• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ದಾಸಶ್ರೇಷ್ಠ ಪುರಂದರ ನಮನ -2018

By ಸಂಧ್ಯಾ ಚಂದ್ರಶೇಖರ್, ಸಿಂಗಪುರ
|
Google Oneindia Kannada News

ಕನ್ನಡದ ಭಕ್ತಿ ಸಾಹಿತ್ಯದ ಪರಂಪರೆಗೆ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಪರಂಪರೆಗೆ ಹರಿದಾಸ ಸಾಹಿತ್ಯದ ಕೊಡುಗೆ ಅಗಣ್ಯ ಅಪಾರ. ಈ ದಾಸ ಪರಂಪರೆಯ ರೂವಾರಿ ಎನಿಸಿದ ಶ್ರೀ ಪುರಂದರದಾಸರ ಆರಾಧನೆಯನ್ನು ಕಳೆದೆರಡು ದಶಕಗಳಿಂದ ಸಿಂಗಪುರದ ಕನ್ನಡ ಸಂಘ ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದೆ.

ಕಳೆದ ಮೂರು ವರ್ಷಗಳಿಂದ ಆರಾಧನೆಯ ಸುಸಂದರ್ಭದಲ್ಲಿ ದಾಸರೇತರರ ಕೃತಿಗಳನ್ನೂ ಪರಿಚಯಿಸುವ ಕಾರ್ಯಕ್ಕೆ ಸಿಂಗಪುರದ ಕನ್ನಡ ಸಂಘ ನಾಂದಿ ಹಾಡಿದೆ. ಅಂತೆಯೇ ಶ್ರೀಪಾದ-ಪುರಂದರ ಶೀರ್ಷಿಕೆಯನ್ನು ಹೊತ್ತ ಈ ಬಾರಿಯ ಆರಾಧನೆಯಲ್ಲಿ ಯತಿತ್ರಯರೊಲ್ಲೊಬ್ಬರಾದ ಶ್ರೀಪಾದರಾಜರ ಕೃತಿಗಳನ್ನೂ ಹಾಡಲಾಯಿತು.
ಇದೇ ಆರಾಧನೆಯ ಭಾಗವಾಗಿ, ಸಂಗೀತಾಸಕ್ತರಿಗೆ ಕಾಂಚನ ಸಹೋದರಿಯರಿಂದ 'ಸಂಗೀತ ಶಿಬಿರ'ವನ್ನು ಏರ್ಪಡಿಸಲಾಗಿತ್ತು.

ಉತ್ಸಾಹದಿಂದ ಬಂದ ಶಿಬಿರಾರ್ಥಿಗಳಿಗೆ ಕರ್ನಾಟಕ ವಾಗ್ಗೇಯಕಾರರ ಕೃತಿಗಳನ್ನು, ವಿದುಷಿ ಕಾಂಚನ ಎಸ್ ಶ್ರೀರಂಜಿನಿ ಹಾಗು ಕಾಂಚನ ಯಸ್ ಶ್ರುತಿರಂಜಿನಿಯವರು ಬಹಳ ಉತ್ತಮವಾಗಿ ಕಲಿಸಿಕೊಟ್ಟರು.

24 ಫೆಬ್ರವರಿ ಶನಿವಾರ ಸಿಂಗಪೂರಿನ ಹೆಸರಾಂತ ಕಲಾಸಂಸ್ಥೆಯಾದ SIFAS(Singapore Indian Fine Arts Society) ಪ್ರಾಂಗಣದಲ್ಲಿಈ ಬಾರಿಯ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

Purandara Dasara Aradhane in Singapore

ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತ ಆರತಿ ನಾಗೇಶ್ ಮತ್ತು ರಮೇಶ್ ಅವರು ಸಭಿಕರೆಲ್ಲರಿಗೂ ಸ್ವಾಗತ ಕೋರಿದರು. ಆರಾಧನೆಯ ಪ್ರಯುಕ್ತ ಫೆಬ್ರವರಿ 9ರಂದು ನಡೆದ ಸಂಗೀತ ಸ್ಪರ್ಧೆಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದು ಹೆಮ್ಮೆಯ ವಿಷಯ.

