• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒರ್ಲಾಂಡೊ ಸಮ್ಮೇಳನ : ಶುಕ್ರವಾರ ಸಂಜೆಯ ಸುತ್ತುನೋಟ

By Staff
|
Srivathsa Joshi, Orlando Florida ಶ್ರೀವತ್ಸ ಜೋಶಿ

ಒರ್ಲಾಂಡೊ (ಫ್ಲಾರಿಡಾ)

ಜಾಗತಿಕ ಕನ್ನಡಿಗರ ಸ್ನೇಹ ಮಿಲನ ವೇದಿಕೆ, ಬಹು ನಿರೀಕ್ಷೆಯ ವಿಶ್ವ ಕನ್ನಡ ಸಮ್ಮೇಳನ ಸೆ.3ರಂದು ಶುರುವಾಗಿದೆ. ಒರ್ಲಾಂಡೊದಲ್ಲೀಗ ಕನ್ನಡದ ಕಲರವ ; ಕನ್ನಡಿಗರ ಚಿಲಿಪಿಲಿ. ಆ ಕನ್ನಡ ಸಂಭ್ರಮದ ಕೆಲವು ತುಣುಕುಗಳನ್ನು ಅವುಗಳು ಕಂಡಂತೆ ಇಲ್ಲಿಡಲಾಗಿದೆ.

Entrance To Main Convention Hall
 • ಚಂಡಮಾರುತ ಭೀತಿಯಿಂದಾಗಿ ಸಮ್ಮೇಳನ ವಠಾರದಲ್ಲಿ ತೋರಣ ಮತ್ತಿತರ ಅಲಂಕಾರಗಳೂ ನಾಮ್‌ಕೆವಾಸ್ತೆ ಮಾತ್ರ ಇವೆ. ಗಂಧದಗುಡಿ (ನೋಂದಾವಣಿ ಕಕ್ಷೆ), ಅನ್ನಪೂರ್ಣ (ಭೋಜನ ಗೃಹ), ಗಾಂಧಿಬಜಾರ್‌ (ವಸ್ತುಪ್ರದರ್ಶನ ಮತ್ತು ಮಾರಾಟಮಳಿಗೆ) ಫಲಕಗಳನ್ನು ಬಿಟ್ಟರೆ ಅಲ್ಲಿ ಟಿಪಿಕಲ್‌ ಸಮ್ಮೇಳನಗಳಲ್ಲಿ ಕಾಣಸಿಗುವ ಕವಿ-ಮಹಾಪುರುಷರ ಹೆಸರುಗಳುಳ್ಳ ದ್ವಾರಗಳು, ಮಂಟಪಗಳು, ವೇದಿಕೆಗಳು, ನಗರಗಳು ಏನೇನೂ ಇಲ್ಲ. ಫ್ರಾನ್ಸಿಸ್‌ ಬಗ್ಗೆ ಆತಂಕವೊಂದೇ ಎಲ್ಲೆಲ್ಲೂ ಕಾಣಸಿಗುತ್ತಿರುವುದು.
 • ಹರಿಕೇನ್‌ ಹರಿಕೇನ ಹರಿಕೇನ್‌... ಎಲ್ಲರ ಬಾಯಲ್ಲೂ ಹಿಡಿಶಾಪ ಹಾಕಿಸಿಕೊಂಡಿದ್ದು ಫ್ರಾನ್ಸಿಸ್‌ ಚಂಡಮಾರುತ. ಅಷ್ಟಾಗಿ ಶುಕ್ರವಾರದ ರಾತ್ರೆಯವರೆಗೂ ಒರ್ಲಾಂಡೊದಲ್ಲಿ ಅಸಲಿ ಹರಿಕೇನ್‌ನ ಕುರುಹು ಒಂದು ಸ್ವಲ್ಪವೂ ಇರಲಿಲ್ಲ. ಜನರ ಬಾಯಲ್ಲಿ ಮಾತ್ರ ‘ಹರಿಕುಣಿದ ನಮ್ಮ ಹರಿಕುಣಿದ...’ ಇದ್ದಂತೆ ‘ಹರಿಕೇನಿಂದ ನಮ್ಮ ಹರಿಕೇನಿಂದ ತೊಂದ್ರೆಯಾಯ್ತು ನಮ್ಗೆ ಹರಿಕೇನಿಂದ...’. ಏನಿಲ್ಲೆಂದರೂ 2500 ರಷ್ಟಿರಬಹುದಾಗಿದ್ದ ಜನಸ್ತೋಮ ಸುಮಾರು 1300 ತಲುಪಿದ್ದೇ ಜಾಸ್ತಿ.
