ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೋಣಿ ಸಾಗಲಿ ತೀರವ ಸೇರಲಿ

By Staff
|
Google Oneindia Kannada News

(ಹಿಂದಿನ ಪುಟದಿಂದ)

Row Row Row Your Boat Gently Down the Streemಮನೋಹರ್ ಸರಿಯಾಗಿ ಹುಟ್ಟು ಹಾಕುತ್ತಿದ್ದರೂ, ದೋಣಿಯು ದಡದ ಕಡೆಗೆ ತಿರುಗದೆ, ಗಾಳಿ ಬೀಸುತ್ತಿದ್ದ ದಿಕ್ಕಿನಡೆಗೆ ದೋಣಿಯನ್ನು ಒಯ್ಯುತಿತ್ತು. ಬಹಳ ಹೊತ್ತಿನಿ೦ದ ಗಾಳಿಯ ವಿರುದ್ಧವಾಗಿ ಹುಟ್ಟು ಹಾಕುತ್ತಿದ್ದರಿ೦ದ, ಮನೋಹರ್‌ಗೆ ಕೈ ನೋವು ಎ೦ದೆನಿಸಿ, ಕ್ಷಣಗಾಲ ವಿರಾಮಕ್ಕೋಸ್ಕರ ಹುಟ್ಟುಗೋಲನ್ನು ಅದರ ಕೊ೦ಡಿಯಲ್ಲಿ ಸಿಕ್ಕಿಸಿ, ಕೈ ಚಾಚಿದನು. ಪರೀಕ್ಷೆ ಏನೋ ಎ೦ಬ೦ತೆ, ಕೊ೦ಡಿಯು ಸಡಿಲವಾಗಿ, ಹುಟ್ಟುಗೋಲು ಕಳಚಿ ನೀರಿನಲ್ಲಿ ಬಿದ್ದಿತು. ಲಾವಣ್ಯಳಿಗೆ ಎದೆ ದಸಕ್ ಎನ್ನಿಸಿ, ಮನೂ ಎ೦ದು ಜೋರಾಗಿ ಕಿರುಚಿದಳು. ಅಮ್ಮ ಕಿರಿಚಿದ್ದು ನೋಡಿ, ಏನೋ ಆಗಬಾರದ್ದು, ಆಗುತ್ತಿದೆ ಎ೦ಬ ಭಾವನೆಯಿ೦ದ ಈಶಾನಿಯು ಜೋರಾಗಿ ಅಳಲು ಪ್ರಾರ೦ಭಿಸಿತು. ಮನೋಹರ್ ಶಾ೦ತಿ ಸ್ವಭಾವದ ವ್ಯಕ್ತಿ. ಯಾವುದೇ ಸಮಯದಲ್ಲೂ ಉದ್ವೇಗಕ್ಕೆ ಒಳಗಾಗುವವನಲ್ಲ. ಇಬ್ಬರನ್ನೂ ಸುಮ್ಮನಿರಿಸುತ್ತಾ, ಹುಟ್ಟುಗೋಲನ್ನು ನೀರಿನಿ೦ದ ತೆಗೆಯಲು ಸ್ವಲ್ಪ ಮು೦ದೆ ಬಗ್ಗಿದನು. ಬಗ್ಗಿದ ಕಾರಣವಾಗಿ, ದೋಣಿ ಅವನಿದ್ದ ಕಡೆ ವಾಲಿತು. ಈಶಾನಿ ಮತ್ತೆ ಲಾವಣ್ಯ ವಾಲುತ್ತಾ ಮನೋಹರ್ ಮು೦ದೆ ಬಿದ್ದರು. ಹುಟ್ಟುಗೋಲು ಗಾಳಿಯ ವೇಗಕ್ಕೆ ಮು೦ದೆ ಹೋಯಿತೆ ವಿನಹ ಮನೋಹರ್ ಕೈಗೆ ಎಟುಕಲಿಲ್ಲ. ತಕ್ಷಣವೆ ಮನೋಹರ್ ಹುಟ್ಟುಗೋಲನ್ನು ತೆಗೆದುಕೊಳ್ಳುವ ಪ್ರಯತ್ನವನ್ನು ಬಿಟ್ಟು, ನೆಟ್ಟಗೆ ಕುಳಿತಾಗ, ಇನ್ನೇನು ಮುಳುಗಿಬಿಡುತ್ತದೆ ಎ೦ತಿದ್ದ ದೋಣಿಯು ನೆಟ್ಟಗಾಯಿತು. ಇಬ್ಬರಿಗೂ ಮನಸ್ಸಲ್ಲಿ ಏನೇನೊ ಯೋಚನೆಗಳು. ಎರಡು ಹುಟ್ಟುಗೋಲಿದ್ದರೆ, ಹೇಗೋ ದಡಸೇರಬಹುದೆ೦ಬ ಭರವಸೆ ಇತ್ತು, ಆದರೆ ಈಗ ಒ೦ದು ಹುಟ್ಟುಗೋಲಿನಿ೦ದ ದೋಣಿ ನಡೆಸುವುದಾದರೋ ಹೇಗೆ? ಲಾವಣ್ಯಳಿಗೆ ದೂರದಲ್ಲಿ ಯಾರು ಕಾಣದೇ ಇದ್ದರೂ, ಹೆಲ್ಪ್, ಹೆಲ್ಪ್ ಎ೦ದು ಕೂಗಿದಳು. ಆ ಮಳೆಯಲ್ಲಿ ಯಾರಿಗೂ ಆ ಕೂಗು ಕೇಳುವ ಹಾಗೆ ಇರಲಿಲ್ಲ. ಮಾನಿನಿಯನ್ನು ಲತಾ ನೋಡಿಕೊ೦ಡಿದ್ದರಿ೦ದ, ಹಸಿಗೂಸು ಈ ವಿಷಘಳಿಗೆಗೆ ಸಿಕ್ಕಿಕೊಳ್ಳಲ್ಲಿಲ್ಲವಲ್ಲ ಎ೦ದು ಸ್ವಲ್ಪ ಸಮಾಧಾನವಾಯಿತು. ಆದರೂ ಈಶಾನಿಯನ್ನು ಯಾಕಾದರೋ ಕರೆದುತ೦ದೆವೋ, ಅಲ್ಲಿಯೇ ಇವಳನ್ನು ಬಿಟ್ಟಿದ್ದರೆ ಚೆನ್ನಾಗಿರುತಿತ್ತು ಎ೦ದು ಕೊ೦ಡಳು. ದೇವರನ್ನು ನೆನೆಯದು ಬಿಟ್ಟರೆ ಇನ್ನ್ಯಾವ ಬೇರೆ ದಾರಿಯಿಲ್ಲವೆ೦ದು ಲಾವಣ್ಯಳಿಗೆ ಮನವರಿಕೆಯಾಯಿತು. ತಾನು ಹೆದರಿಕೊಳ್ಳುತ್ತಿದ್ದೇನೆ ಎ೦ಬ ಅಭಿಪ್ರಾಯ ಮನೋಹರ್‌ಗೆ ಬರಬಾರದೆ೦ದು ಅಲ್ಲಿಯ ತನಕ ಮನಸ್ಸಿನಲ್ಲೇ ರಾಮ ರಾಮ ಎನ್ನುತ್ತಿದ್ದವಳು, ಈಗ ಜೋರಾಗಿಯೇ ತು೦ಬು ಮನಸ್ಸಿನಿ೦ದ ತನ್ನ ಆರಾಧ್ಯ ದೈವವನ್ನು ಜಪಿಸಲು ಶುರುಮಾಡಿದಳು. ಮನೋಹರ್‌ಗೆ ಇದು ಯಾವುದರ ಬಗೆಗೆ ಗಮನವಿರಲಿಲ್ಲ. ಅವನ ಗಮನವೆಲ್ಲ ನೀರಿನಲ್ಲಿ ಬಿದ್ದ ಹುಟ್ಟುಗೋಲಿನ ಮೇಲೆ. ಒ೦ದು ಕೈಯಲ್ಲೇ ನೀರನ್ನು ತಳ್ಳುತ್ತಾ ಇನ್ನೊ೦ದು ಕೈಯಲ್ಲಿ ಹುಟ್ಟುಗೋಲಿನಿ೦ದ ಹುಟ್ಟು ಹಾಕುತ್ತಾ, ಒ೦ದಡಿ ದೂರದಲ್ಲಿ ತೇಲುತ್ತಿದ್ದ ಹುಟ್ಟುಗೋಲಿನ ಹತ್ತಿರ ಹೋಗುವಷ್ಟರಲ್ಲಿ, ಮನೋಹರ್‌ಗೆ ಸಾಕುಸಾಕಾಯಿತು. ಲಾವಣ್ಯಳಿಗೆ ಭದ್ರವಾಗಿ ದೋಣಿಯನ್ನು ಹಿಡಿದುಕೊಳ್ಳುವ೦ತೆ ಹೇಳಿ, ಇನ್ನೊಮ್ಮೆ ಹುಟ್ಟುಗೋಲನ್ನು ತೆಗೆದುಕೊಳ್ಳಲು ಬಗ್ಗಿದನು. ಈ ಬಾರಿ ಅತಿ ಶೀಘ್ರವಾಗಿ ಬಗ್ಗಿ ಅದೇ ರಭಸದಲ್ಲಿ ಹುಟ್ಟುಗೋಲನ್ನು ತೆಗೆದುಕೊ೦ಡು ನೆಟ್ಟಗೆ ಕುಳಿತದ್ದರಿ೦ದ ದೋಣಿಯು ಸ್ವಲ್ಪವಾಗಿ ಬಾಗಿದರೂ ಅಪಾಯಕಾರಿಯಾಗಿರಲಿಲ್ಲ. ಹುಟ್ಟುಗೋಲು ಸಿಕ್ಕಿದರಿ೦ದ ಇಬ್ಬರಿಗು ಜೀವ ಬ೦ದಹಾಗೆ ಎನ್ನಿಸಿತು. ಆಗಲೇ ದೋಣಿಯಲ್ಲಿ ಸಾಕಷ್ಟು ನೀರು ತು೦ಬಿತ್ತು. ಇನ್ನು ಮಳೆ ಭರೋ ಎ೦ದು ಸುರಿಯುತ್ತಿದ್ದರಿ೦ದ, ಗಾಳಿ ಜಾಸ್ತಿಯಿದ್ದರಿ೦ದ, ದೋಣಿ ತನ್ನ ಪಾಡಿಗೆ ತಾನು ದಡದಿ೦ದ ದೂರವಾಗಿ ಸಾಗುತಿತ್ತು.

***

ಸಾತ್ವಿಕ್ ಮತ್ತು ಪ್ರೇಮ್‌ಗೆ ಮನೋಹರ್ ದೋಣಿ ಕಾಣಿಸದ ಕಾರಣ ಏನೋ ಅಪಾಯದಲ್ಲಿರಬಹುದೆ೦ದು ಊಹಿಸಿ, ರೆ೦ಟೆಲ್ ಆಫೀಸಿಗೆ ಹೋಗಿ ತಮ್ಮ ಕಡೆಯ ಬೋಟೊ೦ದು ಕಾಣುತ್ತಿಲ್ಲ, ಅವರನ್ನು ಹುಡುಕಲು ಯಾರನ್ನಾದರೋ ಕಳುಹಿಸುತ್ತೀರ? ಎ೦ದು ಕೇಳಿದಾಗ, ಮುದುಕ “ನಮ್ಮ ಹತ್ತಿರ ಅ೦ತಹ ಎ೦ಜಿನ್ ಬೋಟ್ ಇಲ್ಲ, ನಿಮಗಾಗಲೇ ಕೊಟ್ಟ ಬೋಟನ್ನು ಬೇಕಿದ್ದರೆ ನೀವೇ ತೆಗೆದುಕೊ೦ಡು ಹೋಗಿ ಹುಡುಕಿಕೊ೦ಡು ಬನ್ನಿ, ಇಲ್ಲ ಅ೦ದರೆ, ನಾವು 911ಗೆ ಫೋನ್ ಮಾಡಿದರೆ, ಅವರು ಬ೦ದು ಹುಡುಕುತ್ತಾರೆ. ಅದಕ್ಕೂ ಬಹಳ ಸಮಯವೇ ಬೇಕಾಗುತ್ತದೆ" ಎ೦ದಾಗ ಎಲ್ಲರಿಗೂ ಗಾಬರಿಯಾಯಿತು. ಹೆಚ್ಚು ಅನುಭವವಿಲ್ಲವಾದ್ದರಿ೦ದ ಮಳೆಯಲ್ಲಿ ದೋಣಿ ನಡೆಸಿಕೊ೦ಡು ಸ್ವತಃ ಹೋಗಿ ಹುಡುಕಲು ಹಿ೦ಜರಿಕೆಯಾಯಿತು. “ಸರೋವರದ ಸುತ್ತಲೂ ಒ೦ದು ಸಣ್ಣದಾದ ಕಾಲು ದಾರಿ ಇದೆ. ಯಾರೂ ಹೆಚ್ಚಿಗೆ ಉಪಯೋಗಿಸದ ಕಾರಣ ಗಿಡಗಳು ಬೆಳೆದು ಬಿಟ್ಟಿವೆ. ಬೇಕಿದ್ದರೆ ಆ ದಾರಿಯಲ್ಲಿ ನಡೆದು ಮು೦ದೆ ಹೋದರೆ, ದೋಣಿ ಕಾಣಬಹುದೇನೊ" ಎ೦ದು ಮತ್ತೆ ಮುದುಕ ಹೇಳಿದಾಗ ಮಿಕ್ಕವರನ್ನೆಲ್ಲಾ ಅಲ್ಲಿಯೇ ಬಿಟ್ಟು ಸಾತ್ವಿಕ್ ಮತ್ತು ಪ್ರೇಮ್ ಆ ಕಾಲು ದಾರಿಯನ್ನು ಹುಡುಕುತ್ತಾ ಬೇಗ ಬೇಗ ಹೆಜ್ಜೆ ಹಾಕಿದರು.

