ಸಣ್ಣಕಥೆ : ನೀಮೊ

"Shall we go to lunch? (ಊಟಕ್ಕೆ ಹೋಗೋಣವೆ?)" ಎಂದು ಮೆಲುದನಿಯಲ್ಲಿ ಕೇಳಿದ. ಗಗನ್ ಮರುಮಾತಿಲ್ಲದೆ, ಗಣಕಯಂತ್ರವನ್ನು ಮುಚ್ಚಿ ಕುರ್ಚಿಯಿಂದ ಮೇಲೆದ್ದ. ಇಬ್ಬರು ಕಾರ್ ಪರ್ಕ್ ಹತ್ತಿರ ಬಂದು ಬೆಂಗ್ ಲಿಂನ ವಾಹನದಲ್ಲಿ ಆಸೀನರಾದರು.
ಗಗನ್ ಬೆಂಗಳೂರಿನ ಹುಡುಗ. ಬೆಂಗಳೂರಿನಿಂದ ಮಲೇಷ್ಯಗೆ ಕೆಲಸಕ್ಕಾಗಿ ಬಂದವನು. ಬೋರ್ನಿಯೊ ದ್ವೀಪದಲ್ಲಿರುವ, ಸರವಾಕ್ ರಾಜ್ಯದ ರಾಜಧಾನಿ ಕುಚಿಂಗ್ ಎಂಬ ನಗರದಲ್ಲಿ ವಾಸ. ಕುಚಿಂಗ ಸದಾ ಹಸಿರು ಕಾನನದ ಮಧ್ಯದಲ್ಲಿರುವ ಒಂದು ಸುಂದರ ನಗರ. ಭೂಮಧ್ಯ ರೇಖೆಯ ಅತ್ತ-ಇತ್ತ ಇರುವ ನಗರಗಳಲ್ಲೊಂದು. ಮಲೇಷ್ಯ ಭಾಷೆಯಲ್ಲಿ ಕುಚಿಂಗ್ ಎಂದರೆ ಬೆಕ್ಕು ಎಂಬರ್ಥ. ಕುಚಿಂಗ್ ಊರಿನ ಮಧ್ಯದಲ್ಲಿ ಬೆಕ್ಕಿನ ದೊಡ್ಡ ಮಣ್ಣಿನ ಮೂರ್ತಿಯನ್ನು ಕಂಡು ಹೀಗು ಉಂಟೆ ಎಂದುಕೊಂಡಿದ್ದ.
ಇನ್ನು ಬೆಂಗ್ ಲಿಂ ಸಿಂಗಾಪೂರಿನಲ್ಲಿದ್ದವನು. ಹುಟ್ಟಿದ್ದು ಮಲೇಷ್ಯನಲ್ಲಿ, ಓದಿದ್ದು ಇಂಗ್ಲೆಂಡಿನಲ್ಲಿ. ಸಿಂಗಾಪುರ್‌ನಲ್ಲಿ ಕೆಲಸ. ಕಾರಣಾಂತರಗಳಿಂದ ಕೆಲಸಕ್ಕಾಗಿ ಇಲ್ಲಿಗೆ ಬಂದವನು. ಇಬ್ಬರು ಮನೆಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಭೇಟಿಯಾಗಿ, ಈಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದವರು. ಎರಡಂತಸ್ತಿನ ಮನೆಯಲ್ಲಿ ನಾಲ್ಕು ಕೊಠಡಿಗಳು. ವಿಶಾಲವಾದ ಮನೆ. ಮನೆಯ ಮಾಲಿಕರು ಇರಲು ಬೇಕಾದ ಕೆಲವು ಮುಖ್ಯ ಸಾಮಾನುಗಳನ್ನು ಕೊಟ್ಟಿದ್ದರು.
ಗಗನ್ "Where are we going? (ಊಟಕ್ಕೆ ಎಲ್ಲಿಗೆ ಹೋಗುತ್ತಿದ್ದೇವೆ?)" ಎಂದು ಕೇಳಿದ.