ಸ್ಪರ್ಧೆಯಲ್ಲಿನ ವಿಜೇತರು SIFAS ವೇದಿಕೆಯಲ್ಲಿ ತಮ್ಮ ಬಹುಮಾನಿತ ಕೃತಿಗಳನ್ನು ಪ್ರಸ್ತುತಪಡಿಸಿದರು. ತದನಂತರದಲ್ಲಿ ಸಂಘದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್, ಡಾ||ಭಾಗ್ಯಮೂರ್ತಿ, ಮತ್ತು SIFAS ಸಂಸ್ಥೆಯ ಕಾರ್ಯದರ್ಶಿಗಳಾದ ಡಾ||ಶೇಷನ್ ರಾಮಸ್ವಾಮಿ ದೀಪಬೆಳಗಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

ಗಾನ ಕೋಗಿಲೆ ಡಾ||ಭಾಗ್ಯಮೂರ್ತಿ ಅವರ ನೇತೃತ್ವದಲ್ಲಿ ಪಿಳ್ಳಾರಿ ಗೀತೆಯೊಂದಿಗೆ ಸಮೂಹ ಗಾಯನ ಪ್ರಾರಂಭವಾಯಿತು. ಸಿಂಗಪುರದ ಪ್ರಮುಖ ವಿದುಷಿಗಳು, ವಾದ್ಯಗಾರರು ಹಾಗೂ ಅವರ ಶಿಶ್ಯವೃಂದವನ್ನೊಳಗೊಂಡ ತಂಡ ಒಂದಾದಮೇಲೊಂದು ಹಾಡುತ್ತಾ ಹೋದಂತೆ ಇಡಿ ಸಭಾಂಗಣವು ರಾಗ ಭಾವದಲ್ಲಿ ಮುಳುಗಿತು.

'ಲಾಲಿಸಿದಳು ಯಶೋದೆ, ಜಗದೋದ್ಧಾರನ, ನಿನ್ನ ಮಗನ ದಾಳಿ, ಕಡಗೋಲ ತಾರೆನ್ನ, ಪಿಳ್ಳಂಗೋವಿಯ' ಕೃತಿಗಳಲ್ಲಿನ ಬಾಲಕ, ಮನಮೋಹಕ, ಜಗೋದ್ಧಾರಕ, ಕೃಷ್ಣನ ಚಿತ್ರಣ ಜನಸ್ತೋಮವನ್ನು ಬೃಂದಾವನಕ್ಕೇ ಕರೆದೊಯ್ದಂತಿತ್ತು. ಝ್ಹೋನ್ಪುರಿ ರಾಗರಚಿತ 'ಹರಿಚಿತ್ತವೆ ಸತ್ಯ' ಕೃತಿಯೊಂದಿಗೆ ಸಮೂಹ ಗಾಯನ ಅಂತ್ಯಗೊಂಡಾಗ ಸಭಾಂಗಣದ ಅಷ್ಟದಿಕ್ಕಿನಲ್ಲೂ ಹರಿನಾಮದ ಝೇಂಕಾರ ಅನುರಣಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿತು.

Purandara Dasara Aradhane in Singapore

ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಸಾಧನೆಗೈದ ಮನುನೀತಿಮತಿ ಮುತ್ತುಸ್ವಾಮಿ ಅವರಿಗೆ ಈ ಸಾಲಿನ ಸಿಂಗಾರ ಪುರಂದರ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದ ಸಂಗೀತಗಾರರಿಗೆಲ್ಲರಿಗೂ ಕಿರುಗಾಣಿಕೆಯನ್ನಿತ್ತ ಗೌರವಿಸಿದರು. ಪುರಂದರನಮನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಎರಡನೇ ಘಟ್ಟದಲ್ಲಿ ಕರ್ನಾಟಕದ ದಕ್ಷಿಣ ಕನ್ನಡದಿಂದ ಆಗಮಿಸಿದ ಅತಿಥಿ ಕಲಾವಿದೆಯರಾದ ವಿ.ಕಂಚನ ಶ್ರೀರಂಜನಿ ಮತ್ತು ವಿ. ಕಂಚನ ಶೃತಿರಂಜನಿ ಸಹೋದರಿಯರ ಯುಗಳಗಾಯನ ಸಭಿಕರನ್ನು ಸೆಳೆಯಿತು. ವಿದುಷಿ ಕಾಂಚನ ಎಸ್ ಶ್ರೀರಂಜಿನಿ ಹಾಗು ಕಾಂಚನ ಯಸ್ ಶ್ರುತಿರಂಜಿನಿ, ಕಾಂಚನ ಸಹೋದರಿಯರು ಎಂದೇ ಪ್ರಸಿದ್ಧರಾಗಿದ್ದಾರೆ.

