‌ ಕೊಡಲು ತಾನು ಮಾತ್ರ ಸೋಲೊ ‘ಮಾಹೀವೇ’ ಅಂತ ಹಾಡಲು ಬಂದ ವಸುಂಧರಾಳನ್ನು ‘ಇರಲಿ, ಬಿಡಮ್ಮ, ನೀನು ಸುಸ್ತಾಗಿದ್ಯ. ಮಲಕ್ಕೋ ಹೋಗು’ ಅಂತ ಮನೆಗೆ ಕಳಿಸುತ್ತೇವೆ.

ಇತ್ತ ಸಾಹಿತ್ಯ ಚಟುವಟಿಕೆಗಳಲ್ಲಿ ‘ಕಾಂಟೆಂಪೋ’ ಕನ್ನಡದ ಸಾಹಿತ್ಯದ ಬಗ್ಗೆ ನಡೆದ ತಿಳುವಳಿಕೆಯೆಂದು ಕಳೆದ ಎರಡು ವರ್ಷದಲ್ಲಿ ಬಿಡುಗಡೆಯಾಗಿದ್ದ ಅಮೆರಿಕನ್ನಡಿಗರ ಕೃತಿಗಳ ಪರಿಚಯ ಮತ್ತು ವಿಮರ್ಶೆಗಳಾಗುತ್ತವೆ. ಉಳಿದ ಚರ್ಚೆ, ಸಂಕಿರಣಗಳೆಲ್ಲಾ, ಕುವೆಂಪು, ಕಾರಂತ, ಪುತಿನರ ಕಾಲಕ್ಕೆ ನಿಂತುಹೋಗಿರುತ್ತವೆ. ಸಾಹಿತ್ಯ ಪರಂಪರೆಗಳೂ ಕೂಡ ಬಂಡಾಯ/ದಲಿತಕ್ಕೇ ನಿಂತುಹೋಗುತ್ತವೆ. ನಂತರದ ಸಾಹಿತ್ಯದ ಬಗ್ಗೆ ಯಾರೂ ಏನೂ ಚಕಾರವನ್ನೂ ಎತ್ತುವುದಿಲ್ಲ.

ಮಿತ್ರರ ಗೌಡ್ರ ಹಾಸ್ಯ ಸರ್ವವೇದ್ಯವಾಗುತ್ತದೆ. ಇತ್ತ ಕಳೆದೆರಡು ವರ್ಷದಲ್ಲಿ ಬಂದ ಸದಭಿರುಚಿಯ ಸಿನೆಮಾಗಳಾದ ‘ಶಾಪ’, ಮುನ್ನುಡಿ’. ‘ಅತಿಥಿ’ಗಳ ಪ್ರದರ್ಶನ ನಡೆಯುತ್ತವೆ. ಅದಕ್ಕೆ ಎಷ್ಟು ಜನ ಹೋಗಿ ಕೂತು ಪೂರ ನೋಡಿಬಂದರು ಅನ್ನುವುದು ಮಾತ್ರ ಗೊತ್ತಿಲ್ಲ. ಕನ್ನಡದ ಮೊದಲ ಕ್ಯಾರಿಯೋಕಿ ತಯಾರಿಸಿದಾತ, ಎದುರಿಗೇ ನಾಗತಿಹಳ್ಳಿಯವರಿದ್ದರೂ ಅವರ ಗುರುತು ಕೂಡ ಹಿಡಿಯುವುದಿಲ್ಲ.

