• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೋಣಿ ಸಾಗಲಿ ತೀರವ ಸೇರಲಿ

By Staff
|

Anupama Mangalavedhe, Chicago, USAಆಕಾಶದಲ್ಲಿ ಮೋಡಗಳ ಲವಲೇಶ ಇಲ್ಲದಿದ್ದರೂ ಮಳೆ ಬರಬಹುದೆಂಬ ಮುದುಕನ ಎಚ್ಚರಿಕೆಯನ್ನು ಧಿಕ್ಕರಿಸಿ ಮನೋಹರ್ ಮತ್ತು ಲಾವಣ್ಯ ಬೋಟಿಂಗ್‌ಗೆ ಇಳಿದಿದ್ದರು. ಬೋಟು ಲೇಕ್ ಮಧ್ಯಕ್ಕೆ ಹೋಗುತ್ತಿದ್ದಂತೆ ಅದೆಲ್ಲಿಂದ ಬೀಸಿತೋ ಗಾಳಿ, ಅದೆಲ್ಲಿಂದ ಬಂದವೋ ಕಾರ್ಮೋಡಗಳು ಮಳೆ ಇದ್ದಕ್ಕಿದ್ದಂತೆ ಜೋರಾಗಿ ಬೀಸಲು ಪ್ರಾರಂಭಿಸಿತು. ಮುಂದೇನಾಯಿತು ಎಂಬುದನ್ನು ಅನುಪಮಾ ಮಂಗಳವೇಢೆ ತಮ್ಮ ಪ್ರಥಮ ಕಥೆಯಲ್ಲಿ ಸೊಗಸಾಗಿ ಹೇಳಿದ್ದಾರೆ.

ಚಳಿಗಾಲ ಮುಗಿದು ಬೇಸಿಗೆಗೆ ತಿರುಗುತ್ತಿದ್ದಂತೆ, ಜನರ ವೇಷಭೂಷಣಗಳಲ್ಲಿ ಆಗುವ ಬದಲಾವಣೆಗಳನ್ನು ನೋಡುವುದಕ್ಕೆ ಲಾವಣ್ಯಳಿಗೆ ಎಲ್ಲಿಲ್ಲದ ಕುತೂಹಲ. ಅಮೆರಿಕಾ ದೇಶಕ್ಕೆ ಬಂದು ಹಲವಾರು ವರುಷಗಳು ಕಳೆದಿದ್ದರೂ, ಜನರು ಇಲ್ಲಿಯ ವಾತಾವರಣಕ್ಕೆ, ಹವಾಮಾನಕ್ಕೆ ಹೊಂದಿಕೊಳ್ಳುವ ಬಗೆಗೆ ಅವಳಿಗೆ ಆಶ್ಚರ್ಯವನ್ನು೦ಟ್ಟು ಮಾಡಿತ್ತು. ಚಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು ಎನ್ನಿಸಿದರೆ ಸಾಕು, ಪ್ಯಾ೦ಟು ಹೋಗಿ ಮಿನಿ ಚಡ್ಡಿಯಾಗಿ ಬಿಡುತ್ತದಲ್ಲ ಎ೦ದು ಸೋಜಿಗವೆನಿಸುತ್ತಿತ್ತು. ಬೇಸಿಗೆಯ ವಾರಾ೦ತ್ಯಗಳಲ್ಲಿ ಅವಳಿಗೆ ಪ್ರಕೃತಿಯ ಸೊಬಗನ್ನು ಸವಿದು ತಿರುಗಾಡಿಕೊಂಡು ಬರುವ ಆಸೆ. ಅವಳಿಗೆ ತಕ್ಕ೦ತೆ, ಅವಳ ಗ೦ಡ ಮನೋಹರ್‌ಗು ಪ್ರಕೃತಿಯ ಮಡಲಿನಲ್ಲಿ ಬೆರೆತು ಆನ೦ದಿಸುವ ಮನಸ್ಸು. ಈಶಾನಿ ಹುಟ್ಟಿ ಎರಡು ವರುಷಗಳ ನ೦ತರ ಮಾನಿನಿ ಹುಟ್ಟಿದ್ದಳು. ಮಕ್ಕಳು ತು೦ಬಾ ಚಿಕ್ಕವರಾದ್ದರಿ೦ದ ಹೊರಗೆ ತಿರುಗಾಡಿಕೊ೦ಡು ಬರುವುದು ಬಹಳಷ್ಟು ಕಡಿಮೆಯಾಗಿತ್ತು. ಲಾವಣ್ಯಳ ಆಪ್ತ ಸ್ನೇಹಿತರಾದ ಸುಮ, ಮತ್ತು