ಮೂರು ವರ್ಷದ ಎಳೆಯ ವಯಸ್ಸಿಗೆ, ತಮ್ಮ ತಂದೆ ಹಾಗು ಹೆಸರಾಂತ ವಯೋಲಿನ್ ವಾದಕರಾದ ವೀ. ಸುಬ್ಬರತ್ನಮ್ ಅವರಿಂದ ಸಂಗೀತ ಪಾಠ ಪ್ರಾರಂಭಿಸಿದ ಇವರು ತಮ್ಮ ನಾಲ್ಕನೇ ವಯಸ್ಸಿನಿಂದಲೇ ಕಚೇರಿಯನ್ನು ನೀಡಲಾರಂಭಿಸಿದರು. ಹನುಮಗಿರಿ ಪಂಚಮುಖಿ ಆಂಜನೇಯ ಸುಪ್ರಭಾತ, ಕಟೀಲು ದುರ್ಗಾ ಪರಮೇಶ್ವರಿ ಸುಪ್ರಭಾತ ಮುಂತಾದ ಸಿ.ಡಿಗಳನ್ನು ಬಿಡುಗಡೆ ಮಾಡಿರುವ ಇವರನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ.

ಇಂದು ಶ್ರೀಪಾದ-ಪುರಂದರರ ಕೃತಿಗಳನ್ನು ಪ್ರಸ್ತುತಪಡಿಸಿ ತಮ್ಮ ಲಯಪ್ರಭುತ್ವ, ಶಾಸ್ತ್ರೀಯ ಘನತೆ, ತಂತ್ರಗಾರಿಕೆಯನ್ನು ಮೆರೆಯುತ್ತ ಸಂಗೀತರಸಿಕರ ಗಮನ ಸೆಳೆದರು. ಜಯ ಜಾನಕಿ ರಮಣದಿಂದ ಸ್ವರಪ್ರಸ್ತಾರ ಮಾಡುವ ಮೂಲಕ ಮುಂದಿನ ಪ್ರಸ್ತುತಿಗಳ ಒಂದು ಕಿರುನೋಟ ನೀಡಿದರು. ಮನೆಯೊಳಗಾಡೋ ಗೋವಿಂದ, ಭೂಷಣಕೆ ಭೂಷಣ, ಉತ್ತಮರ ಸಂಘ, ದಯಮಾಡೊ ರಂಗ.. ಹೀಗೆ ಒಂದಾದಮೇಲೊಂದು ದಾಸರ ಕೃತಿಗಳು ಚೆನ್ನಾಗಿ ಮೂಡಿಬಂದವು.

ಎರಡೂ ಕೈಯಲ್ಲಿ, ಎರಡು ಅಥವಾ ಎರಡಕ್ಕೂ ಹೆಚ್ಚು ವಿಧದ ತಾಳ ಹಾಕುತ್ತಾ ಪಲ್ಲವಿಯನ್ನು ಹಾಡಿ ತ್ರಿಕಾಲದ ನಂತರ ಕಲ್ಪನಾಸ್ವರಗಳನ್ನು ಹೆಣೆಯುವ ಕ್ಲಿಷ್ಟ ಪದ್ದತಿ ಅವಧಾನ ಪಲ್ಲವಿ. ಕಂಚನ ಸಹೋದರಿಯರು ಶ್ರೀಪಾದರಾಜರ 'ಉತ್ತಮರ ಸಂಗ ' ಕೃತಿಯನ್ನು ಅಪರೂಪದ ಅವಧಾನ ಪಲ್ಲವಿ ಪದ್ದತಿಯಲ್ಲಿ ಹಾಡಿತೋರಿಸಿದ್ದು ಈ ಕಚೇರಿಯ ವಿಶೇಷ ಪ್ರಸ್ತುತಿ ಎನ್ನಬಹುದು.

