ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಕ್‌ಗೆ ನಿಜವಾಗಲೂ ಆಗಿದ್ದೇನು? ಈಗ ಪವನ್‌ ಎಲ್ಲಿದ್ದಾನೆ?

By Staff
|
Google Oneindia Kannada News


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಮತ್ತೆ ಕರೆಗಂಟೆ! ಅನು ಗಡಿಯಾರದ ಕಡೆ ನೋಡಿದಳು. ಬೆಳಗ್ಗೆ 6.46 ಆಗಿತ್ತು. ಅವಳ ಇಲ್ಲಿಯ ತನಕದ ಅಮೇರಿಕಾ ವಾಸದಲ್ಲಿ ಯಾರೂ ಇಷ್ಟು ಮುಂಜಾನೆಯೆ ಬಂದು ಬಾಗಿಲು ಬಡಿದಿರಲಿಲ್ಲ. ಯಾರೆಂದು ನೋಡಲು ಬರುವಾಗ ಮತ್ತೆ ಜೋರಾಗಿ ಬಾಗಿಲು ಬಡಿದ ಶಬ್ದ. ಇಣಿಕಿಂಡಿಯಿಂದ ನೋಡಿದಾಗ ಇಬ್ಬರು ಮಧ್ಯ ವಯಸ್ಕ ಬಿಳಿಯ ಗಂಡಸರು ಕಾಣಿಸಿದರು.

‘ಒಂದು ನಿಮಿಷ, ಪ್ಲೀಸ್‌,’ ಅವರಿಗೆ ಕೇಳಿಸುವಂತೆ ಜೋರಾಗಿ ಹೇಳಿದ ಅನು, ಬಾಗಿಲು ತೆರೆಯದೆ ಬೆಡ್‌ರೂಮಿಗೆ ಓಡಿ ಬಂದಳು.

‘ಡ್ಯಾನ್‌, ಸೂಟು ಧರಿಸಿರುವ ಇಬ್ಬರು ಬಾಗಿಲಲ್ಲಿ ಇದ್ದಾರೆ.’

‘ನಾನು ನೋಡುತ್ತೇನೆ. ’ ಡ್ಯಾನ್‌ ಕೂಡಲೆ ಎದ್ದ. ‘ನೀನು ಇಲ್ಲಿಯೆ ಇರು. ’ ಜೀನ್ಸ್‌ ಪ್ಯಾಂಟನ್ನು ಮೇಲೆಳೆದುಕೊಂಡು, ತಲೆಯ ಮೇಲಿಂದ ಟೀ-ಶರಟನ್ನು ಹಾಕಿಕೊಳ್ಳುತ್ತ ಬಾಗಿಲ ಕಡೆ ಹೋದ.

ಅವನಿಗೆ ಬೇಜಾರಾಗಿದೆಯೆ? ಬಂದಿರುವವರು ಯಾರೆಂದು ಡ್ಯಾನ್‌ಗೆ ತಿಳಿದಿದೆಯೆಂದು ಅನೂಗೆ ಅನ್ನಿಸಲಾರಂಭಿಸಿತು. ಮನೆಯಿಂದ ಹೊರಗೆ ಹೋದ ಡ್ಯಾನ್‌ ಬಾಗಿಲನ್ನು ಮುಚ್ಚಿಕೊಂಡ. ಆದರೆ ಅವರ ಮಾತುಕತೆ ಅನೂಳಿಗೆ ಕೇಳಿಸುತ್ತಿತ್ತು. ಅವನ ಸ್ವರ ಮತ್ತಷ್ಟು ಕೆರಳುತ್ತಿರುವುದು ಗೊತ್ತಾಗುತ್ತಿತ್ತು. ‘ಯಾಕೆ ನೀವು ಇಲ್ಲಿ ಇದ್ದೀರ? ’

‘ಸಾರಿ, ಡ್ಯಾನ್‌. ನೀನು ಇಲ್ಲಿರುತ್ತೀಯ ಎಂದು ನಾವು ನಿರೀಕ್ಷಿಸಲಿಲ್ಲ. ಇಲ್ಲದಿದ್ದರೆ ಬರುತ್ತಿದ್ದೇವೆಂದು ನಿನಗೆ ಮೊದಲೆ ತಿಳಿಸಿರುತ್ತಿದ್ದೆವು. ’

‘ನಿಮಗೆ ಅನೂಳಿಂದ ಏನು ಬೇಕು? ’ ಅವನ ಧ್ವನಿ ಒರಟಾಗಿತ್ತು.