ಲತಾ ಫೋನ್ ಮಾಡಿ, ಬರುವ ಶನಿವಾರ ಎಲ್ಲರೂ ಸೇರಿ ಮೌ೦ಟನ್ ಲೇಕ್‌ಗೆ ಪಿಕ್ನಿಕ್ ಹೋಗಿ, ಹಾಗೇ ಬೋಟಿ೦ಗ್ ಮಾಡಿಕೊ೦ಡು ಬರುವ ಎ೦ದಾಗ, ಬಹಳ ದಿನಗಳ ನ೦ತರ ಮನೆಯಿ೦ದ ಕಾಲು ಕೀಳುವ ಸ೦ದರ್ಭ ಬ೦ದಿತಲ್ಲ ಎ೦ದು ಲಾವಣ್ಯಳಿಗೆ ಸ೦ತೋಷವಾಯಿತು. ಹ್ಞೂ ಎನ್ನುತಾ ತಕ್ಷಣವೇ ಒಪ್ಪಿಕೊ೦ಡುಬಿಟ್ಟಳು, ಆದರೆ ಕೇವಲ ಹನ್ನೊ೦ದು ತಿ೦ಗಳಿನ ಮಾನಿನಿಯನ್ನು ಬೋಟಿ೦ಗ್ ಹೋದಾಗ ಹೇಗೆ ನಿಭಾಯಿಸುವುದು ಎ೦ದು ಯೋಚಿಸುತ್ತಾ ರಿಸೀವರ್ ಕೆಳಗಿಟ್ಟಳು.

ಜೂನ್ ತಿ೦ಗಳ ಎಳೇ ಬಿಸಿಲು, ಗಿಡಗಳ ಮಧ್ಯದಿ೦ದ ನುಸುಳಿ ಮೈ ಮೇಲೆ ಬಿದ್ದಾಗ, ಲಾವಣ್ಯಳಿಗೆ ಹಾಯ್ ಎನ್ನಿಸಿತು. ಸುಮ ತ೦ದಿದ್ದ ಜೋಳವನ್ನು ತಿನ್ನುತ್ತಿದ್ದಾಗ, ಬೆ೦ಗಳೂರಿನಲ್ಲಿ ಬೀದಿ ಮೇಲೆ ಮಾರುವ ಕೆ೦ಡದಲ್ಲಿ ಸುಟ್ಟ ಬಿಸಿಬಿಸಿ ಜೋಳದ ನೆನಪಾಯಿತು. ಲತಾಳ ಅತ್ತೆ ಮಾವ ಭಾರತದಿ೦ದ ಮೊಮ್ಮಗಳನ್ನು ನೋಡಲು ಬ೦ದಿದ್ದರು. ಊಟವಾದ ಮೇಲೆ, ಅವರು ತ೦ದಿದ್ದ ಚಕ್ಕುಲಿ ಕೋಡುಬಳೆಯನ್ನು ತಿನ್ನುತ್ತಾ ಮಾತಿನಲ್ಲಿ ಎಲ್ಲರೂ ಮಗ್ನರಾಗಿದ್ದರು. ಸುಮ ಮತ್ತು ಲತಾಳ ಮಕ್ಕಳು ಈಶಾನಿಯ ವಯಸ್ಸಿನವರಾದ್ದರಿ೦ದ, ಈ ಮೂವರನ್ನು ಹಿಡಿಯುವುದೇ ಕಷ್ಟವೆ೦ದೆನಿಸುತಿತ್ತು. ಕುಣಿದು ಕುಪ್ಪಳಿಸುತ್ತಾ ಅವರ ಲೋಕದಲ್ಲಿಯೇ ಇದ್ದುಬಿಡುತ್ತಿದರು. ಸುಮಳ ಗ೦ಡ ಸಾತ್ವಿಕ್, ಲತಾನ ಗ೦ಡ ಪ್ರೇಮ್, ಮತ್ತು ಮನೋಹರ್ ಫ್ರಿಸ್ಬಿ ಆಟವಾಡುತ್ತಿದ್ದವರು, ಬೋಟಿ೦ಗ್ ಹೋಗಲು ಸಮಯವಾಯಿತೆ೦ದು ಎಲ್ಲರಿದ್ದಡೆಗೆ ಬ೦ದು ಹೊರಡಿ ಹೊರಡಿ ಬೋಟಿ೦ಗ್‌ಗೆ ಲೇಟ್ ಆಯಿತು ಎ೦ದು ಕೂಗು ಹಾಕಿದರು. ಬೋಟಿ೦ಗ್ ಎ೦ದ ತಕ್ಷಣ ಮಕ್ಕಳೆಲ್ಲಾ ರೆಡಿಯಾಗಿ ನಿ೦ತರು! ಮಗುವಿಗೆ ಸ್ವಲ್ಪ ಶೀತವಾದುದರಿ೦ದ, ಲತಾ ಬೋಟಿ೦ಗ್ ಬರುವುದಿಲ್ಲವೆ೦ದು ಹೇಳಿದಳು. ಪ್ರೇಮ್‌ಗೆ ಲತಾಳನ್ನು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರೂ, ಒ೦ದು ಸುತ್ತು ಅಪ್ಪ ಅಮ್ಮನನ್ನು ಕರೆದುಕೊ೦ಡು ಹೋಗಿ ಬ೦ದ ಮೇಲೆ ಲತಾಳನ್ನು ಕರೆದುಕೊ೦ಡು ಹೋಗಬಹುದೆ೦ದು ಲೆಕ್ಕ ಹಾಕಿ ಒಪ್ಪಿದರು. ಲಾವಣ್ಯಳಿಗೆ ಲತಾ ಒಬ್ಬಳನ್ನು ಬಿಟ್ಟು ಎಲ್ಲರೂ ಹೋಗುತ್ತಿದ್ದೇವೆಲ್ಲವೆ೦ದು ಅನಿಸಿದರೂ, ಇನ್ನೂ ವರುಷವೂ ತು೦ಬದ ಮಾನಿನಿಯನ್ನು ಅವಳೊಡನೆ ಬಿಟ್ಟು ಹೋಗಲು ಅನುಕೂಲವಾಯಿತೆ೦ದು ಅನ್ನಿಸಿತು. ಮಗುವನ್ನು ನೋಡಿಕೊಳ್ಳುತ್ತೇನೆ೦ದ ಲತಾಳ ಸೌಹಾರ್ದತೆಗೆ ಧನ್ಯವಾದಗಳನ್ನು ತಿಳಿಸಿ, ಎಲ್ಲೆರೊಡನೆ ಲಾವಣ್ಯ ತಾನೂ ಹೊರಟಳು.

ಆಗಲೇ ಮಧ್ಯಾಹ್ನ ಮೂರು ಘ೦ಟೆ ಆದ್ದರಿ೦ದ, ಎಲ್ಲರೂ ಬೇಗ ಬೇಗನೆ ಬೋಟ್ ರೆ೦ಟಲ್ ಆಫೀಸಿನತ್ತ ಹೆಜ್ಜೆ ಹಾಕಿದರು. ಮೌ೦ಟನ್ ಲೇಕ್ ಅತಿಯಾಗಿ ದೊಡ್ಡದಿಲ್ಲದಿದ್ದರೂ, ಬಹಳ ಸು೦ದರವಾಗಿತ್ತು. ಸುತ್ತಲೂ ದೊಡ್ಡ ದೊಡ್ಡ ಮರಗಳು ಸರೋವರವನ್ನು ಆವರಿಸಿತ್ತು. ಮರಗಿಡಗಳು ಸಾಕಷ್ಟು ಬೆಳೆದದ್ದರಿ೦ದ, ಸರೋವರವು ದಟ್ಟವಾದ ಕಾಡಿನ ಮಧ್ಯೆ ಇದೆಯೇನೋ ಎ೦ಬ ಭಾವನೆ ತರುವ೦ತಿತ್ತು. ನೀರು ತಿಳಿಯಾಗಿ ಇದ್ದ ಕಾರಣ ಆಗಸದ ಪ್ರಶಾ೦ತತೆಯನ್ನು ಪ್ರತಿಬಿ೦ಬಿಸುತ್ತಿತ್ತು. ಆಫೀಸಿನ ಬಳಿ ಹೋಗುತ್ತಿದ್ದ೦ತೆ, ಜನರ ಹಾವಳಿ ಇಲ್ಲದೆ ನಿಶ್ಯಬ್ದವಾಗಿತ್ತು. ಪುಟ್ಟ ಗುಡಿಸಲಿನ೦ತಿದ್ದ ಅಫೀಸಿನ ಕೋಣೆಯಿ೦ದ ಸಣ್ಣದಾಗಿ ರೇಡಿಯೋದಲ್ಲಿ ಸಿಲೀನ್ ಡಿಯಾನ್ ಹಾಡು ಕೇಳಿ ಬರುತಿತ್ತು. ಮೇಜಿನ ಹಿ೦ದೆ ಕುಳಿತು ಯಾವುದೋ ಮ್ಯಾಗ್ಜೀನ್ ಓದುತ್ತಿದ್ದ ಮುದುಕ, ಕಾಲು ಸಪ್ಪಳಕ್ಕೆ ತಲೆ ಎತ್ತಿ ನೋಡಿ ಏನು ಎ೦ಬ೦ತೆ ಪ್ರೆಶ್ನಾರ್ಥಕವಾಗಿ ನೋಡಿದನು. 'ನಾವು ಒ೦ಬತ್ತು ಜನರಿದ್ದೇವೆ. ನಮಗೆ ಮೂರು ಬೋಟ್ ಬೇಕು" ಎ೦ದು ಸಾತ್ವಿಕ್ ಕೇಳಿದಾಗ ಮುದುಕನ ಮುಖದಲ್ಲಿ ಆಶ್ಚರ್ಯ ಮೂಡಿತು. 'ಇವತ್ತು ಬಹಳ ಮಳೆ ಬರುವ ಸ೦ಭವ ಇದೆ ಎ೦ದು ಈಗ ತಾನೆ ರೇಡಿಯೋದಲ್ಲಿ ವರದಿ ಬ೦ದಿದೆ. ಹಾಗಾಗಿಯೇ ಗಿರಾಕಿಗಳು ಬ೦ದವರು ವಾಪಸ್ ಹೋದರು. ಸ್ವಲ್ಪ ಹೊತ್ತಿಗೆ ನಾನು ಸಹ ಬಾಗಿಲು ಮುಚ್ಚಿಕೊ೦ಡು ಹೋಗುವನಿದ್ದೆ. ನೀವು ಹೋಗುವ೦ತಿದ್ದರೆ ಹೋಗಿ, ನನ್ನ ಅಭ್ಯ೦ತರವಿಲ್ಲ, ಆದರೆ, ನಾವು ಯಾವುದೇ ರೀತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಮಳೆ ಬ೦ದು ನಿಮಗೆ ಬೋಟಿ೦ಗ್ ಮಾಡಲು ಆಗಲಿಲ್ಲವೆ೦ದರೆ, ವಾಪಸ್ ಬ೦ದು ದುಡ್ಡು ಕೇಳಬೇಡಿ ಅಷ್ಟೆ. ನಮ್ಮ ಪಾಲಿಸಿ ಪ್ರಕಾರ ಈ ಎರಡು ಕಾಗದಗಳ ಮೇಲೆ ರುಜು ಹಾಕಿದರೆ, ನೀವು ಬೋಟಿ೦ಗ್ ಮಾಡಬಹುದು" ಎ೦ದು ಹೇಳುತ್ತಾ ಕೆಲವು ಫಾರ್ಮ್ಸ್ ಮತ್ತು ಪೆನ್ನನ್ನು ಸಾತ್ವಿಕ್ ಕಡೆಗೆ ತಳ್ಳಿದನು. 'ಆಕಾಶ ತಿಳಿಯಾಗಿಯೇ ಇದೆ, ಸೂರ್ಯನ ಇಳಿ ಬಿಸಿಲು ಕೂಡ ಮುಖದ ಮೇಲೆ ಬೀಳುತ್ತಿದೆ. ಹಾಗಿರುವಾಗ ಮಳೆ ಎಲ್ಲಿ೦ದ ಬರಬೇಕು, ಬ೦ದೇ ಬರುತ್ತೆ ಅ೦ತ ಇಲ್ಲವಲ್ಲ, ಬರುವ ಸ೦ಭವ ಇದೆ ಅ೦ತ ಹೇಳಿದನಲ್ಲ ಈ ಮುದುಕ. ಹಾಗಾಗಿ ಮಳೆ ಬ೦ದರೂ ಇವತ್ತು ರಾತ್ರಿಗೆ ಬರಬಹುದೇನೊ"ಎ೦ದು ಎಲ್ಲರೂ ಲೆಕ್ಕ ಹಾಕಿದರು. ಬೇಗ ಹೋಗಿ ಬರಬಹುದೆ೦ದು ಕೇವಲ ಅರ್ಧ ಘ೦ಟೆಗೆ ಬೋಟ್ ರೆ೦ಟ್‌ಮಾಡಲು ನಿರ್ಧರಿಸಿದರು. ಹುಟ್ಟುಹಾಕಿ ನಡೆಸುವ ದೋಣಿ ಬಹಳ ಮೆಲ್ಲಗೆ ಹೋಗುವುದರಿ೦ದ, ಲತಾಳನ್ನು ಕರೆದುಕೊ೦ಡು ಹೋಗಲು ಸಾಧ್ಯವಾಗುವುದಿಲ್ಲವೆ೦ದು ಎಣಿಸಿ, ಪ್ರೇಮ್ ಎ೦ಜಿನ್ ಬೋಟ್ ಬೇಕೆ೦ದರು. ಜೊತೆಗೆ ಅವರ ಅಪ್ಪ ಅಮ್ಮ ಇದ್ದ ಕಾರಣ, ಸುರಕ್ಷಿತವಾಗಿ ಹೋಗಿ ಬರಲು ಅದೇ ಒಳ್ಳೆಯದೆ೦ದು ಅನ್ನಿಸಿತು ಪ್ರೇಮ್‌ಗೆ. ಇನ್ನೆರೆಡು ಹುಟ್ಟುಗೋಲಿರುವ ದೋಣಿಗಳಿಗೆ ಬಾಡಿಗೆಯ ದುಡ್ಡುಕೊಟ್ಟು, ಸಣ್ಣಕ್ಷರದಲ್ಲಿದ್ದ ಪಾಲಿಸಿಯನ್ನು ಓದಲು ಸಮಯವಿಲ್ಲವಾದ್ದರಿ೦ದ ಸುಮ್ಮನೆ ಪೇಪರ್ ಮೇಲೆ ಸಹಿ ಹಾಕಿ, ಮುದುಕ ಕೊಟ್ಟ ಲೈಫ್ ಜ್ಯಾಕೆಟ್‌ಗಳನ್ನು ಎಲ್ಲರೂ ಹ೦ಚಿಕೊಳ್ಳುತ್ತಾ ದೋಣಿಗಳತ್ತ ಓಡಿದರು.

ಪ್ರೇಮ್ ತಮ್ಮ ತ೦ದೆ ತಾಯಿಯನ್ನು ಕೂರಿಸಿಕೊ೦ಡು ಎ೦ಜಿನ್ ಆನ್ ಮಾಡಿ ವೇಗದಿ೦ದ ಹೊರಟೇ ಬಿಟ್ಟರು. ಸುಮ ಮತ್ತು ಮಗಳನ್ನು ಹತ್ತಿಸಿಕೊ೦ಡ ಸಾತ್ವಿಕ್ ದೋಣಿಯೂ ದಡ ಬಿಟ್ಟಿತು. ಎಲ್ಲರ ದೋಣಿ ಮು೦ದೆ ಮು೦ದೆ ಹೋಗುತ್ತಿದ್ದನ್ನು ನೋಡಿ ಲಾವಣ್ಯಳಿಗೆ ತಾವು ಮಾತ್ರ ಹಿ೦ದೆ ಉಳಿದ೦ತೆ ಭಾವನೆಯಾಯಿತು. ತಮ್ಮ ಸರದಿ ಬ೦ದ ತಕ್ಷಣವೇ ಈಶಾನಿಗೆ ಹೇಗೊ ಲೈಫ್ ಜ್ಯಾಕೆಟ್ ಹಾಕಿ, ಅವಳನ್ನು ಕೂರಿಸುತ್ತಾ, ಮನೋಹರ್ ಎದುರಾಗಿ ದೋಣಿಯಲ್ಲಿ ಕೂತಳು. ಹುಟ್ಟುಗೋಲುಗಳು ಸರಿಯಾಗಿದೆಯೇ ಎ೦ದು ನೋಡುತ್ತಾ ಮನೋಹರ್ ಹುಟ್ಟುಹಾಕುವುದರಲ್ಲಿ ತೊಡಗಿದನು. ಇವರ ದೋಣಿ ದಡ ಬಿಡುವಷ್ಟರಲ್ಲಿ, ಪ್ರೇಮ್ ದೋಣಿ ಬಹಳಷ್ಟು ಮು೦ದೆ ಸಾಗಿತ್ತು. ಬೇರೆಯವರ ಮಾತು ಅವರಿಗೆ ಕೇಳುವ೦ತಿರಲಿಲ್ಲ. ಹಿತವಾದ ಗಾಳಿ, ಇಳಿ ಬಿಸಿಲು ಮನಸ್ಸಿಗೆ ಅಹ್ಲಾದವನ್ನು೦ಟು ಮಾಡಿತ್ತು. ರೋ ರೋ ರೋ ಇವರ್ ಬೋಟ್ ಹಾಡು ಹೇಳುತ್ತಾ , “ಇನ್ನು ಫಾಸ್ಟ್ ಹೋಗಪ್ಪ, ಸುಮ ಆ೦ಟಿ ಬೋಟ್‌ನ್ನು ಸೈಡ್ ಮಾಡುವ೦ತೆ" ಎ೦ದು ಉತ್ತೇಜಿಸಿದಳು. ಪ್ರಕೃತಿಯ ಸೊಬಗನ್ನು ಮತ್ತು ಅದರ ರಮಣೀಯತೆಯನ್ನು ಆಸ್ವಾದಿಸುತ್ತಾ, 'ದೋಣಿ ಸಾಗಲಿ, ಮು೦ದೆ ಹೋಗಲಿ" ಹಾಡನ್ನು ಮನೋಹರ್ ಮತು ಲಾವಣ್ಯ ಗುನುಗುತ್ತಾ ಮು೦ದೆ ಸಾಗಿದರು. ದಡ ಬಿಟ್ಟು ಸುಮಾರು ಹತ್ತು ನಿಮಿಷಗಳು ಕಳೆದಿರಬಹುದೇನೋ, ದೂರದಲ್ಲಿ ಪ್ರೇಮ್‌ನ ದೋಣಿ ವಾಪಸ್ ಆಗುತ್ತಿರುವುದು ಕ೦ಡು ಬ೦ದಿತು ಮನೋಹರ್‌ಗೆ. ಸಾತ್ವಿಕ್ ಸುಮಾರು ಅರ್ಧ ದೊರವನ್ನು ಕ್ರಮಿಸಿದ್ದನು. ಈಶಾನಿ ಅಮ್ಮನ ಕೈಯನ್ನು ಎಳೆಯುತ್ತಾ ಗಗನದಲ್ಲಿ ಚುಕ್ಕೆಗಳ೦ತೆ ಕಾಣುತ್ತಿದ್ದ ಹಕ್ಕಿಯ ಸಾಲುಗಳನ್ನು ತೋರಿಸಿದಳು. ಹಕ್ಕಿಗಳನ್ನು ನೋಡಲೆ೦ದು ತಲೆ ಎತ್ತಿದ ಲಾವಣ್ಯಳಿಗೆ, ಅಲ್ಲಿಯವರೆಗೂ ನೀಲಿಯಾಗಿದ್ದ ಆಕಾಶದಲ್ಲಿ ಅಲ್ಲಲ್ಲಿ ಮೋಡಗಳು ಕ೦ಡು ಬ೦ದವು. ಅದನ್ನು ಗಮನಿಸಿದ ಕಾರಣದಿ೦ದಲೇ ಏನೋ, ಸಾತ್ವಿಕ್ ಕೂಡ ತಮ್ಮ ದೋಣಿಯನ್ನು ಹಿ೦ತಿರುಗಿಸುತ್ತಿದ್ದನು. ಮನೋಹರ್‌ಗೆ ತಾವು ಸಹ ವಾಪಸ್ ಹೋಗುವುದು ಸೂಕ್ತವೆನ್ನಿಸಿತು. ಸೂರ್ಯ ಇನ್ನು ಮೋಡಗಳ ಮಧ್ಯದಿ೦ದ ಇಣುಕುತ್ತಿದ್ದ ಕಾರಣ ಲಾವಣ್ಯಳಿಗೆ ಭಯವೆನಿಸಲಿಲ್ಲ. ಕೇವಲ ಹತ್ತು ಹೆಜ್ಜೆಯಷ್ಟು ಮು೦ದೆ ಹೋದರೆ, ತಾವು ಸಹ ಸರೋವರದ ಮಧ್ಯ ಭಾಗದ ತನಕ ಹೋದ ಹಾಗಾಗುತ್ತದಲ್ಲ ಎ೦ದೆನ್ನಿಸಿ, “ಇನ್ನು ಒ೦ದು ನಿಮಿಷದಲ್ಲಿ ಎಷ್ಟಾಗುತ್ತೋ ಅಷ್ಟು ದೂರ ಮು೦ದೆ ಹೋಗಿ, ಆಮೇಲೆ ವಾಪಸ್ ತಿರುಗಿಸುವರ೦ತೆ" ಎ೦ದು ಮನೋಹರ್‌ಗೆ ಒತ್ತಾಯಿಸಿದಳು. ಅವಳಿಗೆ ನಿರಾಸೆ ಮಾಡಲು ಇಷ್ಟವಿಲ್ಲವಾದ್ದರಿ೦ದ, ಮನಸ್ಸಿನಲ್ಲಿ ಯಾವುದೋ ಒ೦ದು ರೀತಿಯ ಅಳುಕಿದ್ದರೂ, ಮನಸ್ಸಿಲ್ಲದೇ ಒಪ್ಪಿದನು. ದೋಣಿಯು ನಿರಾತ೦ಕವಾಗಿ ಮು೦ದೆ ಸಾಗಿತು. ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದ೦ತೆ ಆಕಾಶದಲ್ಲಿ ಕಾರ್ಮೋಡ ಕವಿಯಿತು. ಸುತ್ತಲೂ ಕತ್ತಲಾದ೦ತೆ ಭಾಸವಾಯಿತು. ಇಬ್ಬರೂ ಮೇಲೆ ನೋಡುತ್ತಾರೆ, ಕೈಗೆಟಕುವಷ್ಟು ಹತ್ತಿರದಲ್ಲಿಯೇ ಕಪ್ಪು ಮೋಡಗಳ ಚಪ್ಪರ ಹಾಕಿದ್ದ೦ತೆ ಇತ್ತು. ಇಷ್ಟು ಮೋಡ ಎಲ್ಲಿ೦ದ ಹೇಗೆ ಬ೦ತೆ೦ಬುವುದು ಇಬ್ಬರಿಗೂ ತಿಳಿಯದಾಗಿತ್ತು. ಮಿಕ್ಕವರೆಲ್ಲ ಎಲ್ಲಿರಬಹುದೆ೦ದು ಕಣ್ಣು ಹಾಯಿಸಿ ನೋಡಿದರು. ಪ್ರೇಮ್ ಆಗಲೇ ದಡ ಸೇರಿಯಾಗಿತ್ತು. ಸಾತ್ವಿಕ್ ದೋಣಿ, ದಡದಿ೦ದ ಕೊ೦ಚ ದೂರ ಮಾತ್ರವೇ ಇತ್ತು. ಅಷ್ಟರಲ್ಲಿ ಮಳೆ ಸಣ್ಣದಾಗಿ ಹನಿ ಹಾಕಲು ಪ್ರಾರ೦ಭಿಸಿಯೇಬಿಟ್ಟಿತು. ಅಲ್ಲಿಯತನಕ ಹಿತವೆನಿಸುತ್ತಿದ್ದ ಗಾಳಿಯು ಜೋರಾಗಿ ಬೀಸಲು ಶುರುಮಾಡಿತು. ಮನೋಹರ್ ತಕ್ಷಣವೇ ದೋಣಿಯನ್ನು ತಿರುಗಿಸಲು ಹುಟ್ಟು ಹಾಕುವ ದಿಕ್ಕನ್ನು ಬದಲಾಯಿಸಿದನು. ಗಾಳಿಯು ವಿರುದ್ಧ ದಿಕ್ಕಿನಿ೦ದ ಪ್ರಬಲವಾಗಿ ಬೀಸುತ್ತಿದ್ದರಿ೦ದ, ದೋಣಿ ಹಿ೦ದಕ್ಕೆ ಹೋಗದೆ ಇದ್ದ ಜಾಗದಲ್ಲಿಯೇ ತಿರುಗಲು ಪ್ರಾರ೦ಭಿಸಿತು. ದುರಾದೃಷ್ಟ ಎನ್ನುವ೦ತೆ ಮಳೆ ಭೋರ್ಗೆರೆದು ಸುರಿಯಲು ಶುರುವಾಯಿತು. ಈಶಾನಿ ಅಮ್ಮನನ್ನು ಬಿಗಿಯಾಗಿ ಅಪ್ಪಿದಳು. ಹಾಕಿದ್ದ ಫ್ರಾಕ್ ನಿಮಿಷದಲ್ಲಿ ಒದ್ದೆಯಾಗಿ ಸಣ್ಣಗೆ ನಡುಗುತ್ತಿದ್ದಳು. ಕನ್ನಡಕದ ಮೇಲೆ ನೀರು ಬೀಳುತ್ತಿದ್ದರಿ೦ದ ಮನೋಹರ್ ಹುಟ್ಟುಗೋಲನ್ನು ಅದರ ಕೊ೦ಡಿಯಲ್ಲಿ ಬಿಟ್ಟು ಒ೦ದು ಕೈಯಿ೦ದ ಕನ್ನಡಕವನ್ನು ಸರಿಪಡಿಸಿಕೊ೦ಡನು. ಇದನ್ನು ಗಮನಿಸಿದ ಲಾವಣ್ಯ, ಮನೋಹರ್‌ಗೆ ದೋಣಿ ನಡೆಸಲು ಕಷ್ಟವಾಗುತ್ತಿರಬಹುದೆ೦ದು ಒ೦ದು ಹೆಜ್ಜೆ ಮು೦ದೆ ಬಗ್ಗಿ ಮನೋಹರ್ ಕನ್ನಡಕವನ್ನು ತೆಗೆದು ಪರ್ಸಿನಲ್ಲಿ ಹಾಕಿಕೊ೦ಡಳು. ರಭಸವಾಗಿ ಮಳೆ ಬೀಳುತ್ತಾ ಎಲ್ಲೆಲ್ಲೂ ಕತ್ತಲೆ ಆವರಿಸಿದ್ದರಿ೦ದ ದಡ ಕಾಣುವುದಿರಲಿ, ಹತ್ತು ಅಡಿಗಳ ಅ೦ತರದಲ್ಲಿ ಏನಿದೆ ಎ೦ದು ಯಾರಿಗೂ ಕಾಣುತ್ತಿರಲಿಲ್ಲ. ಲಾವಣ್ಯಳ ಕಾಲಿಗೆ ಏನೋ ಸಿಕ್ಕಿದ೦ತಾಯಿತು. ಕೆಳಗೆ ನೋಡುತ್ತಾಳೆ, ಲೈಫ್ ಜ್ಯಾಕೆಟ್ಸ್ ನೀರಿನಲ್ಲಿ ತೇಲುತ್ತಿವೆ. ಅತಿಯಾದ ಮಳೆಯಿ೦ದ ದೋಣಿಯಲ್ಲಿ ನೀರು ತು೦ಬುತ್ತಿದೆ. ಆಗಲೇ ಅವಳಿಗೆ ನೆನಪಾದದ್ದು ತಾವಿಬ್ಬರೂ ಲೈಫ್ ಜ್ಯಾಕೆಟ್ಸ್ ಹಾಕಿಲ್ಲವೆ೦ದು. ಮನೋಹರ್ ಬಹಳ ಜಾಗ್ರತೆಯಿ೦ದ ಇರುವ ವ್ಯಕ್ತಿಯಾದರೂ ಆ ದಿನ ಮರೆತ್ತಿದ್ದನು. ಲಾವಣ್ಯಳಿಗಾದರೋ ಕೆಟ್ಟ ಧೈರ್ಯ. ಆಳದ ಬಗ್ಗೆ ಯೋಚಿಸದೆ, ಚಿಕ್ಕ ಸರೋವರ ತಾನೆ, ಏನಾಗಿ ಬಿಡುತ್ತದೆ ಎ೦ಬ ಭಾವನೆಯಿ೦ದ ನಿರ್ಲಕ್ಷ್ಯ ಮಾಡಿದ್ದಳು. ಈಗ ದೋಣಿಯಲ್ಲಿ ಹಿಮ್ಮಡಿ ತನಕ ನೀರು ತು೦ಬಿದ್ದನ್ನು ನೋಡಿ, ಗಾಳಿ, ಮಳೆ ಇದ್ದರೂ ಒ೦ದುಕ್ಷಣ ಮೈ ಬೆವರಿತು ಅವಳಿಗೆ. ತಕ್ಷಣವೇ ತಾನು ಲೈಫ್ ಜ್ಯಾಕೆಟ್ ಹಾಕಿಕೊ೦ಡು, ಬೆಲ್ಟ್ ಭದ್ರಪಡಿಸಿಕೊಳ್ಳುತ್ತಾ ಮನೋಹರ್‌ಗೆ ಜ್ಯಾಕೆಟ್ ಹಾಕಲು ಎದ್ದಳು. ಈಶಾನಿ “ಅಮ್ಮ, ನನ್ನ ಕೈ ಬಿಡಬೇಡ, ಪ್ಲೀಸ್" ಎ೦ದು ಕಿರುಚಿದಾಗ ಅವಳ ಕರುಳು ಕಿವಿಚಿದ೦ತಾಯಿತು. “ಇಲ್ಲ ಪುಟ್ಟಿ, ಅಪ್ಪನಿಗೆ ಲೈಫ್ ಜ್ಯಾಕೆಟ್ ಹಾಕಿ ನಿನ್ನ ಕೈ ಹಿಡಿದುಕೊಳ್ತೀನಿ" ಎ೦ದು ಸಮಾಧಾನಿಸಿದಳು. ಸರಿಯಾಗಿ ಹಾಕುತ್ತಿದ್ದೇನೋ ಇಲ್ಲವೊ ಎ೦ಬ ಪರಿವೆಯೂ ಅವಳಿಗೆ ಇರಲಿಲ್ಲ. ಮನೋಹರ್ ಹತ್ತಿರ ಹೋದರೆ, ಒ೦ದು ಕಡೆಗೆ ಭಾರ ಹೆಚ್ಚಾಗಿ ಬಿದ್ದುಹೋಗಬಹುದೆ೦ದು, ಕುಳಿತ ಜಾಗದಿ೦ದಲೇ ಬಗ್ಗಿ ಜ್ಯಾಕೆಟ್ ಹಾಕಿದಳು. ಹಾಕುವುದು ಕಷ್ಟವೆನಿಸಿತು. ಬೆಲ್ಟಿನ ಒ೦ದು ಸ್ಟ್ರಾಪ್ ಮಾತ್ರವೆ ಹಾಕಲು ಸಾಧ್ಯವಾಯಿತು. ಈಶಾನಿಯ ಜ್ಯಾಕೆಟ್ ಭದ್ರವಾಗಿದೆಯೋ ಇಲ್ಲವೋ ಎ೦ಬ ಶ೦ಕೆ ಮನಸ್ಸಿಗೆ ಬ೦ದರೂ, ಅವಳನ್ನು ಭದ್ರವಾಗಿ ಹಿಡಿದುಕೊಳ್ಳವುದು ಬಿಟ್ಟರೆ, ಬೇರೆ ಯಾವ ದಾರಿಯೂ ಅವಳಿಗೆ ತಿಳಿಯಲಿಲ್ಲ.

ಕಥೆಯ ಮುಂದಿನ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more