ಕೊಡಗಿಗೆ ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕತಾರ್ ಭಾರತೀಯರು
ಪ್ರವಾಹದಿಂದ ಇನ್ನೂ ಸಂಪೂರ್ಣವಾಗಿ ಹೊರಬರದ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ಧನ ಸಂಗ್ರಹಣೆ ಮಾಡಿ ದೇಣಿಗೆ ನೀಡುವ ಮೂಲಕ ಕತಾರ್ ದೇಶದಲ್ಲಿರುವ ಭಾರತದ ರಾಜ್ಯಗಳ ಸಂಘ ಸಂಸ್ಥೆಗಳು ಹೃದಯವಂತಿಕೆ ಮೆರೆದಿದ್ದಾರೆ.
ಭಾರತೀಯ ದೂತಾವಾಸದಡಿಯಲ್ಲಿ ಕಾರ್ಯವಹಿಸುತ್ತಿರುವ ಭಾರತೀಯ ಸಮುದಾಯದ ಸೇವಾ ಸಂಸ್ಥೆಯ ಅಡಿಯಲ್ಲಿ (ಇಂಡಿಯನ್ ಕಮ್ಯೂನಿಟಿ ಬೇನೆವೋಲೆಂಟ್ ಫೋರಮ್-ICBF) ಈ ದೇಣಿಗೆಯನ್ನು ಸಂಗ್ರಹಿಸಲಾಗಿದೆ.
ಭಾರತೀಯ ರಾಯಭಾರಿಯಾದ ಪಿ.ಕುಮಾರನ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಒಂದು ಅಭಿಯಾನಕ್ಕೆ ಭಾರತದ ನಾಗರೀಕರೆಲ್ಲ ಉದಾರವಾಗಿ ಸಹಾಯ ಹಸ್ತ ಚಾಚಿದ್ದಾರೆ.

ನವೆಂಬರ್ 24ನೇ ತಾರೀಖಿನಂದು ಕತಾರ್ ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರತಿನಿಧಿಗಳು ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹದಿನೈದು ಲಕ್ಷ ರುಪಾಯಿಗಳ ಚೆಕ್ಕನ್ನು ಮುಖ್್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ICBF ಕಾರ್ಯದರ್ಶಿಯಾದ ಮಹೇಶಗೌಡ ಅವರ ಮುಂದಾಳತ್ವದಲ್ಲಿ, ಮಿಲನ್ ಅರುಣ್, ಅಧ್ಯಕ್ಷರು ಭಾರತೀಯ ಸಾಂಸ್ಕೃತಿಕ ಸಂಸ್ಥೆ, ICBF ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರೂ ಆದ ಅರವಿಂದ್ ಪಾಟೀಲ್, ಕರ್ನಾಟಕ ಸಂಘದ ಉಪಾಧ್ಯಕ್ಷರಾದ ರವಿ ಶೆಟ್ಟಿ ಹಾಗೂ ಕರ್ನಾಟಕ ಸಂಘ ಕತಾರ್ ಮಾಜಿ ಉಪಾಧ್ಯಕ್ಷರೂ ಹಾಗೂ ಕತಾರ್ ದಲ್ಲಿ ಕನ್ನಡ ಚಲನಚಿತ್ರಗಳ ವಿತರಕರಾದ ಸುಬ್ರಮಣ್ಯ ಹೆಬ್ಬಾಗಿಲು ಮುಂತಾದವರು ಭಾಗಿಯಾಗಿದ್ದರು.
ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕತಾರ್ ಭಾರತೀಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತ, ಅವರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ ಕರ್ನಾಟಕದಲ್ಲಿ ಆದ ಮೂರು ದುರ್ಘಟನೆಗಳ ಕಾರಣದಿಂದಾಗಿ ನಿಗದಿತ ಸಮಯದಲ್ಲಿ ಭೇಟಿಯಾಗಲು ಸಾಧ್ಯವಾಗದಕ್ಕೆ ವಿಷಾದ ವ್ಯಕ್ತಪಡಿಸಿದರು.

ಕತಾರ್ ಪ್ರತಿನಿಧಿಗಳು ಮಾಜಿ ಸಚಿವ ಹಾಗೂ ಜನಪ್ರಿಯ ನಟ ಅಂಬರೀಷ್ ಅವರ ಅಕಾಲಿಕ ಮರಣ, ಬಸ್ ದುರ್ಘಟನೆ ಮತ್ತು ಹಿರಿಯ ನಾಯಕ ಜಾಫರ್ ಷರೀಫ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.












Click it and Unblock the Notifications