ವಿದ್ವಾನ್ ಬಾಂಬೆ ವಿ ಆನಂದ್ -ವಯೋಲಿನ್, ವಿದ್ವಾನ್ ಟಿ ರಮಣನ್-ಮೃದಂಗ, ವಿದ್ವಾನ್ ಆರ್ ಸುಬ್ರಮಣಿಯಂ -ಮೃದಂಗ ಹಾಗೂ ಖಂಜರ ನುಡಿಸಿದ ವಿದ್ವಾನ್ ಡೆಲ್ಲಿ ರಾಜ ಸುಬ್ರಮಣಿಯಂರವರು ಪಕ್ಕವಾದ್ಯದಲ್ಲಿ ಸಹಕರಿಸಿದರು.

ಸಂಘದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಮತ್ತು ಉಪಾಧ್ಯಕ್ಷರಾದ ಅರ್ಚನಾ ಪ್ರಕಾಶ್ ರವರು ಕಲಾವಿದರನ್ನು ಸನ್ಮಾನಿಸಿದರು. ಸಂಘದ ಕಾರ್ಯದರ್ಶಿಗಳಾದ ರಮೇಶ್ ಅವರು ತಮ್ಮ ವಂದನಾರ್ಪಣೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣೀಭೂತರಾದ ಎಲ್ಲರಿಗೂ ವಂದಿಸಿದರು. ಭಾಗ್ಯದ ಲಕ್ಷ್ಮಿ ಬಾರಮ್ಮದೊಂದಿಗೆ ಈ ಅಪೂರ್ವ ಕಾರ್ಯಕ್ರಮ ಮುಕ್ತಾಯಗೊಂಡಿತು.

ಮೊದಮೊದಲು ಕನ್ನಡಿಗರಮನೆಯಲ್ಲಿ ನಡೆಯತ್ತಿದ್ದ ಆರಾಧನೆ ನಂತರದ ದಿನಗಳಲ್ಲಿ ಹೆಚ್ಚುಹೆಚ್ಚಿನ ಸಂಗೀತಪ್ರಿಯರನ್ನು ಆಕರ್ಷಿಸಿ ದೇವಸ್ಥಾನ, ಸಮುದಾಯಭವನಗಳಲ್ಲಿ ಜರುಗಿ, ಇತ್ತೀಚಿನ ದಿನಗಳಲ್ಲಿ ಕನ್ನಡೇತರರನ್ನೂ ಸೆಳೆದು ಸಿಂಗಪುರದ ಇನ್ನಿತರ ಸಂಸ್ಥೆಗಳೊಂದಿಗೆ ಹಾರ್ದಿಕ ಸಂಬಂಧವನ್ನೂ, ಪರಸ್ಪರ ಸೌಹಾರ್ದತೆಯನ್ನು ಬೆಳೆಸುವ ಸೇತುವೆಯಾಗಿ ಹಾಗೂ ಸಿಂಗಪುರದ ಒಂದು ಪ್ರತಿಷ್ಠಿತ ಕಾರ್ಯಕ್ರಮವಾಗಿ ಹೊರಹೊಮ್ಮಿರುವುದು ಹರಿಚಿತ್ತವೇ ಸರಿ.

ಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರ

ಕನ್ನಡ ಸಂಘ (ಸಿಂಗಪುರ)ದ ನವ-ಯುವ ಕಾರ್ಯಕಾರೀ ಸಮಿತಿಕನ್ನಡ ಸಂಘ (ಸಿಂಗಪುರ)ದ ನವ-ಯುವ ಕಾರ್ಯಕಾರೀ ಸಮಿತಿ

English summary
Purandara Dasara Aradhane celebrated in Singapore recently. The event was organized by Kannada Sangha Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X