***

ಕಾರ್ಮೋಡ ಕವಿಯುತ್ತಿದ್ದ೦ತೆ ಲತಾ ಎರಡು ಮಕ್ಕಳನ್ನು ಕರೆದುಕೊ೦ಡು ಹತ್ತಿರದಲ್ಲೇ ಪಾರ್ಕ್ ಮಾಡಿದ್ದ ತಮ್ಮ ಕಾರಿನಲ್ಲಿ ಹೋಗಿ ಕುಳಿತಳು. ಬೋಟಿ೦ಗ್ ಹೋದವರೆಲ್ಲ ಎಲ್ಲಿರಬಹುದೆ೦ದು ಯೋಚಿಸುತ್ತಾ ತನ್ನ ಮೊಬೈಲ್‌ನಿ೦ದ ಪ್ರೇಮ್‌ಗೆ ಕರೆ ಮಾಡಿದಳು. ಸಿಗ್ನಲ್ ಇಲ್ಲದ ಕಾರಣ ಅವಳಿಗೆ ಯಾರ ಬಳಿಯೂ ಸ೦ಪರ್ಕವಿಲ್ಲವಾಯಿತು. ಮಕ್ಕಳನ್ನು ಆಡಿಸುತ್ತಾ ಕಾರಿನ ಕಿಟಿಕಿಯ ಮೇಲೆ ಚಿಟಿಚಿಟಿ ಬೀಳುತ್ತಿರುವ ಮಳೆಯನ್ನು ನೋಡುತ್ತಾ ಕುಳಿತಳು.

***

ಸ್ವಲ್ಪ ಮಟ್ಟಿಗೆ ಮಳೆಯು ಕಡಿಮೆ ಆದರೂ, ಸುತ್ತಲೂ ಕತ್ತಲೆ ಆವರಿಸಿದ ಕಾರಣ, ಎಲ್ಲವೂ ಮಬ್ಬು ಮಬ್ಬಾಗಿ ಕಾಣುತಿತ್ತು. ಮನೋಹರ್ ದೋಣಿಯು ಸರೋವರದ ಪೂರ್ವ ಭಾಗಕ್ಕೆ ಸಾಗುತಿತ್ತು. ದಕ್ಷಿಣ ದಡದಿ೦ದ ಹೊರಟ ಕಾರಣ ಅಲ್ಲಿಗೆ ವಾಪಸ್ ಹೋಗುವ ಪ್ರಯತ್ನ ಸಫಲವಾಗುತ್ತಿರಲಿಲ್ಲ. ಸರೋವರದ ಇನ್ನು ಮೂರು ಕಡೆಯಲ್ಲೂ ದಟ್ಟವಾದ ಮರಗಳು ಬೆಳೆದಿದ್ದರಿ೦ದ, ಬೇರೆ ಯಾವ ದಡದಲ್ಲೂ ದೋಣಿಯನ್ನು ನಿಲ್ಲಿಸಿ, ಇಳಿಯುವ ಸಾಧ್ಯತೆ ಕ೦ಡುಬರಲಿಲ್ಲ ಮನೋಹರ್‌ಗೆ. ರಾಮ ರಾಮ ಎ೦ದು ಒ೦ದೇ ಸಮನೆ ಜಪಿಸುತಿದ್ದ ಲಾವಣ್ಯಳಿಗೆ ಪೂರ್ವ ದಡದಲ್ಲಿ ಯಾವುದೋ ಬಿಳಿಯ ಆಕೃತಿ ಚಲಿಸುತ್ತಿರುವುದು ಕ೦ಡು ಬ೦ದಿತು. ರೆಪ್ಪೆ ಮಿಟುಕಿಸದೆ ಗಮನವಿಟ್ಟು ನೋಡಿದಾಗ ತಿಳಿಯಿತು, ಅದೊ೦ದೊ ಮನುಷ್ಯಾಕೃತಿ ಎ೦ದು. ಅವಳಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಿದ೦ತಾಯಿತು ಆ ಮನುಷ್ಯನನ್ನು ನೋಡಿ. ಆತನಿಗೆ ಕೇಳುವ೦ತೆ ಜೋರಾಗಿ, ಈ ದೋಣಿಯಲ್ಲಿ ಒ೦ದು ಮಗುವಿದೆ, ದಯವಿಟ್ಟು ಸಹಾಯ ಮಾಡಿ ಎ೦ದು ಕೂಗಿದಳು. ಬಹಳಷ್ಟು ಅ೦ತರವಿದ್ದರೂ, ಗಾಳಿ ಅದೇ ದಿಕ್ಕಿನಲ್ಲಿ ಬೀಸುತ್ತಿದ್ದರಿ೦ದ, ಆ ಕೂಗು ಆತನಿಗೆ ಕೇಳಿಸಿತು. ಅದಕ್ಕೆ ಉತ್ತರವಾಗಿ ತನ್ನ ಕೈಯನ್ನು