 • Vedikeyamele SaahitigaLa Saalu
 • ಒಂದೇ ಸೂರಿನಡಿ ಹಲವು ಕನ್ನಡ ಸಾಹಿತಿಗಳು - ಅದೂ ಅಮೆರಿಕದಲ್ಲಿ ! ವೇದಿಕೆಯ ಮೇಲೆ ಬರಗೂರು ರಾಮಚಂದ್ರಪ್ಪ, ಅ.ರಾ.ಮಿತ್ರ, ಎಚ್‌.ಎಸ್‌ ಪಾರ್ವತಿ, ಉದ್ಯಾವರ ಮಾಧವ ಆಚಾರ್ಯ, ದೊಡ್ಡರಂಗೇಗೌಡ, ಕೃಷ್ಣೇಗೌಡ ಇವರನ್ನೆಲ್ಲ ಸಮ್ಮೇಳನದ ಪ್ರಥಮ ದಿನದ ಸಂಜೆಯೇ ಶಾಲುಹೊದಿಸಿ ಗಂಧದ ಹಾರ ಹಾಕಿ ಸನ್ಮಾನಿಸಿದ್ದು ಮತ್ತು ಅದೇ ಸಭೆಯಲ್ಲಿ, ಅಮೆರಿಕನ್ನಡಿಗರು ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು - ಈ ಸಲದ ವಿಶ್ವಕನ್ನಡ ಸಮ್ಮೇಳನ ಕನ್ನಡ ಸಾಹಿತ್ಯಕ್ಕೂ ಯೋಗ್ಯ ಗೌರವ ಕೊಟ್ಟಿರುವುದಕ್ಕೆ ಸಾಕ್ಷಿ. 2002ರಲ್ಲಿ ಡೆಟ್ರಾಯಿಟ್‌ನಲ್ಲಾಗಿದ್ದ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಈ ಗೌರವ ಸಿಕ್ಕಿರಲಿಲ್ಲವೆಂಬ ಅಸಮಾಧಾನ ಹಲವರಿಗೆ ಆಗಿತ್ತು. ಒರ್ಲಾಂಡೊ ಸಮ್ಮೇಳನದಲ್ಲಿ ಮೊದಲದಿನದ ಈ ಕಾರ್ಯಕ್ರಮವಷ್ಟೇ ಅಲ್ಲದೆ ಇನ್ನೆರಡು ದಿನಗಳಲ್ಲೂ ಸಾಹಿತ್ಯಗೋಷ್ಠಿಗಳು, ಭಾಷಣಗಳು, ಪುಸ್ತಕ ವಿಮರ್ಶೆ ಇತ್ಯಾದಿ ವಿವಿಧ ಸಮಾವೇಶಗಳಲ್ಲಿ ನಡೆಯಲಿವೆ.
 • Baraguru Ramachandrappa With Amarnath Gowda
 • ಮೊದಲ ದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕವಿನಮನ (ರಾಗಮಾಲಿಕೆಯಲ್ಲಿ ಕನ್ನಡದ ವಿವಿಧ ಕವಿಗಳ ಜನಪ್ರಿಯ ಗೀತೆಗಳ ಗಾಯನ) ನಡೆಯುತ್ತಿದ್ದಂತೆ ವೇದಿಕೆಯ ಅಕ್ಕಪಕ್ಕದ ಭಾರಿಗಾತ್ರದ ಪರದೆಗಳಲ್ಲಿ ಆಯಾ ಕವಿಯ ಭಾವಚಿತ್ರ ಮತ್ತು ಇತರ ವಿವರಗಳು-ವಿಶೇಷಗಳು ಕನ್ನಡದಲ್ಲಿ ಮೂಡಿಬರುವಂತೆ ಸಂಯೋಜನೆಯಿತ್ತು.
