ಕ್ಯಾಲಿಫೋರ್ನಿಯಾದಲ್ಲಿ ಜೂ.27ರಂದು 'ಹರಿದಾಸ ದಿನ'
ದಾಸನಾಗು ವಿಶೇಷನಾಗು.. ಎನ್ನುತ್ತಾ ಭಕ್ತಿಲೋಕಕ್ಕೆ ಸಾವಿರಾರು ಪದ್ಯ, ಗದ್ಯಗಳ ಸಾಹಿತ್ಯ ಮತ್ತು ಸಂಗೀತ ರಚನೆಗಳನ್ನು ನೀಡಿದ ದಾಸವರೇಣ್ಯರನ್ನು ಸ್ಮರಿಸುವ ನಿಟ್ಟಿನಲ್ಲಿ ಹರಿದಾಸ-ದಿನ, ದಾಸ-ದಿನವನ್ನು ಕಳೆದ ಎರಡು ದಶಕಗಳಿಂದ ಅಮೆರಿಕಾದ ಹಲವಾರು ಕಡೆ ಏರ್ಪಡಿಸಲಾಗುತ್ತಿದೆ. ಅದೇ ರೀತಿ ಉತ್ತರ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲೂ "ಹಾರಿದಾಸ ದಿನ" ಕಾರ್ಯಕ್ರಮ ಆಚರಿಸಲಾಗುತ್ತದೆ.
ಪ್ರತಿ ವರ್ಷವೂ ವಿಶಿಷ್ಟವಾಗಿ, ದಿನವಿಡೀ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ಬೇ ಏರಿಯಾದ ಹಲವಾರು ಕಲಾವಿದರು, ಸಂಸ್ಥೆಗಳು ಪಾಲ್ಗೊಳ್ಳುತ್ತಾರೆ. ಗೀತ ವಿಮರ್ಶೆ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಹಲವಾರು ಪಾಠ-ಪ್ರವಚನಗಳ ಮೂಲಕ ಭಕ್ತಿ ಜಗತ್ತಿಗೆ ಅಪಾರ ಕೊಡುಗೆ ನೀಡಿದ ಹರಿದಾಸರನ್ನ ಸ್ಮರಿಸಲಾಗುತ್ತದೆ. ಭಕ್ತಿ ಸಂಗೀತದ ಅನುಯಾಯಿಗಳಿಗೆ ಇದೊಂದು ಸಂಭ್ರಮದ ದಿನ.
ಇದೆ ಜೂನ್ ತಿಂಗಳ 27, ಶನಿವಾರದಂದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ (ಕೆ.ಕೆ.ಎನ್.ಸಿ) ಹಾಗೂ ಹಿಂದೂ ಕಮ್ಯೂನಿಟಿ ಮತ್ತು ಕಲ್ಚರಲ್ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ, ಲಿವರ್ಮೊರಿನ ಶಿವ-ವಿಷ್ಣು ದೇವಸ್ಥಾನದಲ್ಲಿ ನಡೆಯಲಿರುವ "ಹರಿದಾಸ ದಿನ" ಮಹೋತ್ಸವಕ್ಕೆ ಹೆಸರಾಂತ ಕರ್ನಾಟಕ ಸಂಗೀತದ ವಿದ್ವಾಂಸರಾದ ಆರ್. ಕೆ ಪದ್ಮನಾಭರವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಗಾನ ಕಲಾಭೂಷಣರೆಂದು ಖ್ಯಾತಿ ಪಡೆದಿರುವ ಪದ್ಮನಾಭರವರು ಕಂಚಿನ ಕಂಠದ ಗಾಯಕರು, ಕರ್ನಾಟಕ ಸಂಗೀತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು, ಸುಮಾರು 300ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿ ಅವುಗಳ ಸಂಗೀತ ಸಂಯೋಜನೆ ಮತ್ತು ನಾಟಕಕ್ಕೆ ರೂಪಾಂತರ ಮಾಡುವುದರ ಮೂಲಕ ಅಸಮಾನ್ಯ ಸಾಧನೆ ಗೈದಿದ್ದಾರೆ.
ಗುರು-ಶಿಷ್ಯ ಪರಂಪರೆಯನ್ನು ಮುಂದುವರೆಸುತ್ತ ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಸಂಗೀತ ಗುರುಗಳಾಗಿ, ದಾಸ ಸಾಹಿತ್ಯದ ಗಾರುಡಿಗರನ್ನು ತಯಾರಿ ಮಾಡುತ್ತಿರುವ ಹೆಗ್ಗಳಿಕೆ ಇವರದು. ಸಂಗೀತ ಮತ್ತು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆ ನೀಡಿದ ಪದ್ಮನಾಭರವರು ದಾಸ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದಂತಾಗಿದೆ. ಈ ಕಾರ್ಯಕ್ರಮದ ಜೊತೆಗೆ ಸ್ಥಳೀಯ ಸಂಗೀತ ಆಸಕ್ತರಿಗೆ ಕಾರ್ಯಗಾರ ಕೂಡ ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪುಷ್ಪ ಸುಬ್ಬರಾವ್ 6508041066, ಸುದತ್ತ ಗೌತಮ್ 8314282830












Click it and Unblock the Notifications