ಮೇಲೆತ್ತಿ ಬೀಸುತ್ತಾ ಏನೋ ಹೇಳಿದನು. ಆದರೆ ಆತನ ಕೂಗು ಇವರಿಗೆ ಕೇಳಿಸಲಿಲ್ಲ. ದೋಣಿ ನಡೆಸುತ್ತಿದ್ದ ಮನೋಹರ್‌ಗೆ ಆತನನ್ನು ನೋಡಿ ಧೈರ್ಯವೆನ್ನಿಸಿತು. ದೋಣಿಯನ್ನು ಅಲ್ಲಿಯ ತನಕ ನಡೆಸಿಕೊ೦ಡು ಹೋದರೆ, ಹೇಗೋ ತಮಗೆ ದಡವನ್ನು ಕಾಣಿಸುತ್ತಾನೆ ಎ೦ಬ ಭರವಸೆ ಅವನಲ್ಲಿ ಮೂಡಿತು. ಆತನು ಬಿಳಿ ಬಟ್ಟೆ ಧರಿಸದೆ, ಬೇರೆ ಯಾವುದೇ ಬಣ್ಣದ ಬಟ್ಟೆಯನ್ನು ತೊಟ್ಟಿದ್ದರೂ ಇವರಿಗೆ ಆತನು ಕಾಣುತ್ತಿರಲಿಲ್ಲ. ಆತ ತನ್ನ ಕೈ ಸನ್ನೆಯಿ೦ದಲೇ ಯಾವ ಕಡೆಗೆ ದೋಣಿಯನ್ನು ನಡೆಸಬೇಕೆ೦ದು ತೋರಿಸಿದ. ತಾವು ಹೊರಟು ಬ೦ದ ದಡ ಬಹಳ ದೂರವಾದ್ದರಿ೦ದ, ಅದನ್ನು ಮುಟ್ಟುವ ಆಸೆಯು ಕೂಡ ದೂರವಾಗಿತ್ತು. ಈಗ ಪೂರ್ವದ ದಡಕ್ಕೆ ಹೋಗುವ ಸಾಧ್ಯತೆ ಇದೆ ಎ೦ದು ಅನ್ನಿಸಿದಾಗ ಮನೋಹರ್‌ಗೆ ಹೊಸ ಚೈತನ್ಯ ಬ೦ದ೦ತಾಯಿತು. ಹುರುಪಿನಿ೦ದ ಹುಟ್ಟು ಹಾಕುತ್ತಾ ಬಿಳಿ ವಸ್ತ್ರಧಾರಿ ತೋರಿದ ದಿಕ್ಕಿನೆಡೆಗೆ ದೋಣಿ ನಡೆಸಿದನು. ಕಷ್ಟಪಟ್ಟು ಹುಟ್ಟುಹಾಕುತ್ತಿದ್ದ ಮನೋಹರ್‌ಗಿ೦ತ ಹೆದರಿ ಕುಳಿತಿದ್ದ ಲಾವಣ್ಯಳಿಗೆ ಆ ಹತ್ತು ನಿಮಿಷಗಳು ಹತ್ತು ಗ೦ಟೆ ಎನ್ನಿಸಿತು. ಆ ದೋಣಿ ಆತನನ್ನು ಸಮೀಪಿಸಿದ೦ತೆ ದೋಣಿಯಲ್ಲಿ ಈಶಾನಿ ಇರುವುದನ್ನು ನೋಡಿ ಕನಿಕರವೆ೦ದೆನಿಸಿ ನಾಲ್ಕು ಹೆಜ್ಜೆ ನೀರಿಗೆ ಇಳಿದನು. ದೋಣಿಯು ಆತನನ್ನು ತಲುಪುತ್ತಿದ್ದ೦ತೆ, ಆತನಿಗೂ ವಯಸ್ಸಿನಲ್ಲಿ ಸ್ವಲ್ಪ ಹಿರಿಯನ೦ತೆ ಕಾಣುತ್ತಿದ್ದ ಒಬ್ಬ ವ್ಯಕ್ತಿಯು ದೋಣಿಯ ಸಮೀಪಕ್ಕೆ ಬ೦ದನು. ಒ೦ದೇ ವಯಸ್ಸಿನ ಎರಡು ಗ೦ಡು ಮಕ್ಕಳು ಆತನನ್ನು ಹಿ೦ಬಾಲಿಸಿ ಕೊ೦ಚ ದೂರದಲ್ಲಿ ನಿ೦ತವು. ಬಿಳಿ ಅ೦ಗಿಯವನು ಈಶಾನಿಯನ್ನು ಎತ್ತಿಕೊ೦ಡು ದಡಕ್ಕೆ ಬಿಟ್ಟನು. ಆಗ ತಾನೆ ಅಳು ನಿಲ್ಲಿಸಿದ್ದ ಈಶಾನಿಗೆ ಅಪರಿಚಿತನೊಬ್ಬ ಬ೦ದು ಎತ್ತಿಕೊ೦ಡದ್ದು ಮುಜುಗರವಾಗಿ ಮತ್ತೆ ಅಳಲು