 • ‘ಮಿಸ್‌ ಅಮೆರಿಕನ್ನಡಿಗ’ ಸೌಂದರ್ಯ ಸ್ಪರ್ಧೆ (ಶನಿವಾರದಂದು ನಡೆಯುತ್ತದೆ) ಸಾಕಷ್ಟು ಕುತೂಹಲ ಕೆರಳಿಸಿರುವಂತಿದೆ. ಸ್ಪರ್ಧಾಕಾಂಕ್ಷಿಗಳಾಗಿ ಬಂದಿರುವ ಹದಿಹರೆಯದ ಹೆಣ್ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡ ನಡೆ-ನುಡಿ-ಸಂಸ್ಕೃತಿಯ ಜ್ಞಾನ ಸ್ಪರ್ಧೆಯೂ ಇದ್ದರೆ, ಅಮೆರಿಕದಲ್ಲೇ ಹುಟ್ಟಿಬೆಳೆದ ಈ ಮಕ್ಕಳ ಮುಗ್ಧ ಕನ್ನಡ ಕೇಳುವುದು ಸೊಗಸಿರುತ್ತದೆ!
 • ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೇ ಅತಿ ಪ್ರಮುಖ ಆಕರ್ಷಣೆಯಾಗಲಿರುವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಈಗಾಗಲೇ ಸಮ್ಮೇಳನ ನಡೆಯುವ ಸ್ಥಳಕ್ಕೆ ಆಗಮಿಸಿಯಾಗಿದೆ. ಕರ್ನಾಟಕದದಾದ್ಯಂತ ಈಟಿವಿಯ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದಿಂದ ಮನೆಮಾತಾಗಿರುವ ಎಸ್ಪಿ ಬಾಲು, ತನ್ನ ಸುಲಲಿತ ರಸಧಾರೆಯಿಂದ ಈಗ ಅಮೆರಿಕನ್ನಡಿಗರ ಎದೆ ತುಂಬಲಿದ್ದಾರೆ. ಆ ರಸಮಂಜರಿ ಕಾರ್ಯಕ್ರಮಕ್ಕೆ ಅದ್ಭುತ ಮೆಚ್ಚುಗೆ ದೊರಕುವ ದೇಖಿಯಿದೆ.
 • ಎರಡು ಮೂರು ದಶಕಗಳಿಗೂ ಹಿಂದೆಯೇ ಕರ್ನಾಟಕವನ್ನು ಬಿಟ್ಟು ಅಮೆರಿಕೆಗೆ ಬಂದು ನೆಲೆಸಿರುವ ಹಳೆತಲೆಮಾರಿನ ಅಮೆರಿಕನ್ನಡಿಗರು ಸಮ್ಮೇಳನದಲ್ಲಿ ಸೇರಿರುವ ಜನಸ್ತೋಮದಲ್ಲಿ ಹೆಚ್ಹಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಯುವಪೀಳಿಗೆ (ಸಾಫ್ಟ್‌ವೇರ್‌ ಪೀಳಿಗೆ) ಜಾಸ್ತಿಯಿರುವ ಕ್ಯಾಲಿಫೋರ್ನಿಯಾ, ವರ್ಜೀನಿಯಾ ಇತ್ಯಾದಿ ಕಡೆಗಳಿಂದ ಸಮ್ಮೇಳನಕ್ಕೆ ಬಂದವರು ಕಡಿಮೆ.
 • AnnapoorNa Dining Hall Board
 • ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ನ ನೆಲಮಾಳಿಗೆಯೇ ಬೃಹತ್‌ ಪಾಕಶಾಲೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಅಡಿಗೆಮನೆಯಲ್ಲೇ ಜಹಾಂಗೀರು, ಪೂರಿ, ಸೇಮಿಗೆ ಪಾಯಸ, ನುಗ್ಗೆ ಹುಳಿ, ಅನ್ನ ಸಾರು ತಯಾರಾದದ್ದು. ಸಮವಸ್ತ್ರಧಾರಿ ಸಿಬ್ಬಂದಿಯಿಂದ ಅಚ್ಚುಕಟ್ಟಿನ ರೀತಿಯಲ್ಲಿ ಸರಬರಾಜು. ಜನಸಂದಣಿ ಕಡಿಮೆಯಿದ್ದರಿಂದಲೂ ಇರಬಹುದು - ಎಲ್ಲರೂ ಸಾವಧಾನವಾಗಿ ಪ್ರಶಾಂತಚಿತ್ತರಾಗಿ ಉಭಯಕುಶಲೋಪರಿ ಮಾತಾಡುತ್ತ ಊಟ ಸವಿದರು. ನೂಕುನುಗ್ಗಲಿಲ್ಲ , ಗೊಂದಲವಿಲ್ಲ.
 • ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ನ ವಿವಿಧ ಸುಂದರ ಕಾರಂಜಿಗಳು, ಕೆತ್ತನೆಗಳು, ಕಲಾಕೃತಿಗಳ ಹಿನ್ನೆಲೆಯಲ್ಲಿ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಿರುವವರ ದೃಶ್ಯ ಸಾಮಾನ್ಯವಾಗಿತ್ತು. ಇಂಥ ಸಮ್ಮೇಳನಗಳಿಗೆ ನಿಜವಾಗಿಯೂ ಹೇಳಿಮಾಡಿಸಿದ ಭವ್ಯವಾದ ಹೊಟೆಲ್‌ ಇದು.
 • ಶುಕ್ರವಾರ ರಾತ್ರೆಯ ಭೋಜನ, ಶನಿವಾರ-ಭಾನುವಾರಗಳ ಮೂರ್ಹೊತ್ತಿನ ಊಟೋಪಚಾರ - ಹೀಗೆ ಏಳು ಕೂಪನ್‌ಗಳನ್ನು ಕ್ರಮಬದ್ಧವಾಗಿ ಜೋಡಿಸಿ ಲಕೋಟೆಯಲ್ಲಿಟ್ಟು ಪ್ರತಿಯಾಬ್ಬ ಸಮ್ಮೇಳನಾರ್ಥಿಗೂ ನೋಂದಣಿಯ ಕೈಚೀಲದಲ್ಲೇ ವ್ಯವಸ್ಥಿತವಾಗಿ ಕೊಡಲಾಗಿದೆ. ಇವೆಲ್ಲ ವಿಷಯಗಳನ್ನು ಬಹಳ ಚಾಕಚಕ್ಯತೆ ಮತ್ತು ಮುತುವರ್ಜಿಯಿಂದ ಆಯೋಜಿಸಿರುವುದು ತಿಳಿಯುತ್ತದೆ.
 • JanardhanaSwamyCartoons_On_Display
 • ನೋಂದಣಿ ಕೈಚೀಲದಲ್ಲಿ ಈಗಾಗಲೇ ವಿತರಣೆಯಾಗಿರುವ ಸಮ್ಮೇಳನ ಸ್ಮರಣಸಂಚಿಕೆ ‘ವಿಕಾಸ’ ಅತ್ಯಂತ ಉತ್ತಮ ಗುಣಮಟ್ಟದಲ್ಲಿ ಬಂದಿದೆ. ಪ್ರತ್ಯೇಕ ವಿಭಾಗಗಳಲ್ಲಿ ಆಹ್ವಾನಿತ ಲೇಖನಗಳು, ಅಮೆರಿಕನ್ನಡಿಗ ಬರಹಗಾರರ ಲೇಖನಗಳು, ಛಾಯಾಚಿತ್ರಗಳು, ಅಮೆರಿಕನ್ನಡಿಗರೇ ಆದ ಜನಾರ್ಧನ ಸ್ವಾಮಿ ಅವರಿಂದ ವಿನ್ಯಾಸಗೊಂಡ ಆಕರ್ಷಕ ಮುಖಪುಟ - ಎಲ್ಲವೂ ಒಪ್ಪ ಓರಣವಾಗಿವೆ; ಸಂಚಿಕೆಯ ಅಂದವನ್ನು ಹೆಚ್ಚಿಸಿವೆ. ಡಾ।ಯು ಬಿ ವಾಸುದೇವ್‌ ಅವರ ನೇತೃತ್ವದ ಸಂಪಾದಕ ಮಂಡಳಿಯ ಶ್ರಮ ಸಾರ್ಥಕವಾಗಿದೆ. ಸಮ್ಮೇಳನ ವಿವರಗಳ ಮಾರ್ಗದರ್ಶಿ ಕೈಪಿಡಿ ‘ಸುಗಂಧ’ ಕೂಡ ಉತ್ತಮವಾಗಿದೆ.
