ಸಮ್ಮೇಳನ ಶುರುವಾಯಿತಣ್ಣ ;ನೋಡಿದ ಕಡೆಯಲ್ಲೆಲ್ಲ ಕನ್ನಡದ ಬಣ್ಣ !
ಈ ಮುನ್ನ ಸುಮಾರು 2500ಕ್ಕೂ ಹೆಚ್ಚು ಮಂದಿ ಸಮ್ಮೇಳನದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ್ದರು. ಆದರೆ, ಚಂಡಮಾರುತ ಫ್ರಾನ್ಸಸ್ ಹಠಮಾರಿತನದಿಂದಾಗಿ ಮೊದಲ ದಿನ ಬಂದವರು 1200 ಕನ್ನಡಿಗರು ಮಾತ್ರ. ಫ್ಲಾರಿಡಾದಲ್ಲೀಗ ಚಂಡಮಾರುತದ ಅಬ್ಬರ. ರಾಜ್ಯದಲ್ಲಿ ತುರ್ತುಪರಿಸ್ಥಿತಿಯಿದೆ. ದಕ್ಷಿಣ ಭಾಗದ ಅನೇಕ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು, ನಿಷೇಧಗಳನ್ನು ಜಾರಿಗೊಳಿಸಲಾಗಿದೆ. ಆ ಕಾರಣದಿಂದಲೇ ಒರ್ಲಾಂಡೊ ಮುಖಿಗಳಾಗಿದ್ದ ಅನೇಕರು ಕೊನೆಯ ಕ್ಷಣದಲ್ಲಿ ಹಿಂಜರಿದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಒರ್ಲಾಂಡೊದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶುಕ್ರವಾರ ಮಧ್ಯಾಹ್ನದಿಂದ ಮುಚ್ಚಲಾಗಿದೆ. ಈ ತಾವು ಸಮ್ಮೇಳನ ಸ್ಥಳಕ್ಕೆ ಬರಲು ತಲೆಬಾಗಿಲಾಗಿತ್ತು . ಆದರೆ ಅನೇಕ ಉತ್ಸಾಹಿಗಳು ಹಾಗೂ ಸಾಹಸಿ ಮನೋಭಾವದವರು ಒಂದು ದಿನ ಮುಂಚಿತವಾಗಿಯೇ ಸಮ್ಮೇಳನ ಸ್ಥಳಕ್ಕೆ ಬಂದು ಸೇರಿಕೊಂಡಿದ್ದಾರೆ ; ಎರಡು ವರ್ಷಗಳಿಗೊಮ್ಮೆ ನಡೆಯುವ ಕನ್ನಡ ಜಾತ್ರೆಯನ್ನು ತಪ್ಪಿಸಿಕೊಳ್ಳಲು ಬಯಸದವರು ಬಳಸು ದಾರಿಗಳ ಮೂಲಕ ಒರ್ಲಾಂಡೊ ತಲುಪಿದ್ದಾರೆ. ಹಾಗಾಗಿ ಸಂಖ್ಯೆ ಕಡಿಮೆಯಿದ್ದರೂ ಸಮ್ಮೇಳನ ಕಳಾಪೂರ್ಣವಾಗಿಯೇ ಮುಂದುವರಿದಿದೆ.
2004ರ ‘ವಿಶ್ವಕನ್ನಡ ಸಮ್ಮೇಳನ’ದ ಸಾರಥ್ಯವನ್ನು ‘ಅಕ್ಕ’ ಬಳಗದ ಆತಿಥೇಯ ಶ್ರೀಗಂಧ ಕನ್ನಡ ಕೂಟ ಹೊತ್ತಿದೆ. ಪ್ರತಿಷ್ಠಿತ ಸಮ್ಮೇಳನವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನಡೆಸುವುದನ್ನು ತಾವು ಹಾಗೂ ಕನ್ನಡ ಕೂಟದ ಇತರ ಬಂಧುಮಿತ್ರರು ಸವಾಲು-ಪ್ರತಿಷ್ಠೆಯಾಗಿ ಪರಿಗಣಿಸಿದ ವಿಷಯವನ್ನು ಶ್ರೀಗಂಧ ಕನ್ನಡ ಕೂಟದ ಅಧ್ಯಕ್ಷೆ ಡಾ.ರೇಣುಕಾ ರಾಮಪ್ಪ ತಮ್ಮ ಸ್ವಾಗತ ಭಾಷಣದಲ್ಲಿ ಸ್ಮರಿಸಿಕೊಂಡರು. ಕನಸು ನನಸಾಗಿದೆ ಎಂದ ರೇಣುಕಾ- ಸಮ್ಮೇಳನಕ್ಕೆ ಆಗಮಿಸಿದ ಸಕಲರಿಗೂ ಸ್ವಾಗತವೆಂದರು. ಹವಾಮಾನ ವೈಪರೀತ್ಯದಿಂದಾಗಿ ಉಂಟಾಗಿರುವ ಅನಾನುಕೂಲಗಳಿಗೆ ಡಾ.ರೇಣುಕಾ ಕ್ಷಮೆ ಕೋರಿದರು.