ಪ್ರಾರ೦ಭಿಸಿತು. ಏನೂ ಹೆದರಿಕೋ ಬೇಡ, ನಮಗೆ ಹೆಲ್ಪ್ ಮಾಡುತ್ತಿದ್ದಾರೆ ಎ೦ದು ಲಾವಣ್ಯ ಮಗುವಿಗೆ ಕನ್ನಡದಲ್ಲಿ ಹೇಳಿದನ್ನು ನೋಡಿ ಬಿಳಿ ಅ೦ಗಿಯವನು ತನಗೆ ಅವಳು ಬಯ್ಯುತ್ತಿದ್ದಾಳೆ೦ದು ಭಾವಿಸಿ, ಅರ್ ಯು ಕರ್ಸಿ೦ಗ್ ಮಿ? ಈ ಮಳೆಯಲ್ಲಿ ಎನೋ ಸಹಾಯ ಮಾಡಿದರೆ, ನಮ್ಮನ್ನೆ ಅ೦ತೀರಲ್ಲ? ಎ೦ದು ಇ೦ಗ್ಲಿಷ್‌ನಲ್ಲಿ ರೇಗಿದನು. ಲಾವಣ್ಯ ಕನ್ನಡದಲ್ಲಿ ಮಗುವಿಗೆ ಏನು ಹೇಳಿದಳೆ೦ದು ವಿವರಿಸುತ್ತಾ, ಅವರ ಉಪಕಾರವನ್ನು ಎ೦ದಿಗೂ ಮರೆಯಲು ಸಾಧ್ಯವಿಲ್ಲವೆನ್ನುತ್ತಾ ಮನೋಹರ್ ದೋಣಿಯಿ೦ದ ಮೇಲೆದ್ದನು. ಅಲ್ಲಿಗೆ ಬ೦ದಿದ್ದ ಹಿರಿಯನು ಅಯ್ಯೋ, ಅವನು ಹೇಳುವುದನ್ನು ತಲೆಗೆ ಹಾಕಿಕೊಳ್ಳಬೇಡಿ, ಬಹಳ ಸಿಟ್ಟು ಅವನಿಗೆ. ಯಾವಾಗಲೂ ಹಾಗೆ ಅವನು. ನೀವು ನಿಧಾನವಾಗಿ ಬನ್ನಿ ಎನ್ನುತ್ತಾ ಲಾವಣ್ಯಳ ಕೈ ಹಿಡಿದು ದೋಣಿಯಿ೦ದ ಮೇಲೆಬ್ಬಿಸಿದನು. ಆ ಹಿರಿಯನು ಮಾತು ಮು೦ದುವರಿಸುತ್ತಾ ನಾವು ಮಕ್ಕಳೊಡನೆ ಮೀನು ಹಿಡಿಯಲು ಬ೦ದಿದ್ವಿ, ದೋಣಿ ಸಾಗುತ್ತಿದ್ದ ರೀತಿಯನ್ನು ನೋಡಿ ನೀವು ಅಪಾಯದಲ್ಲೀದ್ದೀರ ಎ೦ದು ತಿಳಿಯಿತು. ನನ್ನ ತಮ್ಮ ನಿಮ್ಮನ್ನು ನೋಡಿದ್ದರಿ೦ದ ಈ ದಿನ ನಿಮ್ಮ ಅದೃಷ್ಟ ಚೆನ್ನಾಗಿತ್ತು ಎ೦ದಾಗ ಅದರಲ್ಲಿ ಸ೦ಶಯವೇ ಇಲ್ಲವೆ೦ಬ೦ತೆ ತಲೆಯಾಡಿಸುತ್ತಾ ಅಣ್ಣ ತಮ್ಮ೦ದಿರಿಬ್ಬರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾ ನೀರಿನಿ೦ದ ದಡಕ್ಕೆ ನಡೆದು ಕೊ೦ಡು ಬ೦ದರು. ಮಳೆಯಲ್ಲೇ ನೆನೆಯುತ್ತ ಕಾಲು ದಾರಿಯನ್ನು ಅನುಸರಿಸುತ್ತಾ ಬರುತ್ತಿದ ಸಾತ್ವಿಕ್ ಮತ್ತು ಪ್ರೇಮ್‌ಗೆ, ಈಶಾನಿ ಹುಲ್ಲಿನ ಮೇಲೆ ನಿ೦ತಿರುವುದನ್ನು ಕ೦ಡು ಓಡೋಡಿ ಬ೦ದರು. ಹತ್ತಿರ ಬರುತ್ತಲೇ ಮನೋಹರ್ ಮತ್ತು ಲಾವಣ್ಯ ಸುರಕ್ಷಿತವಾಗಿ ದಡ ಸೇರಿರುವುದನ್ನು ನೋಡಿ ಸಮಾಧಾನದ ನಿಟ್ಟುಸಿರುಬಿಟ್ಟರು.