ಅದಕ್ಕೆ ಬೆಂಗ್ ಲಿಂ “To some foodcourt where we will get veg food for you. (ಸಸ್ಯಾಹಾರ ಸಿಗುವ ಯಾವುದಾದರೊಂದು ಉಪಹಾರ ಮಂದಿರಕ್ಕೆ)" ಅಂತ ಉತ್ತರಿಸಿದ.
ಊಟದ ಬೆಲೆ ಗಗನ್‌ಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಅವನು ಅಪ್ಪಟ ಸಸ್ಯಾಹಾರಿ. ಮೊದಲ ಬಾರಿ ಭಾರತ ದೇಶ ಬಿಟ್ಟು ಮಲೇಷ್ಯಗೆ ಬಂದವನು. ಅದು ಪೂರ್ವ ಮಲೇಷ್ಯಕ್ಕೆ, ಅದರಲ್ಲೂ ಕುಚಿಂಗ್ ನಗರಕ್ಕೆ. ಕುಚಿಂಗ್ ನಗರ ಜಲಚರಗಳ ಆಹಾರಕ್ಕೆ ಪ್ರಸಿದ್ಧ. ದೇಶ-ವಿದೇಶಗಳಿಂದ ಇಲ್ಲಿನ ಜಲ-ಚರಗಳನ್ನು ತಿನ್ನಲು ಪ್ರವಾಸಿಗರನ್ನು ಆಕರ್ಷಿಸುವಂಥ ನಗರ - ಕುಚಿಂಗ್. ಮೊದಲ ಒಂದು ತಿಂಗಳು ಹೋಟೆಲ್‌ನಲ್ಲಿ ಇದ್ದಾಗ ಊಟದ ಮಹತ್ವ ಅರ್ಥವಾಗಿತ್ತು.
ಹಗಲು ರಾತ್ರಿ ಪಿಜಾ ಮತ್ತು ಫ್ರೈಡ್ ರೈಸ್‌ನ ಜೀವನ. ಮಲೇಷ್ಯದ ಭಾರತೀಯ ಊಟವಾದ ರೋಟಿ-ಚೆನಾಯ್ ಒಮ್ಮೆ ಮಾತ್ರ ಸರಿ ಎಂದು ಭಾವಿಸಿದ್ದ. ಅದು ಮೈದಾ ಹಿಟ್ಟಿನ ಪೇಪರ್‌ನಂಥ ಚಪಾತಿ ಮತ್ತು ತರಕಾರಿಗಳ ಪಲ್ಯ. ಅದಕ್ಕೆ ಹಾಕುವ ಮಸಾಲೆ ಮಾಂಸಕ್ಕೆ ಹಾಕುವ ಮಸಾಲೆಯಂತಿರುತ್ತಿತ್ತು. ಅದಕ್ಕೇ ಗಗನ್ ಅದನ್ನು ಇಷ್ಟ ಪಡುತ್ತಿರಲ್ಲಿಲ್ಲ. ವಿಜಯ್ ಅಂತ ಮಧ್ಯ ವಯಸ್ಸಿನವರು ಸಿಂಗಾಪುರದಿಂದ ಅಲ್ಲಿಗೆ ಕೆಲಸಕ್ಕೆ ಬಂದಿದ್ದರು. ಅವರು ಗಗನ್‌ನ ಕಷ್ಟ ನೋಡಲಾರದೆ ಅವರು ತಂದಿದ್ದ ಉಪ್ಪಿನಕಾಯಿ ಕೊಟ್ಟರೆ ಗಗನ್‌ಗೆ ಅದೇ ಸ್ವರ್ಗ. ಅದರ ಜೊತೆ ಬರುತ್ತಿದ್ದ ನಾಲ್ಕು ಮೊಸರನ್ನದ ಅಗಳನ್ನು ಆಹಾ ಎಂದು ತಿನ್ನುತ್ತಿದ್ದ. ಅಮ್ಮ ಮಾಡುತ್ತಿದ್ದ ದೋಸೆ-ಚಟ್ನಿ, ಪೂರಿ-ಸಾಗು, ರೊಟ್ಟಿ-ಉಸಳಿ, ಇಡ್ಲಿ-ಸಾಂಬಾರ್ ಹೀಗೆ ಎಲ್ಲವನ್ನು ನೆನೆಸಿಕೊಂಡು ಬರಿಯ ಪಿಜಾ ತಿನ್ನುತ್ತಿದ್ದ.