ಸಾಂಸ್ಕೃತಿಕ ಸಮಿತಿಯ ಉಸ್ತುವಾರಿ ಹೊಂದಿರುವ ಇಂದಿರಾ ಶಾಸ್ತ್ರಿ ಮುಂದಿನ ಮೂರು ದಿನಗಳಲ್ಲಿ ಸಮ್ಮೇಳನದಲ್ಲಿ ನಡೆಯುವ ವಿವಿಧ ಗೋಷ್ಠಿಗಳು, ಕಾರ್ಯಕ್ರಮಗಳು, ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳು ಹಾಗೂ ಅವುಗಳಲ್ಲಿ ಭಾಗವಹಿಸುವವರ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಷಾ ಗಣೇಶ್ ಮಾತನಾಡಿದರು. ಚದುರಿದ ಕನ್ನಡಿಗರು ಕನ್ನಡ ಹಾಗೂ ಕನ್ನಡ ಸಂಸ್ಕೃತಿಯನ್ನು ಅಮೆರಿಕದಲ್ಲಿ ಜೀವಂತವಾಗಿಡಲು ನಡೆಸುತ್ತಿರುವ ಪ್ರಯತ್ನವನ್ನು ಉಷಾ ಶ್ಲಾಘಿಸಿದರು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಪ್ರಸಾರಕ್ಕೆ ಅಮೆರಿಕ ವೇದಿಕೆಯಾಗಿ ಪರಿಣಮಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಕನ್ನಡ ಸಂಸ್ಕೃತಿ ಹಾಗೂ ಸಾಹಿತ್ಯ ಸಂಬಂಧ ಸರ್ಕಾರದ ಮುಂದಿರುವ ಕೆಲ ಯೋಜನೆಗಳನ್ನು ಉಷಾ ಗಣೇಶ್ ಸಮ್ಮೇಳನದಲ್ಲಿ ಹಂಚಿಕೊಂಡರು. ಅವುಗಳೆಂದರೆ :
- ದಾಸ ಸಾಹಿತ್ಯವನ್ನು ಅಂತರ್ಜಾಲ ಹಾಗೂ ಸಿ.ಡಿ.ಗಳ ಮೂಲಕ ಪ್ರಚುರಪಡಿಸುವುದು.
- ಪ್ರಸಕ್ತ ವರ್ಷದಲ್ಲಿ ಶರಣ ಸಾಹಿತ್ಯವನ್ನೂ ಅಂತರ್ಜಾಲ ಹಾಗೂ ಸಿ.ಡಿ.ಗೆ ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಜನಪದ ಹಾಗೂ ಯಕ್ಷಗಾನ ಸಾಹಿತ್ಯವನ್ನು ಕೂಡಾ ಇದೇ ರೀತಿ ಪ್ರಚುರ ಪಡಿಸಲು ಸರ್ಕಾರ ಚಿಂತಿಸಿದೆ.
- ರಾಜ್ಯದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ಹಂಪಿ, ಬಾದಾಮಿ, ಬಿಜಾಪುರ, ಮೈಸೂರು ಮತ್ತಿತರ ಪ್ರದೇಶಗಳ ಕುರಿತ ಸಮಗ್ರ ಹಾಗೂ ಸರಳ ಕರ್ನಾಟಕ ಪ್ರವಾಸೋದ್ಯಮ ಗೆಜೆಟಿಯರ್ ತರಲು ಸರ್ಕಾರ ಉದ್ದೇಶಿಸಿದೆ.
- ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಕೆ.ಕೆ. ಮಿಶ್ರ, ‘ಅಮೆರಿಕ ಅಮೆರಿಕ’ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್ ಗಣ್ಯರ ಸಾಲಿನಲ್ಲಿ ಮಿಂಚುತ್ತಿದ್ದ ಕೆಲವರು.
ನಗೆ ವಿದ್ವಾಂಸ ಅ.ರಾ.ಮಿತ್ರ ಎನ್‌ಆರ್‌ಐ ಕನ್ನಡಿಗರ ಹತ್ತು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಬಿಡುಗಡೆಯಾದ ಪುಸ್ತಕಗಳು :
- ಅಮೆರಿಕಾಯಣ -ವೈ.ಆರ್.ಮೋಹನ್ (ಗೈರು ಹಾಜರಿ)
- ಕುವೆಂಪು ಸಾಹಿತ್ಯ ಸಮೀಕ್ಷೆ - (ಸಂ) ನಾಗ ಐತಾಳ್
- ಮರಳಿ ಬರುವೆ ನಾ ಮತ್ತು ಇತರ ಕಥೆಗಳು -ಸಂಧ್ಯಾ ರವೀಂದ್ರನಾಥ್ (ಗೈರು ಹಾಜರಿ)
- ನಿರ್ಗುಣ -ಗುರುಪ್ರಸಾದ್ ಕಾಗಿನೆಲೆ
- ಹೈಟೆಕ್ ಹಯವದನಾಚಾರ್ -ಅಲಮೇಲು ಅಯ್ಯಂಗಾರ್ (ಗೈರು ಹಾಜರಿ)
- ವಿಧಿ ಮತ್ತು ಇತರ ಕಥೆಗಳು -ಮಂಗಳೂರು ಜಯರಾಂ ಸುಬ್ಬರಾವ್
- Kalasu melOgara -ಎಚ್.ಕೆ.ನಂಜುಂಡ ಸ್ವಾಮಿ
- Where the Angeles Roam -ಎಚ್.ಕೆ.ನಂಜುಂಡ ಸ್ವಾಮಿ
- ಹೃದಯ -ವಿಶ್ವನಾಥ ಹುಲಿಕಲ್
- Dots and Lines - (ಸಂ) ವಿಶ್ವನಾಥ ಹುಲಿಕಲ್
ರಾತ್ರಿ ಊಟಕ್ಕೆ ತೆರಳುವ ಮುನ್ನ ಸಂಗೀತ ಸುಧೆಯ ಆಸ್ವಾದನೆಯಿತ್ತು . ಮುದ್ದು ಮೋಹನ್ ಹಾಗೂ ವೆಂಕಟೇಶ ಪ್ರಸಾದ್‌ರ ಹಿಂದೂಸ್ತಾನಿ ಗಾಯನದೊಂದಿಗೆ ಸುಭದ್ರಮ್ಮ ಮನ್ಸೂರರ ರಂಗಗೀತೆಗಳು ಸಂಗೀತದ ನಾಡಿಬಲ್ಲ ಕೇಳುಗರ ಪರವಶಗೊಳಿಸಿದವು.
ಊಟದ ನಂತರ ನೋಡುಗರ ಆವಾಹಿಸಿಕೊಳ್ಳುವ ಸರದಿ ಸಿ.ಆರ್.ಸಿಂಹರದು. ರಂಗನಟ, ಸಿನಿಮಾ ಕಲಾವಿದ ಸಿ.ಆರ್.ಸಿಂಹರ ಏಕಪಾತ್ರಾಭಿನಯದಲ್ಲಿ ವಿಶ್ವಕನ್ನಡ ಸಮ್ಮೇಳನದ ವೇದಿಕೆಯಲ್ಲಿ ‘ರಸಋಷಿ ಕುವೆಂಪು’ ಮೂಡಿಬಂದರು.
ಖಾಸಾ ಕೋಣೆಗಳಿಗೆ ತೆರಳಲು ಒಬ್ಬರನ್ನೊಬ್ಬರು ಬೀಳ್ಕೊಡುವ ಸಂದರ್ಭದಲ್ಲಿ ನಾಳೆಯ ಕನಸುಗಳು. ಸಮ್ಮೇಳನದ ಎರಡನೆಯ ದಿನದ ಗರ್ಭದಲ್ಲಿ ಎಷ್ಟೊಂದು ಬಣ್ಣಗಳು !











Click it and Unblock the Notifications