ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾ ಮತ್ತು ಪವನ್‌ ತಲೆಗೆ ದೀಪಕ್‌ ಮರ್ಡರ್‌ ಕೇಸ್‌!?

By Staff
|
Google Oneindia Kannada News


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಕೌಟುಂಬಿಕ ದೌರ್ಜನ್ಯ ಹೆಂಗಸರ ಮೇಲೆ ಮಾಡುವ ವಾಸಿಯಾಗದ ಗಾಯದ ಕುರಿತು ಫ್ರೀವೇಯಲ್ಲಿ ಹೋಗುತ್ತ ಅನು ವಿಚಾರ ಮಾಡುತ್ತಿದ್ದಳು. ಇವತ್ತಿಗೂ ಸಹ ಭಾರತದಲ್ಲಿ ಕಡಿಮೆ ವರದಕ್ಷಿಣೆ ತಂದಿದ್ದಕ್ಕೆ ಗಂಡ ಹಾಗು ಆತನ ಮನೆಯವರು ಒಂದಾಗಿ ಹೆಣ್ಣಿನ ಮೇಲೆ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಡುತ್ತಾರೆ. ಕೊಲ್ಲದೆ ಇದ್ದರೆ ಹಲವಾರು ರೀತಿಯಲ್ಲಿ ಹಿಂಸೆ ಕೊಡುತ್ತಿರುತ್ತಾರೆ.

ಮುವ್ವತ್ತು ವರ್ಷಗಳ ಕಾಲದ ಆ ನರಳಿಕೆಗೆ ಪವನ್‌ನ ತಾಯಿ ಅರ್ಹರಾಗಿರಲಿಲ್ಲ. ಅಷ್ಟು ದಿನ ಯಾರು ತಾನೆ ಅಂತಹ ದೌರ್ಜನ್ಯವನ್ನು ಸಹಿಸಲು ಸಾಧ್ಯ? ಆ ಭಯದಲ್ಲಿ ನನಗೆ ಮೂರು ತಿಂಗಳು ಸಹ ಇರಲಾಗಲಿಲ್ಲ.

ರೂಪ ಏನಾದರು ಪವನ್‌ನ ಜೊತೆ ಸೇರಿಕೊಂಡು ದೀಪಕ್‌ನನ್ನು ಕೊಲ್ಲಲು ಪಿತೂರಿ ಮಾಡಿದ್ದರೆ ಹಾಗೂ ಅದರಿಂದ ಅವರು ಬಚಾವೂ ಆಗಿಬಿಟ್ಟರೆ, ಅದನ್ನು ಸ್ತ್ರೀಜಾತಿಯ ವಿಜಯ ಎಂದು ಅನು ಪರಿಗಣಿಸುತ್ತಿದ್ದಳು.

ಅವಳ ಸೆಲ್‌ಫೋನ್‌ ರಿಂಗುಣಿಸಿತು: ಡ್ಯಾನ್‌.

‘‘ಹಾಯ್‌, ಡ್ಯಾನ್‌.’’

‘‘ಅನು!’’ ಅವನ ಸ್ವರ ಉದ್ರೇಕಭರಿತವಾಗಿತ್ತು. ‘‘ಎಲ್ಲಿದ್ದೀಯ?’’

ಅನು ಒಂದುಕ್ಷಣ ತಡೆದಳು. ಸುಳ್ಳು ಹೇಳಬಾರದು; ನಾನೀಗ ಪೋಲಿಸರ ಕಣ್ಗಾವಲಿನಲ್ಲಿದ್ದೇನೆ. ’‘ನಾನು ರೂಪಾಳನ್ನು ನೋಡಲು ಹೋಗುತ್ತಿದ್ದೇನೆ. ಇದನ್ನು ಕೇಳಿ ನಿನಗೆ ಹೇಗೆ ಅನ್ನಿಸುತ್ತೆ ಎಂದು ನನಗೆ ಗೊತ್ತು, ಆದರೆ ಅವಳೊಬ್ಬಳೆ ಇದನ್ನೆಲ್ಲ ನಿಭಾಯಿಸಲಿ ಎಂದು ಬಿಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಬಗ್ಗೆ ನಿನಗೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ನಾನು ಪ್ರಶಂಸಿಸುತ್ತೇನೆ ಹಾಗು ನೀನು ಮಾಡುತ್ತಿರುವ... ’’

‘‘ಒಂದು ನಿಮಿಷ ಇರು!’’ ಅವನು ಸುದೀರ್ಘ ನಿಟ್ಟುಸಿರೊಂದನ್ನು ಬಿಟ್ಟನು. ‘‘ಅನು, ನನಗೆ ಗೊತ್ತು ನಿನಗೆ ಹೇಗೆ ಅನ್ನಿಸುತ್ತಿದೆ ಎಂದು. ಆದರೆ ಒಂದು ನಿಮಿಷ ನಾನು ಹೇಳುವುದನ್ನು ಕೇಳಿಸಿಕೊ. ನೀನು ಇದನ್ನು ಮಾಡಲೇಬೇಕಿದ್ದರೆ ಕನಿಷ್ಠ ನಿನಗೆ ಉಪಯೋಗವಾಗುವ ಹಾಗಾದರೂ ಮಾಡಿಕೊ.’’

‘‘ಏನು ನೀನು ಹೇಳುತ್ತಿರುವುದರ ಅರ್ಥ?’’ ಅನು ತನಗೆ ಸಿಕ್ಕ ಮುಂದಿನ ಎಕ್ಸಿಟ್‌ ತೆಗೆದುಕೊಂಡು ಒಂದು ಕಡೆ ನಿಲ್ಲಿಸಿಕೊಂಡಳು. ಅವಳು ಸಮ್ಮಿಟ್‌ ರಸ್ತೆಯಿಂದ ಅಷ್ಟೇನೂ ದೂರವಿರಲಿಲ್ಲ. ಹಾಗಾಗಿ ಇನ್ನೂ ಮುಂದಕ್ಕೆ ಹೋದರೆ ಸಿಗ್ನಲ್‌ ಹೋಗಿಬಿಡಬಹುದು ಎಂದುಕೊಂಡಳು.

‘‘ಒಂದು ನಿಮಿಷ ತಡೆದುಕೊ,’’ ಡ್ಯಾನ್‌ ಪುನರುಚ್ಚರಿಸಿದ, ‘‘ಇಲ್ಲಿ ನಾನು ಕಛೇರಿಯಿಂದ ಹೊರಗಡೆ ಹೋಗಿ ಮಾತನಾಡಬೇಕು. ಯಾರಾದರು ಇದನ್ನು ಕೇಳಿಸಿಕೊಳ್ಳುವುದು ಬೇಡ. ರೂಪ ಡಿಟೆಕ್ಟಿವ್‌ಗಳಿಗೆ ಕೊಟ್ಟಿರುವ ಸಂದರ್ಶನದ ಪ್ರತಿಯನ್ನು ಈಗ ತಾನೆ ಇಣುಕಿ ನೋಡಿದೆ. ನೀನು ಅವಳಿಂದ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ಒಂದೇನೆಂದರೆ, ನಾವು ಅವಳನ್ನು ಕರೆದುಕೊಂಡು ಬರಲು ಹೋಗಿದ್ದಾಗ ಅವಳು ಹೊರಗೆ ಹೋಗಲು ಸಿದ್ಧವಾಗಿ ನಿಂತಿದ್ದಳು. ಡ್ರೆಸ್‌ ಮಾಡಿಕೊಂಡು, ಎತ್ತರವಾದ ಹಿಮ್ಮಡಿಯ ಚಪ್ಪಲಿ ಹಾಕಿಕೊಂಡು, ಕೂದಲನ್ನು ಒಪ್ಪವಾಗಿ ಬಾಚಿಕೊಂಡಿದ್ದಳು. ಅವಳು ಅವತ್ತು ಇಡೀ ದಿನ ಮನೆಯಲ್ಲಿಯೆ ಕುಳಿತಿದ್ದ ಹಾಗೆ ಕಾಣಲಿಲ್ಲ.’’

‘‘ಜೊತೆಗೆ, ಅವಳು ತನ್ನ ಮಗುವನ್ನು ‘ಮಗಳು’ ಎಂದು ಪ್ರಸ್ತಾಪಿಸಿದ್ದಾಳೆ. ಇದು ಕೆಲವೊಂದು ವಿಷಯಕ್ಕೆ ಹೊಂದಿಕೆಯಾಗುತ್ತೆ. ಏನೆಂದರೆ, ದೀಪಕ್‌ ಸತ್ತ ರಾತ್ರಿ ಅವನು ತನ್ನ ಕಂಪನಿಯವರ ಜೊತೆ ಊಟ ಮಾಡುತ್ತಿದ್ದಾಗ ಸ್ವಲ್ಪ ಜಾಸ್ತಿಯೆ ಕುಡಿದಿದ್ದಾನೆ. ಆ ಮತ್ತಿನಲ್ಲಿ ರೂಪಾಳ ಹೊಟ್ಟೆಯಲ್ಲಿನ ಮಗು ಹೆಣ್ಣು ಎಂದೂ, ತಾನು ಅದನ್ನು ಗರ್ಭಪಾತ ಮಾಡಿಸುವುದಾಗಿಯೂ ಹೇಳಿದ್ದಾನೆ. ಅವನು ಹೇಳಿದ್ದನ್ನು ಕೇಳಿ ಅವನ ಜೊತೆ ಕುಳಿತಿದ್ದವರು, ನಿನ್ನ ಪವನ್‌ನೂ ಸೇರಿ, ಶಾಕ್‌ ಆಗಿದ್ದಾರೆ.’’

‘‘ಒಂದು ನಿಮಿಷ ಇರು.’’ ಅನು ಅದನ್ನೆಲ್ಲ ಅರಗಿಸಿಕೊಳ್ಳಲು ಕಷ್ಟಪಟ್ಟಳು. ‘‘ಎಲ್ಲಕ್ಕಿಂತ ಮುಖ್ಯವಾಗಿ, ನೀನು ಈ ಕೇಸಿನಲ್ಲಿ ತೊಡಗಿಸಿಕೊಂಡಿರಬಾರದು. ಹಾಗಿದ್ದರೆ ನಿನಗೆ ಇದೆಲ್ಲ ಹೇಗೆ ಗೊತ್ತಾಯಿತು?’’

’’ಯಾರೊ ಕಾಫಿಗೆ ಹೋದಾಗ ತಮ್ಮ ಟೇಬಲ್‌ನ ಮೇಲೆ ಕೆಲವು ನೋಟ್ಸ್‌ಗಳನ್ನು ಇಟ್ಟುಹೋಗಿದ್ದರು ಎಂದಷ್ಟೆ ನಾನು ನಿನಗೆ ಹೇಳಿದರೆ ಹೇಗೆ?’’

‘‘ಡ್ಯಾನ್‌, ನನಗಾಗಿ ನೀನು ನಿನ್ನ ಕೆಲಸವನ್ನು ಕಳೆದುಕೊಳ್ಳ ಬೇಡ. ಹಾಗೇನಾದರೂ ಅದರೆ ನನಗೆ ಸಹಿಸಲು ಆಗುವುದಿಲ್ಲ.’’

‘‘ಪರವಾಗಿಲ್ಲ, ಚಿನ್ನ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇದನ್ನು ಸುಮ್ಮನೆ ಗಮನಿಸುತ್ತ ಹೋಗುತ್ತಿದ್ದೇನೆ, ಅಷ್ಟೆ. ಯಾವುದರಲ್ಲೂ ಮಧ್ಯೆ ನಾನು ತಲೆ ಹಾಕುತ್ತಿಲ್ಲ. ಇನ್ನೂ ಇಲ್ಲ!’’

‘‘ನನಗೀಗ ಎಲ್ಲಿಂದ ಪ್ರಾರಂಭಿಸಬೇಕೆಂದೆ ಗೊತ್ತಾಗುತ್ತಿಲ್ಲ. ರೂಪಾ ಯಾಕೆ ಸಿದ್ಧವಾಗಿ ನಿಂತಿದ್ದಳೆಂದು ಅವರು ಅವಳನ್ನು ಕೇಳಿದರೆ?’’

‘‘ಹೌದು. ತಾನು ಅವನಿಗೆ ಯಾವಾಗಲು ಸುಂದರವಾಗಿ ಕಾಣಿಸುವುದನ್ನು ದೀಪಕ್‌ ಬಯಸುತ್ತಾನೆ ಎಂದು ಹೇಳಿದ್ದಾಳೆ. ಅದಷ್ಟೆ ಅವಳು ಕೊಡುತ್ತಿರುವ ವಿವರಣೆ.’’

‘‘ಅವನು ಹಾಗೆ ಹೇಳಿರುವ ಸಾಧ್ಯತೆ ಇದೆ. ನಾನು ಹೊರಗೆ ಹೋಗುವಾಗ ಎಂತಹ ಬಟ್ಟೆಗಳನ್ನು ಧರಿಸುತ್ತೇನೆ ಎನ್ನುವುದರ ಬಗ್ಗೆ ಅವನು ಯಾವಾಗಲೂ ಆಕ್ಷೇಪಣೆ ಮಾಡುತ್ತಿದ್ದ. ಬಹುಶಃ ಅವಳು ಅವನು ಹೇಳಿರುವ ಹಾಗೆ ಬಟ್ಟೆ ಹಾಕಿಕೊಂಡಿರಬೇಕು. ಬೇಕಾದರೆ ಅದನ್ನು ನಾನು ತಿಳಿದುಕೊಳ್ಳಬಹುದು.’’

‘‘ಸರಿ, ಆದರೆ ದಯವಿಟ್ಟು, ದಯವಿಟ್ಟು ನಾವು ಇದರ ಬಗ್ಗೆ ಮಾತನಾಡಿದ್ದನ್ನು ಅವಳಿಗೆ ಹೇಳಬೇಡ. ಅಥವ ನನ್ನ ಪರವಾಗಿ ಕೇಳುತ್ತಿದ್ದೀಯೆಂದೂ ಹೇಳಬೇಡ. ಹಾಗೇನಾದರೂ ಆದರೆ ನನ್ನನ್ನು ಕೆಲಸದಿಂದ ತೆಗೆಯಬಹುದು ಹಾಗು ತನಿಖೆ ದಾರಿ ತಪ್ಪಬಹುದು.’’

‘‘ಯೋಚನೆ ಮಾಡಬೇಡ. ನಾನು ಹೇಳುವುದಿಲ್ಲ.’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X