 • ವಸ್ತುಪ್ರದರ್ಶನ ಮತ್ತು ಮಾರಾಟಮಳಿಗೆಯ ಸ್ಟಾಲ್‌ಗಳೆಲ್ಲ ಇನ್ನೂ ಠಿಕಾಣಿ ಹೂಡುತ್ತಲಿವೆಯಷ್ಟೆ . ಆಭರಣಗಳ ಒಂದು ಸ್ಟಾಲ್‌ ಅದಾಗಲೇ ಸೆಟ್‌ಅಪ್‌ ಆಗಿದ್ದು ಅಲ್ಲಿ ಹೆಂಗಳೆಯರು ಗಿರಾಕಿಗಳಾಗಿ ಮುತ್ತಿಗೆ ಹಾಕಿಯೂ ಆಗಿತ್ತು !
 • SMKrishana And Other Guests
 • ಕರ್ನಾಟಕದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಆಗಮಿಸಿಲ್ಲ. ಈಗ ಬರುತ್ತಾರೆ ಆಗ ಬರುತ್ತಾರೆ ಎನ್ನುವ ಮಾತುಗಳು ಸಮ್ಮೇಳನ ಪ್ರಾಂಗಣದಲ್ಲಿ ಕೇಳಿ ಬರುತ್ತಿದ್ದುವು. ಒಂದು ಮೂಲದ ಪ್ರಕಾರ ಅವರು ಪ್ರಯಾಣಿಸುತ್ತಿರುವ ವಿಮಾನ ವಾಷಿಂಗ್ಟನ್‌ಗೆ ಬಂದು ಅಲ್ಲಿಂದ ಒರ್ಲಾಂಡೊ ಸಮೀಪದ ಇನ್ನೊಂದು ನಗರದ ವಿಮಾನನಿಲ್ದಾಣಕ್ಕೆ ಬಂದು ಮತ್ತೆ ಕಾರಿನಲ್ಲಿ ಒರ್ಲಾಂಡೊ ತಲುಪಿದರಷ್ಟೆ ಶನಿವಾರ ಬೆಳಗ್ಗಿನ ವಿಧ್ಯುಕ್ತ ಉದ್ಘಾಟನೆ ಅವರ ಅಮೃತ ಹಸ್ತದಿಂದಾಗುತ್ತದೆ. ಒಂದುವೇಳೆ ಅವರು ಬರುವ ಕಾರ್ಯಕ್ರಮ ಬದಲಾದರೂ ಕರ್ನಾಟಕದ ಮೈತ್ರಿ ಸರಕಾರದ ಪಾಲುದಾರ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಈಗಾಗಲೇ ಸಮ್ಮೇಳನ ಸ್ಥಳದಲ್ಲಿದ್ದು ಅವರೇ ಉದ್ಘಾಟನೆ ಮಾಡುತ್ತಾರೆ.
 • ಇತ್ತ ಹರಿಕೇನ್‌ ಎಮರ್ಜೆನ್ಸಿಯಿಂದಾಗಿ ಫ್ಲಾರಿಡಾದ ಎಟಾರ್ನಿ ಜನರಲ್‌ ಚಾರ್ಲಿ ಕ್ರಿಸ್ಟಿ ಮತ್ತು ಹಾಗೆಯೇ ಭಾರತದ ಅಮೆರಿಕ ರಾಯಭಾರಿ ರೊಮೇನ್‌ ಸೇನ್‌ ಸಹ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ.
 • ‘ಅಕ್ಕ’ (ಅಮೆರಿಕ ಕನ್ನಡ ಕೂಟಗಳ ಆಗರ)ದ ತೆಕ್ಕೆಗೆ ಸಿಕ್ಕಿರುವ ಹೊಸ ಎರಡು ಕನ್ನಡ ಕೂಟಗಳೆಂದರೆ ನ್ಯೂಜೆರ್ಸಿಯ ‘ವೃಂದಾವನ’ ಮತ್ತು ಡಾಲಸ್‌ (ಟೆಕ್ಸಾಸ್‌)ನ ‘ಮಲ್ಲಿಗೆ’. ಅಕ್ಕದ ಚಾರ್ಟರ್‌ ಸದಸ್ಯತ್ವ ಪಡೆಯಲು ತುದಿಗಾಲಲ್ಲಿ ನಿಂತಿರುವ ಇನ್ನೊಂದು ಕನ್ನಡಕೂಟ ಕೊಲರಾಡೊ (ಡೆನ್ವರ್‌) ದಲ್ಲಿದೆ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more