ಇದೇ ಏನು? ಸಾಂಸ್ಕೃತಿಕವಾಗಿ ಹೆಪ್ಪುಗಟ್ಟಿಹೋಗುವುದು ಅಂದರೆ. ‘ದೋಣಿಸಾಗಲಿ ಮುಂದೆಹೋಗಲಿ’ ಇಷ್ಟವಾದವರಿಗೆ ‘ಜೊತೆಯಲಿ ಜೊತೆಜೊತೆಯಲಿ’ ಏಕೆ ಇಷ್ಟವಾಗುವುದಿಲ್ಲ. ‘ಕೋಟಿಗೊಬ್ಬ ’ ಮತ್ತು ‘ಶ್ರೀ ಮಂಜುನಾಥ’ ನ ಹಾಡುಗಳು ಚೆನ್ನಾಗಿದ್ದರೂ ಒಂದು ಹತ್ತು ವರ್ಷದ ಹಿಂದೆ ಭಾರತ ಬಿಟ್ಟವರು ಇವು ನಮ್ಮಹಾಡು ಅಂದುಕೊಳ್ಳುವುದಿಲ್ಲ. ವಸುಂಧರಾ ದಾಸಳ ಫ‚ೂ್ಯಷನ್ನು ನಮ್ಮಗಳ ತಲೆಯ ಮೇಲೆ ಹಾದುಹೋಗುತ್ತವೆ. ಸಾಹಿತ್ಯದ ಚರ್ಚೆಗೆ ಒಂದಿಪ್ಪತ್ತು ಜನ ಕೂತಿರುತ್ತಾರೆ. ಆ ಸಾಹಿತ್ಯ ಮಂಟಪದಲ್ಲಿ ಕೂತವರ ಪೈಕಿ ಅತಿ ಚಿಕ್ಕವನಿಗೆ ಮೂವತ್ತೆಂಟು ವರ್ಷ ವಯಸ್ಸಾಗಿರುತ್ತದೆ.

ನಮಗೆ ಕನ್ನಡ ಏಕೆ ಬೇಕು? ವಿಶ್ವ ಕನ್ನಡ ಸಮ್ಮೇಳನ ಏಕೆ ಬೇಕು? ನಾವು ಎಂದೆಂದು ಊರು ಬಿಟ್ಟುಬಂದವೋ ಅಂದಂದನ್ನು ನೆನೆಸಿಕೊಳ್ಳುವುದಕ್ಕೆ ಮಾತ್ರವಾ? ಕನ್ನಡ ನಮಗೆ ‘ನಾಸ್ಟಾಲ್ಜಿಯ’ ಮಾತ್ರ ಆಗಿಬಿಟ್ಟಿದೆಯಾ? ನೆನೆದುಕೊಳ್ಳುವುದು ‘ನಗುವ ನಯನ ’ಕ್ಕೆ ತಲೆದೂಗುವುದು ಬಿಟ್ಟು ಇನ್ನೇನನ್ನೂ ನಮ್ಮ ಕೈಯಿಂದ ಮಾಡಿಸುವ ಶಕ್ತಿ ಕನ್ನಡಕ್ಕೆ ಹೊರಟು ಹೋಗಿದೆಯೇ? ವಸುಂಧರಾ ನಮಗಿಂತಾ ಒಂದು ಹೆಜ್ಜೆ ಮುಂದೆ ಹೋದಳೇ. ಕನ್ನಡದ ಆದಷ್ಟು ಇತ್ತೀಚಿನ ಬೆಳವಣಿಗೆಗಳನ್ನು ಮನದಲ್ಲಿಟ್ಟುಕೊಂಡವರಿಗೂ , ಅಪ್‌ಡೇಟ್‌ ಮಾಡಿಟ್ಟುಕೊಂಡಿಟ್ಟಿಕೊಂಡಿರುವವರಿಗೂ ಆಕೆ ದಕ್ಕದೇ ಹೋದಳು.