ಇನ್ನು ಮನೆಗೆ ಹೋದ ಮೇಲೆ, ತನ್ನದೆ ನಳಪಾಕ. ಬೆಂಗ್ ಲಿಂ ಆಹಾರವನ್ನು ಹೊರಗಡೆಯೆ ಸೇವಿಸುತ್ತಿದ್ದುದ್ದರಿಂದ ಅಡಿಗೆ ಮನೆಯ ಯಜಮಾನ ತಾನೇ ಆಗಿದ್ದ. ಅಪ್ಪಟ ಮೈಸೂರು ಕರ್ನಾಟಕದ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದ. ಹೀಗೆ ಒಂದು ದಿನವೂ ತಪ್ಪಿಸದೆ ತನ್ನ ಊಟವನ್ನು ಕೆಲಸಕ್ಕೆ ತರುತ್ತಿದ್ದ. ವಾರಾಂತ್ಯದಲ್ಲಿ ಹೊರಗೆಲ್ಲಾದರು ಹೋಗುತ್ತಿದ್ದರು. ಇವತ್ತು ಬೆಂಗ್ ಲಿಂ ಆಚೆಯೆ ತಿನ್ನೋಣ ಎಂದಾಗ ಗಗನ್ ನಿರಾಕರಿಸಲಿಲ್ಲ.
ಕುಚಿಂಗನಲ್ಲಿ ಭಾರತೀಯ ಫಲಹಾರ ಮಂದಿರಗಳಿದ್ದರೂ, ಅಲ್ಲಿ ಸಸ್ಯಾಹಾರ ಅಷ್ಟಕಷ್ಟೆ. ಉತ್ತರ ಭಾರತದ ತಿನಿಸುಗಳಲ್ಲಿ ಮಸಾಲೆ ಚೆನ್ನಾಗಿರುತ್ತಿರಲ್ಲಿಲ್ಲ. ಇನ್ನು ದಕ್ಷಿಣ ಭಾರತದ ಆಹಾರ ರುಚಿ ಇರುತ್ತಿರಲ್ಲಿಲ್ಲ. ಹಾಗಾಗಿ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಹೊರಗಿನ ಆಹಾರ. ಒಂದು ಪುಣ್ಯವೆಂದರೆ, ದಕ್ಷಿಣ ಭಾರತದ ಅಡುಗೆ ಸಾಮಾನುಗಳು ಲಭ್ಯವಿತ್ತು. ಏಕೆಂದರೆ ಅಲ್ಲಿ ತಮಿಳಿಗರು ತುಂಬಾ ಜನರಿದ್ದರು. ತರಕಾರಿಗಳಿಗೆ ವಾರಕ್ಕೊಮ್ಮೆ ಸಂತೆಯಾಗುತ್ತಿತ್ತು. ಕೆಲಬಾರಿ ಸಿಂಗಾಪುರಕ್ಕು ಹೋಗಿ ಸಾಮಾನುಗಳನ್ನು ತರುತ್ತಿದ್ದುದು ಉಂಟು. ಅದೂ ಮೂರು ತಿಂಗಳಿಗೊ ಅಥವಾ ನಾಲ್ಕು ತಿಂಗಳಿಗೊಮ್ಮೆ.
ಇಬ್ಬರೂ ಒಂದು ಚೀನಿಯರ ಫುಡ್ ಕೊರ್ಟ್ ಹತ್ತಿರ ಬಂದಿಳಿದರು. ಬೆಂಗ್ ಲಿಂ “Today you have to talk to the lady for your food (ಇವತ್ತು ಮಾಣಿಯ ಹತ್ತಿರ ನೀನೆ ಮಾತಾಡಿ ಊಟ ತೆಗೆದುಕೊಳ್ಳಬೇಕು)" ಎಂದು ಹೇಳಿ ತಾನು ತನ್ನ ಊಟದ ಬೇಟೆಗೆ ಹೊರಟ.
ಬೆಂಗ್ ಲಿಂ ಜೊತೆ ಆಚೆಯೇನಾದರು ಹೋದರೆ, ಅಂದು ಅರೆ ಹೋಟ್ಟೆಯೆ. ಬೆಂಗ್ ಲಿಂ ಮತ್ತು ಅವನ ಸ್ನೇಹಿತರಿಗೆ ಸಸ್ಯಾಹಾರವನ್ನು ಹುಡುಕಿ ತಂದು ಕೊಡುವುದು ಒಂದು ಸಾಹಸ. ಎಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಬೇರೆ ಬೇರೆ ಕಡೆಯಿಂದ ಬಂದರೂ, ಅಪರಿಚಿತರಾದರೂ, ಈ ಊಟದ ಸಹಾಯದಲ್ಲಿ ಎಲ್ಲರೂ ಸೇರುತ್ತಿದ್ದರು. ಕಡೆಗೆ ಬೆಂಗ್ ಲಿಂ “See, we have beauty of both the worlds (ನಮ್ಮ ಹತ್ತಿರ ಎರಡು ಪ್ರಪಂಚದ-ಸಸ್ಯಹಾರ ಮತ್ತು ಮಾಂಸಹಾರ, ಸೌಂದರ್ಯವಿದೆ)" ಎಂಬ ಕುಹಕ ನಗು. ತಾನು ಸಸ್ಯಹಾರ, ಮಾಂಸಹಾರ ಎರಡನ್ನು ತಿನ್ನುತ್ತೇವೆ ಎಂದು ಏನೋ ಸಾಧಿಸಿದ ಹೆಗ್ಗಳಿಕೆ. ಸರಿ ಇದು ಒಂದು ವಾದಕ್ಕೆ ನಾಂದಿ. ಅದಕ್ಕೆ ಗಗನ್‌ನ ಮಾತು ಶುರು “you are killers (ನೀವು ಕೊಲೆಪಾತಕರು)" ಎಂದು. ಹೀಗೆ ಮುಂದುವರೆದ ವಾದ ಏನು ಇಲ್ಲದೆ ಕೊನೆ. ಅವನದು ಅವನು ಬಿಡಲ್ಲ, ಇವನದು ಇವನು ಬಿಡಲ್ಲ.
ಫುಡ್ ಕೋರ್ಟ್‌ನಲ್ಲಿ ಮಾಂಸಹಾರದ ಜೊತೆ ಸಸ್ಯಾಹಾರ ಸಿಗುವ ಸ್ಥಳವನ್ನು ತೋರಿಸಿ ಬೆಂಗ್ ಲಿಂ ಅತ್ತ ಹೊರಟ. ಇದು ಗಗನ್‌ಗೆ ನಿಜವಾದ ಪರೀಕ್ಷೆ. ಅರ್ಧಂಬರ್ಧ ಆಂಗ್ಲ ಭಾಷೆ ಬರುವ ಒಂದು ಧಡೂತಿ ಹೆಂಗಸಿನ ಜೊತೆ ವ್ಯವಹರಿಸಬೇಕಿತ್ತು. ಆಕೆ ಚೀನಿಯವಳು, ನೋಡಲು ಹಳ್ಳಿಯವಳಂತಿದ್ದಳು. ಮಲೇಷ್ಯದಲ್ಲಿ ಮತ್ತೊಂದು ಮುಖ್ಯವಾದ ವಿಚಾರ ಗಗನ್ ಗಮನಿಸಿದ್ದು, ಅಲ್ಲಿ ಎಲ್ಲಾ ಚೀನಿಗಳು ತಮಗೆ ಅರ್ಥವಾಗಲಿ-ಅರ್ಥವಾಗದಿರಲಿ, ಗೊತ್ತಾಗಲಿ-ಗೊತ್ತಾಗದಿರಲಿ, ಮುಖದಲ್ಲಿ ನಗುವನ್ನು ತೋರಿಸುವುದುಂಟು. ಇದಕ್ಕೆ ಒಂದು ಸಂದರ್ಭವೂ ಇತ್ತು. ಒಂದು ತಿಂಗಳು ಹೋಟೆಲ್‌ನಲ್ಲಿದ್ದಾಗ, ದಿನಾ ಪಿಜಾ ತಿಂದು ಬೇಜಾರಾಗಿ, ಹತ್ತಿರದಲ್ಲೇ ಇದ್ದ ಮೆಕ್ ಡೋನಾಲ್ಡ್ ನಲ್ಲಿ ಬರ್ಗರ್ ತಿನ್ನಲು ಹೋಗಿದ್ದ. ಅಲ್ಲಿ ವೆಜ್ ಎಂದರೆ ಅವರಿಗೆ ಗೊತ್ತಿಲ್ಲ. ಇವನು ಒಂದು ವೆಜ್ ಬರ್ಗರ್ ಎಂದು ಹೇಳಿದರೆ ಅವರು ಬರೀ ನಗುವಿನ ಮುಖ ತೋರಿಸಿದರು.
ಸರಿ ಅದಕ್ಕೆ, ಗಗನ್ “No meat, No chicken, No seafood, No Egg (ಕೋಳಿ, ಮೊಟ್ಟೆ, ಜಲ-ಚರಗಳು, ಯಾವುದೇ ಬಗೆಯ ಮಾಂಸಹಾರ ಬೇಡ)" ಎಂದು ಹೇಳಿದ. ಇದು ಆಫೀಸಿನಲ್ಲಿ ಕಲಿತ ಒಂದು ಬೆಲೆ ಬಾಳುವ ವಾಕ್ಯ. ಏಕೆಂದರೆ ಅಲ್ಲಿ ಮೊಟ್ಟೆ ಸಸ್ಯಾಹಾರ, ಮೀನು ಸಸ್ಯಾಹಾರ. ಅದಕ್ಕೂ ಒಂದು ತರ್ಕ: ಕೋಳಿ ಸಸ್ಯಾಹಾರ ತಿನ್ನುತ್ತದೆ. ಅದಕ್ಕೆ ಅದು ವೆಜಿಟೇರಿಯನ್ ಚಿಕನ್ ಎಂದು. ಮನಸ್ಸಲ್ಲಿ “ಅಣ್ಣಾ, ನಿನಗೆ ದೊಡ್ಡ ಸಾಷ್ಟಾಂಗ ನಮಸ್ಕಾರ" ಅಂತ ಅಂದುಕೊಂಡಿದ್ದ. ಅದಕ್ಕೆ ಅವರು “No have (ಇಲ್ಲ)" ಎಂದು ನಗು ಮುಖದ ತಲೆಯಾಡಿಸುತ್ತಾ ಇದೆಯೆಂಬಂತೆ ಉತ್ತರ.