‘ನೋಡು, ವೈಯಕ್ತಿಕ ಎನ್ನುವಂತಹುದು ಇಲ್ಲಿ ಏನೂ ಇಲ್ಲ. ಕೆಲವು ಪ್ರಶ್ನೆಗಳನ್ನು ಕೇಳಲು ಅವರನ್ನು ಕರೆದುಕೊಂಡು ಹೋಗಬೇಕಾಗಿದೆ. ’

‘ಯಾಕೆ? ನಿಮಗೆ ಹೆಚ್ಚಿಗೇನಾದರೂ ಗೊತ್ತಾಯಿತೆ? ’

‘ನಾವು ದೀಪಕ್‌ನ ಫೋನ್‌ ದಾಖಲಾತಿಗಳನ್ನು ಶೇಖರಿಸಿದ್ದೇವೆ. ನೆನ್ನೆ ಮುಂಜಾನೆಯಿಂದ ಮಿಸೆಸ್‌ ದೀಪಕ್‌ರ ಹೆಚ್ಚಿನ ಕರೆಗಳು ಮಿಸ್‌ ಸ್ಯಾಟ್‌...ಯಾನ್‌ರಿಗೆ ಕರೆ ಮಾಡಿದ್ದವೆ ಆಗಿವೆ. ’ ಸತ್ಯನ್‌ ಅವನ ಬಾಯಲ್ಲಿ ಸ್ಯಾಟ್‌ಯಾನ್‌ ಆಗಿತ್ತು. ‘ಇವರ ಮನೆ ನಂಬರ್‌ಗೆ ಇಲ್ಲ ಸೆಲ್‌ಫೋನ್‌ಗೆ ಮಾಡಿದ ಕರೆಗಳೆ ಅವೆಲ್ಲ. ’

‘ರೂಪ ಅನೂಗೆ ಕರೆ ಮಾಡುತ್ತಿದ್ದದ್ದು ನನಗೆ ಗೊತ್ತು! ರೂಪ ನೆನ್ನೆ ಬೆಳ್ಳಂಬೆಳಿಗ್ಗೆಯೆ ಇಲ್ಲಿಗೆ ಫೋನ್‌ ಮಾಡಿದ್ದಳು. ’

‘ನಾವು ಮಿಸ್‌ ಸತ್ಯನ್‌ ಅವರನ್ನು ಪ್ರಶ್ನಿಸಿ ಎಲ್ಲವನ್ನೂ ದಾಖಲು ಮಾಡಿಕೊಳ್ಳಬೇಕು. ಈ ಪ್ರೊಸೀಜರ್‌ ನಿನಗೆ ಗೊತ್ತು.’

ತಕ್ಷಣ ತನ್ನ ರೂಮಿಗೆ ಹೊರಟ ಅನು ಬೇಗನೆ ಬಟ್ಟೆ ಬದಲಾಯಿಸಿ ಟ್ರ್ಯಾಕ್‌ ಸೂಟ್‌ ಹಾಕಿಕೊಂಡಳು. ಆ ಕೋಣೆಯ ಕಿಟಕಿಯಿಂದ ಹೊರಗೆ ಇಣುಕಿ ನೋಡಲು ಅವರು ಸಿಟ್ಟಿನಲ್ಲಿ ಮಾತನಾಡುತ್ತಿರುವ ಹಾಗೆ ಕಾಣಿಸಿತು.

ಒಂದು ಕೈಯ್ಯಲ್ಲಿ ಇನ್ನೂ ಬಾಗಿಲು ಹಿಡಿದುಕೊಂಡೆ ಅನು ಹೊಸ್ತಿಲಿನಿಂದ ಹೊರಗೆ ಕಾಲಿಟ್ಟಳು. ‘ಏನಾದರೂ ಸಮಸ್ಯೆ ಇದೆಯೆ, ಡ್ಯಾನ್‌?’ ಸೂಟಿನಲ್ಲಿರುವವರನ್ನು ನೋಡುತ್ತ ತನ್ನ ನೋಟವನ್ನು ಡ್ಯಾನ್‌ನೆಡೆಗೆ ತಿರುಗಿಸಿದಳು. ಡ್ಯಾನ್‌ನ ಮುಖ ಕೆಂಪಗಾಗಿತ್ತು. ಅವಳು ಅವನನ್ನು ಎಂದೂ ಆ ರೀತಿ ನೋಡಿರಲಿಲ್ಲ. ಮುಂಜಾನೆಯ ಮಂಜು ಆಗ ತಾನೆ ಕರಗಲು ಆರಂಭಿಸಿತ್ತು. ಅವರು ಮಾತನಾಡುವಾಗ ಅವರ ಬಾಯಿಯಿಂದ ಬಿಸಿಗಾಳಿ ಬಿಳಿಯ ಹೊಗೆಯಂತೆ ಹೊರಗೆ ಬರುತ್ತಿತ್ತು.