ನಮ್ಮ ವಸುಂಧರಾಳ ಆಯ್ಕೆ ಅಥವಾ ವಸುಂಧರಾಳ ಹಾಡುಗಳ ಆಯ್ಕೆ ಮಾತ್ರ ತಪ್ಪಿತ್ತು ಅಂತ ನಮ್ಮ ಸಮಾಧಾನಕ್ಕಾದರೂ ಅಂದುಕೊಂಡರೆ ಅದು ಕೊಂಚ ಸಮಾಧಾನ ಕೊಡುವ ವಿಷಯ. ಇಲ್ಲವಾದರೆ, ಇನ್ನು ನಲವತ್ತು ವರ್ಷಗಳನಂತರ ‘ನೂರೊಂದು ನೆನಪು’ ಹೇಳುವುದಕ್ಕೆ ನಮಗೆ ಎಸ್ಪಿ ಇರುವುದಿಲ್ಲ. ನಮ್ಮ ಮಕ್ಕಳು ಇಪ್ಪತ್ತನೆಯ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕೆಂದಿದ್ದರೆ ‘ಯು ನೋ ದಿಸ್‌ ಇಸ್‌ ದ ಲಾಂಗ್ವೇಜ್‌ ಮೈ ಪೇರೆಂಟ್ಸ್‌ ಯುಸ್ದ್‌ ಟು ಸ್ಪೀಕ್‌’ ಅಂದುಕೊಂಡು ಮಿಸ್‌ ಅಮೆರಿಕನ್ನಡಿಗ ಪೇಜಂಟಿಗೆ ಉತ್ತರಗಳನ್ನು ಸಿದ್ಧಮಾಡಿಕೊಳ್ಳಲು ಹೊರಟಿರುತ್ತಾರೆ. ಇನ್ನೊಂದು ಸ್ವಲ್ಪ ದಿನ ಹೋದಲ್ಲಿ, ವಿಶ್ವ ಕನ್ನಡ ಸಮ್ಮೇಳನ ಅನ್ನುವ ಬ್ಯಾನರನ್ನೂ ಬರೆಸಲು ಕರ್ನಾಟಕಕ್ಕೇ ಹೋಗಬೇಕಾಗುತ್ತದೆ.

ಅಂದರೆ ಸಮಕಾಲೀನ ಕನ್ನಡ ಸಂಸ್ಕೃತಿ ಅಂದರೆ ಏನು? ವ್ಯಾಲೆಂಟೈನ್‌ ಕಾರ್ಡುಗಳಲ್ಲಿ, ಕಾಫಿ‚ೕ ಡೇಗಳಲ್ಲಿ, ಕಾಲ್‌ ಸೆಂಟರುಗಳ ರಾತ್ರಿಯ ಪ್ರಪಂಚಗಳಲ್ಲಿ ಮುಳುಗಿರುವ ಬೆಂಗಳೂರಿನ ಹುಡುಗರನ್ನು ಕೇಳಿ ನೋಡಿ. ನಾವು ಅಮೆರಿಕಾದಲ್ಲಿದ್ದುಕೊಂಡು ಕನ್ನಡ ಮಾತಾಡುತ್ತಿರುವುದೇ ಒಂದು ಹೀನಾಯ ಅಥವಾ ದೊಡ್ಡತನ ಅನ್ನುವ ಅರ್ಥದಲ್ಲಿ ಅವರು ಮಾತಾಡುತ್ತಾರೆ. ಇನ್ನು ನಾವುಗಳು ಕನ್ನಡ ಓದುವುದು, ಬರೆಯುವುದು ಗೊತ್ತಾದಲ್ಲಿ ತಂತಾನೆ ಒಂದು ತಳಿ ನಾವುಗಳು ಹಿಂದಕ್ಕೆ ಹೋಗುತ್ತೇವೆ. ಮನೆಯ ಅಮ್ಮಂದಿರುಗಳೆಲ್ಲಾ ಏಕತಾ ಕಪೂರಳ ಮೆಗಾ ಧಾರಾವಾಹಿಗಳಲ್ಲಿ ಮುಳುಗಿಹೋಗಿದ್ದಾರೆ. ಗಂಡಸರಿಗೆ ಸಂಸ್ಕೃತಿಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವಿಲ್ಲ.