ಗಗನ್ ತಲೆಯಲ್ಲಿ ಒಂದು ಯೋಚನೆ ಹುಟ್ಟಿತು. ಮಾಂಸವಿಲ್ಲದೆ ಬರಿ ತರಕಾರಿ, ಬನ್ ತಿನ್ನಬಹುದಲ್ಲ ಅಂತ. ಮತ್ತೆ ಪ್ರಯತ್ನಿಸಿದ "Only veg burger, No meat, No chicken, No seafood, No Egg (ಬರೀ ಸಸ್ಯಹಾರ ಮಾತ್ರ, ಯಾವ ಬಗೆಯ ಮಾಂಸಹಾರ ಬೇಡ)" ಅಂತ ಹೇಳಿದ.
ಎದುರಿನವನಿಂದ ಮತ್ತೆ ಅದೇ ಉತ್ತರ “No have (ಇಲ್ಲ)" ಎಂದು ಅದೇ ನಗು ಮುಖದಿಂದ.
ಗಗನ್‌ಗೆ ಹೇಗೆ ತಿಳಿಸುವುದು ಅಂತ ಗೊತ್ತಾಗಲ್ಲಿಲ್ಲ. ಕಡೆಗೆ, “Give me a burger which has vegetables (ಬರೀ ತರಕಾರಿಗಳಿರುವ ಬರ್ಗರ್ ಕೊಡಿ)" ಎಂದ. ಅಲ್ಲಿ ಶುರುವಾಯಿತು ತೊಂದರೆ.
“Cheese burger have (ಚೀಸ್ ಬರ್ಗರ್ ಇದೆ)" ಎಂಬ ಉತ್ತರ ಬಂದಿತು. ಗಗನ್ ನಿಂದ ಸರಿ ಎಂಬ ಉತ್ತರ ದೊರಕಿದ ತಕ್ಷಣ, “ಸಾತು ಚೀಜ್ ಬರ್ಗರ್ (ಒಂದು ಚೀಸ್ ಬರ್ಗರ್)" ಎಂದು ಕೂಗಿದ. ಸಾತು ಎಂದರ ಮಲೇಷ್ಯಾದ ಒಂದು ಎಂದು. ಸರಿ ಗಗನ್ ಅತ್ತ ಹೋಗಿ ನಿಂತ. ಬರ್ಗರ್ ಬಂದ ಮೇಲೆ ಹೋಟೆಲ್‌ಗೆ ಹೋಗಿ ತಿನ್ನೋಣ ಅಂತ ತೆಗೆದುಕೊಂಡು ಹೊರಟ, ಏಕೆಂದರೆ ಅಲ್ಲಿ ಬರೀ ಮಾಂಸದ ವಾಸನೆ ಇತ್ತು. ಹೋಟೆಲ್ ರೂಂಗೆ ಹೋಗಿ ನೋಡಿದರೆ, ಅದರ ಮೇಲೆ 'cheese burger with (ಚೀಸ್ ಬರ್ಗರ್ ವಿತ್)" ಪಕ್ಕದಲ್ಲಿ 'Beef (ದನದ ಮಾಂಸ)" ಎಂಬುದನ್ನ ನೋಡಿ ಕಸದ ಬುಟ್ಟಿಗೆ ಬಿಸಾಕಿ ಪೀಜಾ ತಿನ್ನಲು ಹೊರಟ. ಪೀಜಾ ಹಟ್‌ನ ಮೆನುನಲ್ಲಿದ್ದ ಒಂದೇ ವೆಜ್ ಪೀಜಾ ಅದು.
ಹೀಗೆ ಅರೆಬರೆ ಭಾಷೆಯವರ ಹತ್ತಿರ ನಮಗೆ ಬೇಕಾದ್ದನ್ನ ಮಾಡಿಸಿಕೊಳ್ಳುವುದು ಒಂದು ದೊಡ್ಡ ಕಾರ್ಯವೇ ಸರಿ. ಅಂಥಾದ್ರಲ್ಲಿ ಈ ಧಡೂತಿ ಹೆಂಗಸಿನ ಹತ್ತಿರ ಸಸ್ಯಹಾರ ಊಟವನ್ನ ಹೇಗೆ ಸಂಪಾದಿಸುವುದು ಎಂದು ಯೋಚನೆಯಾಗಿತ್ತು.