ಅವರಲ್ಲಿ ಒಬ್ಬ ಅವಳ ಜೊತೆ ಮಾತನಾಡಿದ. ‘ನಾನು ಡಿಟೆಕ್ಟಿವ್‌ ರಾಬರ್ಟ್ಸ್‌, ಇವರು ಡಿಟೆಕ್ಟಿವ್‌ ಸ್ಮಿತ್‌. ನಾವು ಸ್ಯಾನ್‌ ಹೋಸೆ ಪೋಲಿಸ್‌ ಇಲಾಖೆಯವರು. ನಾವು ನಿಮ್ಮ ಜೊತೆ ಮಾತನಾಡಬೇಕಿದೆ, ಮಿಸ್‌....ಸ್ಯಾಟ್ಯನ್‌.’

‘ಆಫೀಸರ್‌, ನೀವು ನನ್ನ ಮೊದಲನೆಯ ಹೆಸರನ್ನು ಉಪಯೋಗಿಸಬಹುದು - ಅನು.’

‘ಧನ್ಯವಾದ, ಮೇಡಮ್‌. ನಾವು ಇಲ್ಲಿಗೆ ಬಂದಿರುವುದು ಮಿಸ್ಟರ್‌ ರಂಜನ್‌ರ ಸಾವಿನ ಬಗ್ಗೆ ಮಾತನಾಡಲು.’

ಡಿಟೆಕ್ಟಿವ್‌ ಸ್ಮಿತ್‌ ಮಾತಿಲ್ಲದೆ ಅನೂಳನ್ನು ಓರೆಗಣ್ಣಿನಿಂದ ಪರಿಶೀಲಿಸುತ್ತಿದ್ದ. ಆತ ಸುಮಾರು ಐದಡಿ ಎಂಟಂಗುಲ ಎತ್ತರವಿದ್ದು ಗುಂಡುಗುಂಡಗಿದ್ದ. ಬಂಗಾರದ ಫ್ರೇಮಿನ ವೃತ್ತಾಕಾರದ ಕನ್ನಡಕ ಧರಿಸಿದ್ದ. ತಲೆಯಲ್ಲಿ ಕೂದಲು ವಿರಳವಾಗಿತ್ತು. ಡಿಟೆಕ್ಟಿವ್‌ ರಾಬರ್ಟ್ಸ್‌ ಸುಮಾರು ಆರು ಅಡಿ ಎತ್ತರವಿರಬಹುದಾದರೂ ಡ್ಯಾನ್‌ನಷ್ಟು ಎತ್ತರವಿರಲಿಲ್ಲ. ಬಂದವರಲ್ಲಿ ಸ್ವಲ್ಪ ಸ್ನೇಹಮಯವಾಗಿ ಕಾಣಿಸುತ್ತಿದ್ದವನೆಂದರೆ ಅವನೆ. ಅವನ ಕಣ್ಣುಗಳು ದೊಡ್ಡದಾಗಿದ್ದು ನಸುಕಂದು ಬಣ್ಣದ್ದಾಗಿದ್ದವು. ಅವನ ಗುಂಗುರು ಕೂದಲೂ ಸಹ ನಸುಕಂದಾಗಿದ್ದು, ಅವನ ಹಣೆಯ ಮೇಲೆ ದಟ್ಟವಾಗಿ ಕೂತಿದ್ದವು. ಅವನ ಬೆರಳಿನಲ್ಲಿ ಅಗಲವಾದ, ಹೊಳೆಯುತ್ತಿದ್ದ ಬಂಗಾದ ಮದುವೆ ಉಂಗುರವನ್ನು ಅನು ಗಮನಿಸಿದಳು. ಅವರನ್ನು ಡ್ಯಾನ್‌ ತೀಕ್ಷ್ಣವಾಗಿ ನೋಡುತ್ತಿದ್ದಿದ್ದರಿಂದ ಅವರು ಇರಿಸುಮುರಿಸಿಗೊಳಗಾದಂತೆ ಕಾಣುತ್ತಿದ್ದರು. ರಾಬರ್ಟ್ಸ್‌ ಅರ್ಥಪೂರ್ಣವಾಗಿ ಬಾಗಿಲ ಕಡೆ ನೋಡುತ್ತ, ಅವರನ್ನು ಒಳಗೆ ಆಹ್ವಾನಿಸುವಂತೆ ಅನೂಳಿಗೆ ಸೂಚ್ಯವಾಗಿ ಸೂಚಿಸುತ್ತಿದ್ದ.

‘ನನಗೆ ಒಂದು ನಿಮಿಷ ಸಮಯ ಕೊಡಿ,’ ಅನುವಿನತ್ತ ತಿರುಗುತ್ತ ಡ್ಯಾನ್‌ ಅವರಿಗೆ ಹೇಳಿದ. ‘ಸ್ವೀಟಿ, ನಾನು ನಿನ್ನ ಜೊತೆ ಸ್ವಲ್ಪ ಮಾತನಾಡಬಹುದೆ?’ ಡ್ಯಾನ್‌ ಮುಂದಿನಿಂದ ಅವಳ ಎರಡೂ ಕೈಗಳನ್ನು ಹಿಡಿದುಕೊಂಡು ಹಾಗೆಯೆ ಅವಳನ್ನು ಹಿಂದಕ್ಕೆ ತಳ್ಳಿಕೊಂಡು ಬಂದು, ಮನೆಯ ಒಳಭಾಗಕ್ಕೆ ಕರೆದುಕೊಂಡು ಹೋದ. ‘ಅವರಿಗೆ ಒಂದು ಮಾತೂ ಹೇಳಬೇಡ,’ ಎಂದು ಅವಳ ಕಿವಿಯಲ್ಲಿ ಪಿಸುಗುಟ್ಟಿದ. ‘ನಾವು ಮೊದಲು ನಿನಗೊಬ್ಬ ವಕೀಲನನ್ನು ಹುಡುಕಬೇಕು.’

‘ಡ್ಯಾನ್‌, ನನ್ನ ಹತ್ತಿರ ಮುಚ್ಚಿಡಲು ಏನೂ ಇಲ್ಲ,’ ಧ್ವನಿ ತಗ್ಗಿಸಿ ಅನು ವಾದಿಸಿದಳು. ‘ಅವರದೇನೆ ಪ್ರಶ್ನೆಗಳಿದ್ದರೂ ನಾನು ಉತ್ತರಿಸುತ್ತೇನೆ.’

‘ನಿನಗೆ ಅರ್ಥವಾಗುವುದಿಲ್ಲ. ಎಲ್ಲವು ಅಷ್ಟು ಸರಳವಲ್ಲ. ನಿನಗೆ ಭಾರತೀಯ ರೀತಿನೀತಿಗಳು ಸಂಕೀರ್ಣ ಎನ್ನಿಸುತ್ತದಲ್ಲವೆ? ಇದು ಬಹಳ ಬೇಗ ಬಹಳ ಸಂಕೀರ್ಣವಾಗಿ ಬಿಡಬಹುದು.’

‘ನೀನು ನನ್ನನ್ನು ನಂಬುತ್ತಿಲ್ಲ, ಅಲ್ಲವೆ? ನಾನು ನೆನ್ನೆ ರೂಪಾಳನ್ನು ನೋಡಲಿಲ್ಲ. ಹಾಗೂ ಪವನ್‌ ಎಲ್ಲಿದ್ದಾನೆಂದೂ ನನಗೆ ಗೊತ್ತಿಲ್ಲ.’

‘ಅನು, ಕೇಳಿಸಿಕೊ. ಈಗ ನಿನ್ನ ಜೊತೆ ನಾನೂ ಇದರಲ್ಲಿ ತಗಲಿ ಹಾಕಿಕೊಂಡಿದ್ದೇನೆ. ಹಾಗಾಗಿ ಇದೊಂದು ರೀತಿ ಮೂರು ರಿಂಗಿನ ಸರ್ಕಸ್‌ ಆಗಿಬಿಡಬಹುದು. ನಾವು ಮೊದಲು ನಿನಗೊಬ್ಬ ಲಾಯರ್‌ನನ್ನು ಹಿಡಿಯಬೇಕು. ನನಗೊಬ್ಬರು ಗೊತ್ತು. ನಾನು ಅವರ ಜೊತೆ ಬ್ಯಾಸ್ಕೆಟ್‌ಬಾಲ್‌ ಆಡುತ್ತೇನೆ. ಅವರು ಬಹಳ ಚಾಲಾಕಿ ಲಾಯರ್‌. ನಮ್ಮ ಇಲಾಖೆಯೆ ಅವರಿಗೆ ಕೆಲವು ಕೇಸುಗಳನ್ನು ಸೋತಿದೆ! ನಾನವರಿಗೆ ಕರೆ ಮಾಡುತ್ತೇನೆ. ನೀನು ಸುಮ್ಮನೆ ಇರು. ಇರುತ್ತೀಯ ತಾನೆ? ದಯವಿಟ್ಟು?’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X