ಹಾಗೆಂದರೆ, ನಮಗೆ ‘ಕಾಂಟೆಂಪೋ’’ ಕನ್ನಡದ ಸಂಸ್ಕೃತಿ ಅಂದರೆ ಏನು ಅಂತ ಗೊತ್ತಾಗುವುದು ಹೇಗೆ. ಅಥವಾ ಹಿಂದಿನದನ್ನು ನೆನೆಸಿಕೊಳ್ಳುವುದು ಮಾತ್ರ ಸಹಜವೇ? ನಾನು ಬೆಂಗಳೂರಿನಲ್ಲಿದ್ದೂ ಎಸ್ಪಿಯ ಸಂಗೀತ ಕೇಳಲು ಹೋಗಿದ್ದರೆ, ‘ಜೊತೆಯಲಿ’ ಗೆ ಮಾತ್ರ ತಲೆದೂಗಿಸುತ್ತಿದ್ದೆನಾ? ವಸುಂಧರಾ ದಾಸ್‌ ಕನ್ನಡಿಗರಿಗೆ ರಿಲೇಟ್‌ ಆಗುವುದಿಲ್ಲ ಅಂತಳೇ ಆಕೆ ಪಾಪ, ಹೋಗಿ ಬೇರೆ ಭಾಷೆಗಳಲ್ಲಿ ಹಾಡುತ್ತಾಳಾ? ಅಥವಾ ನಮಗೆ ಗೊತ್ತಿಲ್ಲದ ಇನ್ನೊಂದು ಫ‚ೂ್ಯಷನ್‌ ಕನ್ನಡ ಪ್ರಪಂಚ ಬೆಂಗಳೂರಲ್ಲಿ ಸದ್ದುಗದ್ದಲವಿಲ್ಲದೆ ಶುರುವಾಗುತ್ತಿದೆಯೇ?

ಇದು ಬರೀ ನಮ್ಮ ಸಮಸ್ಯೆ ಮಾತ್ರವೇ? ಬೆಂಗಳೂರಿನ ಪತ್ರಕರ್ತರು ವೈಎನ್ಕೆ, ಸದಾಶಿವರನ್ನು ನೆನೆಸುತ್ತಾರೆ. ಕವಿಗಳು ಅಡಿಗ, ಕೆಎಸ್‌ ನರಸಿಂಹಸ್ವಾಮಿಗಳನ್ನು ನೆನೆಸುತ್ತಾರೆ. ಕಥೆಗಾರರು ಖಾಸನೀಸರನ್ನು ನೆನೆಸುತ್ತಾರೆ. ರಾಜಕಾರಣಿಗಳು ಶಾಂತವೇರಿ ಗೋಪಾಲಗೌಡರನ್ನು. ಹಾಗಾದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ತನ್ನ ಪರಿಪೂರ್ಣತೆಯನ್ನು ಸಾಧಿಸಿ ಆಗಿಹೋಗಿದೆಯೇ? ಈಗಿನವರು ಮಾಡುತ್ತಿರುವುದಕ್ಕೇನೂ ಅರ್ಥವಿಲ್ಲವೇ? ನಾವುಗಳು ನೇರವಾಗಿ ಕುವೆಂಪು, ಕಾರಂತರನ್ನು ಮಧ್ಯೆ ನಮ್ಮ ತಳಿಯವರನ್ನು ಬೈಪಾಸ್‌ ಮಾಡಿ ನಮ್ಮ ಮಕ್ಕಳಿಗೆ ತೋರಿಸಿದರೆ ಸತ್ವಪೂರ್ಣ ಕನ್ನಡ ಉಳಿಯುತ್ತದೆಯಾ?ನನಗೆ ಗೊತ್ತಿಲ್ಲ.

ಇಷ್ಟಾದರೂ ನಾವು ಇಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಮಗಳ ಮದುವೆಗಿಂತಾ ಜಾಗರೂಕವಾಗಿ ಮಾಡುತ್ತೇವೆ. ವಿಜಯನಗರದ ಮೆರವಣಿಗೆಯನ್ನು ಅದ್ದೂರಿಯಿಂದ ಮಾಡುತ್ತೇವೆ. ಯಮನ ಪಾಪ ಪುಣ್ಯಗಳ ಲೆಕ್ಕಾಚಾರಕ್ಕೆ ನಗುತ್ತೇವೆ.

ನಾನೂ ಹೋಗಿಬಂದಿದ್ದೇನೆ. ಮುಂದೆಯೂ ಹೋಗಿ ಬರುತ್ತೇನೆ.