ಸರಿ ಏನೇ ಆದರೂ, ಇವತ್ತು ನಾನೇ ಮಾತಾಡಿ ಊಟ ತೆಗೆದುಕೊಳ್ಳಬೇಕು ಅಂತ ಗಗನ್ ಮುಂದೆ ಬಂದ. ಯಥಾಪ್ರಕಾರ ಆ ಹೆಂಗಸು ತಲೆಯಾಡಿಸುತ್ತಾ, ನಗುತ್ತಾ ಬರಮಾಡಿಕೊಂಡಳು. ಒಂದು ಗಾಜಿನ ಮೇಜಿನಲ್ಲಿ ತರಕಾರಿಗಳು, ಅನ್ನ, ಮಾಂಸಗಳು ಎಲ್ಲವೂ ಇಟ್ಟು ಕೊಂಡಿರುವುದನ್ನು ಕಂಡ. ನಮಗೆ ಬೇಕಾದನ್ನು ನಾವು ಹೇಳಿ ತಟ್ಟೆಗೆ ಹಾಕಿಸಿಕೊಳ್ಳಬೇಕು. ನಂತರ ಅದನ್ನ ತೂಕ ಹಾಕಿ, ಅದರ ತಕ್ಕಂತೆ ಹಣ ಸಂದಾಯ ಮಾಡಬೇಕು. ಸರಿ, ಗಗನ್ ಎಲ್ಲವನ್ನೂ ನೋಡಿ ಮಾತಾಡದೆ, ಬೆರಳಲ್ಲಿ ತೋರಿಸಿ ಅನ್ನ, ಬೇಯಿಸಿದ ಬೆಂಡೆಕಾಯಿ, ಸೀಗುಂಬಳಕಾಯಿ ಹಾಕಿಸಿಕೊಂಡು ಸಾಕು ಎಂದು ಸನ್ನೆಯಲ್ಲೇ ತೋರಿಸಿದ.
ಅದಕ್ಕೆ ಆ ಹೆಂಗಸು ಮತ್ತೆ ನಗು ಮುಖದಲ್ಲಿ “Chicken, fish (ಕೋಳಿ, ಮೀನು)?" ಎಂದು ಕೇಳಿ, ಪ್ರಶ್ನಾರ್ಥಕವಾಗಿ ಗಗನ್ ಕಡೆ ನೋಡಿದಳು.
ಗಗನ್ “No, I am vegetarian (ಇಲ್ಲ, ನಾನು ಸಸ್ಯಹಾರಿ)" ಎಂದು ಉತ್ತರಿಸಿದ.
ತನ್ನ ಪ್ರಶ್ನೆಗೆ ಉತ್ತರ ಸಿಕ್ಕಂತೆ “So thin, you have to eat meat (ತುಂಬಾ ಸಣ್ಣಗಿದಿಯ, ಮಾಂಸಹಾರ ತಿನ್ನಬೇಕು)" ಎಂದು ನಗುತ್ತಾ ತೂಕ ಹಾಕಿ ತಟ್ಟೆಯನ್ನ ಗಗನ್ ಕೈಗಿತ್ತಳು. ಗಗನ್ ಕೂಡ ನಗು ಬೀರಿ ಮೇಜಿನ ಹತ್ತಿರ ಬಂದು ಕುಳಿತು ಬೆಂಗ್ ಲಿಂಗೆ ಕಾಯುತ್ತಿದ್ದ. ಬೆಂಗ್ ಲಿಂ ತನ್ನ ಮಾಂಸದ ಆಹಾರವನ್ನು ತಂದು ಗಗನ್ ಎದುರಿಗೆ ಕುಳಿತ. ಗಗನ್‌ಗೆ ಏನೋ ಸಾಧಿಸಿದ ಸಂತೋಷದಲ್ಲಿ, ಬೆಂಗ್ ಲಿಂಗೆ ಉದ್ಗರಿಸಿದ:
“See, I have veg food (ನೋಡು, ನನ್ನ ಸಸ್ಯಹಾರ)" ಅಂತ ಒಂದು ಚಮಚ ಅನ್ನ, ಬೇಯಿಸಿದ ಸೀಗುಂಬಳಕಾಯಿಯನ್ನ ಬಾಯಲ್ಲಿರಿಸುತ್ತಾ ಹೇಳಿದ.