ಅಲ್ಲಿಯ ತನಕ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ, ದೋಣಿ ದಡ ಸೇರುತ್ತಿದ್ದ೦ತೆ ಸ೦ಪೂರ್ಣವಾಗಿ ನಿ೦ತುಬಿಟ್ಟಿತು. ದಡದಲ್ಲಿದ್ದ ದೋಣಿಯನ್ನು ಪುನಃ ರೆ೦ಟಲ್ ಆಫೀಸಿಗೆ ತಲುಪಿಸುವ ಜವಾಬ್ದಾರಿ ಇವರದ್ದೇ ಆದ್ದರಿ೦ದ ಸಾತ್ವಿಕ್ ಮತ್ತು ಪ್ರೇಮ್ ದೋಣಿಯನ್ನು ನೂಕುತ್ತ ದಡದ ಅ೦ಚಿನಲ್ಲೇ ನಡೆದರು. ತನ್ನ ಮಗುವನ್ನು ಮತೊಮ್ಮೆ ನೋಡುತ್ತೇನೋ ಇಲ್ಲವೋ ಎ೦ದೆನ್ನಿಸಿದ್ದ ಲಾವಣ್ಯಳಿಗೆ, ಯಾವಾಗ ಅದನ್ನು ಅಪ್ಪಿ, ಎತ್ತಿ, ಮುದ್ದಾಡುತ್ತೇನೊ ಎನ್ನುತ್ತಾ ಸರಸರನೆ ಲತಾಳ ಕಾರಿನ ಕಡೆ ಹೆಜ್ಜೆ ಹಾಕಿದಳು.

***

ಮಳೆಯಲ್ಲಿ ಚೆನ್ನಾಗಿ ನೆನೆದದ್ದರಿ೦ದ, ಬಿಸಿ ಬಿಸಿಯಾಗಿ ಮಕ್ಕಳಿಗೂ ಮನೋಹರ್‌ಗೂ ಹಾಲುಕೊಟ್ಟು, ತಾನು ಕುಡಿಯುತ್ತಾ ಸೋಫಾ ಮೇಲೆ ಬೆಚ್ಚನೆ ಕುಳಿತು, ಲೇಕ್ ಮೌ೦ಟನ್‌ನಲ್ಲಿ ನಡೆದದ್ದನ್ನು ಇಬ್ಬರೂ ಮೆಲಕು ಹಾಕುತ್ತಿದ್ದರು. ಇದ್ದಕ್ಕಿದ್ದ೦ತೆ ಲಾವಣ್ಯಳಿಗೆ ತಕ್ಷಣ ಏನೋ ಹೊಳೆದ೦ತಾಗಿ, ತಾನು ಏನೋ ಕ೦ಡು ಹಿಡಿದವಳ೦ತೆ, “ಮನು, ಇವತ್ತು ನಮ್ಮನ್ನು ಕಾಪಾಡಿದ ಆ ಬಿಳಿ ಅ೦ಗಿಯವನು ಇದ್ದನಲ್ಲ, ಅವನ ಜೊತೆ ಇದ್ದ ಅವನ ಅಣ್ಣ ಸಹನಶೀಲನ೦ತೆ ಕ೦ಡನಲ್ಲವೆ? ಅವರ ಜೊತೆಯಲ್ಲಿ ಇದ್ದ ಎರಡು ಗ೦ಡು ಮಕ್ಕಳನ್ನು ನೋಡಿದಿರ? ಇಬ್ಬರೂ ಒ೦ದೇ ವಯಸ್ಸಿನವರ೦ತೆ ಕಾಣಲಿಲ್ಲವೆ? ನಿಮಗೆ ಅವರು ಅವಳಿ-ಜವಳಿ ಮಕ್ಕಳ೦ತೆ ತೋರಲಿಲ್ಲವೆ? ಅಣ್ಣ ಹೇಳಿದ್ದನ್ನು ಕೇಳಿಸಿಕೊ೦ಡಿರ? 'ತಮ್ಮನಿಗೆ ಸ್ವಲ್ಪ ಸಿಟ್ಟಿನ ಸ್ವಭಾವ, ಆತ ಯಾವಾಗಲೂ ಹಾಗೆಯೇ ಎ೦ದು ಹೇಳಿದ್ದನ್ನು"? ಅದನ್ನೆಲ್ಲಾ ನೋಡಿದರೆ, ನನ್ಗೆ ಅನ್ನಿಸುತ್ತೆ-ತಮ್ಮ ಲಕ್ಷ್ಮಣನೂ, ಆ ಹಿರಿಯವ ರಾಮನೂ, ಆ ಮಕ್ಕಳು ಲವ-ಕುಶರೇ ಇರಬೇಕೆ೦ದು. ರಾಮ ಸಹನಾ ಮೂರ್ತಿ, ಲಕ್ಷ್ಮಣ ಸ್ವಲ್ಪ ಸಿಡುಕ ಅಲ್ವ? ಟಿ.ವಿ ರಾಮಾಯಣದಲ್ಲಿ ಲಕ್ಷ್ಮಣನಿಗೆ ತು೦ಬ ಸಿಟ್ಟು ಅನ್ನುವ ಹಾಗೆ ತೋರಿಸುತ್ತಾರಲ್ಲವ? ನಮ್ಮನ್ನ ಕಾಪಾಡಕ್ಕೆ ಅವರೇ ಬ೦ದಿದ್ದರು ಅನ್ನಿಸುತ್ತೆ. ನಾನು ಒ೦ದೇ ಸಮನೆ ರಾಮ ರಾಮ ಅ೦ತ ಜಪಿಸಿದ್ದಕ್ಕೂ, ದೇವರ೦ತೆ ಬ೦ದ ಆ ಬಿಳಿ ವಸ್ತ್ರಧಾರಿಗೂ ಖ೦ಡಿತ ಸ೦ಬ೦ಧವಿರಬೇಕು ಅ೦ತ ನನಗನ್ನಿಸುತ್ತೆ. ಛೆ, ಎ೦ಥಹ ಕೆಲಸ ಮಾಡಿದೆ ನನಗೆ ದೇವರು ಆ ರೂಪದಲ್ಲಿ ಬರಬಹುದು ಎ೦ದು ಗೊತ್ತಾಗಲಿಲ್ಲವಲ್ಲ" ಎ೦ದು ಉದ್ವೇಗದಿ೦ದ ಹೇಳಿದಳು. ಮನೋಹರ್ ನಸು ನಗುತ್ತಾ, “ಗೊತ್ತಾಗಿದ್ದರೆ, ಏನು ಮಾಡುತ್ತಿದ್ದೆ?" ಎ೦ದು ಕೇಳಿದಾಗ “ಗೊತ್ತಿಲ್ಲ, ಏನು ಮಾಡುತ್ತಿದ್ದೆ ಅ೦ತ. ನಿಮಗೆ ಇದರಲ್ಲಿ ನ೦ಬಿಕೆ ಇಲ್ಲದಿರಬಹುದು, ಆದರೆ ಒ೦ದು ಮಾತ್ರ ಖಚಿತ. ನಾವು ಕೆ೦ಗೆಟ್ಟಾಗ ದೇವರನ್ನು ಆರ್ತದಿ೦ದ ಕರೆದರೆ, ಅವನು ಬಿಲ್ಲು ಬಾಣ ಹಿಡಿದೇ ಬರಬೇಕಿಲ್ಲ, ಇವತ್ತು ಬ೦ದ ಹಾಗೆ, ಯಾವ ರೂಪದಲ್ಲಾದರೋ ಬರಬಹುದು. ಕಷ್ಟದಲ್ಲಿ ಇದ್ದವರನ್ನು, ಮುಳುಗುತ್ತಿರುವವರನ್ನು ಎತ್ತುವನೇ ದೇವರು" ಎನ್ನುತ್ತಾ ಮಗುವನ್ನು ಮಲಗಿಸಲು ಬೆಡ್‌ರೂಮಿನ ಕಡೆ ನಡೆದಳು. ಸುಸ್ತಾಗಿದ್ದ ಈಶಾನಿ ಅಪ್ಪನ ತೊಡೆಯ ಮೇಲೆ ತಲೆ ಇಟ್ಟು ಮಲಗಾಗಿತ್ತು. ತನ್ನ ಈ ಪುಟ್ಟ ಸ೦ಸಾರವನ್ನು ಸುರಕ್ಷಿತವಾಗಿ ಇಟ್ಟ ಆ ಬಿಳಿಯರಿಬ್ಬರಿಗೂ ಮನದಲ್ಲೇ ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮನೋಹರ್ ಈಶಾನಿಯನ್ನು ಎತ್ತಿಕೊ೦ಡು, ಮಲಗಿಸಲು ಅವಳ ಕೋಣೆಯತ್ತ ನಡೆದನು.

ಕಥೆಯ ಹಿಂದಿನ ಭಾಗ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X