ಏಕೆ ಗೊತ್ತಾ? ಕೆಲವೊಂದು ಔಷಧಿಯ ನೇರ ಪರಿಣಾಮಗಳು ಪರಿಣಾಮಕಾರಿಯಾಗಿಲ್ಲದಿದ್ದರೂ ಅವುಗಳ ಅಡ್ಡಪರಿಣಾಮಗಳು ಗಟ್ಟಿಯಾಗಿರುತ್ತವೆ. ನನ್ನ ಖುಷಿ- ಬರಗೂರರ ಜತೆ, ಮಿತ್ರರ ಜತೆ, ದೊಡ್ಡರಂಗೇ ಗೌಡ್ರ ಜತೆ ಮಾತಾಡಬಹುದು ನಿಂತು ಫ‚ೋಟೋ ತೆಗೆಸಿಕೊಳ್ಳಬಹುದು ಅನ್ನುವ ಪರಿಣಾಮ ತೀರ ಮೇಲುಸ್ತರಕ್ಕನ್ನಿಸಿದರೂ, ಮಗಳಿಗೆ ಕನ್ನಡ ಮಾತಾಡಲು ಸಿಗಬಹುದಾದ ಅವಕಾಶವಿದೊಂದೇ ಅನ್ನುವ ನನ್ನ ಉತ್ತರ ಮತ್ತೆ ಕ್ಲೀಷೆಯೆನ್ನಿಸುತ್ತದೆ. ಎಷ್ಟೋ ಮಕ್ಕಳಿಗೆ ಇಲ್ಲಿ ನಾವು ಕನ್ನಡದಲ್ಲಿ ಕಾರ್ಯಕ್ರಮ ಮಾಡುತ್ತಿರುವುದೇ ಗೊತ್ತಿಲ್ಲದಿದ್ದರೂ ಬಣ್ಣಬಣ್ಣದ ಬಟ್ಟೆಗಳಿಗೆ ಮರುಳಾಗಿ ಗುರುಕಿರಣನ ಸಂಗೀತಕ್ಕೆ ತಲೆದೂಗಿ ಕಲ್ಯಾಣನ ಸಾಹಿತ್ಯಕ್ಕೆ ತುಟಿಯಾಡಿಸಿ ಕನ್ನಡ ಉಳಿಸುತ್ತವೆ. ಹೀಗೆ ಉಳಿದ ಕನ್ನಡ ನಮ್ಮ ಮೊಮ್ಮಕ್ಕಳ ಬಾಯಲ್ಲಿ ಕೊಂಚವಾದರೂ ತೊದಲಿ ಎಷ್ಟೇ ಡೈಲ್ಯೂಟಾಗಿದ್ದರೂ ‘ಅಜ್ಜಾ’ ಅನ್ನಬಹುದೇನೋ ಅನ್ನುವ ಒಂದು ಮಹದಾಕಾಂಕ್ಷೆ. (ಹುಚ್ಚು, ಮಗಳೇ ಡ್ಯಾಡಿ ಅಂತಾಳೆ)

ಬರಗೂರರು ಹೇಳಿದಂತೆ ಕರ್ನಾಟಕ ನಮ್ಮ ಚರಿತ್ರೆ, ಅಮೆರಿಕಾ ನಮ್ಮ ಭೂಗೋಳ. ಅದಕ್ಕೇ ಏನು ಪ್ರೈಮರಿ ಸ್ಕೂಲಿನಲ್ಲಿ ಸಮಾಜಶಾಸ್ತ್ರದ ಪಠ್ಯದಲ್ಲಿ ಭೂಗೋಳ ಮತ್ತು ಚರಿತ್ರೆ ಬೇರೆ ಬೇರೆ ಪಠ್ಯವಿಷಯವಾಗಿರುವುದು?

ವಾಪಸ್ಸು ಬರಬೇಕಾದರೆ, ಪ್ಲೇನಿನಲ್ಲಿ ‘ಮುಸ್ಸಂಜೆಯ ಕಥಾ ಪ್ರಸಂಗ’ದಲ್ಲಿ ತಲೆ ಹುದುಗಿಸುತ್ತೇನೆ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X