ಅದಕ್ಕೆ ಬೆಂಗ್ ಲಿಂ “Are you sure it is vegetarian? (ಖಂಡಿತವಾಗಿಯೂ ಅದು ಸಸ್ಯಹಾರವೇ?)" ಎಂದು ಪ್ರಶ್ನಿಸಿದ.
“Ofcourse, I asked veg food and she gave me veg food (ಹೌದು, ನಾನು ಸಸ್ಯಹಾರ ಕೇಳಿದೆ, ಆಕೆ ಸಸ್ಯಹಾರ ಕೊಟ್ಟಳು)" ಅಂತ ಉತ್ತರಿಸಿದ.
ಬೆಂಗ್ ಲಿಂ ಮತ್ತೆ ಕೇಳಿದ “Are you sure? (ಖಾತ್ರಿಯಾಗಿ ಹೇಳು?)" ಅಂತ.
ಅದಕ್ಕೆ ಗಗನ್ “Yes of course. Why are you asking again? (ಹೌದು. ಮತ್ತೆ ಯಾಕೆ ಕೇಳುತ್ತಿದ್ದೀಯ?)" ಅಂತ ಮರು ಪ್ರಶ್ನಿಸಿದ.
ಆಗ ಬೆಂಗ್ ಲಿಂ ನಗುತ್ತಾ ಬೆಂಡೆಕಾಯಿ ಸಂದಿಯಲ್ಲಿದ್ದ ಒಂದು ಸಣ್ಣ ಮೀನು (ಅಲ್ಲಿ ಅದಕ್ಕೆ ಇಕಾನ್ ಬೆಲ್ಲಿ ಎಂದು ಹೇಳುತ್ತಾರೆ) ತೋರಿಸಿದ. ತನ್ನ ಸಾಧನೆ, ಪರಿಶ್ರಮ ಎಲ್ಲಾ ಹೋಯಿತು ಎಂದು ಮತ್ತೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಾರ್ಥಕವಾಗಿ ನೋಡಿದ ಗಗನ್. ಅಲ್ಲಿ ಇಕಾನ್ ಬೆಲ್ಲಿಗಳು ಬೆಂಡೆಕಾಯಿ ಜೊತೆ ಇದ್ದವು. ಬೆಂಗ್ ಲಿಂ “Small fish, Nemo lah (ಸಣ್ಣ ಮೀನು, ನೀಮೊ ಲಾ)" ಎಂದು ಜೋರಾಗಿ ನಗಲಾರಂಭಿಸಿದನು.
ಗಗನ್ ಆಶ್ಚರ್ಯಚಕಿತನಾಗಿ ಬೆಂಗ್ ಲಿಂನ ಕೇಳಲು, ಅವನಿಂದ ಬಂದ ಉತ್ತರ “They use fish for seasoning (ಮೀನನ್ನು ಒಗ್ಗರಣೆಗೆ ಬಳಸುತ್ತಾರೆ)" ಅಂದು ಗಗನ್‌ಗೆ ಹೊಸ ನಾಮಕರಣ 'ನೀಮೊ" ಎಂದಾಯಿತು. ಅಂದಿನಿಂದ ಎಲ್ಲರೂ ಗಗನ್‌ನನ್ನು 'ನೀಮೊ" ಎಂದು ಕರೆಯ ತೊಡಗಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications