ಲಂಡನ್ನಿನಲ್ಲಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ
ಅಲ್ಲೊಂದಷ್ಟು ಜನ. ಎಲ್ಲರೂ ಕನ್ನಡಿಗರು. ಒಂದು ಕಡೆ ಪೂಜೆ, ಮಂತ್ರಗಳು, ಸ್ತ್ರೋತ್ರಗಳು. ಕೆಲವರು ಅಲ್ಲೇ ತನ್ಮಯರಾಗಿದ್ದರೆ ಮತ್ತೊಂದು ಬದಿಯಲ್ಲಿ ಬರಿಯ ಮಾತು. ಮಾತಾಡಿದಷ್ಟೂ ಮುಗಿಯದು. ಹೊಸ ಪರಿಚಯ. ಹೊಸ ಸ್ನೇಹಿತರು. ಮಾತಿನ ಭರದಲ್ಲಿ ತಮ್ಮ ಬಂಧುಗಳ, ಸ್ನೇಹಿತರ ತಾಯ್ನಾಡಿನ ಯಾವುದೋ ಒಂದು ಸಂಪರ್ಕ ಕೊಂಡಿ ಕಂಡುಕೊಂಡರಂತೂ ಸಂಭ್ರಮವೋ ಸಂಭ್ರಮ.
ಓಹ್ ! ನೀವು ನಮಗೆ ಬಹಳ ಹತ್ತಿರದವರು ಮಾರ್ರೆ ! ಅಯ್ಯೋ, ಇಷ್ಟುವರ್ಷದಿಂದ ಇದೇ ಊರಲ್ಲೇ ಇದ್ದೆವಲ್ರೀ ?! ವಾಹ್ ನೀವಾ !? ನೀವು ಯಾಗಾಗ ಇಲ್ಲಿ ಬಂದ್ರಿ ಇಲ್ಲಿಗೆ?? ಎಂಬಿತ್ಯಾದಿ ಉದ್ಗಾರಗಳು ಬೇರೆ.
ಪೂಜೆ ಮುಗಿಯಿತು. ಇನ್ನು ತೀರ್ಥಪ್ರಸಾದ. ಸಾಂಪ್ರದಾಯಿಕ ಪದ್ಧತಿಯಲ್ಲಿ ನೆಲದ ಮೇಲೆ ಸಾಲು ಸಾಲಾಗಿ, ಶಿಸ್ತುಬದ್ಧವಾಗಿ ಇರಿಸಿದ ಬಾಳೆಎಲೆಗಳು. ರಸವತ್ತಾದ ಕನ್ನಡದ ಹುಳಿ, ಸಾರು, ಪಲ್ಯ ಗೊಜ್ಜು, ಪಾಯಸ, ಕೋಸಂಬರಿ, ಮೈಸೂರು ಪಾಕು, ಹಯಗ್ರೀವ, ಬಜ್ಜಿ, ಮಜ್ಜಿಗೆ.....ಹೀಗೆ ಹತ್ತು ಹಲವು ರಸವತ್ತಾದ ಭಕ್ಷ್ಯಭೋಜ್ಯಗಳ ರಸದೌತಣ. ಯಾರಿಗೆ ಅನ್ನಾ ? ಸಾರೂ ? ಹುಳೀ ? ಪಾಯಸಾ ಎಂದು ಕನ್ನಡದಲ್ಲೇ ಕೇಳುತ್ತಾ ಬಡಿಸುತ್ತಾ ಸಂಭ್ರಮಿಸುವುದನ್ನು ಕಂಡರೆ ಬೆಂಗಳೂರೇ ಇಲ್ಲಿಗೆ ಬಂತು ಅಂತ ಯಾರಿಗೆ ತಾನೇ ಅನ್ನಿಸದಿರದು?

ಹೀಗೆ ಎರಡು ಮೂರು ಪಂಕ್ತಿಗಳಲ್ಲಿ ನೂರಾರು ಜನರು ಭೋಜನವನ್ನು ಸಂಭ್ರಮಿಸಿದ ಮೇಲೆ. ಇನ್ನು ಸಂಗೀತ. ಕನ್ನಡದ ದಾಸರ ನಾಮಗಳು. ಸಾಂಪ್ರದಾಯಿಕ ಭಜನೆಗಳು. ಕನ್ನಡದಲ್ಲಿ ಧಾರ್ಮಿಕ ಉಪನ್ಯಾಸಗಳು. ಅದೇನು ಖುಶಿ! ಪುಳಕ ! ರೋಮಾಂಚನ! ತನ್ಮಯತೆ !
ಇದು ಸಾಮಾನ್ಯವಾಗಿ ರಾಯರ ಅರಾಧನೆಗಳು ಪರವೂರಿನಲ್ಲಿ, ಪರದೇಶದಲ್ಲಿ ನಡೆಯುವಾಗ ಮಾತ್ರ ಕಾಣಸಿಗುವ ದೃಶ್ಯ. ಭಕ್ತಿ ಭಾವಭರಿತ ಸಂಭ್ರಮೋಲ್ಲಾಸದ ಸನ್ನಿವೇಶ.
ಲಂಡನ್ ಕನ್ನಡಿಗರೇ, ಇದು ಇನ್ನು ನಿಮಗೂ ದೂರವಲ್ಲ. ಈ ಸಲದ ರಾಯರ ಆರಾಧನೆ ನಿಮ್ಮ ನೆಲದಲ್ಲೂ ನಡೆಯಲಿದೆ ಮತ್ತು ಇದೇ ಸಂಭ್ರಮದೊಂದಿಗೆ ! ಆಗಸ್ಟ್ 31 ಸೋಮವಾರ (ಸ್ಥಳೀಯರಿಗೆ ರಜಾದಿನ) ಉಡುಪಿ ಪುತ್ತಿಗೆ ಶ್ರೀಗಳ ಮಾರ್ಗದರ್ಶನ, ಶ್ರೀಮಠದ ವಿದ್ವಾಂಸರ ನೇತೃತ್ವ, ಉಡುಪಿಯ ಅನುಭವಸ್ಥ ಪಾಕಪ್ರವೀಣರ ಕೈಚಳಕ ಮತ್ತು ಸ್ಥಳೀಯ ಭಕ್ತರ ಸಂಪೂರ್ಣ ಸಹಕಾರ / ವ್ಯವಸ್ಥೆ ಗಳೊಂದಿಗೆ ಇದು ಸಾಕಾರಗೊಳ್ಳಲಿದೆ.
ದಿನ/ ದಿನಾಂಕ: ಸೋಮವಾರ/ 31ನೇ ಆಗಸ್ಟ್ 2015
ಸ್ಥಳ: ಶ್ರೀ ಅಯ್ಯಪ್ಪನ್ ಕೋವಿಲ್ ಹಾಲ್, 36, ಮೇಸನ್ಸ್ ಅವಿನ್ಯೂ
ಹ್ಯಾರೋ, ಗ್ರೇಟರ್ ಲಂಡನ್, 0208-8615825
ಇದೇ ಪ್ರಥಮಬಾರಿಗೆ ಲಂಡನ್ ನಗರದ 'ಹ್ಯಾರೋ' ಎಂಬಲ್ಲಿ ಇದು ಸಂಪನ್ನಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಜಾಲತಾಣಕ್ಕೆ ಭೇಟಿ ಕೊಡುವಂತೆ ಸ್ಥಳೀಯ ವ್ಯವಸ್ಥಾಪಕರು ವಿನಂತಿಸಿದ್ದಾರೆ.












Click it and Unblock the Notifications