ಅಪ್ಸರೆಯ ಅಹಂಭಾವ

ನೋಡವನ ಸ್ವಚ್ಛ ಸುಂದರ ರೂಪ ಎಂದೆ
ಮೋಡದ ಕರಿ ಮುಸುಕಿನಲಿ ಮಸುಕಾಗಿ
ಎಲ್ಲಿಯ ಸ್ವಚ್ಛತೆ ಎಂದಳು ನನ್ನ ರೂಪ
ಕತ್ತಲಿನ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಬಣ್ಣದ ಕಾಂತಿಯನು ಎಂದೆ
ಅರಿಸಿನದ ಓಕುಳಿಯಲಿ ಮಸುಕಾಗಿ ನಿಂತು
ಎಲ್ಲಿಯ ಮೈ ಕಾಂತಿ ಎಂದಳು ನನ್ನ ರೂಪ
ಎತ್ತರದ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಮಂಜಿನ ಮೈ ಬಣ್ಣವನು ಎಂದೆ
ಅತಿಯಾದ ಕಪ್ಪು ಕಲೆಯ ಕೂಪದಲಿ ನಿಂತು
ಎಲ್ಲಿಯ ಮಂಜಿನ ಮೈ ಎಂದಳು ನನ್ನ ರೂಪ
ತಾರೆಗಳ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಅಪ್ಸರೆ ಸೌಂದರ್ಯ ಎಂದೆ
ಹುಣ್ಣಿಮೆ ಕರಗಿ ಕತ್ತಲೆಯ ಭೀತಿಯಲಿ ನಿಂತು
ಎಲ್ಲಿಯ ಅಪ್ಸರೆ ಎಂದಳು ನನ್ನ ರೂಪ
ನವಜಾತ ಭಾಸ್ವಾತೆ ಬಾನಿನಲಿ ಚಂದಿರ
ಅವನಿಗಿಲ್ಲದ ಅಹಂಭಾವ ನಿನಗೇಕೆ ಎಂದೆ
ಎನ್ನ ಕರ್ಪೂರ ಗೌರ ಸುಂದರದ ಸಾಟಿ ಆ
ಕಲೆ ಪೂರಿತ ಚಂದಿರನಲ್ಲವೆಂದಳು ನನ್ನ ರೂಪ












Click it and Unblock the Notifications